ಪಿಎಂ ಕೇರ್ಸ್‌ಗೆ ನಮ್ಮ ವಕೀಲರೂ ದೇಣಿಗೆ ನೀಡಿದ್ದಾರೆ, ಸಂಕಷ್ಟದಲ್ಲಿ ನಮ್ಮ ನೆರವಿಗೆ ಯಾರೂ ಬರಲಿಲ್ಲ: ಎಂ ಎಚ್ ಖಾಸನೀಸ

“ಪ್ರಸ್ತುತ ಕಕ್ಷಿದಾರರ ವಕೀಲರು ಮಾತ್ರ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಳ್ಳಬಹುದಾಗಿದೆ. ನ್ಯಾಯ ಕೊಡಿಸಬೇಕಿರುವುದು ಸಾಮಾನ್ಯ ಜನರಿಗೆ. ಆದರೆ, ಅವರನ್ನೇ ಹೊರಗಿಟ್ಟು ಏನು ಮಾಡುವುದು? ಅವರು ನಮ್ಮನ್ನು ಹೇಗೆ ನಂಬುತ್ತಾರೆ?”
M H Khasnis, Vijayapura Bar Association President
M H Khasnis, Vijayapura Bar Association President
Published on

ʼಗುಮ್ಮಟ ನಗರಿʼ ವಿಜಯಪುರದಲ್ಲಿ ಹತ್ತಕ್ಕೂ ಹೆಚ್ಚು ವಕೀಲರನ್ನು ಬಲಿ ಪಡೆದಿರುವ ಕೊರೊನಾ ಸೋಂಕು 50ಕ್ಕೂ ಹೆಚ್ಚು ವಕೀಲರು ಹಾಗೂ ಅವರ ಕುಟುಂಬಸ್ಥರ ಮೇಲೆ ದಾಳಿ ಮಾಡಿದೆ. ಕೋವಿಡ್‌ ಆರ್ಭಟಕ್ಕೆ ಸ್ನೇಹಿತರು, ಮಾರ್ಗದರ್ಶಿಗಳು, ಸೀನಿಯರ್‌ಗಳನ್ನು ಕಳೆದುಕೊಂಡಿರುವ ಜಿಲ್ಲೆಯ ವಕೀಲ ಸಮುದಾಯ ಘಾಸಿಗೊಂಡಿದೆ. ರಾಜ್ಯದಲ್ಲಿಯೇ ಕೋವಿಡ್‌ ಸಂಕಷ್ಟಕ್ಕೆ ವಕೀಲ ಸಮುದಾಯ ತೀವ್ರವಾಗಿ ಸಿಲುಕಿರುವ ನಗರಗಳಲ್ಲಿ ವಿಜಯಪುರ ಪ್ರಮುಖವಾಗಿದೆ.

ಸೋಂಕಿನ ಆರ್ಭಟ ಒಂದೆಡೆಯಾದರೆ ಕೋವಿಡ್‌ ಕಾಲಘಟ್ಟದ ಬದಲಾದ ವೃತ್ತಿ ಚಹರೆ ಹಾಗೂ ಕಠಿಣ ಮಾರ್ಗಸೂಚಿಗಳ ಅನ್ವಯ ಬದುಕುವ ಸವಾಲು ಮತ್ತೊಂದೆಡೆ ಎದುರಾಗಿದೆ. ಕೋವಿಡ್‌ನಿಂದ ಸಾವನ್ನಪ್ಪಿರುವ ವಕೀಲರ ಕುಟುಂಬದವರ ಸ್ಥಿತಿಗತಿ, ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ, ಕಕ್ಷಿದಾರರನ್ನು ಹೊರಗಿಟ್ಟು ಕಲಾಪ ನಡೆಸುವ ಸಂದಿಗ್ಧವೂ ಸೇರಿದಂತೆ ವಕೀಲರ ಬದುಕು-ಬವಣೆಯ ಕುರಿತು ವಿಜಯಪುರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಎಚ್‌ ಖಾಸನೀಸ ಅವರು “ಬಾರ್‌ ಅಂಡ್‌ ಬೆಂಚ್”‌ ಜೊತೆ ಸಮಗ್ರವಾಗಿ ಮಾತನಾಡಿದ್ದಾರೆ.

Q

ಕೋವಿಡ್‌ನಿಂದಾಗಿ ವಿಜಯಪುರದ ವಕೀಲ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?

