ಸಂದರ್ಶನಗಳು

ಕಲ್ಯಾಣ ನಿಧಿ ಬಳಸಿಕೊಳ್ಳಲು ನಿಯಮಗಳಿಗೆ ತಿದ್ದುಪಡಿ ತರಬೇಕಿದೆ: ಕಾರವಾರ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯ್ಕ್

Ramesh DK

ಕೋವಿಡ್‌ ದಾಳಿ ಜಿಲ್ಲೆಯ ವಕೀಲರ ಮೇಲೆ ಬೀರಿದ ಪರಿಣಾಮಗಳೇನು?

ಕಾರವಾರ ವಕೀಲರ ಸಂಘದಲ್ಲಿ 180ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಹೊಂದಿದ್ದಾರೆ. ಅವರಲ್ಲಿ ಸುಮಾರು ಹತ್ತರಿಂದ ಹದಿನೈದು ವಕೀಲರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಕೋವಿಡ್‌ ಬಗೆಬಗೆಯಾಗಿ ಪೆಟ್ಟು ನೀಡಿದೆ. ಕಿರಿಯ ವಕೀಲರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ಮೇಲೆ ವಕೀಲರಲ್ಲಿ ಅನೇಕರು ತಮ್ಮ ಗ್ರಾಮಗಳಿಗೆ ಮರಳಿದರು. ಆದರೆ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅವರೆಲ್ಲಾ ಬಾಡಿಗೆ ಹಣ ಪಾವತಿಸಲೇ ಬೇಕಿತ್ತು. ನನಗೆ ಗೊತ್ತಿದ್ದ ಕಿರಿಯ ವಕೀಲರೊಬ್ಬರು ಕೋವಿಡ್‌ ಕಾರಣದಿಂದ ಊರಿಗೆ ತೆರಳಿದ್ದರೂ ನಲವತ್ತೆಂಟು ಸಾವಿರದಷ್ಟು ಬಾಡಿಗೆ ಹಣ ಪಾವತಿಸಿದ್ದಾರೆ. ಆದಾಯವೇ ಇಲ್ಲದ ಅಂತಹವರಿಗೆ ಇದು ದೊಡ್ಡ ಸವಾಲಾಯಿತು.

ಮೂರು ನಾಲ್ಕು ತಿಂಗಳವರೆಗೆ ಹಿರಿಯ ವಕೀಲರಲ್ಲಿ ಅನೇಕರಿಗೆ ಸಮಸ್ಯೆ ಎನಿಸಲಿಲ್ಲ. ಎಲ್ಲಾ ಸರಿಹೋಗಬಹುದು ಎಂದು ಅವರು ತಿಳಿದಿದ್ದರು. ಆದರೆ ಕಾಲ ಸರಿದಂತೆ ಅವರ ಪರಿಸ್ಥಿತಿಯೂ ಬಿಗಡಾಯಿಸುತ್ತಾ ಹೋಯಿತು. ಹಿರಿಯರಾದ ಅವರು ಸರ್ಕಾರದ ಐದು ಸಾವಿರ ರೂ ಧನಸಹಾಯ ಪಡೆಯಲು ಮುಜಗರಪಟ್ಟುಕೊಳ್ಳುತ್ತಿದ್ದರು. ಹೊರಗೆ ಹೇಳಿಕೊಳ್ಳದೆ ನೋವು ಅನುಭವಿಸುತ್ತಿದ್ದರು.

ಸರ್ಕಾರ ನೀಡಿದ ರೂ 5000 ಸಹಾಯ ವಕೀಲ ಸಮುದಾಯಕ್ಕೆ ಸಾಲುತ್ತಿತ್ತೆ?

ಐದು ಸಾವಿರವಲ್ಲ, ಇಪ್ಪತ್ತೈದು ಸಾವಿರ ರೂ ಕೊಟ್ಟಿದ್ದರೂ ಅವರ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಸಾಧ್ಯ ಇರಲಿಲ್ಲ. ನೋಡಿ ಕಾರವಾರ ನಗರದಲ್ಲಿ ಚಿಕ್ಕಮನೆ ಎಂದರೂ ಆರೇಳು ಸಾವಿರ ರೂ ಬಾಡಿಗೆ ಕಟ್ಟಬೇಕು. ಹಲವು ತಿಂಗಳಿನಿಂದ ಪ್ರಾಕ್ಟೀಸ್‌ ಮಾಡದೇ ಇರುವ ಅನೇಕ ವಕೀಲರು ಬೇರೆ ವೃತ್ತಿ ಆಧರಿಸಿ ಜೀವಿಸುತ್ತಿದ್ದಾರೆ. ಅವರು ವಕೀಲಿಕೆಗೆ ಮರಳುತ್ತಾರೆ ಎನ್ನುವ ಭರವಸೆ ಇಲ್ಲ.

