ಸಂಭಾವ್ಯ ಶೀರ್ಷಿಕೆ

ಲೀಗಲ್ ಜಾಂಬಿ ಎಂಬ ಕಾನೂನು ಲೋಕದ ʼನಿಗೂಢ ಜೀವಿʼಯ ಸುತ್ತ…

Ramesh DK

ಜಾಂಬಿಗಳು: ಪೂರ್ಣವಾಗಿ ಸಾಯದೆ, ವ್ಯಕ್ತಿತ್ವ, ವಿವೇಚನೆ ಕಳೆದುಕೊಂಡ ಇತ್ತ ಶವವೂ ಅಲ್ಲದ ಅತ್ತ ಪ್ರೇತವೂ ಅಲ್ಲದ ದೈಹಿಕವಾಗಿ, ಮಾನಸಿಕವಾಗಿ ಬದಲಾದ ಮನುಕುಲಕ್ಕೆ ಉಪಟಳ ನೀಡುವ ಅತಂತ್ರ ಶರೀರಗಳು. ಇಂತಹ ಜಾಂಬಿಗಳು ಕಾನೂನು ಲೋಕದಲ್ಲಿಯೂ ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲಿ ಅವುಗಳ ಅಸ್ತಿತ್ವ ಇರುವುದು ಕೊಂಚ ಬೇರೆಯ ರೂಪದಲ್ಲಿ.

ಇತ್ತೀಚೆಗೆ ಸುದ್ದಿಯಾದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ (ಐಟಿ ಕಾಯಿದೆ) ʼಸೆಕ್ಷನ್ 66 ಎʼ ಇಂದಲೇ ಕಾನೂನು ಲೋಕದ ಜಾಂಬಿಗಳ ಕುರಿತು ತಿಳಿಯಲು ಯತ್ನಿಸೋಣ. ಕಾಯಿದೆಗೆ 2008ರಲ್ಲಿ ತಿದ್ದುಪಡಿ ಮಾಡುವ ಮೂಲಕ ಈ ಸೆಕ್ಷನ್‌ ಜಾರಿಗೆ ತರಲಾಗಿತ್ತು. ಆನ್‌ಲೈನ್‌, ಡಿಜಿಟಲ್‌ ಸಂವಹನದ ಮೂಲಕ ಕಾನೂನುಬಾಹಿರ ಸಂದೇಶಗಳನ್ನು ತಡೆಯುವುದನ್ನು ಈ ಸೆಕ್ಷನ್‌ ನಿರ್ಬಂಧಿಸುತ್ತಿತ್ತು. ಆದರೆ ಕಾನೂನುಬಾಹಿರ ಎಂಬ ಪದವನ್ನು ವ್ಯಾಖ್ಯಾನಿಸುವಲ್ಲಿ ಇದು ವಿಫಲವಾಗಿತ್ತು. ʼಕಾನೂನುಬಾಹಿರʼ ಎಂಬ ಪದದ ವಿಪರೀತವಾದ ಅಸ್ಪಷ್ಟತೆಯಿಂದಾಗಿ ಕಾನೂನು ಜಾರಿ ಮಾಡುವವರು ಇದನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿತ್ತು. ಅಲ್ಲದೆ ಇದು ಅಂತರ್ಜಾಲದ ವಾಕ್‌ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿತ್ತು.

2015ರಲ್ಲಿಯೇ ʼಅಸಾಂವಿಧಾನಿಕʼ ಎಂದು ರದ್ದುಪಡಿಸಲಾಗಿದ್ದ ಸೆಕ್ಷನ್ 66 ಎ ಅನ್ನು ಇನ್ನೂ ಬಳಸುತ್ತಿರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ನೋಟಿಸ್‌ ನೀಡಿತು. ಹಾಗೆ ನೋಟಿಸ್‌ ನೀಡುವಾಗ ಆರು ವರ್ಷಗಳ ಹಿಂದೆಯೇ ಈ ಸೆಕ್ಷನ್‌ ರದ್ದುಪಡಿಸಲಾಗಿದ್ದರೂ ದೇಶಾದ್ಯಂತ ಹಲವು ಪ್ರಕರಣಗಳನ್ನು ದಾಖಲಿಸುತ್ತಿರುವುದಕ್ಕೆ ನ್ಯಾಯಾಲಯ ಆಘಾತ ವ್ಯಕ್ತಪಡಿಸಿತು.

