Vidhana Soudha
Vidhana Soudha  
ಸುದ್ದಿಗಳು

ವಿಧಾನ ಮಂಡಲ ಅಧಿವೇಶನ: 21 ಮಸೂದೆ ಮಂಡನೆ, ಆರಕ್ಕೆ ಉಭಯ ಸದನಗಳಲ್ಲಿಯೂ ಅಂಗೀಕಾರ, ಎರಡಕ್ಕೆ ಪರಿಷತ್‌ನಲ್ಲಿ ಸೋಲು

Bar & Bench

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ ಸೇರಿ ಆರು ಮಸೂದೆಗಳು ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದು, ಪ್ರಸಕ್ತ ಅಧಿವೇಶನದಲ್ಲಿ ಒಟ್ಟಾರೆ 21 ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ.

ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ, ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ, ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರುಗಳ ವಿಧೇಯಕ, ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆ ವಿನಿಯಮ (ಕರ್ನಾಟಕ ತಿದ್ದುಪಡಿ) ವಿಧೇಯಕ, ಅಂತರ್‌-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿವೆ.

ವಿಧಾನಸಭೆ ಅಥವಾ ಪರಿಷತ್‌ ಸದಸ್ಯರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಲಹೆಗಾರರು, ಯಾವುದೇ ಆಯೋಗದ ಅಧ್ಯಕ್ಷರು, ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷರಾಗಿ ನೇಮಕಗೊಂಡರೆ ಲಾಭದಾಯಕ ಹುದ್ದೆ ಹೊಂದಿರುವುದಕ್ಕೆ ಅನರ್ಹರಾಗದಂತೆ ತಡೆಯಲು ಕರ್ನಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) ವಿಧೇಯಕವು ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ವಿಪಕ್ಷಗಳ ಗದ್ದಲದ ನಡುವೆ ಮಸೂದೆ ಮಂಡಿಸಿ, ಸದನದ ಒಪ್ಪಿಗೆ ಪಡೆದುಕೊಂಡರು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಪೊಲೀಸು (ತಿದ್ದುಪಡಿ) ವಿಧೇಯಕ, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂಕಂದಾಯ (ತಿದ್ದುಪಡಿ) ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ.

ವಿವಾದಕ್ಕೆ ಈಡಾಗಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದ್ದರೂ ಪರಿಷತ್‌ನಲ್ಲಿ ಸೋಲನುಭವಿಸಿದೆ. ಅಂತೆಯೇ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆಗೂ ಪರಿಷತ್‌ನಲ್ಲಿ ಸೋಲಾಗಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ: ಆರ್ಥಿಕವಾಗಿ ಹಿಂದುಳಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ಪ್ರಾಂಗಣಗಳ ಅಭಿವೃದ್ಧಿಯ ಉದ್ದೇಶಕ್ಕಾಗಿ ಮಾರುಕಟ್ಟೆ ಅಭಿವೃದ್ಧಿ ನೆರವು ನಿಧಿಯನ್ನು ಸ್ಥಾಪಿಸಲು ಹಾಗೂ ಕೆಲವು ಇತರ ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡಲು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ಕ್ಕೆ ತಿದ್ದುಪಡಿ ಮಾಡಲಾಗಿದೆ.

ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ: ಕಾಲಕಾಲಕ್ಕೆ ಬದಲಾಗುತ್ತಿರುವ ಸಮಾಜೋ-ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳಿಗಾಗಿ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದು ಯಾವುದೇ ಕಾನೂನಿನ ತಿದ್ದುಪಡಿ ಅಥವಾ ನಿರಸನಗೊಳಿಸುವುದರ ಮೂಲ ಉದ್ದೇಶವಾಗಿದೆ. ಶಾಸನಗಳ ದಾಖಲೆ ಪುಸ್ತಕದಿಂದ ನಿರರ್ಥಕ ಶಾಸನಗಳನ್ನು ತೆಗೆಯುವುದು ನಿರಸನಗೊಳಿಸುವುದರ ಉದ್ದೇಶವಾಗಿದೆ. ಶಾಸನಗಳನ್ನು ಜಾರಿಗೊಳಿಸುವ ಸಮಯದಲ್ಲಿ ವಿಧಾನಮಂಡಲವು ಅವುಗಳ ಅವಧಿಯನ್ನು ಪೂರ್ವ ನಿರ್ಧರಿಸಿದ್ದು, ಶಾಸನಗಳ ಸಂಭವನೀಯ ವಿನಾಯಿತಿಯೊಂದಿಗೆ ಅವುಗಳನ್ನು ನಿರಸನಗೊಳಿಸುವುದು ಅಗತ್ಯವಾಗಿದೆ.

ಕರ್ನಾಟಕ ಕಾನೂನು ಆಯೋಗವು ವಿವಿಧ ಅಧಿನಿಯಮಗಳನ್ನು ಸವಿವರವಾಗಿ ಪರಿಶೀಲಿಸಿ, ತನ್ನ 58ನೇ ವರದಿಯಲ್ಲಿ ಪ್ರಸ್ತುತ ಪರಿಸ್ಥಿತಿ ಮತ್ತು ಸನ್ನಿವೇಶಗಳಲ್ಲಿ ಬಳಕೆಯಲ್ಲಿ ಇಲ್ಲ ಎಂದು ಅಥವಾ ಸುಸಂಗತವಲ್ಲ ಎಂದು ಕಂಡುಬಂದ ಕೆಲವು ಪ್ರಾದೇಶಿಕ ಮತ್ತು ರಾಜ್ಯ ಅಧಿನಿಯಮಗಳನ್ನು ನಿರಸನಗೊಳಿಸಲು ಪ್ರಸ್ತಾವಿಸಲಾಗಿದ್ದು, ಅವುಗಳನ್ನು ನಿರಸನಗೊಳಿಸಲು ಶಿಫಾರಸ್ಸು ಮಾಡಲಾಗಿದೆ.

AGRICULTURAL PRODUCE MARKETING BILL.pdf
Preview