A

ಎಂಟು ತಿಂಗಳಿಂದ ನ್ಯಾಯಾಲಯದ ಕಲಾಪಗಳು ನಿಂತಿವೆ. ಇದರಿಂದ ಎಲ್ಲರಿಗೂ ಆರ್ಥಿಕವಾಗಿ ಸಮಸ್ಯೆಗಳಾಗಿವೆ. ವಿಶೇಷವಾಗಿ ಕಿರಿಯ ವಕೀಲರಿಗೆ ತೀವ್ರ ತರಹದ ಆರ್ಥಿಕ ಸಮಸ್ಯೆಯಾಗಿದೆ. ಕೊಠಡಿ ಬಾಡಿಗೆ, ಖರ್ಚು-ವೆಚ್ಚ ಭರಿಸಲಾಗದೇ ಹಲವು ಕಿರಿಯ ವಕೀಲರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಪ್ರಕರಣಗಳ ಫೈಲಿಂಗ್‌ ಮಾತ್ರ ಆಗುತ್ತಿವೆ. ಪ್ರಕರಣಗಳ ವಿಲೇವಾರಿ ತುಂಬಾ ಕಡಿಮೆಯಾಗಿವೆ. ಕೆಲಸ ಮಾಡಿದರೆ ಮಾತ್ರ ಶುಲ್ಕ ಸಿಗುತ್ತದೆ. ಕೋವಿಡ್‌ ವ್ಯಾಪಿಸುತ್ತಿರುವುದರಿಂದ ಮಾರ್ಗಸೂಚಿಗಳನ್ನು ಬಿಗಿಗೊಳಿಸಲಾಗಿದೆ. ಇದು ನಮಗೆ ಸಮಸ್ಯೆಯಾಗಿದೆ. ಯಾರನ್ನು ದೂರಬೇಕು ತಿಳಿಯುತ್ತಿಲ್ಲ.

Q

ಕೋವಿಡ್‌ನಿಂದ ವಿಜಯಪುರ ನಗರದಲ್ಲೇ 10 ವಕೀಲರು ಸಾವನ್ನಪ್ಪಿದ್ದಾರೆ. ಸಂತ್ರಸ್ತ ಕುಟುಂಬಗಳು ಮತ್ತು ಆ ವಕೀಲರು ಪ್ರತಿನಿಧಿಸುತ್ತಿದ್ದ ಕಕ್ಷಿದಾರರಿಗೆ ಯಾವ ರೀತಿ ನೆರವಾಗಿದ್ದೀರಿ?

A

ವಕೀಲರು ತೀರಿಕೊಂಡಾಗ ಅವರ ಅಂತಿಮ ಸಂಸ್ಕಾರಕ್ಕೂ ತೆರಳಲಾಗಲಿಲ್ಲ. ಲಾಕ್‌ಡೌನ್‌ ಮತ್ತು ಕಠಿಣ ಮಾರ್ಗಸೂಚಿಗಳು ಇದ್ದುದರಿಂದ ಕನಿಷ್ಠ ಪಕ್ಷ ಶ್ರದ್ಧಾಂಜಲಿ ಸಭೆಯನ್ನೂ ನಡೆಸಲಾಗಲಿಲ್ಲ. ಕೆಲವರು ತೀರ ಆಪ್ತರಾಗಿದ್ದು, ಅವರ ಅಗಲಿಕೆ ನೆನಪಿಸಿಕೊಂಡರೆ ದುಃಖ ಉಮ್ಮಳಿಸಿ ಬರುತ್ತದೆ. ಕೋವಿಡ್‌ನಿಂದ ತೀರಿಕೊಂಡವರಿಗೆ ರಾಜ್ಯ ವಕೀಲರ ಪರಿಷತ್‌ನಿಂದ ಸಿಗುತ್ತಿರುವ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಬೇಕಾದ ದಾಖಲಾತಿಗಳನ್ನು ಸಿದ್ಧಪಡಿಸುತ್ತಿದ್ದೇವೆ.

ತೀರಿ ಕೊಂಡಿರುವ ವಕೀಲರು ಪ್ರತಿನಿಧಿಸುತ್ತಿದ್ದ‌ ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನುಕೂಲ ಕಲ್ಪಿಸಲು ನ್ಯಾಯಾಂಗ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ಪ್ರಕರಣಗಳಲ್ಲಿ ನೋಟಿಸ್‌ ಜಾರಿಗೊಳಿಸಲು ಹಾಗೂ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಕೆಲಸ ಮಾಡುತ್ತಿದ್ದೇವೆ.