ಈಗ ಲೀಗಲ್‌ ಜಾಂಬಿ ಎಂಬ ಪರಿಕಲ್ಪನೆಗೆ ಮರಳೋಣ. ಒಂದು ಕಾನೂನನ್ನು ವಿಧಿವತ್ತಾಗಿ ರದ್ದುಪಡಿಸಿದ್ದರೂ ಇನ್ನೂ ಜಾರಿಯಲ್ಲಿರುವ ಕಾರಣ ಅವುಗಳನ್ನು ʼಲೀಗಲ್‌ ಜಾಂಬಿʼ ಅಥವಾ ಜಾಂಬಿ ಕಾನೂನು (Zombie Law) ಎನ್ನುತ್ತಾರೆ. ನ್ಯಾಯಾಲಯವೊಂದು ʼಹೊಡೆದುರುಳಿಸಿದʼ ಕಾನೂನು ಇನ್ನೂ ಜೀವಂತ ಇರುವುದನ್ನು ʼಜಾಂಬಿʼ ಎಂಬ ವಿಶಿಷ್ಟ ಹೆಸರಿನೊಂದಿಗೆ ಗುರುತಿಸಲಾಗುತ್ತದೆ. ರದ್ದಾದ ಕಾನೂನು ಇನ್ನೂ ಅಸ್ತಿತ್ವದಲ್ಲಿದ್ದರೆ ಅದು ಬೀರುವ ಪರಿಣಾಮ ಪ್ರತಿಕೂಲವಾದುದು ಎಂದು ಬಿಡಿಸಿ ಹೇಳಬೇಕಿಲ್ಲ. ಹಾಗಾಗಿಯೇ ಸುಪ್ರೀಂಕೋರ್ಟ್‌ ಕಳವಳದ ಹಿಂದೆ ದೊಡ್ಡ ಕಾರಣವೂ ಇತ್ತು.

“ಆಘಾತಕಾರಿ ರೀತಿಯಲ್ಲಿ ಸೆಕ್ಷನ್ 66 ಎ ಪೊಲೀಸ್‌ ಠಾಣೆಗಳಲ್ಲಿ ಮಾತ್ರವಲ್ಲದೆ ದೇಶದ ವಿಚಾರಣಾ ನ್ಯಾಯಾಲಯಗಳಲ್ಲೂ ಬಳಕೆಯಲ್ಲಿದೆ” ಎಂದು ಸರ್ಕಾರೇತರ ಸಂಸ್ಥೆ ಪಿಯುಸಿಎಲ್‌ ಸರ್ವೋಚ್ಚ ನ್ಯಾಯಾಲಯದ ಗಮನ ಸೆಳೆದ ಪರಿಣಾಮವಾಗಿ ಅದು ಕಾನೂನು ಲೋಕದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಯಿತು.

2015ರ ತೀರ್ಪಿನ ಪಾಲನೆ ಕೋರಿ ಇದೇ ಸರ್ಕಾರೇತರ ಸಂಸ್ಥೆ 2018ರಲ್ಲಿ ಕೂಡ ಮನವಿ ಸಲ್ಲಿಸಿತ್ತು. ಶ್ರೇಯಾ ಸಿಂಘಾಲ್ ತೀರ್ಪಿನ ಪ್ರತಿಗಳನ್ನು ಈ ದೇಶದ ಪ್ರತಿ ಹೈಕೋರ್ಟ್‌ನಿಂದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಲಭ್ಯವಾಗುವಂತೆ ನಿರ್ದೇಶಿಸಿ ಸುಪ್ರೀಂಕೋರ್ಟ್ ಫೆಬ್ರವರಿ 15, 2019ರಲ್ಲಿ ಪ್ರಕರಣವನ್ನು ವಿಲೇವಾರಿ ಮಾಡಿತ್ತು. ಅಲ್ಲದೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ತೀರ್ಪಿನ ಪ್ರತಿ ಒದಗಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಪ್ರತಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ತೀರ್ಪಿನ ಪ್ರತಿಗಳನ್ನು ಕಳುಹಿಸುವ ಮೂಲಕ ಪೊಲೀಸ್ ಇಲಾಖೆಗಳನ್ನು ಜಾಗೃತಗೊಳಿಸುವಂತೆ ಸೂಚಿಸಲಾಗಿತ್ತು. ಇಷ್ಟಾದರೂ 2021ರ ಮಾರ್ಚ್ 10ರ ಹೊತ್ತಿಗೆ ಸುಮಾರು 745 ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳ ಮುಂದೆ ಬಾಕಿ ಉಳಿದಿದ್ದು ಸಕ್ರಿಯವಾಗಿವೆ ಎಂಬುದು ಪಿಯುಸಿಎಲ್‌ನ ಆತಂಕವಾಗಿತ್ತು.

