ಪಾವತಿಯಾಗದ ಬಾಕಿ: ಜೊಮ್ಯಾಟೊ ವಿರುದ್ಧ ದಿವಾಳಿ ಅರ್ಜಿ ಸಲ್ಲಿಸಿದ ಸಮವಸ್ತ್ರ ಪೂರೈಕೆ ಕಂಪೆನಿ

ಆಹಾರ ವಿತರಕರು ಧರಿಸುವ ಸಮವಸ್ತ್ರ ಮತ್ತಿತರ ಉಡುಪುಗಳಿಗೆ ಸಂಬಂಧಿಸಿದಂತೆ ಜೊಮ್ಯಾಟೊ ₹1,64,83,194 ಬಾಕಿ ಮೊತ್ತ ನೀಡಬೇಕು ಎಂದು ದಾವೆ ಹೂಡಿರುವ ಕಂಪನಿ ಹೇಳಿಕೊಂಡಿದೆ.
ಪಾವತಿಯಾಗದ ಬಾಕಿ: ಜೊಮ್ಯಾಟೊ ವಿರುದ್ಧ ದಿವಾಳಿ ಅರ್ಜಿ ಸಲ್ಲಿಸಿದ ಸಮವಸ್ತ್ರ ಪೂರೈಕೆ ಕಂಪೆನಿ
Published on

ಆಹಾರ ವಿತರಣಾ ಕಂಪೆನಿಯಾದ ಜೊಮ್ಯಾಟೊ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ ಆರಂಭಿಸುವಂತೆ ಕೋರಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ)  ಬಿಜಿನೆಸ್‌ ಟು ಬಿಜಿನೆಸ್‌ (ಬಿಟುಬಿ) ಉಡುಪು ತಯಾರಿಕಾ ಕಂಪೆನಿಯಾದ ನೋನಾ ಲೈಫ್‌ ಸ್ಟೈಲ್‌ ಅರ್ಜಿ ಸಲ್ಲಿಸಿದೆ.

ಆಹಾರ ವಿತರಕರು ಧರಿಸುವ ಸಮವಸ್ತ್ರ ಮತ್ತಿತರ ಉಡುಪುಗಳಿಗೆ ಸಂಬಂಧಿಸಿದಂತೆ ಜೊಮ್ಯಾಟೊ ₹1,64,83,194 ಬಾಕಿ ಮೊತ್ತ ನೀಡಬೇಕು ಎಂದು ನೋನಾ ಲೈಫ್‌ ಸ್ಟೈಲ್‌ ಹೇಳಿದೆ.

Also Read
ಜೊಮ್ಯಾಟೊ, ಸ್ವಿಗ್ಗಿ, ಓಲಾ, ಉಬರ್ ಚಾಲಕರಿಗೆ ಸಾಮಾಜಿಕ ಭದ್ರತೆ ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನ್ಯಾಯಾಂಗ ಸದಸ್ಯ ಅಶೋಕ್ ಕುಮಾರ್ ಭಾರದ್ವಾಜ್ ಮತ್ತು ತಾಂತ್ರಿಕ ಸದಸ್ಯೆ ರೀನಾ ಸಿನ್ಹಾ ಪುರಿ ಅವರಿದ್ದ ಸಮಿತಿ  ಅರ್ಜಿಯ ವಿಚಾರಣೆ ನಡೆಸಿತು.

ರೈಡರ್ ಟಿ-ಶರ್ಟ್‌ಗಳು, ಪ್ಯಾಂಟ್‌ಗಳು ಮತ್ತು ವಿಶ್ವಕಪ್ ಜೆರ್ಸಿಗಳು ಸೇರಿ ವಿವಿಧ ವಸ್ತ್ರಗಳಿಗೆ ಸಂಬಂಧಿಸಿದಂತೆ ಜೊಮ್ಯಾಟೊ ವಿವಿಧ ಆರ್ಡರ್‌ಗಳನ್ನು ಮಾಡಿತ್ತು. ಬಹುತೇಕ ವಸ್ತ್ರಗಳನ್ನು ತಲುಪಿಸಿ ತಾನು ತನ್ನ ಜವಾಬ್ದಾರಿ ನಿರ್ವಹಿಸಿದ್ದೆ.

