ಅಂಕಣಗಳು

‘ನನ್ನನ್ನು ಮುಗಿಸಬೇಡಿ, ವಾದವನ್ನಷ್ಟೇ ಮುಗಿಸಿ!’ ಕೋರ್ಟಿನಲ್ಲಿ ಆಗಾಗ ಬೀಸುವ ತಮಾಷೆಯ ತಂಗಾಳಿ…

ನ್ಯಾಯವಾದಿ ವರ್ಗ ಮತ್ತು ನ್ಯಾಯಪೀಠದ ಬಾಂಧವ್ಯ ಹದಗೆಡಿಸುವಂತಹ ಅಪನಂಬಿಕೆಗಳ ಸುಳಿ ಎದ್ದಿರುವಾಗ, ನಾವೆಲ್ಲರೂ ಕೋರ್ಟುಗಳಲ್ಲಿ ನಡೆದ ಹಾಸ್ಯ ಮತ್ತು ವಿಡಂಬನೆಯ ಕತೆಗಳಿಂದ ಹುಟ್ಟಿದ ಸಮೃದ್ಧ ಜನಪದವನ್ನು ಸವಿಯಬೇಕಿದೆ ಎನ್ನುತ್ತಾರೆ ಸಂಜಯ್ ಘೋಷ್.

Bar & Bench

ನ್ಯಾಯಮೂರ್ತಿ ಡಾರ್ಲಿಂಗ್ ಎದುರು ವಿಚಾರಣೆಗೆ ಹಾಜರಾದ ಸಾಕ್ಷಿಯೊಬ್ಬನ ಹೇಳಿಕೆಗಳು ಅಸ್ಥಿರವಾಗಿದ್ದವು. ಅದನ್ನು ನ್ಯಾಯಮೂರ್ತಿಗಳು ಎತ್ತಿ ತೋರಿಸಿದಾಗ, ಆತ ‘ನಾನು ಸತ್ಯವನ್ನು ವರಿಸಿದ್ದೇನೆ’ ಎಂದು ಪ್ರಮಾಣ ಮಾಡಿದ. ತಕ್ಷಣ ಡಾರ್ಲಿಂಗ್ ಅವರ ಪ್ರತಿಕ್ರಿಯೆ ಹೀಗಿತ್ತು: ‘ಹಾಗಾದರೆ ನೀನು ಎಷ್ಟು ದಿನದಿಂದ ವಿಧುರನಾಗಿದ್ದೀ?’

ನನಗೆ ಈ ಮಾತುಕತೆ ನ್ಯಾಯಾಧೀಶರ ಮುಂದೆ ವಿವಾದವನ್ನು ಬಗೆಹರಿಸಿಕೊಳ್ಳುವ ಬ್ರಿಟಿಷರ ವಾದಿಪ್ರತಿವಾದಿ ವ್ಯವಸ್ಥೆಯ ಸೌಂದರ್ಯವನ್ನು ನಿರೂಪಿಸುತ್ತಿದೆ. ಅದರ ಎರಡು ಆಧಾರ ಸ್ಥಂಭಗಳಾದ ವಕೀಲವರ್ಗ ಮತ್ತು ನ್ಯಾಯಪೀಠದ ಸಹಕಾರದಿಂದ ಒಡಮೂಡಿದ ಫಲವಾಗಿ ಕಾಣುತ್ತಿದೆ.

ಬ್ರಿಟಿಷರು ತಮ್ಮ ವಸಾಹತುಗಳಿಗೆ ಕಾನೂನು ವ್ಯವಸ್ಥೆ ತಂದಾಗ ಅದರೊಟ್ಟಿಗೆ ಕೋರ್ಟಿನ ವಿಡಂಬನೆ, ತಮಾಷೆಯನ್ನೂ ಹೊತ್ತು ತಂದರು.

ತೇಜ್ ಬಹದ್ದೂರ್ ಸಪ್ರು ಮತ್ತು ಷಾ ಮೊಹಮ್ಮದ್ ಸುಲೈಮಾನ್

ಸರ್ ತೇಜ್ ಬಹದ್ದೂರ್ ಸಪ್ರು ಬಗೆಗಿನ ಮಾಯ್ಕಾರ ಕತೆಗಳು ಅಲಹಾಬಾದ್ ಹೈಕೋರ್ಟ್ ವಕೀಲರ ನಡುವೆ ಓಡಾಡುತ್ತಿರುತ್ತವೆ. ಒಮ್ಮೆ, ಸಪ್ರು ಅವರು ನ್ಯಾಯಾಲಯದಲ್ಲಿ "ವಾಚಾಳಿ ನ್ಯಾಯಾಧೀಶ" ಎಂದು ಹೆಸರಾದ ಸರ್ ಶಾ ಮೊಹಮ್ಮದ್ ಸುಲೈಮಾನ್ ಅವರೆದುರು ವಾದ ಮಂಡಿಸುತ್ತಿದ್ದರು. ಇತ್ತ ಪಕ್ಕದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ಸರ್ ಗ್ರಿಮ್‌ವುಡ್ ಮಿಯರ್ಸ್ ಅವರಿಗೆ ಸಪ್ರುವಿನ ಸಹಾಯ ಬೇಕಿತ್ತು. ಸಪ್ರು ಎಲ್ಲಿ ಎಂದು ಅವರು ತಮ್ಮ ವಕೀಲ ಸರ್ ಚಾರ್ಲ್ಸ್ ರಾಸ್ ಆಲ್ಸ್ಟನ್ ಅವರನ್ನು ಕೇಳಿದರು. ಆಲ್ಸ್ಟನ್ ಅಗ,

"ಮೈ ಲಾರ್ಡ್, ಅವರು ಪಕ್ಕದ ನ್ಯಾಯಾಲಯದಲ್ಲಿ ಸರ್ ಶಾ ಮೊಹಮ್ಮದ್ ಸುಲೈಮಾನರ ವಾದ ಆಲಿಸುತ್ತಿದ್ದಾರೆ." ಎಂದುಬಿಟ್ಟರು.