Q

ಕೋವಿಡ್‌ನಿಂದ ಸಾವನ್ನಪ್ಪಿದ ವಕೀಲರ ಕುಟುಂಬ ಸದಸ್ಯರ ಸ್ಥಿತಿಗತಿಗಳ ಬಗ್ಗೆ ವಿವರಣೆ ನೀಡಬಹುದೇ?

A

ಹಿರಿಯ ವಕೀಲರೊಬ್ಬರ ಪತ್ನಿಗೆ ಕೋವಿಡ್‌ ಆಗಿತ್ತು. ಸಾಕಷ್ಟು ಖರ್ಚು ಮಾಡಿ ಪತ್ನಿಯನ್ನು ಉಳಿಸಿಕೊಂಡಿದ್ದರು. ಆದರೆ, ಅವರಿಗೆ ಕೋವಿಡ್‌ ಆದಾಗ ಅವರನ್ನು ಉಳಿಸಿಕೊಳ್ಳುವಷ್ಟು ಹಣ - ಶಕ್ತಿ ಅವರ ಬಳಿ ಉಳಿದಿರಲಿಲ್ಲ. ಹೀಗಾಗಿ ಅವರು ಸಾವನ್ನಪ್ಪಿದರು. ತೀರಿ ಕೊಂಡಿರುವ ಉಳಿದ ವಕೀಲರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಯಾತನೆ ಅನುಭವಿಸಿಯೇ ಸಾವನ್ನಪ್ಪಿದ್ದಾರೆ. ಅವರ ಕುಟುಂಬ ಸದಸ್ಯರ ಜೊತೆ ಮಾತನಾಡಿ ಸಂಘದ ವತಿಯಿಂದ ಸಾಂತ್ವನ ಹೇಳಿದ್ದೇವೆ. ಸಂತ್ರಸ್ತರ ಕುಟುಂಬದವರ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ.

Q

ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಕೀಲರಿಗೆ ನಿಮ್ಮ ಸಂಘ ಯಾವ ತೆರನಾದ ನೆರವು ನೀಡಿದೆ?

A

ಕೆಎಸ್‌ಬಿಸಿಯಿಂದ ಕಿರಿಯ ವಕೀಲರಿಗೆ ನೀಡಲಾಗುತ್ತಿದ್ದ 5,000 ರೂಪಾಯಿ ದೊರಕಿಸಿಕೊಡಲು ಅವರಿಗೆ ಅಗತ್ಯವಾದ ದಾಖಲೆಗಳನ್ನು ಒದಗಿಸುವ ಕೆಲಸ ಮಾಡಿದ್ದೇವೆ. ಸಂಘ ಬಂದ್‌ ಆಗಿದ್ದರೂ ಮನೆಯಿಂದಲೇ ಅವರಿಗೆ ನೆರವಾಗಲು ಪ್ರಯತ್ನಿಸಿದ್ದೇವೆ. ಪಿಎಂ ಕೇರ್ಸ್‌ಗೆ ನಮ್ಮ ವಕೀಲರು ತಮ್ಮ ಕೈಲಾದ ನೆರವು ನೀಡಿದ್ದಾರೆ. ಆದರೆ, ನಮ್ಮ ವಕೀಲರ ಸಮುದಾಯ ಸಂಕಷ್ಟದಲ್ಲಿರುವಾಗ ಯಾರೂ ಕೈಹಿಡಿಯಲಿಲ್ಲ. ಇದುವರೆಗೆ 1,400 ವಕೀಲರ ಪೈಕಿ 70 ಕಿರಿಯ ವಕೀಲರಿಗೆ ಮಾತ್ರ ಪರಿಹಾರ ಸಿಕ್ಕಿದೆ.

ಪತ್ನಿ ನೌಕರಿಯಲ್ಲಿರುವಂತಿಲ್ಲ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಹೊಂದಿರುವಂತಿಲ್ಲ, ಸ್ವಂತ ಮನೆ ಹೊಂದಿರಬಾರದು ಹೀಗೆ ನಾನಾ ಷರತ್ತುಗಳನ್ನು ಕೇವಲ 5,000 ರೂಪಾಯಿ ಪರಿಹಾರ ನೀಡಲು ಕೆಎಸ್‌ಬಿಸಿ ವಿಧಿಸಿತ್ತು. ಇದರಿಂದ ಹೆಚ್ಚಿನ ಮಂದಿಗೆ ಆ ಪರಿಹಾರವೂ ಸಿಗಲಿಲ್ಲ.