ನ್ಯಾಯವಾದಿ ಸಮುದಾಯದ ಕೋವಿಡ್‌ ಸಂಕಷ್ಟ ನಿವಾರಿಸಲು ಕಾರವಾರ ವಕೀಲರ ಸಂಘ ಹೇಗೆ ಶ್ರಮಿಸಿತು?

ಲಾಕ್‌ಡೌನ್‌ಗೆ ಹನ್ನೆರಡು ದಿನಗಳ ಮೊದಲೇ ಮುಂಜಾಗ್ರತಾ ಕ್ರಮವಾಗಿ ಸಂಘ ಜಿಲ್ಲಾ ನ್ಯಾಯಾಧೀಶರೊಡನೆ ಚರ್ಚಿಸಿ ನ್ಯಾಯಾಲಯದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಅದಾದ ಕೆಲ ತಿಂಗಳುಗಳ ಬಳಿಕ ವಕೀಲರ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಶುರುವಾದವು. ಸಂಕಷ್ಟದಲ್ಲಿದ್ದ ನ್ಯಾಯವಾದಿಗಳಿಗೆ ಸಹಾಯ ಮಾಡಲು ಮುಂದಾಗುವಂತೆ ಹಿರಿಯ ವಕೀಲರು, ನ್ಯಾಯಾಂಗ ಅಧಿಕಾರಿಗಳನ್ನು ಕೋರಿದೆವು. ಮಾನವೀಯತೆ ಮೆರೆದು ಅವರು ಸೂಕ್ತ ಸಮಯಕ್ಕೆ ಸ್ಪಂದಿಸಿದರು. ನಾವು ಕೆಎಸ್‌ಬಿಸಿ (ಕರ್ನಾಟಕ ರಾಜ್ಯ ವಕೀಲರ ಪರಿಷತ್ತು) ನೀಡಿದ ಧನಸಹಾಯವನ್ನು ಗರಿಷ್ಠ ವಕೀಲರಿಗೆ ಮುಟ್ಟಿಸಿದ್ದೇವೆ. ನನ್ನ ಬಳಿಯೂ ಅನೇಕ ಕಿರಿಯರು ಸಂಕಷ್ಟ ತೋಡಿಕೊಂಡಿದ್ದಾರೆ. ಇಲ್ಲೊಂದು ಜಿಜ್ಞಾಸೆ ಉದ್ಭವಿಸಿತು. ಬಡ ವಕೀಲರಿಗೆ ಸಹಾಯ ನೀಡುವುದೇ ಅಥವಾ ಪ್ರಕರಣಗಳಿಲ್ಲದೆ ಪ್ರಾಕ್ಟೀಸ್‌ ಮಾಡಲು ಸಾಧ್ಯವಿಲ್ಲದವರಿಗೆ ಸಹಾಯ ಮಾಡುವುದೇ ಎಂದು. ಎಲ್ಲರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘ ಯತ್ನಿಸಿದೆ.

ನ್ಯಾಯಾಲಯ ಕಲಾಪಗಳನ್ನು ಸುಗಮಗೊಳಿಸಲು ಪ್ರಮಾಣಿತ ಕಾರ್ಯಾಚರಣಾ (ಎಸ್‌ಒಪಿ) ವಿಧಾನ ಹೇಗೆ ಸಹಾಯಕವಾಗಿದೆ?