ಮದ್ರಾಸ್ ಹೈಕೋರ್ಟ್‌ನಲ್ಲಿ ಸರ್ ಲಿಯೋನೆಲ್ ಲೀಚ್ ವಿಚಾರಣೆ ನಡೆಸುತ್ತಿದ್ದ ಸಂದರ್ಭ. ವಕೀಲರೊಬ್ಬರು ಉತ್ಸಾಹದಿಂದ ವಾದ ಮಂಡಿಸುತ್ತಿದ್ದರು. ಆಗ ಮಧ್ಯದಲ್ಲಿ ಕತ್ತೆಯೊಂದು ಅರಚಿತು. ಲೀಚ್ ಒರಟಾಗಿ ‘ಜಂಟಲ್ಮನ್ ಒಮ್ಮೆ ಒಬ್ಬರು ಮಾತ್ರ!’ ಎಂದರು.

ಕತೆ ಅಲ್ಲಿಗೇ ಮುಗಿಯಲಿಲ್ಲ. ಕೊನೆಯಲ್ಲಿ ಲೀಚ್ ಆದೇಶದ ಪ್ರತಿ ಓದುವಾಗ ವಕೀಲರಿಗೊಂದು ಅವಕಾಶ ಸಿಕ್ಕಿತು. ಕತ್ತೆ ಮತ್ತೆ ಅರಚಿತು. ಆಗ ಆತ “ಓ ಮೈ ಲಾರ್ಡ್ ಮತ್ತೊಮ್ಮೆ ಆ ಸಾಲುಗಳನ್ನು ಹೇಳಿ. ಭಾರಿ ಪ್ರತಿಧ್ವನಿ ಬರುತ್ತಿದ್ದುದರಿಂದ ಸರಿಯಾಗಿ ಕೇಳಲಿಲ್ಲ” ಎಂದು ಹೇಳಿದರು!

ಕೋರ್ಟ್-ವಿಡಂಬನೆಯ ಪರಂಪರೆಯನ್ನು ಭಾರತೀಯ ನ್ಯಾಯವಾದಿ ಸಮುದಾಯದ ಘಟಾನುಘಟಿಗಳು ಮುಂದುವರೆಸಿದರು. ಅಂತಹವುಗಳಲ್ಲಿ ಕೆಲವು ಕಾನೂನು ಚರಿತ್ರೆಯಲ್ಲಿ ಉತ್ತಮ ಸ್ಥಾನ ಪಡೆದಿವೆ!

ನ್ಯಾ. ಜೀವನ್ ಲಾಲ್ ಕಪೂರ್

ಉತ್ತರಪ್ರದೇಶ ಜೂಜು ಕಾಯ್ದೆಯ ಸಾಂವಿಧಾನಿಕ ಅಂಶಗಳನ್ನು ಸಾಲಿಸಿಟರ್ ಜನರಲ್ ಆಗಿ ಖ್ಯಾತ ವಕೀಲ ಸಿ.ಕೆ.ದಫ್ತರಿ (“ಚಂದು ಭಾಯ್” ಎಂದು ಹೆಸರಾದ) ಅವರು ಸಮರ್ಥಿಸಿಕೊಳ್ಳುತ್ತಿದ್ದರು. ನ್ಯಾಯಾಲಯದ ಹೊರಗೆ ದಫ್ತರಿ ಅವರ ಉತ್ತಮ ಸ್ನೇಹಿತರಾದ ನ್ಯಾ. ಜೀವನ್ ಲಾಲ್ ಕಪೂರ್ ಒಂದು ಹಂತದಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಾ,

"ಮಿಸ್ಟರ್ ಸಾಲಿಸಿಟರ್, ಈ ಜೂಜುಕೋರರು ಬಳಸುವ ಸೂಕ್ಷ್ಮ ತಂತ್ರಗಳನ್ನು ನೀವು ವಿವರಿಸಿದ ರೀತಿ ನೋಡಿದರೆ, ನೀವೂ ಕೂಡ ವೃತ್ತಿಪರ ಜೂಜುಕೋರರೆಂದು ನಮಗೆ ಅನ್ನಿಸುತ್ತಿದೆ," ಎಂದರು.

ವಿಡಂಬನೆಗೆ ಹೆಸರಾದ ದಫ್ತರಿ ಅರೆ ಕ್ಷಣವೂ ತಡಮಾಡದೆ, ಮುಖದ ಮೇಲೆ ಕೆಣಕುವಂಥ ಅಚ್ಚರಿಯ ಭಾವ ತಂದುಕೊಳ್ಳುತ್ತ ತಣ್ಣಗೆ ಹೇಳಿದರು:

‘ಮೈ ಲಾರ್ಡ್, ನಿಮ್ಮ ಮುಂದೆ ಜೂಜಾಡುವುದನ್ನು ಬಿಟ್ಟು ಬೆಳಿಗ್ಗೆಯಿಂದ ಸಂಜೆಯವರೆಗೆ ನಾನು ಏನು ತಾನೇ ಮಾಡಲು ಸಾಧ್ಯ?’ ಎಂದರು.

ಒಮ್ಮೆ, ದಫ್ತರಿ ಅವರು ಆಗಷ್ಟೇ ಸುಪ್ರೀಂಕೋರ್ಟಿಗೆ ಪದೋನ್ನತಿ ಪಡೆದಿದ್ದ ನ್ಯಾಯಮೂರ್ತಿ ಮೊಹಮ್ಮದ್ ಹಿದಾಯತುಲ್ಲಾ ಅವರೆದುರು ಖಂಡತುಂಡವಾಗಿ ವಾದ ಮಂಡಿಸುತ್ತಿದ್ದರು. ಅಂತಿಮವಾಗಿ, ನ್ಯಾಯಾಧೀಶರು ಹೇಳಿದರು:

"ಆದರೆ ದಫ್ತರಿಯವರೇ, ನಾನು ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿದ್ದಾಗ ಇದಕ್ಕೆ ವಿರುದ್ಧವಾದ ದೃಷ್ಟಿಕೋನ ಹೊಂದಿದ್ದೆ!"

ಚಂದು ಭಾಯ್ ವ್ಯಂಗ್ಯವಾಗಿ, "ಮೈಲಾರ್ಡ್ ಅದಕ್ಕೆ ಪಶ್ಚಾತ್ತಾಪ ಪಡುವ ಅವಕಾಶ ಈಗ ಒದಗಿದೆ" ಎಂದರು.