ಸುಪ್ರೀಂಕೋರ್ಟ್‌ ಕೆಂಗಣ್ಣು ಬೀರಿದ ಬೆನ್ನಿಗೇ ಆ ಸೆಕ್ಷನ್‌ನಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದಾಖಲಿಸಿರುವ ಎಲ್ಲಾ ದೂರುಗಳನ್ನು ಹಿಂಪಡೆಯುವಂತೆ ಹಾಗೂ ಮುಂದೆ ಆ ಸೆಕ್ಷನ್‌ ಅಡಿ ಯಾರ ವಿರುದ್ಧವೂ ದೂರು ದಾಖಲಿಸದಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಈಗಿನ ನಿರ್ದೇಶನದಿಂದಲಾದರೂ ಈ ಅಸಾಂವಿಧಾನಿಕ ಸೆಕ್ಷನ್‌ ಎಷ್ಟು ಪರಿಣಾಮಕಾರಿಯಾಗಿ ಮೂಲೋತ್ಪಾಟನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸೆಕ್ಷನ್ 66 ಎ ಸುಪ್ರೀಂಕೋರ್ಟ್‌ ಅಂಗಳದಲ್ಲಿ ಸದ್ದು ಮಾಡಿದ್ದಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಷಯವನ್ನು ಇಲ್ಲಿ ಹೇಳಬೇಕು. ಈ ಸೆಕ್ಷನ್‌ನಡಿ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪತ್ತೆ ಹಚ್ಚುವ ಏಕೈಕ ಉದ್ದೇಶದಿಂದ ʼಸಿವಿಕ್‌ ಡೇಟಾ ಲ್ಯಾಬ್‌ʼ ಮತ್ತು ʼಇಂಟರ್‌ನೆಟ್‌ ಫ್ರೀಡಂ ಫೌಂಡೇಷನ್‌ʼ ಜಾಲತಾಣವೊಂದನ್ನು ರೂಪಿಸಿತ್ತು. ಬಹುತೇಕ ಯುವಕ- ಯುವತಿಯರೇ ಸೇರಿ ಕಟೆದಿರುವ ಈ ಜಾಲತಾಣದ ಹೆಸರು ʼಜಾಂಬಿ ಟ್ರಾಕರ್‌ʼ. ಜಾಲತಾಣ ನೀಡಿದ ಮಾಹಿತಿಯನ್ನು ಆಧರಿಸಿಯೇ ಪಿಯುಸಿಎಲ್‌ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿತ್ತು.

