[ಸಂದರ್ಶನ- ಭಾಗ II] ನಿವೃತ್ತ ಸಿಜೆಐ ಗೊಗೊಯ್‌ ಅವರಿಗೆ ಸಂಬಂಧಿಸಿದ ವರದಿ ಬಹಿರಂಗಪಡಿಸಬೇಕಿತ್ತು: ನ್ಯಾ. ಬ್ಯಾನರ್ಜಿ

ಸುಪ್ರೀಂ ಕೋರ್ಟ್‌ನಲ್ಲಿ ಈ ಮೊದಲೇ 'ಎಷ್ಟೋ ಸಂಗತಿಗಳು' ಆಗಬಹುದಾಗಿತ್ತು ಎನ್ನುವ ನ್ಯಾ. ಬ್ಯಾನರ್ಜಿ ಅವರು ಪೋಕ್ಸೊ ಕಾಯಿದೆಯ ಮಾರ್ಪಾಟಿನ ಅಗತ್ಯತೆ ಹಾಗೂ ನ್ಯಾಯಾಧೀಶರು ತಮ್ಮ ಭಾವನೆಗಳನ್ನು ನಿರ್ವಹಿಸಬೇಕಾದ ರೀತಿ ಬಗ್ಗೆ ಮಾತನಾಡಿದ್ದಾರೆ.
[ಸಂದರ್ಶನ- ಭಾಗ II] ನಿವೃತ್ತ ಸಿಜೆಐ ಗೊಗೊಯ್‌ ಅವರಿಗೆ ಸಂಬಂಧಿಸಿದ ವರದಿ ಬಹಿರಂಗಪಡಿಸಬೇಕಿತ್ತು: ನ್ಯಾ. ಬ್ಯಾನರ್ಜಿ
A1

ಸುಪ್ರೀಂ ಕೋರ್ಟ್‌ನಲ್ಲಿ ಈ ಮೊದಲೇ 'ಎಷ್ಟೋ ಸಂಗತಿಗಳು' ಆಗಬಹುದಾಗಿತ್ತು ಎಂದು ವಿವರಿಸುವ ನ್ಯಾ. ಇಂದಿರಾ ಬ್ಯಾನರ್ಜಿ ಅವರು ಪೋಕ್ಸೊ ಕಾಯಿದೆಯಲ್ಲಿ ಆಗಬೇಕಾದ ಬದಲಾವಣೆ ಹಾಗೂ ನ್ಯಾಯಾಧೀಶರು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕಾದ ಕುರಿತು ʼಬಾರ್ ಅಂಡ್ ಬೆಂಚ್ʼ ಪ್ರತಿನಿಧಿ ದೇಬಯಾನ್ ರಾಯ್ ಅವರಿಗೆ ನೀಡಿದ ಸಂದರ್ಶನದ ಎರಡನೇ ಭಾಗದಲ್ಲಿ ವಿವರಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತನಿಖೆ ಮಾಡಲು ರಚಿಸಲಾದ ವಿಚಾರಣಾ ಸಮಿತಿಯ ವರದಿ ಬಗ್ಗೆ ಮಾತನಾಡಿರುವ ಅವರು ಜನ ಬಲವಾಗಿ ನಂಬಿರುವಂತೆ ಆ ಪ್ರಕರಣವನ್ನು ಮುಚ್ಚಿಹಾಕಲಿಲ್ಲ ಎಂದು ಪ್ರತಿಪಾದಿಸಿದರು. ಸಂದರ್ಶನದ ಆಯ್ದ ಭಾಗ ಹೀಗಿದೆ:

Q

ಬಾರ್‌ ಅಂಡ್‌ ಬೆಂಚ್‌: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ 4 ವರ್ಷಗಳಲ್ಲಿ 5 ಮಂದಿ ಮುಖ್ಯ ನ್ಯಾಯಮೂರ್ತಿಗಳು ಸೇವೆ ಸಲ್ಲಿಸಿದ್ದನ್ನು ನೋಡಿದ್ದೀರಿ. ನಿಮ್ಮ ಪ್ರಕಾರ ಸುಪ್ರೀಂ ಕೋರ್ಟ್‌ ಆಡಳಿತದ ಮೇಲೆ ಹೆಚ್ಚು ಪರಿಣಾಮ ಬೀರಿದವರು ಯಾರು?