Q

ವರ್ಚುವಲ್ ಕಲಾಪಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

A

ವರ್ಚುವಲ್‌ ಕಲಾಪಕ್ಕೆ ಆರಂಭದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಇದಕ್ಕೆ ಸಾದಾ ಮೊಬೈಲ್‌ಗಳು ನಡೆಯುವುದಿಲ್ಲ. ಸ್ಮಾರ್ಟ್‌ಫೋನ್‌ಗಳೇ ಬೇಕು. ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅದನ್ನು ಕೊಳ್ಳಲು ಸಾಕಷ್ಟು ಮಂದಿಗೆ ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆಗಳ ಬಗ್ಗೆ ನ್ಯಾಯಾಲಯದಿಂದಲೇ ತರಬೇತಿ ನೀಡಿದ್ದರು. ಈಗ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದೇವೆ.

ವರ್ಚುವಲ್‌ ಕಲಾಪದಲ್ಲಿ ಸಮರ್ಪಕವಾಗಿ ವಾದ ಮಂಡಿಸಲಾಗದು. ನಿರ್ದಿಷ್ಟ ಸಮಯ ನಿಗದಿ ಮಾಡುವುದರಿಂದ ಪರಿಣಾಮಕಾರಿಯಾಗಿ ವಾದಿಸಲಾಗದು. ಕೆಲವೊಮ್ಮೆ ಸೃಷ್ಟಿತ ದಾಖಲೆಗಳನ್ನು ಪ್ರತಿವಾದಿಗಳ ವಕೀಲರು ಪ್ರಸ್ತುತಪಡಿಸುವ ಸಾಧ್ಯತೆ ಇರುತ್ತದೆ. ಇದನ್ನು ಎತ್ತಿ ತೋರುವ ಕೆಲಸವನ್ನು ಮಾಡಬೇಕಾಗುತ್ತದೆ. ಒಂದೊಮ್ಮೆ ಅದಾಗಲಿಲ್ಲ ಎಂದಾದರೆ ಪ್ರಕರಣ ಕೈಚೆಲ್ಲಬೇಕಾಗಬಹುದು. ಪ್ರತಿ ಪ್ರಕರಣಕ್ಕೆ ಹಿರಿಯ ವಕೀಲರು ಕನಿಷ್ಠ 10 ಕಾನೂನು ವಿಚಾರಗಳನ್ನು ಉಲ್ಲೇಖಿಸಬೇಕಾಗುತ್ತದೆ. ಒಮ್ಮೊಮ್ಮೆ 4-5 ತಾಸು ವಾದ ಮಾಡಬೇಕಾಗುತ್ತದೆ. ಇದು ವರ್ಚುವಲ್ ಕಲಾಪದಲ್ಲಿ ಹೇಗೆ ಸಾಧ್ಯವಾಗುತ್ತದೆ? ಸಾಕಷ್ಟು ಅಡ್ಡಿ-ಆತಂಕಗಳು ಇರುವುದರಿಂದ ಇದು ನ್ಯಾಯದಾನ ವ್ಯವಸ್ಥೆಗೆ ಸೂಕ್ತ ಎನಿಸದು.

Q

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ? ಮಾರ್ಗಸೂಚಿಗಳಲ್ಲೂ ಸಡಿಲಿಕೆಯಾಗಿದೆಯಲ್ಲಾ?

A

ಸಾಕ್ಷಿ ನುಡಿಯುವ ಕಕ್ಷಿದಾರರನ್ನು ತಪಾಸಣೆಗೆ ಒಳಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಬೆಳಿಗ್ಗೆ 8 ಗಂಟೆಗೆ ಅವರನ್ನು ಕರೆದೊಯ್ದು ಪರೀಕ್ಷೆಗೆ ಒಳಪಡಿಸಬೇಕು. ಸುಮಾರು 11 ಗಂಟೆಗೆ ಕೊರೊನಾ ವರದಿ ಬರುತ್ತದೆ. ಒಂದೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಸಾಕ್ಷಿ ನುಡಿಯುವವರಿಗೆ ಕೊರೊನಾ ಇರುವುದು ಖಚಿತವಾದರೆ ನಮ್ಮ ಪರಿಸ್ಥಿತಿ ಹೇಗಾಗಬೇಡ? ಹಲವಾರು ಮಂದಿ ಇಂಥ ಸಮಸ್ಯೆ ಎದುರಿಸಿದ್ದೇವೆ. ಇಂಥ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇವೆ. ಇವೆಲ್ಲವೂ ಸಮಸ್ಯೆಗಳೇ ಅಲ್ಲವೇ?

ಭೌತಿಕ ಕಲಾಪಗಳು ಹಿಂದಿನ ರೀತಿಯಲ್ಲೇನೂ ಆರಂಭವಾಗಿಲ್ಲ. ನಮ್ಮಲ್ಲಿ 15 ನ್ಯಾಯಾಲಯದ ಕೊಠಡಿಗಳಿದ್ದು, ಐದು ಸಾಕ್ಷಿ ಸೇರಿದಂತೆ ದಿನಕ್ಕೆ 30 ಪ್ರಕರಣಗಳನ್ನು ಮಾತ್ರ ನಡೆಸಲು ಅವಕಾಶವಿದೆ. ಹೀಗಾಗಿ ಹಿಂದಿನ ರೀತಿಯಲ್ಲಿ ವಕೀಲರು ನ್ಯಾಯಾಲಯಕ್ಕೆ ಬರುವುದಿಲ್ಲ.

ಕಕ್ಷಿದಾರರು ಮತ್ತು ಪ್ರತಿವಾದಿಗಳ ವಕೀಲರು ಮಾತ್ರ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಕಕ್ಷಿದಾರರು ಮತ್ತು ಪ್ರತಿವಾದಿಗಳನ್ನು ಹೊರಗಿಟ್ಟು ನ್ಯಾಯ ಕೊಡಿಸುವುದು ಸಾಧ್ಯವೇ? ಅವರು ನಮ್ಮನ್ನು ಹೇಗೆ ನಂಬುತ್ತಾರೆ? ಪ್ರಕರಣಕ್ಕೆ ಸಂಬಂಧಿಸಿದಂತೆ ಕಕ್ಷಿದಾರರಿಂದ ಸಲಹೆ ಪಡೆಯಬೇಕಾದರೆ ಅವರು ತಕ್ಷಣಕ್ಕೆ ನಮಗೆ ಸಿಗುವುದಿಲ್ಲ. ಹೀಗಾದಾಗ ಪ್ರಕರಣವನ್ನು ಮುಂದೂಡವಂತೆ ಕೋರಬೇಕಾಗುತ್ತದೆ. ಆಗ ಪ್ರಕರಣ ಇತ್ಯರ್ಥವಾಗುವುದು ತಡವಾಗುತ್ತದೆ. ಇದು ಸಹಜವಾಗಿ ಕಕ್ಷಿದಾರರಲ್ಲಿ ಅನುಮಾನ ಹೆಚ್ಚಾಗಲು ಕಾರಣವಾಗಬಹುದು. ನ್ಯಾಯ ಕೊಡಿಸಬೇಕಿರುವುದು ಸಾಮಾನ್ಯ ಜನರಿಗೆ. ಆದರೆ, ಅವರನ್ನೇ ಹೊರಗಿಟ್ಟು ಏನು ಮಾಡಲು ಸಾಧ್ಯ?

Q

ಕೋವಿಡ್‌ ವ್ಯಾಪಿಸಿರುವ ಈ ಸಂದರ್ಭದಲ್ಲಿ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

A

ಚಳಿಗಾಲದಲ್ಲಿ ಕೋವಿಡ್‌ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ. ಈಗ ನ್ಯಾಯಾಲಯದಲ್ಲಿ ದಿನಕ್ಕೆ 50-60 ಮಂದಿಯನ್ನು ಕೊರೊನಾ ತನಿಖೆಗೆ ಒಳಪಡಿಸಲಾಗುತ್ತಿದೆ. ಒಬ್ಬರಿಗೆ ಕೊರೊನಾ ದೃಢವಾದರೂ ಸಾಕಷ್ಟು ಸಮಸ್ಯೆಯಾಗುತ್ತದೆ. ಇತರ ವಕೀಲರು ತಮ್ಮ ಪ್ರಕರಣಗಳನ್ನು ನಡೆಸಲೂ ಅಡ್ಡಿಯಾಗುತ್ತದೆ. ಒಟ್ಟಾರೆ ದಿನಂಪ್ರತಿ ಒಂದು ರೀತಿಯ ಫಜೀತಿ ಅನುಭವಿಸುತ್ತಿದ್ದೇವೆ. ಇನ್ನು ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳಲಾಗದು ಸ್ಥಿತಿ ನಮ್ಮದು.

