Sajjan Kumar  
ಸುದ್ದಿಗಳು

ಸಿಖ್ ವಿರೋಧಿ ದಂಗೆ: ಜನಕಪುರಿ ಹಿಂಸಾಚಾರ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

"ಸಂತ್ರಸ್ತರು ಮತ್ತು ಅವರ ಕುಟುಂಬಗಳು ಅನುಭವಿಸಿದ ಆಘಾತವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ, ಆದರೆ ಆ ಆಘಾತ ಈ ನ್ಯಾಯಾಲಯದ ತೀರ್ಪಿಗೆ ಅಡ್ಡಿಯಾಗುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Bar & Bench

1984ರ ಸಿಖ್ ವಿರೋಧಿ ಗಲಭೆ ವೇಳೆ ದೆಹಲಿಯ ಜನಕಪುರಿ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್  ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಯ ಕೃತ್ಯವನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಅದು ತಿಳಿಸಿದೆ [ದೆಹಲಿ ಸರ್ಕಾರ ಮತ್ತು ಸಜ್ಜನ್‌ ಕುಮಾರ್‌ ನಡುವಣ ಪ್ರಕರಣ].

ಆರೋಪಿ ಕೃತ್ಯನಡೆದ ಸ್ಥಳದಲ್ಲಿ 01.11.1984ರಂದು ಹಾಜರಿದ್ದರು ಅಥವಾ ಅವರನ್ನು ಯಾರಾದರೂ ಕಂಡಿದ್ದರು ಎಂಬುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯ ಇಲ್ಲ. ಗುಂಪಿಗೆ ಕುಮ್ಮಕ್ಕು ನೀಡಿದ್ದಕ್ಕೂ ಸಾಕ್ಷ್ಯ ಇಲ್ಲ. ವಿಚಾರಣೆಗೆ ಅಗತ್ಯವಿರುವಂತೆ ಆರೋಪಿಯ ಕೃತ್ಯವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿಗ್‌ ವಿನಯ್‌ ಸಿಂಗ್‌ ನುಡಿದರು.

ಆರೋಪಿಯ ಸಾರ್ವಜನಿಕ ಹುದ್ದೆಯಾಗಲೀ ಅಥವಾ ಇತರ ಗಲಭೆ-ಸಂಬಂಧಿತ ಪ್ರಕರಣಗಳಲ್ಲಿ ಆತನ ಪಾಲ್ಗೊಳ್ಳುವಿಕೆಯಾಗಲೀ ಈ ಪ್ರಕರಣದಲ್ಲಿನ ಪುರಾವೆಯ ಅಗತ್ಯತೆಯಲ್ಲಿ ಯಾವುದೇ ಬದಲಾವಣೆ ತರುವುದು ಸಾಧ್ಯವಿಲ್ಲ ಎಂದು ಅದು ಹೇಳಿತು.

“ಆರೋಪಿಯು ಮಾಜಿ ಸಂಸದನಾಗಿರುವುದರಿಂದಲೋ ಅಥವಾ ಇತರ ಸ್ಥಳಗಳಲ್ಲಿ ನಡೆದ ಸಮಾನ ಘಟನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆಂಬ ಕಾರಣದಿಂದಲೋ, ಈ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥನೆಂದು ಘೋಷಿಸಲು ಅಗತ್ಯವಿರುವ ಸಾಕ್ಷ್ಯದ ಮಾನದಂಡವನ್ನು ಈ ನ್ಯಾಯಾಲಯ ಕಡಿಮೆ ಮಾಡಲಾಗುವುದಿಲ್ಲ. ಕಾನೂನು ಎಲ್ಲ ಅಪರಾಧಿಗಳಿಗೆ ಒಂದೇ — ಅವರು ಸಾಮಾನ್ಯ ವ್ಯಕ್ತಿಗಳಾಗಿರಲಿ ಅಥವಾ ಪ್ರಭಾವಿ ವ್ಯಕ್ತಿಗಳಾಗಿರಲಿ,” ಎಂದು ಪೀಠ ವಿವರಿಸಿತು.

 ಬಾಧಿತರು ಮತ್ತು ಅವರ ಕುಟುಂಬಗಳು ಅನುಭವಿಸಿದ ಭಾರೀ ಆಘಾತವನ್ನು ನ್ಯಾಯಾಲಯ ಅರ್ಥಮಾಡಿಕೊಂಡರೂ, ಭಾವನೆಗಳ ಆಧಾರದ ಮೇಲೆ ಅಲ್ಲದೆ ಸಾಕ್ಷ್ಯಗಳ ಆಧಾರದ ಮೇಲೆ ಮಾತ್ರ ಅಪರಾಧ ವಿಚಾರಣೆ ನಿರ್ಧಾರವಾಗಬೇಕು ಎಂದು ಹೇಳಿತು. ತಡವಾಗಿ ಆರೋಪಿಯ ಹೆಸರನ್ನು ಉಲ್ಲೇಖಿಸಿದ ಸಾಕ್ಷಿಗಳ ಮೇಲೆ ಅವಲಂಬಿಸುವುದು ಅಸುರಕ್ಷಿತ ದೋಷಾರೋಪಣೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಕೂಡ ನೀಡಿತು.

2015ರಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ ಪ್ರಕರಣವನ್ನು ಮರುತನಿಖೆ ನಡೆಸಿ 2022ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ತನಿಖೆ ಕಾನೂನುಬದ್ಧವಾಗಿದ್ದರೂ, ದೋಷಾರೋಪಣೆಗೆ ಅಗತ್ಯವಿರುವ ಮಟ್ಟದ ಸಾಕ್ಷ್ಯ ದೊರಕಿಲ್ಲ ಎಂದು ನ್ಯಾಯಾಲಯ ಅಂತಿಮವಾಗಿ ತೀರ್ಪು ನೀಡಿದೆ.

ಸಜ್ಜನ್ ಕುಮಾರ್ ಅವರು 1984ರ ಗಲಭೆಗಳಿಗೆ ಸಂಬಂಧಿಸಿದ ಇತರ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿ ಇದ್ದಾರೆ.