A

ನ್ಯಾ. ಬ್ಯಾನರ್ಜಿ: ಅವರು ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ಆಗಿದ್ದಾರೆ. ಸಿಬ್ಬಂದಿಯೊಂದಿಗೆ ಕಠೋರವಾಗಿದ್ದ ಕಾರಣದಿಂದಲೇ ಅವರು ತೊಂದರೆಗೆ ಸಿಲುಕಿದರು ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ನೀವು ನ್ಯಾಯಮೂರ್ತಿಗಳ ಕಾಳಜಿಗಳ ಬಗ್ಗೆ ಕೇಳುವುದಾದರೆ (ಹಾಲಿ) ಸಿಜೆಐ ಯು ಯು ಲಲಿತ್ ಎಂದು ಹೇಳಬಹುದಾಗಿದ್ದು ಅವರು ಪೂರ್ಣ ನ್ಯಾಯಾಲಯದ ಸಭೆಗಳನ್ನು ಕರೆಯುತ್ತಾರೆ. ಜೊತೆಗೆ ಇತರ ನ್ಯಾಯಮೂರ್ತಿಗಳ ಸಲಹೆಗಳನ್ನು ಕೇಳುತ್ತಾರೆ.

Q

ಬಾರ್‌ ಅಂಡ್‌ ಬೆಂಚ್‌: ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಮಾಡಲಾದ ಲೈಂಗಿಕ ಕಿರುಕುಳದ ಆರೋಪ ಪರಿಶೀಲಿಸುವ ತನಿಖಾ ಸಮಿತಿಯ ಭಾಗವಾಗಿದ್ದೀರಿ ನೀವು. ಪ್ರಕರಣವನ್ನು ಮುಚ್ಚಿ ಹಾಕಲಾಯಿತು ಎಂಬುದು ಹಲವರ ಅನುಮಾನ. ಇಡೀ ಘಟನಾವಳಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಂತರದ ಪರಿಣಾಮಗಳನ್ನು ನ್ಯಾಯಾಲಯ ನಿರ್ವಹಿಸಿದ್ದು ಹೇಗೆ?

A

ಕಿರುಕುಳ ನಡೆದಿದೆಯೋ ಇಲ್ಲವೋ ಎಂದು ತೀರ್ಮಾನಿಸಲು ನಾವು ವಿಚಾರಣಾ ಸಮಿತಿಯಲ್ಲಿ ಕುಳಿತಿರಲಿಲ್ಲ. ಬದಲಿಗೆ ತಾವಿರುವ ಹುದ್ದೆಯಿಂದ ತೆಗೆದುಹಾಕಬೇಕಾದಂತಹ ಕೃತ್ಯವನ್ನು ಸಿಜೆಐ (ಗೊಗೊಯ್‌) ಅವರು ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಬೇಕಿತ್ತು.

ನೀವು ಏನು ಮಾಡಬೇಕೋ ಅದನ್ನು ಬೇಗನೆ ಮಾಡಿ. ವರದಿ ಎಂದಿಗೂ ಪ್ರಕಟವಾಗದೇ ಇರುವ ಕಾರಣ ತನಿಖೆಯ ನಡಾವಳಿ, ಇಂಗ್ಲಿಷ್‌ ವ್ಯಾಕರಣ, ಕಾಗುಣಿತಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ತನಿಖಾ ಸಮಿತಿಯ ಅಧ್ಯಕ್ಷರಾಗಿದ್ದ ನ್ಯಾ. ಎಸ್‌ ಎ ಬೊಬ್ಡೆ ನಮಗೆ ಹೇಳಿದ್ದರು.

ಆದರೆ ನಾನು ಅವರಿಗೆ “ಅದು ಪ್ರಕಟವಾಗುತ್ತದೆ ಎಂದು ನಂಬಿಯೇ ನಾನು ಮುಂದುವರೆಯುತ್ತೇನೆ. ಇವತ್ತಲ್ಲಾ ನಾಳೆ; ನಾನು ಸೇವೆಯಲ್ಲಿದ್ದಾಗ ಅಥವಾ ನಿವೃತ್ತಳಾದ ಬಳಿಕ, ನಾನು ಬದುಕಿದ್ದಾಗ ಅಥವಾ ಮೃತಪಟ್ಟ ಮೇಲಾದರೂ ಸರಿ ಅವರು (ನ್ಯಾ. ಗೊಗೊಯ್‌) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕಾರಣಕ್ಕೆ ತನಿಖೆ ಮುಚ್ಚಿಹಾಕಲಾಯಿತು ಎಂದು ಯಾರೂ ಭಾವಿಸಬಾರದು” ಎಂದೆ.