ಜಾಂಬಿ ಕಾನೂನುಗಳು ಕೇವಲ ನಮ್ಮ ದೇಶದಲ್ಲಷ್ಟೇ ಇಲ್ಲ. ಇಂತಹ ಕಾನೂನುಗಳ ಬಗ್ಗೆ ಅಮೆರಿಕ ಸೇರಿದಂತೆ ಅನೇಕ ದೇಶಗಳು ಆಗಾಗ ಸಾಕಷ್ಟು ಚರ್ಚೆಗಳು ನಡೆದಿವೆ. ಜಾಂಬಿ ಕಾನೂನುಗಳ ಉಗಮಕ್ಕೆ ಕಾರಣಗಳು, ಅವುಗಳ ನಿಗ್ರಹಕ್ಕೆ ನ್ಯಾಯಾಂಗವಷ್ಟೇ ಅಲ್ಲದೆ ಶಾಸಕಾಂಗ, ಕಾರ್ಯಾಂಗ ಕೈಗೊಳ್ಳಬೇಕಾದ ಕ್ರಮ ಇತ್ಯಾದಿ ವಿಚಾರಗಳನ್ನು ಚರ್ಚಿಸಲಾಗಿದೆ. ಅದರಲ್ಲಿಯೂ ಇಂತಹ ಕಾನೂನುಗಳನ್ನು ಹೋಗಲಾಡಿಸುವಲ್ಲಿ ಶಾಸಕಾಂಗ ಮತ್ತುಕಾರ್ಯಾಂಗಗಳು ವಹಿಸಬೇಕಾದ ಮಹತ್ವದ ಪಾತ್ರವನ್ನು ವಿವರಿಸಲಾಗಿದೆ.

'ಸಾಂವಿಧಾನಿಕವಾಗಿ ಜಾರಿಗೊಳಿಸಲಾಗದ ಕಾನೂನು ಅಥವಾ ನ್ಯಾಯಾಂಗದಿಂದ ಇದಾಗಲೇ ಅಮಾನ್ಯಗೊಂಡಿರುವ ಕಾನೂನು ಸಮಯ ಸರಿದರೂ ಸಹ ಕಾನೂನು ಪುಸ್ತಕಗಳಲ್ಲಿ ಹಾಗೇ ಉಳಿದುಬಿಟ್ಟಿರುತ್ತವೆ. ಹೊಡೆದುರುಳಿಸಿದರೂ ಈ ಕಾನೂನುಗಳು ಅಸ್ತಿತ್ವದಲ್ಲಿ ಏಕೆ ಇರುತ್ತವೆ ಎಂಬುದು ಮತ್ತೊಂದು ಕುತೂಹಲಕರ ಸಂಗತಿ. ಇಂತಹ ಕಾನೂನುಗಳು ಉಳಿದಿರುವುದರ ಹಿಂದೆ ಶಾಸನ ರೂಪಿಸುವವರ ಮತ್ತು ಅದನ್ನು ಜಾರಿಗೆ ತರುವವರ ಅವಜ್ಞೆ ಕೆಲಸ ಮಾಡುತ್ತಿರಬಹುದು. ಇಲ್ಲವೇ ಕೆಲವರಿಗೆ ಅಂತಹ ʼಮರಣವಿಲ್ಲದ ಕಾನೂನುʼಗಳಿಂದ ಲಾಭಗಳಾಗುತ್ತಿರಬಹುದು ಎನ್ನುವ ಸಾಮಾನ್ಯ ಅಭಿಪ್ರಾಯವಿದೆ.

ಇಂತಹ ಜಾಂಬಿ ಕಾನೂನುಗಳು ಅನಿವಾರ್ಯ ಕಾರಣಗಳಿಂದ ಹಾಗೆಯೇ ಉಳಿದು ಬಿಡುವ ಬಗ್ಗೆಯೂ ಸಂಶೋಧನೆಯೊಂದು ತಿಳಿಸುತ್ತದೆ. ನ್ಯಾಯಾಲಯಗಳ ವ್ಯಾಪ್ತಿಗೆ ಅಂತಹ ಕಾನೂನುಗಳು ಒಳಪಡದೇ ಇರುವ ಸಂದರ್ಭದಲ್ಲಿ ಅಥವಾ ಇದೇ ಬಗೆಯ ಸಾಂವಿಧಾನಿಕ ಕಳಕಳಿಯಿಂದ ಇಂಥದ್ದೇ ಇನ್ನೊಂದು ಕಾನೂನು ಹುಟ್ಟಿದ ವೇಳೆ ಇಲ್ಲವೇ ಜಾಂಬಿ ಕಾನೂನುಗಳನ್ನು ರದ್ದುಗೊಳಿಸುವಂತೆ ನ್ಯಾಯಾಂಗ ಶಾಸಕಾಂಗಕ್ಕೆ ಆದೇಶಿಸಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಇಂತಹ ಕಾನೂನುಗಳು ಅನಿವಾರ್ಯವಾಗಿ ಉಳಿದಿರುತ್ತವೆ. ಆಗ ಸೂಪರ್‌ ಕಾನೂನೊಂದನ್ನು ಜಾರಿಗೆ ತಂದು ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂಬ ಸಲಹೆಗಳಿವೆ.