ಎಸ್‌ಒಪಿ ಜಾರಿ ಮಾಡುವುದರಲ್ಲಿ ಅನೇಕ ಗೊಂದಲಗಳಿವೆ. ಯಾರಿಗೂ ಇಲ್ಲದ ನಿರ್ಬಂಧಗಳು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಇವೆ. ಕಾಲಕಾಲಕ್ಕೆ ಮಾರ್ಪಡಿಸಲು ಅವಕಾಶವಿದ್ದರೂ ಎಸ್‌ಒಪಿ ವಿಸ್ತರಣೆಯಾಗುತ್ತಲೇ ಹೋಗುತ್ತದೆ. ಹೈಕೋರ್ಟ್‌ನಿಂದಲೇ ಅದು ಜಾರಿಯಾಗುವುದರಿಂದ ಜಿಲ್ಲಾ ನ್ಯಾಯಾಧೀಶರು ಕೂಡ ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ. ಇನ್ನೂ ಕೆಳ ಹಂತದ ನ್ಯಾಯಾಲಯಗಳಲ್ಲಿ ಇವುಗಳನ್ನು ಪಾಲಿಸಲಾಗುತ್ತಿದೆ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿವೆ. ಅಲ್ಲದೆ ಕೋವಿಡ್‌ ಸೋಂಕಿನ ಲಕ್ಷಣಗಳು ಹೆಚ್ಚಿರುವ ಎಂಟು ಜಿಲ್ಲೆಗಳಲ್ಲಿ ಮಾತ್ರ ಎಸ್‌ಒಪಿ ಕಟ್ಟು ನಿಟ್ಟಾಗಿ ಜಾರಿಯಲ್ಲಿದೆ. ನಂತರ ಉಳಿದ ಜಿಲ್ಲೆಗಳಿಗೆ ಕೋವಿಡ್‌ ಹರಡುವುದಿಲ್ಲ ಎಂದು ಯಾವ ಗ್ಯಾರಂಟಿ ಇದೆ? ಇನ್ನು ಅರ್ಜಿಯನ್ನು ಪೆಟ್ಟಿಗೆಗೆ ಹಾಕಬೇಕು, ನಂತರ ಒಂದು ದಿನ ಕಳೆದು ಅದನ್ನು ನ್ಯಾಯಾಧೀಶರು ಮುಟ್ಟಿ ಪರಿಶೀಲಿಸಬಹುದು ಎಂಬ ನಿಯಮವಿದೆ. ಆದರೆ ಅರ್ಜಿಗೆ ಮಾತ್ರ ಆ ನಿಯಮವಿದೆ. ಬೇರೆ ಕಡತಗಳ ಪರಿಶೀಲನೆ ವೇಳೆ ಸೋಂಕು ಹರಡಿದರೆ ಏನು ಗತಿ? ನಿಯಮಗಳು ಒಂದೇ ರೀತಿ ಇದ್ದರೆ ಚೆನ್ನ.

ಉತ್ತರ ಕನ್ನಡದಂತಹ ಜಿಲ್ಲೆಯಲ್ಲಿ ವಿಡಿಯೊ ಕಲಾಪ ಯಶಸ್ವಿ ಆಗಿದೆಯೇ?

ಕೆಳಹಂತದ ನ್ಯಾಯಾಲಯಗಳಲ್ಲಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವುದು ದೂರದ ಮಾತು. ಹೈಕೋರ್ಟ್‌ ಸುಪ್ರೀಂಕೋರ್ಟ್‌ ರೀತಿಯ ಉನ್ನತ ನ್ಯಾಯಾಂಗದಲ್ಲಿ ಕೇವಲ ವಾದಗಳು ಮಾತ್ರ ನಡೆಯುತ್ತವೆ. ಅಲ್ಲಿ ವಿಚಾರಣೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹೈಕೋರ್ಟ್‌ನ ಧಾರವಾಡ , ಕಲ್ಬುರ್ಗಿ ಪೀಠಗಳಲ್ಲಿಯೂ ತಾಂತ್ರಿಕ ಸಹಾಯ ದೊರೆಯುವುದರಿಂದ ಸಮಸ್ಯೆ ಆಗದು. ಮೂಲ ಸೌಕರ್ಯ ಕೊರತೆ ಇರುವ ಶಿರಸಿ, ಕುಮಟಾ, ಸಿದ್ಧಾಪುರ, ದಾಂಡೇಲಿಯಂತಹ ಕಡೆ ಜಾಲ ಕಲಾಪ ಹೇಗೆ ಯಶಸ್ವಿಯಾಗಲು ಸಾಧ್ಯ?

ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ಮತ್ತು ಕೆಎಸ್‌ಬಿಸಿಯಿಂದ ವಕೀಲ ಸಮುದಾಯ ಏನನ್ನು ನಿರೀಕ್ಷಿಸುತ್ತಿದೆ?

ಕೆಎಸ್‌ಬಿಸಿ ಒಂದು ಶಾಸನಬದ್ಧ ಸಂಸ್ಥೆ. ಕೋಟಿಗಟ್ಟಲೆ ಹಣ ಅದರ ಬಳಿ ಇದೆ. ಕೋವಿಡ್‌ ರೀತಿಯ ತುರ್ತುಪರಿಸ್ಥಿತಿಯನ್ನು ಭವಿಷ್ಯದಲ್ಲಿ ಎದುರಿಸಲು ಇನ್ನಾದರೂ ಕೆಎಸ್‌ಬಿಸಿ ನಿಯಮಾವಳಿಗಳಿಗೆ ಅಗತ್ಯ ಬದಲಾವಣೆ ಮಾಡಬೇಕಿದೆ. ಅದು ಶಾಸಕಾಂಗದ ಜವಾಬ್ದಾರಿ ಆಗಿರುವುದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ. ಅಲ್ಲದೆ ಪರಿಷತ್ತಿನಲ್ಲಿರುವವರು ರಾಜಕಾರಣ ಮಾಡದೆ ಎಲ್ಲಾ ವಕೀಲರ ಏಳಿಗೆಗೆ ಶ್ರಮಿಸಬೇಕಿದೆ.