ಸಿಜೆಐ ಗೊಗೊಯ್ ನೇತೃತ್ವದ ಕೊಲಿಜಿಯಂ ನನ್ನನ್ನು ನೇಮಿಸಿದೆ ಎಂದು ಪತ್ರಿಕೆಗಳು ಟೀಕಿಸಿದವು. ಆದರೆ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ, ನ್ಯಾ. ಮಲ್ಹೋತ್ರಾ ಹಾಗೂ ನನ್ನನ್ನು ಸಮಿತಿಗೆ ನೇಮಕ ಮಾಡಿತ್ತು.

ತನಿಖೆ ಯಾವತ್ತೂ ಮೂಲೆಗುಂಪಾಗಿಲ್ಲ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯೊಬ್ಬರ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾಗಲಿಲ್ಲ.

ವರದಿ ಬಹಿರಂಗಪಡಿಸಬೇಕಿತ್ತು ಎಂದು ನಾನು ಬಯಸುತ್ತೇನೆ. ಇದು ಅವರ (ನಿವೃತ್ತ ಸಿಜೆಐ ಗೊಗೊಯ್) ಮತ್ತು ನಮ್ಮ ಬಗೆಗಿನ ಅನುಮಾನಗಳನ್ನು ಇಲ್ಲವಾಗಿಸುತ್ತಿತ್ತು. ಯಾರಾದರೂ ಸಮ್ಮತಿಯಿಂದ (ಲೈಂಗಿಕ ಕ್ರಿಯೆಗೆ) ಮುಂದಾದರೆ ಅದನ್ನು ಕಿರುಕುಳ ಎನ್ನಲಾಗುತ್ತದೆಯೇ? ಆಕೆ ತನ್ನ ದೂರಿನಲ್ಲಿ ಏನು ಹೇಳಿದ್ದಾಳೆ ಎಂಬುದನ್ನು ಬಹಳ ಎಚ್ಚರಿಕೆಯಿಂದ ನೋಡಬೇಕಿದೆ. ಏಕೆಂದರೆ ನ್ಯಾಯಾಂಗ ಇದರಲ್ಲಿ ಭಾಗಿಯಾಗಿದೆ. ಸಮ್ಮತಿಯೊಂದಿಗೆ ಏನೋ ನಡೆದಿದೆ ಎಂದು ಹೇಳಲು ನಾನು ಇಲ್ಲಿ ಯತ್ನಿಸುತ್ತಿಲ್ಲ.

Q

ಬಾರ್‌ ಅಂಡ್‌ ಬೆಂಚ್‌: ತಿಂಗಳ ಹಿಂದೆ,  ಸುದೀರ್ಘ ಅವಧಿ ಬಳಿಕ, ಪ್ರಮುಖ ಪ್ರಕರಣಗಳನ್ನು ಆಲಿಸಲು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಸಾಂವಿಧಾನಿಕ ಪೀಠಗಳನ್ನು ರಚಿಸಲಾಯಿತು. ಕಳೆದ ಎರಡು ವರ್ಷಗಳಲ್ಲಿ ಅಂತಹ ಪ್ರಕರಣಗಳನ್ನು ಆಲಿಸದೇ ಇರುವುದಕ್ಕೆ ಕಾರಣ ಏನಿರಬಹುದು ಎಂದು ನೀವು ಯೋಚಿಸುತ್ತೀರಿ?  ಕೋವಿಡ್‌ ಹರಡಿದ್ದು ಮಾತ್ರ ಕಾರಣವೇ?