ನ್ಯಾ. ಕುಲದೀಪ್ ಸಿಂಗ್ ಮತ್ತು ಜಿ. ರಾಮಸ್ವಾಮಿ

ವಕೀಲವರ್ಗ ಮತ್ತು ನ್ಯಾಯಪೀಠಗಳೆರಡೂ ಸಾಕಷ್ಟು ಆಘಾತ ಅನುಭವಿಸಿದ ಹಾಗೂ ಜಸ್ಟೀಸ್ ಅರುಣ್ ಮಿಶ್ರಾ ಅವರು ಇತ್ತೀಚೆಗೆ ತೀರ್ಪು ನೀಡಿದ ಪ್ರಶಾಂತ್ ಭೂಷಣ್ ಪ್ರಕರಣದಂಥದ್ದೇ ಒಂದು ಪ್ರಕರಣವನ್ನು ಮೆಲಕು ಹಾಕೋಣ. ಕೋರ್ಟಿನಲ್ಲಿ ನಡೆದ ವಾದಗಳಿಂದ ನ್ಯಾ. ಕುಲದೀಪ್ ಸಿಂಗ್ ಅಸಮಾಧಾನಗೊಂಡಿದ್ದರೆಂದು ತೋರುತ್ತದೆ. ಆಗ ಅವರು ಖ್ಯಾತ ವಕೀಲ ಜಿ. ರಾಮಸ್ವಾಮಿ (ಜಿಆರ್) ಅವರತ್ತ ಗುಡುಗುತ್ತ,

"ನಾವು ಮೂರ್ಖರು ಎಂದು ನೀವು ಭಾವಿಸುತ್ತೀರಾ?"

ರಾಮಸ್ವಾಮಿ ಅವರು ಗೊಂದಲದಲ್ಲಿದ್ದಂತೆ ನಟಿಸಿ ಸುಳ್ಳೇ ತಬ್ಬಿಬ್ಬಾಗಿ ಪ್ರತಿಕ್ರಿಯಿಸಿದರು:

“ಮೈ ಲಾರ್ಡ್ ನನ್ನನ್ನು ಬಹಳ ಕಷ್ಟದ ಸ್ಥಿತಿಗೆ ತಳ್ಳಿದ್ದೀರಿ. ನಾನು ಒಪ್ಪಿದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಒಪ್ಪದೇ ಇದ್ದರೆ ಸುಳ್ಳು ಹೇಳಿದಂತಾಗುತ್ತದೆ.”

ನ್ಯಾಯಮೂರ್ತಿ ಸಿಂಗ್ ಸೇರಿದಂತೆ ಇಡೀ ಕೋರ್ಟ್ ನಗೆಗಡಲಲ್ಲಿ ತೇಲಿತು.

ಜಿಆರ್ ಅವರ ಕತೆಗಳು ಒಂದಿಡೀ ಪುಸ್ತಕ ತುಂಬುವಷ್ಟಿವೆ! ಒಮ್ಮೆ, ಕಂಪನಿಯೊಂದಕ್ಕೆ ವಿದ್ಯುತ್ ಸಂಪರ್ಕ ಸಮಸ್ಯೆ ಎದುರಾಯಿತು. ಜಿಆರ್ ಆ ಕುರಿತಂತೆ ವಾದ ಮಂಡಿಸುತ್ತಿದ್ದರು.

“ಮೈ ಲಾರ್ಡ್, ನನ್ನ ಕಕ್ಷೀದಾರರು ಬಡವರು ಮತ್ತು ಕಷ್ಟದಲ್ಲಿದ್ದಾರೆ”.

ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಇದನ್ನು ಒಪ್ಪಲಿಲ್ಲ,

"ಪುಟ 63 ರಲ್ಲಿರುವ ಬ್ಯಾಲೆನ್ಸ್ ಶೀಟ್ ನೋಡಿ ರಾಮಸ್ವಾಮಿಯವರೇ, ಮೂರು ವರ್ಷಗಳ ಹಿಂದೆ ನಿಮ್ಮ ಕಕ್ಷೀದಾರರ ವಹಿವಾಟು 50 ಲಕ್ಷ ರೂ” ಇದೆ ಎಂದರು.

ಜಿಆರ್ ಅವರು ಎದೆಗುಂದಲಿಲ್ಲ. ನಿರ್ಭಾವುಕರಾಗಿ ಹೀಗೆ ನುಡಿದರು:

“ನನಗೆ ಗೊತ್ತು ಮೈ ಲಾರ್ಡ್. ಅದು ಅವರು ನನ್ನನ್ನು ನಿಯೋಜಿಸಿಕೊಳ್ಳುವ ಮೊದಲು!”

ಒಂದು ಸಂದರ್ಭದಲ್ಲಿ ತಮ್ಮ ಕಕ್ಷೀದಾರ ಕಡಿಮೆ ಶುಲ್ಕ ನೀಡಿದ ಎಂಬ ಕಾರಣಕ್ಕಾಗಿ ಕಿರಿಕಿರಿಗೊಂಡ ಅವರು, "ಡೀಸೆಲ್ ಹಾಕಿ ಪೆಟ್ರೋಲ್ ಕಾರು ಕೆಲಸ ಮಾಡಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ?" ಎಂಬುದಾಗಿ ಕೇಳಿದ್ದರು.

ಜಿಆರ್ ಅವರನ್ನು ಗೌರವಿಸಲು ಯಾವುದೇ ಒಂದು ಹುದ್ದೆಯ ಅಗತ್ಯ ಇರಲಿಲ್ಲ. ಅಟಾರ್ನಿ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದಾಗಲೂ ಮೊನಚು ಹಾಸ್ಯ ಅವರ ಜೊತೆಗಾರನಾಗಿತ್ತು. ಹುದ್ದೆಗೆ ರಾಜೀನಾಮೆ ನೀಡಿದ ಮಾರನೇ ದಿನ, ತಮ್ಮನ್ನು ಕೆಣಕಲು ನಿರ್ಧರಿಸಿದ್ದ ನ್ಯಾಯಾಧೀಶರ ಎದುರು ಜಿಆರ್ ಕಷ್ಟಪಡುತ್ತಿದ್ದರು.