Q

ಸಂಕಷ್ಟದಲ್ಲಿ ದೊರೆತಿರುವ ನೆರವಿನ ಬಗ್ಗೆ ಏನು ಹೇಳಬಯಸುತ್ತೀರಿ?

A

ಕೆಎಸ್‌ಬಿಸಿ ಸಹಾಯದ ಬಗ್ಗೆ ಸಮಾಧಾನವಿಲ್ಲ. ವಕೀಲರು ನ್ಯಾಯಾಲಯದ ಅಧಿಕಾರಿಗಳು ಹೌದು. ಎಲ್ಲೋ ಒಂದು ಕಡೆ ಯಾವುದೋ ಕಿಟ್‌ ನೀಡುತ್ತಾರೆ ಎಂದ ಮಾತ್ರಕ್ಕೆ ನಮ್ಮ ಸ್ವಾಭಿಮಾನ ಬಿಟ್ಟು ನಾವು ಅದಕ್ಕೆ ಕೈ ಒಡ್ಡಲಾಗದು. ನೆರವು ಪಡೆಯಲೂ ಮಾನಸಿಕವಾಗಿ ನೋವಾಗುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಎರಡೆರಡು ಲೀಟರ್‌ ಹಾಲು ವಿತರಣೆ ಮಾಡಿದರು. ಅದನ್ನು ಪಡೆಯಲು ಅಲ್ಲಿಗೆ ತೆರಳುವುದು ಎಷ್ಟು ಸಮಂಜಸ?

ನ್ಯಾಯಾಲಯಗಳನ್ನು ವಕೀಲರ ಆರ್ಥಿಕ ನೆರವಿಗೆ ನಡೆಸಲಾಗದು. ಜನರಿಗೆ ನ್ಯಾಯ ದೊರಕಿಸಿಕೊಡಲು ನ್ಯಾಯಾಲಯ ನಡೆಯಬೇಕಾಗುತ್ತದೆ. ಇಲ್ಲಿ ಸ್ವಾರ್ಥವೂ ಇದೆ, ಪರಾರ್ಥವೂ ಇದೆ. ಒಂದೊಮ್ಮೆ ವಕೀಲರಿಗಾಗಿ ನ್ಯಾಯಾಲಯ ನಡೆಸಬೇಕು ಎಂದರೆ ಆಗ ನ್ಯಾಯಾಲಯವನ್ನು ವಕೀಲರ ಉಪ ಜೀವನಕ್ಕೆ ಇಟ್ಟಿಲ್ಲ ಎಂದು ಹೇಳಬಹುದು.

Q

ಕೆಲ ವಕೀಲರ ಆಸ್ಪತ್ರೆ ವೆಚ್ಚ 16-20 ಲಕ್ಷ ರೂಪಾಯಿ ಆಗಿದೆ. ಕೆಲವು ವಕೀಲರನ್ನು ಆಸ್ಪತ್ರೆಗಳು ಚಿಕಿತ್ಸೆ ದಾಖಲಿಸದೇ ಸತಾಯಿಸಿದ ಘಟನೆಗಳು ನಡೆದಿವೆ ಎನ್ನುವ ಮಾಹಿತಿ ಇದೆಯೆಲ್ಲಾ?

A

ಸಾಲ ಪಡೆದು ಹಲವು ಮಂದಿ ಆಸ್ಪತ್ರೆ ವೆಚ್ಚ ಭರಿಸಿದ್ದಾರೆ. ಕೆಎಸ್‌ಬಿಸಿಗೆ 5 ಲಕ್ಷ ರೂಪಾಯಿ ಸಾಲ ಕೊಡಿಸುವಂತೆ ಕೇಳಿದ್ದೇವೆ. ಇದನ್ನು ಪರಿಶೀಲಿಸುವ ಭರವಸೆ ಸಿಕ್ಕಿದೆ. ಕಾನೂನು ಅಧಿಕಾರಿಗಳ ನೆರವಿನಿಂದ ಕೆಲವು ವಕೀಲರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದೇವೆ.

Kannada Bar & Bench
kannada.barandbench.com