A

ನ್ಯಾ. ಬ್ಯಾನರ್ಜಿ: ಇದೆಲ್ಲಾ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಅವರು ಕೈಗೊಂಡ ಕ್ರಮವಾಗಿದ್ದು ಅನೇಕ ಪ್ರಕರಣಗಳು ಬಾಕಿ ಇದ್ದು ಸಮಯ ಮೀರುತ್ತಿತ್ತು. ನಿಕಟಪೂರ್ವ ಸಿಜೆಐ ಎನ್‌ ವಿ ರಮಣ ಅವರಿಗೆ ಅವರದೇ ಆದ ಆದ್ಯತೆಗಳು ಇದ್ದಿರಬಹುದು. ಅವರು ಪ್ರಕರಣಗಳ ವಿಲೇವಾರಿಗೆ ಪ್ರಾಮುಖ್ಯತೆ ನೀಡಿರಬಹುದು. ನ್ಯಾಯಮೂರ್ತಿಗಳ ಕೊರತೆ ಮತ್ತು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಪೀಠಗಳು ಪರ್ಯಾಯವಾಗಿ ಕಾರ್ಯ ನಿರ್ವಹಿಸಿದ್ದು ಕೂಡ ಕಾರಣ ಇರಬಹುದು. ಈ ವಿಚಾರಗಳಲ್ಲಿ ನಿಮ್ಮಷ್ಟೇ ಊಹೆ ನನ್ನದೂ ಕೂಡ. ಆದರೆ ಸಹಜವಾಗಿ ನಾನು ಕೆಲ ಪೀಠಗಳ ಮುಖ್ಯಸ್ಥೆಯಾಗಲು ಬಯಸಿರುತ್ತಿದ್ದೆ. ನನ್ನ ನಿವೃತ್ತಿಗೆ ಮುನ್ನ ಪೀಠದ ಮುಖ್ಯಸ್ಥಳಾಗಲು ಅವಕಾಶ ನೀಡಿದ್ದಕ್ಕಾಗಿ ನಾನು ಸಿಜೆಐ ಲಲಿತ್‌ ಅವರಿಗೆ ಕೃತಜ್ಞಳಾಗಿದ್ದೇನೆ. ಆದರೆ ಇದು ಮೊದಲೇ ನಡೆಯಬೇಕಿತ್ತು.

ಆದರೆ. ಇದೇ ರೀತಿ ಎಷ್ಟೋ ಸಂಗತಿಗಳು ಮೊದಲೇ ಆಗಬೇಕಿತ್ತು. ಉದಾಹರಣೆಗೆ ನನಗಿಂತ ಕಿರಿಯರಾಗಿದ್ದ ನ್ಯಾಯಮೂರ್ತಿಯೊಬ್ಬರು ನನಗಿಂತ ಮೊದಲೇ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದು ನಾನು ಸರ್ವೋಚ್ಚ ನ್ಯಾಯಾಲಯಕ್ಕೆ ಬರುವ ಮುನ್ನವೇ ನಿವೃತ್ತರಾದ ರೀತಿ

ನ್ಯಾ. ಆರ್ ಭಾನುಮತಿ ಅವರು ಸುಪ್ರೀಂ ಕೋರ್ಟ್‌ಗೆ ಬಂದಾಗ ಹಿರಿತನದಲ್ಲಿ ಆರನೇ ಸ್ಥಾನದಲ್ಲಿದ್ದರು. ನ್ಯಾ. ಮಂಜುಳಾ ಚೆಲ್ಲೂರ್ ಅವರು ಪಟ್ಟಿಯಲ್ಲಿ ಅತ್ಯಂತ ಹಿರಿಯರಾಗಿದ್ದರು. ಹಾಗಾಗಿ ಸಾಂವಿಧಾನಿಕ ಪೀಠದ ವಿಚಾರ ಮಾತ್ರವೇ ಅಲ್ಲ, ಸಾಕಷ್ಟು ಸಂಗತಿಗಳು ಮೊದಲೇ ನಡೆಯಬಹುದಿತ್ತು.

ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಸದಾ ಎರಡು ಸಾಂವಿಧಾನಿಕ ಪೀಠಗಳು ಇರಬೇಕು.  ವರ್ಗಾವಣೆ ಅರ್ಜಿಗಳನ್ನು ರಿಜಿಸ್ಟ್ರಾರ್ ಮತ್ತಿತರರಿಗೆ ನೀಡಿದರಾಯಿತು.

Q

ಬಾರ್‌ ಅಂಡ್‌ ಬೆಂಚ್‌: ʼಗಂಗೂಬಾಯಿ ಕಾಥಿಯಾವಾಡಿʼ ಚಲನಚಿತ್ರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ, ಲೈಂಗಿಕ ಕಾರ್ಯಕರ್ತೆಯೊಬ್ಬರ ಕರುಣಾಜನಕ ಕತೆಯೊಂದನ್ನು ನೀವು ನೆನೆದಿರಿ. ನ್ಯಾಯಾಧೀಶರಾದವರು ಭಾವನೆಗಳಿಗೆ ಮಣಿಯಬಾರದಾದರೂ ನ್ಯಾಯಾಲಯದಲ್ಲಿ ಅತ್ಯಂತ ಮಾನವೀಯ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ನ್ಯಾಯಾಧೀಶರು ಈ ಭಾವನೆಗಳನ್ನು ಒಪ್ಪಿಕೊಳ್ಳುವುದು ಎಷ್ಟು ಮುಖ್ಯ ಎಂದು ನೀವು ಭಾವಿಸುತ್ತೀರಿ?