"ನೋಡಿ ರಾಮಸ್ವಾಮಿ, ಶೀಘ್ರದಲ್ಲೇ ನಿಮ್ಮ ಈ ವಾದಗಳನ್ನು ತಾಳ್ಮೆಯಿಂದ ಆಲಿಸುವವರು ಸಿಗಬಹುದು” ಎಂದರು ನ್ಯಾಯಾಧೀಶರು.

ಜಿಆರ್ ಇದರಿಂದ ವಿಚಲಿತರಾಗದೆ ನಗುತ್ತಾ, "ತಾವು ಇದನ್ನು ಹೇಳಿದ್ದು ನನಗೆ ಖುಷಿಯಾಗಿದೆ. ನಿನ್ನೆಯಷ್ಟೇ ನಾನು ಎಂದೆಂದಿಗೂ ತೆಗೆದುಹಾಕಲಾಗದ ಹುದ್ದೆಗೆ ನೇಮಕವಾದೆ”.

ನ್ಯಾಯಾಧೀಶರು ಗೊಂದಲಕ್ಕೊಳಗಾದರು. ಜಿಆರ್ ಅದಕ್ಕೆ ಸ್ಪಷ್ಟನೆ ನೀಡಿದ್ದು ಹೀಗೆ:

"ಮಾಜಿ ಅಟಾರ್ನಿ ಜನರಲ್ ಹುದ್ದೆಗೆ"

ಬಾಂಬೆ ಪ್ರತಿಬಂಧಕ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಂ.ಸಿ.ಚಾಗ್ಲಾ ವಿಚಾರಣೆ ನಡೆಸುತ್ತಿದ್ದ ಸಂದರ್ಭವನ್ನು ನೆನೆಯೋಣ. ಖ್ಯಾತ ವಕೀಲ ಸಿ ಕೆ ದಪ್ತರಿ ‘A Republic without a Pub is a relic" (ಪಬ್ ಇಲ್ಲದ ಗಣರಾಜ್ಯ ಒಂದು ಹಾಳುಕೊಂಪೆ) ಎಂದು ಬಿಡುತ್ತಿದ್ದರೇನೊ. ಆದರೆ ಅವರು ಕಾನೂನಿನ ಪರವಾಗಿ ವಾದ ಮಂಡಿಸಬೇಕಿತ್ತು. ಕಿಕ್ಕಿರಿದ ನ್ಯಾಯಾಲಯ ಎರಡು ವಾರಗಳ ಕಾಲ ವಿಚಾರಣೆ ಆಲಿಸಿತು. ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಸಮರ್ಥಿಸಿಕೊಳ್ಳಲು ದಫ್ತರಿ ಅವರನ್ನು ರಾಜ್ಯದ ಅಡ್ವೊಕೇಟ್ ಜನರಲ್ ಹುದ್ದೆಗೇರಿಸಿದ ಸಂದರ್ಭ ಅದು. ಕಾನೂನಿನಡಿಯಲ್ಲಿ ನಿಷೇಧಿತವಾಗಿರುವ ಮಾದಕ ವಸ್ತುಗಳ ಸ್ವರೂಪದ ಬಗ್ಗೆ ಚಾಗ್ಲಾ ತಿಳಿದುಕೊಳ್ಳಲು ಬಯಸಿದ್ದರು. ಮಿನುಗುಗಣ್ಣುಗಳಲ್ಲಿ ದಫ್ತರಿ ನುಡಿದದ್ದು ಹೀಗೆ:

"ಆ ಬಳಿಕ ಮೈಲಾರ್ಡ್, ದ್ರವ ಪದಾರ್ಥಗಳಲ್ಲದೆ ಅಮಲೇರಿಸುವ ಇನ್ನೂ ಅನೇಕ ಪದಾರ್ಥಗಳಿವೆ- ಅಧಿಕಾರ ಅವುಗಳಲ್ಲಿ ಒಂದು" ಎಂದರು.

ಒಮ್ಮೆ ದಫ್ತರಿ ಅವರು ನ್ಯಾಯಪೀಠದ ಕೋಪಕ್ಕೆ ತುತ್ತಾದ ಕಿರಿಯ ವಕೀಲರೊಬ್ಬರ ರಕ್ಷಣೆಗೆ ನಿಂತು ಹೇಳಿದರು:

“ಮೈ ಲಾರ್ಡ್, ಯುವಕನದ್ದು ತಪ್ಪು ಹಾದಿಯಲ್ಲಿ ಕೈಗೊಂಡ ಸರಿಯಾದ ಕ್ರಮ ಆಗಿತ್ತು. ಅವನಿಗೆ ತಮ್ಮಷ್ಟು ಮತ್ತು ನನ್ನಷ್ಟು ವಯಸ್ಸಾದಾಗ ಸರಿಯಾದ ಹಾದಿಯಲ್ಲಿ ತಪ್ಪು ಮಾಡೋದು ಹೇಗೆ ಅಂತ ಕಲೀತಾನೆ”.