ಹೀಗೆ ʼಸಾಯದೆʼ ಉಳಿದ ಕಾನೂನುಗಳ ಪರಿಣಾಮ ತಮ್ಮ ಮೂಲ ಕಾನೂನಿನ ಸ್ವರೂಪ ಮತ್ತು ಕಾಯಿದೆಯನ್ನು ಜಾರಿಗೊಳಿಸುವವರನ್ನು ಅವಲಂಬಿಸಿರುತ್ತದೆ ಎಂದು ಹೊವರ್ಡ್‌ ಎಂ ವಾಸರ್‌ಮನ್‌ ತಮ್ಮ ಸಂಶೋಧನೆಯೊಂದರಲ್ಲಿ ತಿಳಿಸಿದ್ದಾರೆ. ಉದಾಹರಣೆಗೆ ಒಂದು ಕಾನೂನು ಕಠೋರವಾಗಿದ್ದರೆ ಅದನ್ನು ಹೊಡೆದುರುಳಿಸಿದ ನಂತರವೂ ಆ ಕಾನೂನು ಅಷ್ಟೇ ಕಠೋರವಾಗಿ ಪರಿಣಾಮ ಬೀರುತ್ತಿರುತ್ತದೆ. ಮತ್ತೊಂದು ಸಂದರ್ಭದಲ್ಲಿ ಅದರ ಪರಿಣಾಮ ಆ ಕಾನೂನನ್ನು ಜಾರಿಗೊಳಿಸುವವರ ಆಯ್ಕೆಗಳನ್ನು ಅವಲಂಬಿಸಿರುತ್ತದೆ.

ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ಗೊಂದಲ ಸೃಷ್ಟಿಸುವುದರ ಜೊತೆಗೆ ನ್ಯಾಯಾಂಗದೊಳಗೂ ಗೊಂದಲ ಮೂಡಿಸುವ ಕಾರಣಕ್ಕೆ ಇಂತಹ ಕಾನೂನುಗಳು ಇರಬಾರದು ಎನ್ನಲಾಗುತ್ತದೆ. ಜೊತೆಗೆ ಇದು ಕಾನೂನನ್ನು ಜಾರಿಗೊಳಿಸುವವರ ಕೈಯನ್ನು ಅನಗತ್ಯವಾಗಿ ಬಲಪಡಿಸುವುದರಿಂದ ಕೆಲ ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಮಾತುಗಳಿವೆ.

ಮತ್ತೊಂದೆಡೆ ಜಾಂಬಿ ಕಾನೂನುಗಳು ಅಸ್ತಿತ್ವದಲ್ಲಿದ್ದರೂ ಅದನ್ನು ಜಾರಿಗೊಳಿಸುವಾಗ ಎಚ್ಚರವಹಿಸಿದರೆ ಸಾಕು ಅವು ತನ್ನಿಂತಾನೇ ನಿಷ್ಕ್ರಿಯವಾಗಿ ಉಳಿಯುತ್ತವೆ ಎನ್ನಲಾಗುತ್ತದೆ. ಕಾನೂನಾತ್ಮಕವಾಗಿ ಹೊಡೆದುರುಳಿಸುವುದಷ್ಟೇ ಅನಿವಾರ್ಯವಲ್ಲ. ಸಾರ್ವತ್ರಿಕವಾಗಿರುವ ನಿಯಮಗಳು, ಕಾನೂನಿನಾಚೆಗಿನ ನೈತಿಕತೆಯ ಆಧಾರದಲ್ಲಿ ಕೂಡ ಅವುಗಳಿಗೆ ಅಂಕುಶ ಹಾಕಲು ಸಾಧ್ಯವಿದೆ. ಅಲ್ಲದೆ ಮತ್ತೊಂದು ಕಾನೂನನ್ನು ಅದಕ್ಕೆ ಸರಿಸಮನಾಗಿ ಜಾರಿಗೆ ತಂದು ಅದರ ಪರಿಣಾಮವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ.