ವಿವಾಹವನ್ನು ಪಿಡುಗು ಎಂದು ಭಾವಿಸುತ್ತಿರುವ ಯುವಪೀಳಿಗೆಯ ಲಘು ಧೋರಣೆಯ ಬಗ್ಗೆ ಕೇರಳ ಹೈಕೋರ್ಟ್‌ ವಿಷಾದ

ನಿರ್ನಾಮಗೊಂಡ, ಪ್ರಕ್ಷುಬ್ಧಗೊಂಡ ಕುಟುಂಬಗಳಿಂದ ಹೊರಡುವ ಚೀತ್ಕಾರ, ಆಕ್ರಂದನಗಳು ಸಮಾಜದ ಆತ್ಮವನ್ನೇ ಕಲಕುವಂತಿವೆ ಎಂದು ಬೇಸರಿಸಿದ ಪೀಠ.
Kerala High Court
Kerala High Court

ಯುವಪೀಳಿಗೆಯು ವೈವಾಹಿಕ ಸಂಬಂಧಗಳನ್ನು ಹಗುರವಾಗಿ ಹಾಗೂ ಸ್ವಾರ್ಥಮಯವಾಗಿ ಪರಿಗಣಿಸುತ್ತಿರುವ ರೀತಿಯ ಬಗ್ಗೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದೆ.

ವಿವಾಹ ವಿಚ್ಛೇದನ ಪ್ರಕರಣವೊಂದರ ವೇಳೆ ಕೌಟುಂಬಿಕ ನ್ಯಾಯಾಲಯವೊಂದು ಪ್ರಕರಣವನ್ನು ವಜಾಗೊಳಿಸಿದ್ದ ಆದೇಶವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ಮೇಲ್ಮನವಿದಾರರ ಮನವಿಯನ್ನು ತಿರಸ್ಕರಿಸಿ, ಯಾವುದೇ ಆದೇಶ ನೀಡಲು ನಿರಾಕರಿಸಿತ್ತಾ ಯುವ ಪೀಳಿಗೆಯ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಎ ಮುಹಮದ್‌ ಮುಷ್ತಾಕ್‌ ವರ್ಸಸ್‌ ಸೋಫಿ ಥಾಮಸ್‌ ಅವರನ್ನುಳ್ಳ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

"ವಿವಾಹವನ್ನು ಒಂದು ಪಿಡುಗು ಎಂದು ಈಚಿನ ದಿನಗಳಲ್ಲಿ ಯುವಪೀಳಿಗೆಯು ಭಾವಿಸಿದೆ. ಹಾಗಾಗಿ, ಅದನ್ನು ತಪ್ಪಿಸುವ ಮೂಲಕ ಯಾವುದೇ ಬಾಧ್ಯತೆ, ಕಟ್ಟುಪಾಡುಗಳಿಲ್ಲದ ಮುಕ್ತವಾದ ಬದುಕನ್ನು ಆಸ್ವಾದಿಸಬಹುದು ಎಂದುಕೊಂಡಿದೆ. ಹಿಂದೆಲ್ಲಾ ವೈಫ್‌ (ಪತ್ನಿ) ಎಂದರೆ ವೈಸ್ ಇನ್ವೆಸ್ಟ್‌ಮೆಂಟ್‌ ಫಾರ್‌ ಎವೆರ್ (ಶಾಶ್ವತವಾದ ಬುದ್ಧಿವಂತ ಹೂಡಿಕೆ) ಎನ್ನುತ್ತಿದ್ದು, ಈಗ ಅದು ವರಿ ಇನ್ವೈಟೆಡ್‌ ಫಾರ್‌ಎವೆರ್ (ಶಾಶ್ವತ ಸಮಸ್ಯೆಗೆ ಆಹ್ವಾನ) ಎಂದಾಗಿದೆ. 'ಬಳಸಿ ಬಿಸಾಡುವ' ಗ್ರಾಹಕ ಸಂಸ್ಕೃತಿಯ ಪ್ರಭಾವವು ವೈವಾಹಿಕ ಸಂಬಂಧಗಳ ಮೇಲೂ ಉಂಟಾಗಿದೆ. ಬೇಡವಾದಾಗ ಅಂತ್ಯ ಹಾಡುವ ಲಿವ್‌-ಇನ್‌ ಸಂಬಂಧಗಳು ಹೆಚ್ಚುತ್ತಿವೆ," ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ಒಂದೊಮ್ಮೆ ಶಾಸ್ತ್ರೋಕ್ತವಾಗಿ ಪರಿಗಣಿತವಾಗಿದ್ದ ವಿವಾಹಗಳು ಇಂದು ಶಿಥಿಲವಾಗಿದ್ದು ಇದು ಒಟ್ಟಂದದಲ್ಲಿ ಸಮಾಜದ ಮೇಲೆ ಪರಿಣಾಮ ಬೀರಲಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

