ಜಿ.ಪಂ, ತಾ.ಪಂ ಚುನಾವಣೆ: ಸರ್ಕಾರಕ್ಕೆ ಮೂರು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ಸರ್ಕಾರ 2023ರ ಡಿ.19ಕ್ಕೆ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಅದನ್ನು ಪಾಲಿಸಿಲ್ಲ ಎಂದು ಸರ್ಕಾರದ ವಿರುದ್ಧ ಆಯೋಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
Karnataka HC and election
Karnataka HC and election
Published on

ರಾಜ್ಯದ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮತ್ತೆ ಮೂರು ವಾರ ಕಾಲಾವಕಾಶ ನೀಡಿದೆ.

ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜೊತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ಪೀಠದ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ್ ರಾವ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠದ ಗುರುವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಎಲ್ಲಾ 31 ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಕಾರ್ಯ ಮುಗಿದಿದೆ. ಈಗ ಮೀಸಲಾತಿ ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ಮೂರು ವಾರ ಕಾಲಾವಕಾಶಬೇಕು” ಎಂದು ಕೋರಿದರು.

Also Read
ಜಿಪಂ-ತಾಪಂ ಚುನಾವಣೆ: ಮಾಸಾಂತ್ಯದಲ್ಲಿ ಒಬಿಸಿ ಮೀಸಲಾತಿ ಅಧಿಸೂಚನೆ ಪ್ರಕಟ; ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಇದನ್ನು ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿತು. ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ, ಅರ್ಜಿದಾರರ ಪರ ವಕೀಲ ಎ ಮೊಹಮ್ಮದ್ ತಾಹೀರ್ ಹಾಜರಿದ್ದರು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ 2023ರ ಡಿಸೆಂಬರ್ 19ಕ್ಕೆ ನ್ಯಾಯಾಲಯಕ್ಕೆ ಭರವಸೆ ಕೊಟ್ಟಿತ್ತು. ಅದನ್ನು ಪಾಲಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

Kannada Bar & Bench
kannada.barandbench.com