ಆದರೆ ಜೊಮ್ಯಾಟೊ ನಿರಂತರವಾಗಿ ಪಾವತಿ ವಿಳಂಬ ಮಾಡುತ್ತಿದ್ದು ಜೊತೆಗೆ ಸಂಗ್ರಹ ಸ್ಥಳದ ಕೊರತೆ ಉಲ್ಲೇಖಿಸಿ ಆರ್ಡರ್ ಮಾಡಿದ ಬಹುಪಾಲು ವಸ್ತ್ರಗಳನ್ನು ಸ್ವೀಕರಿಸುವಲ್ಲಿ ವಿಳಂಬ ಮಾಡಿದೆ ಎಂದು ಸಂಸ್ಥೆ ಆಪಾದಿಸಿದೆ. ಮುಂದುವರೆದು, ರಿಯಾಯಿತಿ ದರದಲ್ಲಿ ವಸ್ತ್ರ ಒದಗಿಸುವಂತೆ ಅದು ತನಗೆ ಬೆದರಿಕೆ ಮತ್ತು ಎಚ್ಚರಿಕೆಗಳನ್ನು ಕೂಡ ನೀಡಿತ್ತು ಎಂದು ಆರೋಪಿಸಿದೆ.

Also Read
ಜೊಮ್ಯಾಟೊ ಪ್ರಕರಣ: ಕಾಮರಾಜ್‌ ಪ್ರತಿದೂರು, ಗ್ರಾಹಕಿ ಹಿತೇಶಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಪೊಲೀಸರು

ವಿಶ್ವಕಪ್‌ ಕ್ರಿಕೆಟ್‌ ಹಿನ್ನೆಲೆಯಲ್ಲಿ ಆರ್ಡರ್‌ ಮಾಡಿದ್ದ ವಿಶ್ವಕಪ್‌ ಜೆರ್ಸಿಗಳನ್ನು ಜೊಮ್ಯಾಟೊ ಪಡೆಯುತ್ತಿಲ್ಲ. ಅವುಗಳನ್ನು ಜೊಮ್ಯಾಟೊಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ್ದರಿಂದ ಬೇರೆ ಉದ್ದೇಶಗಳಿಗೂ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಅದು ದೂರಿತ್ತು.

 ಆದರೆ ಆರೋಪ ನಿರಾಕರಿಸಿರುವ ಜೊಮ್ಯಾಟೊ ಕಾಲಮಿತಿಯಲ್ಲಿ ವಸ್ತ್ರಗಳನ್ನು ನೋನಾ ಪೂರೈಸದೆ ಇದ್ದುದರಿಂದ ಒಪ್ಪಂದದ ಪ್ರಕಾರ ದಂಡ ವಿಧಿಸಲಾಗಿದೆ. ನೋನಾ ಏಕಪಕ್ಷೀಯವಾಗಿ ವಸ್ತ್ರಗಳನ್ನು ವಿತರಿಸುವ ಅವಧಿಯನ್ನು ಬದಲಿಸಿತು ಇದರಿಂದ ತನ್ನ ಕ್ಯಾಂಪೇನ್‌ ಸಾಕಾರಗೊಳ್ಳಲಿಲ್ಲ. ಈ ವಿಳಂಬದಿಂದಾಗಿ ತನ್ನ ವರ್ಚಸ್ಸಿಗೆ ಗಣನೀಯ ಹಾನಿಯಾಗಿದೆ. ದಂಡದ ಮೊತ್ತ ಹೊರತುಪಡಿಸಿ ತಾನು ಉಳಿದ ಹಣ ಪಾವತಿಸಿದ್ದೇನೆ ಎಂದು ವಾದಿಸಿತು.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 3ರಂದು ನಡೆಯಲಿದೆ.

Kannada Bar & Bench
kannada.barandbench.com