A

ನ್ಯಾ. ಬ್ಯಾನರ್ಜಿ: ವಿಚಾರಗಳು ಭಾವನಾತ್ಮಕವಾಗಿದ್ದಾಗ ನಾವು ಭಾವನೆಗಳಿಂದ ದೂರ ಉಳಿಯಲಾಗದು. ನಾವು ವಸ್ತುನಿಷ್ಠವಾಗಿರಬೇಕು ನಿಜ, ಆದರೆ ಸಮಾಜದ ಭಾಗವಾಗಿದ್ದು ಸಾಮಾಜಿಕ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಆದ್ದರಿಂದ ನ್ಯಾಯಾಂಗೇತರ ಕರ್ತವ್ಯಗಳನ್ನು ನಿರ್ವಹಿಸುವಾಗ ನಾವು ಪಡೆಯುವ ಅನುಭವ ಸಾಮಾನ್ಯವಾಗಿ ತನ್ನ ಪಾತ್ರ ವಹಿಸುತ್ತದೆ. ಕಲ್ಕತ್ತಾ ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷಳಾಗಿ, ನಾನು ಅಂತಹ ಅನೇಕ ಪ್ರಕರಣಗಳನ್ನು ನೋಡಿದ್ದೇನೆ. ಮಾನವೀಯ ಪ್ರಕರಣಗಳಲ್ಲಿ ಪರಿಹಾರ ನೀಡಲು ನಾವು ನಮ್ಮ ಕೈಗಳನ್ನು ಚಾಚಬೇಕು. ಆಗೆಲ್ಲಾ ನಾವು ತೀವ್ರ ತಾಂತ್ರಿಕತೆಗಳಿಗೆ ಸೀಮಿತಗೊಳ್ಳಬಾರದು.

ಸಾಮಾಜಿಕ ಪರಿಣಾಮಗಳನ್ನು ಬೀರುವ ಜ್ವಲಂತ ವಿಚಾರ ಬಂದಾಗ, ನಾವು ಪ್ರಕರಣದ ಇನ್ನೊಂದು ಬದಿಯನ್ನು ಆಲಿಸುತ್ತೇವೆ, ಆದರೆ ಸಾಮಾಜಿಕ ತಪ್ಪನ್ನು ಸರಿಪಡಿಸುವ ಉದ್ವೇಗದಲ್ಲಿ ನಿರಪರಾಧಿಯನ್ನು ಶಿಕ್ಷಿಸಬಾರದು.

ನಾನು ಮಹಿಳೆಯಾಗಿದ್ದರೂ, ವಿವಾಹಪೂರ್ವ ಲೈಂಗಿಕತೆ ಮತ್ತು ಮದುವೆ ಕಾರ್ಯಗತಗೊಳ್ಳದ ಹಲವಾರು ಪ್ರಕರಣಗಳು, ಅತ್ಯಾಚಾರದ ದೂರುಗಳು ನನ್ನ ಮುಂದೆ ಬಂದಾಗ ಅಂತಹ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಸಾಕಷ್ಟು ಉದಾರವಾಗಿ ವರ್ತಿಸಿದ್ದೇನೆ.

ವಿವಾಹವೇ ವಿಚ್ಛೇದನದಲ್ಲಿ ಕೊನೆಗೊಳ್ಳುವುದಾದರೆ, ವಿವಾಹಪೂರ್ವ ಲೈಂಗಿಕತೆ ನಡೆದಿದ್ದಾಗ ನಿಶ್ಚಿತಾರ್ಥವನ್ನು ಕೂಡ ರದ್ದುಗೊಳಿಸಬಹುದಲ್ಲವೇ? ನಾನು ಸಂಪೂರ್ಣ ಸಮಾನತೆಯನ್ನು ನಂಬುತ್ತೇನೆ. ಮಹಿಳೆ ಎಂಬ ಕಾರಣಕ್ಕೆ ನನಗೆ ಯಾವುದೇ ರಿಯಾಯಿತಿ ನೀಡಿಲ್ಲ ಎಂದು ಭಾವಿಸುತ್ತೇನೆ.