“ವಾಚಾಳಿ ನ್ಯಾಯಾಧೀಶರು” ಎಂಬ ವಿಚಾರಕ್ಕೆ ಮರಳಿದರೆ, ಕೇಶವಾನಂದ ನೇತೃತ್ವದ ಹದಿಮೂರು ಸದಸ್ಯರ ಪೀಠದ ಎದುರು ನಾನಿ ಪಾಲ್ಖಿವಾಲಾ ಅವರು ವಾದದ ಸಾಹಸಕ್ಕಿಳಿದಿದ್ದರು. ಯಾವುದೇ ನ್ಯಾಯಾಧೀಶರು ಅಡ್ಡಿಪಡಿಸದೇ ಇದ್ದರೆ ಮಾತ್ರ ವಾದ ಮಂಡಿಸಬಹುದು ಎಂದು ದಫ್ತರಿ ಅವರಲ್ಲಿ ಅಲವತ್ತುಕೊಂಡರು. ಮುಂದೆ ಎಂದಿಗೂ ನಿಮಗೆ ಇಂತಹ ಸ್ಥಿತಿ ಎದುರಾಗದು ಎಂದು ದಫ್ತರಿ ಹೇಳಿದಾಗ ಪಾಲ್ಖಿವಾಲಾ ಅವರಿಗೆ ಅಚ್ಚರಿ ಕಾದಿತ್ತು. ಅಂದು ಸಂಜೆ ದಫ್ತರಿ ಅವರು ಮುಖ್ಯ ನ್ಯಾಯಮೂರ್ತಿ ಸರ್ವಮಿತ್ರ ಸಿಖ್ರಿ ಅವರನ್ನು ಭೇಟಿಯಾಗಲು ಅನುಮತಿ ಕೋರಿದರು. ಕುಶಲೋಪರಿಯ ಬಳಿಕ ಸಿಖ್ರಿ ಅವರ ವಿಚಾರಣೆಗಳು ದೊಡ್ಡ ರೀತಿಯಲ್ಲಿ ಗಮನ ಸೆಳೆಯುತ್ತವೆ ಎಂದು ಅಭಿನಂದಿಸಿದರು. ಒಬ್ಬಳು ಪುಟ್ಟ ಹುಡುಗಿ ತನ್ನ ತಂದೆಯೊಂದಿಗೆ ಕಲಾಪ ವೀಕ್ಷಿಸಲು ಬಂದಿದ್ದಳು. ಆಗ "ಚಂದ ಬಟ್ಟೆ ತೊಟ್ಟ ಕುಳಿತಿದ್ದ ಹದಿಮೂರು ಜನ ಮಹನೀಯರಿಗೆ ಪದೇ ಪದೇ ತೊಂದರೆ ಕೊಡುತ್ತಿದ್ದ ಆ ಹುಡುಗ ಯಾರು ಎಂಬುದಾಗಿ ತನ್ನ ತಂದೆಯನ್ನು ಪ್ರಶ್ನಿಸಿದಳು” ಎಂದರು. ಸಿಖ್ರಿ ಅವರಿಗೆ ಸಂದೇಶ ಮುಟ್ಟಿ ನಾನಿ ಸುಲಲಿತ ವಾದ ಮಂಡನೆಗೆ ಅವಕಾಶ ಮಾಡಿಕೊಟ್ಟರು. ಭಾರತ ಹುಟ್ಟಿದ್ದೇ ತಮಾಷೆಯೊಟ್ಟಿಗೆ.

ಬಾಲಾಪರಾಧಗಳ ವಿಚಾರಣೆ ನಡೆಸುತ್ತಿದ್ದ ರಾಚ್‌ಪಾಲ್ ಸಿಂಗ್ ಮತ್ತು ಬಾಜಪಾಯ್ ಅವರೆದುರು ಸರ್ ತೇಜ್ ಬಹದ್ದೂರ್ ಸಪ್ರು ಒಮ್ಮೆ ವಾದ ಮಂಡಿಸುತ್ತಿದ್ದರು. ಆಗ ಮೊದಲಿಗೆ, ಹಳೆಯ ಇಂಗ್ಲಿಷಿನಲ್ಲಿ ಪ್ರಕಟವಾಗಿದ್ದ ಕಾನೂನು ಪುಸ್ತಕವಾದ ‘ಕೋಮಿನ್ಸ್ ಡೈಜೆಸ್ಟ್’ ಅನ್ನು ಒಪ್ಪಿಸಿದರು. ಪುಸ್ತಕವನ್ನು ಒಂದಷ್ಟು ಓದಿ ತಿಣುಕಿದ ಸಿಂಗ್, ಪ್ರಾಚೀನ ಇಂಗ್ಲಿಷ್ ಬಗ್ಗೆ ಅದ್ಭುತ ಜ್ಞಾನ ಇದ್ದ ಬಾಜಪಾಯ್ ಅವರಿಗೆ ಅದನ್ನು ಹಸ್ತಾಂತರಿಸಿದರು. ತೇಜ್ ಅವರು ಬಳಿಕ ರಸ್ಸೆಲ್‌ನ ‘ಲಾ ಆಫ್ ಆರ್ಬಿಟ್ರೇಷನ್’ ಮತ್ತು ಹಾಗ್ನ ಆರ್ಬಿಟ್ರೇಷನ್ ಕುರಿತ ಪುಸ್ತಕಗಳನ್ನು ನೀಡಿದರು. ಸಿಂಗ್ ಅವರಿಗೆ ಇದು ಮತ್ತೆ ಪಥ್ಯವಾಗಲಿಲ್ಲ ಮತ್ತು ಪಕ್ಕದಲ್ಲಿದ್ದ ಬಾಜಪಾಯ್ ಮೆಚ್ಚಿದರು. ಕೊನೆಗೆ ಸಪ್ರು ಬೇಕನ್‌ನ ‘ಅಬ್ರಿಜ್ಮೆಂಟ್’ ಕೃತಿ ಒಪ್ಪೊಸಿದಾಗ, ಬಾಜಪಾಯ್ ಮುಗುಮ್ಮಾಗಿ,

"ಇದು ನಿಜವಾಗಿಯೂ ಸಿಂಗ್‌ ಅವರಿಗೆ ತಾನೇ?" ಎಂದರು.

ತೇಜ್ ಉತ್ತರಿಸುತ್ತಾ, "ಇದರಲ್ಲಿ ತಾವಿಬ್ಬರೂ ಆನಂದಿಸುವ ಕೆಲ ಭಾಗಗಳಿವೆ" ಎಂದು ಹೇಳಿದರು. ಹೀಗೆ, ಗಂಗಾಧರ್ ವರ್ಸಸ್ ಇಂದರ್ ಸಿಂಗ್ ಪ್ರಕರಣ ತೀರ್ಪು ಕಂಡಿತು.

