PM Modi, CJI Chandrachud.  
ಸುದ್ದಿಗಳು

ಕೇರಳದಲ್ಲಿ ಶೇ 72ರಷ್ಟು ನ್ಯಾಯಾಂಗ ಅಧಿಕಾರಿಗಳು ಮಹಿಳೆಯರಾಗಿರುವುದು ಭರವಸೆ ಮೂಡಿಸಿದೆ: ಸಿಜೆಐ ಚಂದ್ರಚೂಡ್

ಸುಪ್ರೀಂ ಕೋರ್ಟ್ 75ನೇ ವರ್ಷಾಚರಣೆ ಅಂಗವಾಗಿ ಇಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

Bar & Bench

ಜಿಲ್ಲಾ ನ್ಯಾಯಾಂಗಕ್ಕೆ ಕಳೆದ ಕೆಲ ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರ್ಪಡೆಯಾಗುತ್ತಿದ್ದು ಶೇ 72ರಷ್ಟು ಮಹಿಳಾ ನ್ಯಾಯಾಂಗ ಅಧಿಕಾರಿಗಳಿರುವ ಕೇರಳ ಈ ನಿಟ್ಟಿನಲ್ಲಿ ಮುಂದಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೆಮ್ಮೆ ವ್ಯಕ್ತಪಡಿಸಿದರು.  

ಸುಪ್ರೀಂ ಕೋರ್ಟ್ 75ನೇ ವರ್ಷಾಚರಣೆ ಅಂಗವಾಗಿ ಇಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಕೂಡ ಭಾಗಿಯಾಗಿದ್ದರು.

"2023 ರಲ್ಲಿ ರಾಜಸ್ಥಾನದಲ್ಲಿ ಸಿವಿಲ್ ನ್ಯಾಯಾಧೀಶರ ಒಟ್ಟು ನೇಮಕಾತಿಯಲ್ಲಿ 58% ಮಹಿಳೆಯರಿದ್ದರು. 2023ರಲ್ಲಿ ದೆಹಲಿಯಲ್ಲಿ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಲ್ಲಿ 66% ಮಹಿಳೆಯರಿದ್ದರು. ಉತ್ತರ ಪ್ರದೇಶದಲ್ಲಿ  2022ರ ಬ್ಯಾಚ್‌ಗೆ ಸಂಬಂಧಿಸಿದಂತೆ ಶೇ 54ರಷ್ಟು ಸ್ತ್ರೀಯರಿದ್ದಾರೆ. ಕೇರಳದಲ್ಲಿ ಒಟ್ಟು ನ್ಯಾಯಾಂಗ ಅಧಿಕಾರಿಗಳ ಸಂಖ್ಯೆಯಲ್ಲಿ 72% ಮಹಿಳೆಯರು ಸೇರ್ಪಡೆಯಾಗಿದ್ದಾರೆ" ಎಂದ ಅವರು ಇದು ನ್ಯಾಯಾಂಗದ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದೆ ಎಂದರು.

ಇದೇ ವೇಳೆ, ಯುವ ನ್ಯಾಯಾಧೀಶರೊಂದಿಗೆ ಅಗೌರವಯುತವಾಗಿ ನಡೆದುಕೊಳ್ಳುವ ಘಟನೆಗಳಿಗೆ ಅವರು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ನ್ಯಾಯಾಂಗವು ನ್ಯಾಯಾಂಗದ ಬೆನ್ನಲುಬು ಎಂದು ಕರೆಯುವುದು ಅರ್ಥಪೂರ್ಣವಾಗಿದೆ ಎಂದ ಸಿಜೆಐ ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯಗಳನ್ನು ಅಧೀನ ನ್ಯಾಯಾಂಗ ಎಂದು ಕರೆಯಬಾರದು ಎಂದರು.

ಪ್ರಧಾನಿ ನರೇಂದ್ರ ಮೋದಿ  ಮಾತನಾಡಿ ಭಾರತದ ಜನ ಎಂದಿಗೂ ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ.

ತುರ್ತುಪರಿಸ್ಥಿತಿಯಂತಹ ಸಂದರ್ಭಗಳಲ್ಲಿ, ಸುಪ್ರೀಂ ಕೋರ್ಟ್ ನಮ್ಮ ಮೂಲಭೂತ ಹಕ್ಕುಗಳಿಗೆ ಖಾತರಿ ಒದಗಿಸಿದ್ದು ಪ್ರತಿ ಬಾರಿ ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಎದ್ದಾಗ, ಸುಪ್ರೀಂ ಕೋರ್ಟ್ ರಾಷ್ಟ್ರೀಯ ಸಮಗ್ರತೆ ಕಾಪಾಡಿದೆ ಎಂದರು. ಜಿಲ್ಲಾ ನ್ಯಾಯಾಲಯಗಳು ನ್ಯಾಯಾಂಗದ ಪ್ರಮುಖ ಸ್ತಂಭ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಯಶಸ್ಸನ್ನು ಸಾಧಿಸಲು ಅವು ಮೊದಲ ಹೆಜ್ಜೆಯಾಗಿವೆ ಎಂದು ಹೇಳಿದರು.