Q

ಬಾರ್‌ ಅಂಡ್‌ ಬೆಂಚ್‌: ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಕ್ರಿಮಿನಲ್ ಕಾನೂನುಗಳ ಸುಧಾರಣಾ ಸಮಿತಿ ಪ್ರಸ್ತುತ ಪರಿಶೀಲಿಸುತ್ತಿದೆ. ಕ್ರಿಮಿನಲ್ ಕಾನೂನಿನಲ್ಲಿ ನಿಮ್ಮ ಪರಿಣತಿ ಗಮನಿಸಿದರೆ, ತಕ್ಷಣವೇ ಮಾರ್ಪಡಿಸಬೇಕಾದ ಕ್ಷೇತ್ರಗಳು ಯಾವುವು?

A

ನ್ಯಾ. ಬ್ಯಾನರ್ಜಿ: ತಕ್ಷಣವೇ ಗಮನಹರಿಸಬೇಕಾದ ಒಂದು ಕ್ಷೇತ್ರವೆಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ). ಚಿಕ್ಕ ವಯಸ್ಸಿಗೇ ಸಂಬಂಧಗಳನ್ನು ಬೆಳೆಸಿ 18ನೇ ವಯಸ್ಸಿಗೆ ಮದುವೆಯಾದವರನ್ನು ನಾನು ಬಲ್ಲೆ. ಈಗವರು ಬೆಳೆದ ಮೊಮ್ಮಕ್ಕಳಿರುವ ಅಜ್ಜಿಯಂದಿರು. ಮದುವೆಗೂ ಮುನ್ನ ಸಾಕಷ್ಟು ಸಂಗತಿಗಳು ಘಟಿಸಿರಬಹುದು.

ಪ್ರಸ್ತುತ ಸಮ್ಮತಿಯ ಸಂಬಂಧದಲ್ಲಿಯೂ, 17 ವರ್ಷ 11 ತಿಂಗಳು ಮತ್ತು 15 ದಿನ ವಯೋಮಾನದ ವ್ಯಕ್ತಿ ಕೂಡ ಪೋಕ್ಸೊ ಕಾಯಿದೆ ವ್ಯಾಪ್ತಿಗೆ ಬರುತ್ತಾರೆ. ಆಗೆಲ್ಲಾ ದೂರುದಾರರು ಸಾಮಾನ್ಯವಾಗಿ ಸಂಬಂಧಿಕರು, ಪೋಷಕರು ಮುಂತಾದವರಿರುತ್ತಾರೆ. ಪತಿ ಪತ್ನಿಯಾಗಿ ಜೀವನ ನಡೆಸುತ್ತಿದ್ದ ಜೋಡಿಯೊಂದು ಕೂಡ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸುವಂತೆ ಕೋರಿ ನನ್ನೆದುರು ಬಂದಿತ್ತು. ಇದು ಶಾಸನಬದ್ಧ ಅತ್ಯಾಚಾರ ಪ್ರಕರಣವಾದ್ದರಿಂದ ಅದನ್ನು ರದ್ದುಗೊಳಿಸುವುದು ಹೇಗೆ ಎಂಬುದು ನಮ್ಮ ಸಮಸ್ಯೆಯಾಗಿತ್ತು. ಸಂಬಂಧವೊಂದಕ್ಕೆ ವಿರೋಧವಿದ್ದಾಗ ಹುಡುಗಿಯ ಪೋಷಕರು ಮದುವೆಯನ್ನು ವಿರೋಧಿಸುತ್ತಾರೆ.

ನಿರ್ಭಯಾ ಪ್ರಕರಣದ ಕಾನೂನು ಸಂಘರ್ಷದಲ್ಲಿ ತೊಡಗಿರುವ ಮಕ್ಕಳ (ಬಾಲಾಪರಾಧ) ಕಾಯಿದೆಗೆ ತಿದ್ದುಪಡಿ ಮಾಡಿದಂತೆಯೇ, ಪೋಕ್ಸೊ ಕಾಯಿದೆಯಲ್ಲೂ ತಿದ್ದುಪಡಿ ಮಾಡಿ ಹುಡುಗಿ 15 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರೆ ಆಗ ಪ್ರಕರಣವನ್ನು ಅತ್ಯಾಚಾರ ವ್ಯಾಪ್ತಿಯಿಂದ ಹೊರಗಿಡಬೇಕು.

ಸಂದರ್ಶನದ ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ.

Related Stories

No stories found.
Kannada Bar & Bench
kannada.barandbench.com