"ಕೇರಳವನ್ನು ಭಗವಂತನ ಸ್ವಂತ ನಾಡು ಎಂದು ಕರೆಯಲಾಗುತ್ತದೆ. ಇದು ಹಿಂದೆಲ್ಲಾ ಸದೃಢ ಕೌಟುಂಬಿಕ ಸಂಬಂಧಗಳಿಗೂ ಕೂಡ ಹೆಸರುವಾಸಿಯಾಗಿತ್ತು. ಆದರೆ, ಇಂದು ವಿವಾಹ ಸಂಬಂಧಗಳು ಸಿನಿಮೀಯ ಹಾಗೂ ಸ್ವಾರ್ಥಮಯ ಕಾರಣಗಳಿಗಾಗಿ, ವಿವಾಹೇತರ ಸಂಬಂಧಗಳಿಂದಾಗಿ, ಮಕ್ಕಳ ಭವಿಷ್ಯದ ಬಗ್ಗೆಯೂ ಯೋಚಿಸದೆ ಮುರಿದು ಬೀಳುತ್ತಿರುವ ಪರಿಪಾಠ ಕಂಡುಬರುತ್ತಿದೆ" ಎಂದು ನ್ಯಾಯಾಲಯವು ಬೇಸರಿಸಿತು.

ಮುಂದುವರಿದು ಪೀಠವು, "ನಿರ್ನಾಮಗೊಂಡ, ಪ್ರಕ್ಷುಬ್ಧಗೊಂಡ ಕುಟುಂಬಗಳಿಂದ ಹೊರಡುವ ಚೀತ್ಕಾರ, ಆಕ್ರಂದನಗಳು ಸಮಾಜದ ಆತ್ಮವನ್ನೇ ಕಲಕುವಂತಿವೆ. ಜಗಳವಾಡುವ ಜೋಡಿಗಳು, ಪರಿತ್ಯಕ್ತ ಮಕ್ಕಳು, ಹತಾಶ ವಿಚ್ಛೇದಿತರಿಂದಲೇ ಜನಸಂಖ್ಯೆಯ ಬಹುಭಾಗ ತುಂಬಿದರೆ ಆಗ ಅದು ನಮ್ಮ ಸಾಮಾಜಿಕ ಜೀವನದ ಶಾಂತಿಯನ್ನು ಕದಡುತ್ತದೆ. ನಮ್ಮ ಸಮಾಜದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ," ಎಂದು ತೀರ್ಪಿನಲ್ಲಿ ಉಲ್ಲೇಖಿಸಿತು.

ಅಕ್ರಮ ಸಂಬಂಧಗಳನ್ನು ಸಕ್ರಮಗೊಳಿಸಿಕೊಳ್ಳಲು ತಪ್ಪಿತಸ್ಥರಿಗೆ ನ್ಯಾಯಾಲಯವು ಸಹಕರಿಸಲಾರವು ಎಂದು ಪೀಠವು ಸ್ಪಷ್ಟವಾಗಿ ಹೇಳುವ ಮೂಲಕ, ವಿವಾಹೇತರ ಸಂಬಂಧದ ಆರೋಪ ಎದುರಿಸುತ್ತಿರುವ ಪತಿಯು ಪತ್ನಿಯಿಂದ ವಿಚ್ಛೇದನ ಪಡೆಯಲು ನಿರಾಕರಿಸಿತು.

Related Stories

No stories found.
Kannada Bar & Bench
kannada.barandbench.com