ಸೈಯದ್ ಮಹಮೂದ್

ಅಲಹಾಬಾದ್ ಹೈಕೋರ್ಟ್‌ನಲ್ಲಿಯೇ ನಡೆದ ಮತ್ತೊಂದು ಘಟನೆ ಇದು. ಕೋರ್ಟಿನ ಅತ್ಯುತ್ತಮ ನ್ಯಾಯಾಧೀಶರುಗಳಲ್ಲಿ ಒಬ್ಬರಾದ ಸರ್ ಸೈಯದ್ ಅಹ್ಮದ್ ಖಾನ್ ಅವರ ಪುತ್ರ ನ್ಯಾಯಮೂರ್ತಿ ಮಹಮೂದ್ ಅವರು ಹೈಕೋರ್ಟ್‌ಗೆ ರಾಜೀನಾಮೆ ನೀಡಿದ ನಂತರ ಲಕ್ನೋದಲ್ಲಿನ ನ್ಯಾಯಾಂಗ ಆಯುಕ್ತರ ಕೋರ್ಟಿನಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದರು. ದುಃಖದ ಸಂಗತಿಯೆಂದರೆ ಅವರಿಗೆ ಕುಡಿಯುವ ಅಭ್ಯಾಸವಿತ್ತು. ಒಂದು ಸನ್ನಿವೇಶದಲ್ಲಿ ಅವರು ತಮ್ಮ ಸ್ವಂತ ಕಕ್ಷೀದಾರನ ವಿರುದ್ಧವೇ ವಾದಿಸತೊಡಗಿದರು. ಇದರಿಂದ ಆಘಾತಕ್ಕೊಳಗಾದ ಕಿರಿಯ ವಕೀಲ ಆದ ಪ್ರಮಾದವನ್ನು ಗುರುತಿಸಿ ಹೇಳಿದರು. ಆಗ ಮಹಮೂದ್ ಯಾವುದೇ ಮುಜಗರಕ್ಕೊಳಗಾಗದೇ ನ್ಯಾಯಮೂರ್ತಿಗಳತ್ತ ತಿರುಗಿ,

“ಸರ್, ಪ್ರತಿವಾದಿಗಳ ಪರ ವಕೀಲರು ಹೇಳಬೇಕಾದುದ್ದೇನು ಎಂಬುದನ್ನು ಇಲ್ಲಿಯವರೆಗೆ ಹೇಳಿದ್ದೇನೆ. ಈಗ ಆ ವಾದಗಳನ್ನು ಧ್ವಂಸಗೊಳಿಸುವೆ” ಎಂದರು.

ರಾಶ್‌ ಬಿಹಾರಿ ಘೋಷ್

ಒಮ್ಮೆ, ಉದ್ಧಾಮರಾದ ರಾಶ್‌ ಬಿಹಾರಿ ಘೋಷ್ ಅವರು ನ್ಯಾಯಾಲಯದೊಳಗೆ ದೊಡ್ಡ ದೊಡ್ಡ ಕಾನೂನು ಪುಸ್ತಕಗಳನ್ನು ತರಲು ಕಷ್ಟಪಡುತ್ತಿದ್ದುದನ್ನು ಕಂಡ ಕಲ್ಕತ್ತಾ ಹೈಕೋರ್ಟ್‌ನ ಬ್ರಿಟಿಷ್ ನ್ಯಾಯಮೂರ್ತಿ,

"ಮಿಸ್ಟರ್ ಘೋಷ್, ನೀವು ಇಡೀ ಗ್ರಂಥಾಲಯವನ್ನೇ ಹೊತ್ತು ತರುವಂತೆ ಕಾಣುತ್ತಿದೆ” ಎಂದು ಕಾಲೆಳೆದರು.

ಹಿಂಜರಿಯಲು ಬಯಸದ ಘೋಷ್, "ಹೌದು ಮೈಲಾರ್ಡ್, ನಿಮಗೆ ಸ್ವಲ್ಪ ಕಾನೂನಿನ ಬಗ್ಗೆ ಕಲಿಸೋಣ ಎಂದು ನಾನು ಈ ಎಲ್ಲಾ ಪುಸ್ತಕಗಳನ್ನು ಹೊತ್ತು ತಂದೆ” ಎಂದು ಪ್ರತಿಕ್ರಿಯಿಸಿದರು.

ಅಶೋಕ್ ಕುಮಾರ್ ಸೇನ್ ಮತ್ತು ಸಿದ್ಧಾರ್ಥ್ ಶಂಕರ್ ರೇ

ಕಲ್ಕತ್ತಾದ ಅಶೋಕ್ ಸೇನ್ ಮತ್ತು ಸಿದ್ಧಾರ್ಥ್ ಶಂಕರ್ ರೇ ಅವರು ಕೋರ್ಟ್ ಚತುರೋಕ್ತಿ ಮತ್ತು ತಮಾಷೆಗೆ ಹೆಸರಾದವರು. ಒಮ್ಮೆ, ಸೇನ್ ಅವರನ್ನು ನ್ಯಾಯಪೀಠ ಕೇಳಿತು: "ಮಿಸ್ಟರ್ ಸೇನ್, ಶಾಸಕಾಂಗದ ಉದ್ದೇಶ ಮತ್ತು ವ್ಯಾಖ್ಯಾನದ ಬಗ್ಗೆ ನೀವು ಅಷ್ಟು ವಿಶ್ವಾಸದಿಂದ ಹೇಗೆ ಮಾತನಾಡುತ್ತೀರಿ?”

"ಏಕೆಂದರೆ ಮೈಲಾರ್ಡ್ ಅದನ್ನು ರೂಪಿಸಿದವನು ನಾನೇ”

ವಿಚಾರಣೆಯೊಂದರಲ್ಲಿ ಸೋಲಿನ ಅಂಚಿನಲ್ಲಿದ್ದ ಎಸ್ ಎಸ್ ರೇ ವಿಚಲಿತರಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂತು. ತಮ್ಮ ದೊಡ್ಡ ನಿಲುವಂಗಿಯ ಉದ್ದನೆ ತೋಳುಗಳನ್ನು ಅವರು ಎಳೆದುಕೊಳ್ಳುತ್ತಿದ್ದುದ್ದು ನ್ಯಾಯಾಧೀಶರಿಗೆ ಕಿರಿಕಿರಿ ಉಂಟುಮಾಡಿತ್ತು. ಉದ್ವೇಗದಲ್ಲಿದ್ದಾಗ ಹಾಗೆ ಮಾಡುವುದು ರೇ ಅವರಿಗೆ ಅಭ್ಯಾಸವಾಗಿತ್ತು. ಕೊನೆಗೆ ಅವರ ಎಳೆದಾಟ ಸಹಿಸದೆ ನ್ಯಾಯಾಧೀಶರು,

"ಮಿಸ್ಟರ್ ರೇ ನಿಜವಾಗಿಯೂ ನೀವೇನು ಮಾಡುತ್ತಿದ್ದೀರಿ? " ಎಂದು ಕೇಳಿದರು.

ರೇ ಉತ್ತರಿಸಿದರು, "ಮೈ ಲಾರ್ಡ್, ಎರಡೂ ಅಂಚುಗಳನ್ನು ಸೇರಿಸಲು ಯತ್ನಿಸುತ್ತಿದ್ದೇನೆ."

ಪಿ.ಕೆ.ಮಿಶ್ರಾ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿಗಳಾಗಿದ್ದರು. ಅವರೆದುರು ವಕೀಲರೊಬ್ಬರು ಕೊನೆ-ಮೊದಲಿಲ್ಲದಂತೆ ವಾದ ಮಂಡಿಸುತ್ತಿದ್ದರು. ಯಾವಾಗ ಮುಗಿಯುತ್ತದೋ ಎಂಬ ಸ್ಥಿತಿಯ ನಡುವೆ "ಮುಗಿಸಿಬಿಡುತ್ತೇನೆ ಮೈಲಾರ್ಡ್" ಎಂದು ವಕೀಲರು ಭರವಸೆ ನೀಡಿದರು.

ನ್ಯಾಯಮೂರ್ತಿಗಳು ಚುಚ್ಚುತ್ತಾ, “ನನ್ನನ್ನು ಮುಗಿಸಬೇಡಿ, ವಾದವನ್ನಷ್ಟೇ ಮುಗಿಸಿ” ಎಂದರು.

ಮದ್ರಾಸ್ ಹೈಕೋರ್ಟಿನ ಮತ್ತೊಬ್ಬ ನ್ಯಾಯಮೂರ್ತಿಗಳು ತಾಳ್ಮೆಯಿಂದ ಪ್ರಕರಣವೊಂದನ್ನು ಆಲಿಸುತ್ತಿದ್ದರು, ಫಿರ್ಯಾದಿ ಕ್ಷೋಭೆಯಿಂದ ಏನನ್ನೋ ಹುಡುಕುತ್ತಿರುವುದು ಕಂಡುಬಂತು. ನ್ಯಾಯಾಧೀಶರು ವಿಷಯವೇನು ಎಂದು ವಕೀಲರನ್ನು ಕೇಳಿದರು. ತಮ್ಮ ಕಕ್ಷೀದಾರ ಜಾಕೆಟ್ ಕಳೆದುಕೊಂಡ ವಿಚಾರವನ್ನು ಅವರು ತಿಳಿಸಿದರು. ಆಗ ನ್ಯಾಯಾಧೀಶರು ‘ನಿಮ್ಮ ಕಕ್ಷೀದಾರರು ಇದುವರೆಗೂ ಜಾಕೆಟ್ ಅಷ್ಟೇ ಕಳೆದುಕೊಂಡಿದ್ದಾರೆ. ಅನೇಕರು ತಮ್ಮ ಬಟ್ಟೆಗಳನ್ನೇ ಕಳೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ’ ಎಂದು ಪ್ರತಿಕ್ರಿಯಿಸಿದರು.

ಇತ್ತೀಚೆಗೆ ಕರ್ನಾಟಕ ಸರ್ಕಾರ ರಚನೆ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಎ ಕೆ ಸಿಖ್ರಿ ನ್ಯಾಯಾಲಯದ ಕೋಣೆಯಲ್ಲಿ ನೇತುಬಿದ್ದಿದ್ದ ಉದ್ವೇಗವನ್ನು ತೆಗೆದುಹಾಕಿದ್ದು ಹೀಗೆ:

"ನಾನು ಈಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶ ನೋಡಿದೆ, ರೆಸಾರ್ಟಿನ ಮಾಲೀಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದು ಅವರ ಬಳಿ 117 ಶಾಸಕರು ಇರುವುದರಿಂದ ಸರ್ಕಾರ ರಚಿಸಲು ತಮ್ಮನ್ನೂ ಆಹ್ವಾನಿಸುವಂತೆ ಬೇಡಿಕೆ ಇಟ್ಟಿದ್ದಾರಂತೆ!”

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಕೂಡ ತಮಾಷೆಯ ಮಾತುಗಳನ್ನಾಡಿದ್ದಿದೆ. ಇತ್ತೀಚೆಗೆ ಕೃಷ್ಣ ಜನ್ಮಾಷ್ಟಮಿಯಂದು ವಕೀಲರೊಬ್ಬರು ತಮ್ಮ ಕಕ್ಷೀದಾರನ ಬಿಡುಗಡೆಗೆ ಮನವಿ ಮಾಡಿದರು.

"ಶ್ರೀಕೃಷ್ಣ ಇಂದು ಜೈಲಿನಲ್ಲಿ ಹುಟ್ಟಿದ. ನೀವು ಈ ದಿನವೇ ಅದನ್ನು ತೊರೆಯಬೇಕಾ?"

ಹೌದು ಎಂದು ವಕೀಲರು ಒತ್ತಾಯಿಸಿದ್ದನ್ನು ಗಮನಿಸಿದ ನ್ಯಾಯಮೂರ್ತಿಗಳು,

“ಒಳ್ಳೆಯದು ನೀವು ಯಾವುದೇ ಧರ್ಮದೊಂದಿಗೆ ತೀವ್ರವಾದ ಸಂಬಂಧ ಇರಿಸಿಕೊಂಡಿಲ್ಲ. ಜಾಮೀನು ನೀಡಲಾಗಿದೆ”.

ನ್ಯಾಯಾಲಯವನ್ನು ತಮ್ಮ ಚತುರಮತಿ ಮತ್ತು ಹಾಸ್ಯದಿಂದ ಹಿಡಿದಿಟ್ಟುಕೊಂಡ ಅನೇಕ ನ್ಯಾಯಾಧೀಶರ ನಡುವೆ ಕೋರ್ಟ್ ಆದೇಶದಲ್ಲಿ ಕೂಡ ಹಾಸ್ಯದ ಹೊನಲು ಹರಿಸಿದ ನ್ಯಾಯಮೂರ್ತಿಗಳಿದ್ದಾರೆ. ಅವರಲ್ಲಿ ಜಿ.ಎಸ್ ಪಟೇಲ್ ಒಬ್ಬರು. ಇಲ್ಲಿದೆ ಮಾದರಿ:

ಇಂಡಿಗೋ ವಿಮಾನಗಳ ಒಡೆತನ ವಹಿಸಿಕೊಂಡಿರುವ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ ಕಂಪೆನಿ ಅದರ ಬುಕಿಂಗ್ ಜಾಲತಾಣ ‘goindigo.in’ನಲ್ಲಿ ‘go’ ಎಂಬ ಪೂರ್ವಪ್ರತ್ಯಯ ಬಳಸಿತ್ತು. ಇದನ್ನು ವಿರೋಧಿಸಿ ಗೋ ಏರ್ ವಿಮಾನಗಳ ಮಾಲೀಕತ್ವ ಹೊಂದಿರುವ ಗೋ ಏರ್ (Go Air) ಕಂಪೆನಿ 2016ರಲ್ಲಿ ಮೊಕದ್ದಮೆ ದಾಖಲಿಸಿತ್ತು.

ಪಟೇಲ್ ತಮ್ಮ ತೀರ್ಪಿನಲ್ಲಿ ಹೀಗೆ ಬರೆದಿದ್ದಾರೆ: “goindigo.in ಡೊಮೇನ್ ಹೆಸರನ್ನು ಬಳಸಬಾರದು ಎಂಬುದು ಗೋ ಏರ್ ವಾದ. ಇಂಡಿಗೊ ಆಯ್ಕೆಮಾಡಿಕೊಂಡಿರುವ “ಗೋ” ಪೂರ್ವಪ್ರತ್ಯಯದಿಂದಾಗಿ ಬೌದ್ಧಿಕ ಆಸ್ತಿ ಸಮಸ್ಯೆ ಉದ್ಭವಿಸಿದೆ. ಇದಕ್ಕೆ ಅವಕಾಶ ನೀಡಿದರೆ ಉಳಿದ ಇನ್ನೊಂದು ಗೋ ಪದವನ್ನು ಕೂಡ ತೆಗೆದುಹಾಕಿ ಇಂಡಿಗೊವನ್ನು ‘ಇಂಡಿ’ ಎಂದಷ್ಟೇ ನಾಮಕಾರಣ ಮಾಡಬೇಕು ಎಂಬ ಬೇಡಿಕೆ ಬರಬಹುದು”.

ಇಂಡಿಗೋ ಜಾಲತಾಣವನ್ನು ಹೋಸ್ಟ್ ಮಾಡುವ ಗೂಗಲ್ (Google) ವಿರುದ್ಧ ಗೋ ಏರ್ ಮೊಕದ್ದಮೆ ದಾಖಲಿಸಿಲ್ಲ ಎಂಬುದನ್ನು ಕೂಡ ಗಮನಿಸಿದ ನ್ಯಾಯಮೂರ್ತಿ ಪಟೇಲ್, “ಒಳ್ಳೆಯದೇ ಆಯಿತು. ಏಕೆಂದರೆ ಇದಕ್ಕೆ ಪರ್ಯಾಯವನ್ನು ಹುಡುಕುವುದು ಕಷ್ಟ. ಇಲ್ಲದಿದ್ದರೆ ಜಾಲತಾಣವನ್ನು (‘ಗೂಗಲ್’ ಮಾಡುವ ಬದಲಿಗೆ) ‘ಊಗಲ್’ ಮಾಡಬೇಕಾಗುತ್ತಿತ್ತು” ಎಂದು ತಿವಿದಿದ್ದಾರೆ.

ಕೊನೆಯದಾಗಿ, ಇಲ್ಲಿ ನಿರೂಪಿತವಾದ ಕತೆಗಳು ಕೋರ್ಟ್ ಹಾಸ್ಯಕ್ಕೆ ಸಂಬಂಧಿಸಿದ ನೈಜ ಪ್ರಕರಣಗಳಾಗಿವೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. ನ್ಯಾಯಪೀಠ ಮತ್ತು ಅದರ ತಾಯಿಯಾದ ನ್ಯಾಯವಾದಿಗಳ ವರ್ಗದ ನಡುವಿನ ದೊಡ್ಡ ವಾದ, ಮಾರಕ ವಾಕ್ಸಮರ ಹುಟ್ಟುಹಾಕುವ ಸಣ್ಣ ಅಡ್ಡಿ, ನೋವು, ದಾಳಿಯ ಮಧ್ಯೆಯೇ ಹಾಸ್ಯವನ್ನೂ ಸಾಧಿಸಬಹುದು. ಈಗೀಗ ನ್ಯಾಯಪೀಠ ಮತ್ತು ನ್ಯಾಯವಾದಿಗಳ ವರ್ಗ ಅದೆಷ್ಟು ವಿಘಟನೆ, ಅಹಮಿಕೆಯಿಂದ ಕೂಡಿವೆ ಎಂದರೆ ಹಾಸ್ಯ ಮತ್ತು ವಿಡಂಬನೆ ಎಂಬುದು ದುರ್ಬಲಗೊಂಡು ವಿನಾಶದಂಚಿನಲ್ಲಿ ನಿಂತಿದೆ. ಈ ಕೂಡಲೇ ನಾವೆಲ್ಲ ಹಾಸ್ಯ ನಮ್ಮ ನ್ಯಾಯಾಲಯಗಳಿಗೆ ಮರಳಲು ಇರುವ ಅಡೆತಡೆಗಳನ್ನು ತೆಗೆದುಹಾಕಬೇಕಿದೆ ಎಂದು ಈ ಮೂಲಕ ಆದೇಶಿಸಲಾಗಿದೆ.