AAB
AAB 
ಸುದ್ದಿಗಳು

ಉನ್ನತಾಧಿಕಾರ ಸಮಿತಿಯು ಆಡಳಿತ ಸುಧಾರಣೆಗೆ ಮಾಡಿರುವ ಶಿಫಾರಸ್ಸುಗಳನ್ನು ಎಎಬಿ ಪರಿಶೀಲಿಸಲಿ: ಹೈಕೋರ್ಟ್‌

Siddesh M S

ಬೆಂಗಳೂರು ವಕೀಲರ ಸಂಘದ (ಎಎಬಿ) ಆಡಳಿತ ಮಂಡಳಿಗೆ ಚುನಾವಣೆ ನಡೆದು ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಎಎಬಿ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಎಬಿ ಅಂದಿನ ಅಧ್ಯಕ್ಷ ಎ ಪಿ ರಂಗನಾಥ್‌ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಿಲೇವಾರಿ ಮಾಡಿತು.

“ಎಎಬಿ ಚುನಾವಣೆ ಸಂಬಂಧ ಏಕಸದಸ್ಯ ಪೀಠ ಮಾಡಿದ್ದ ಆದೇಶವನ್ನು ವಿಭಾಗೀಯ ಪೀಠವು ಎತ್ತಿ ಹಿಡಿದಿದೆ. ಅದರಂತೆ ಚುನಾವಣೆ ನಡೆದಿದ್ದು, ಎಎಬಿ ಆಡಳಿತ ಮಂಡಳಿ ರಚಿಸಲಾಗಿದೆ. ಯಾರಾದರೂ ಅಹವಾಲು ಹೊಂದಿದ್ದರೆ ನ್ಯಾಯಾಲಯದ ಕದತಟ್ಟಬಹುದು” ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದ್ದು, ಮನವಿ ಇತ್ಯರ್ಥಪಡಿಸಿತು.

ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತ ನೇತೃತ್ವದ ಉನ್ನತಾಧಿಕಾರ ಸಮಿತಿಯಲ್ಲಿ (ಎಚ್‌ಪಿಸಿ) ಒಟ್ಟು ಎಂಟು ವಕೀಲರು ಸದಸ್ಯರಾಗಿದ್ದರು. ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದರು. ವಕೀಲರಾದ ಜಿ ಚಂದ್ರಶೇಖರಯ್ಯ, ಕೆ ಎನ್‌ ಪುಟ್ಟೇಗೌಡ, ಎ ಜಿ ಶಿವಣ್ಣ, ಟಿ ಎನ್‌ ಶಿವಾರೆಡ್ಡಿ, ಎಸ್‌ ಎನ್‌ ಪ್ರಶಾಂತ್‌ ಚಂದ್ರ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದಿಂದ ವಕೀಲ ಎಂ ಆರ್‌ ವೇಣುಗೋಪಾಲ್‌, ಮಹಿಳಾ ವಿಭಾಗದಲ್ಲಿ ವಕೀಲೆ ಅನು ಚೆಂಗಪ್ಪ ಎಚ್‌ಪಿಸಿ ಸದಸ್ಯರಾಗಿದ್ದರು. ಇವರೆಲ್ಲರನ್ನೂ ಒಳಗೊಂಡ ಉನ್ನತಾಧಿಕಾರಿ ಸಮಿತಿಯು ಎಎಬಿ ಚುನಾವಣೆ ನಡೆಸಿದ್ದು, ಆಡಳಿತ ಮಂಡಳಿ ರಚನೆಗೆ ಸಹಕರಿಸಿದೆ. ಈಗ ಎಎಬಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಾಲಯವು ಉನ್ನತಾಧಿಕಾರಿ ಸಮಿತಿಯ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತದೆ. ಹಿರಿಯ ವಕೀಲರನ್ನು ಒಳಗೊಂಡ ಎಚ್‌ಪಿಸಿಯ ಸೇವೆಯನ್ನು ಪೀಠವು ಗೌರವಿಸುತ್ತದೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಎಚ್‌ಪಿಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಸಾಕಷ್ಟು ಚರ್ಚೆಯ ಬಳಿಕ ಎಚ್‌ಪಿಸಿಯು ಎಎಬಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಮೌಲ್ಯಯುತವಾದ ಸಲಹೆಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಈ ಸಲಹೆಗಳನ್ನು ಎಎಬಿಯು ನೀತಿಯ ಭಾಗವಾಗಿ ಪರಿಗಣಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಸಮಿತಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ ಎಎಬಿಯು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಇದೇ ವೇಳೆ, ಎಚ್‌ಪಿಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ, ವಕೀಲೆ ವೈಶಾಲಿ ಹೆಗ್ಡೆ ಅವರ ಸೇವೆಗೆ ಪೀಠವು ಮೆಚ್ಚುಗೆ ದಾಖಲಿಸಿತು.

ಈ ಮಧ್ಯೆ, ಎಚ್‌ಪಿಸಿ ಸದಸ್ಯರಲ್ಲಿ ಒಬ್ಬರಾದ ವಕೀಲ ಕೆ ಎನ್‌ ಪುಟ್ಟೇಗೌಡ ಅವರು “ಎಎಬಿ ಆಡಳಿತ ಸುಧಾರಣೆಗೆ ಸಂಬಂಧಿಸಿದ ಎಚ್‌ಪಿಸಿ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಾವಧಿ ನಿಗದಿ ಮಾಡಬೇಕು. ಮುಂದಿನ ಚುನಾವಣೆ ವೇಳೆಗೆ ಜಾರಿ ಮಾಡಲು ಪ್ರಯತ್ನಿಸಿದರೆ ಅದು ಸಮಸ್ಯೆಯಾಗುತ್ತದೆ. ಕನಿಷ್ಠ ಒಂದು ಅಥವಾ ಎರಡು ವರ್ಷ ಕಾಲ ನಿಗದಿ ಮಾಡಬೇಕು” ಎಂದರು.

ಇದಕ್ಕೆ ಪೀಠವು “ಹಾಗೆ ಮಾಡಲಾಗದು. ಎಎಬಿಯಲ್ಲಿ ತಿಳಿದ ವಕೀಲರಿದ್ದಾರೆ. ನ್ಯಾಯಮೂರ್ತಿಗಳಾದ ನಾವು ತಿಳಿದ ವಕೀಲರು ಎಂದೇ ಸಂಭೋದಿಸುತ್ತೇವೆ. ಆದ್ದರಿಂದ ಹಾಗೆ ಮಾಡಲಾಗದು. ನಿಮ್ಮ ಕಕ್ಷಿದಾರರ ಪ್ರಯತ್ನದಿಂದ ಎಎಬಿ ಆಡಳಿತ ಮಂಡಳಿ ರಚಿಸಲಾಗಿದೆ” ಎಂದು ಪುಟ್ಟೇಗೌಡರ ಕೋರಿಕೆ ನಿರಾಕರಿಸಿತು.

ಘಟನೆಯ ಹಿನ್ನೆಲೆ: ವಕೀಲ ಎ ಪಿ ರಂಗನಾಥ್ ಅಧ್ಯಕ್ಷತೆಯ ಎಎಬಿ ಆಡಳಿತ ಮಂಡಳಿ ಅಧಿಕಾರವಧಿ 2021ರ ಜನವರಿ 23ಕ್ಕೆ ಪೂರ್ಣಗೊಂಡಿತ್ತು. ಅವಧಿ ಪೂರ್ಣಗೊಂಡ ನಂತರವೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆ ನಿರ್ವಹಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಆದೇಶ ಮಾಡಿತ್ತು. ರಾಜ್ಯ ಸರ್ಕಾರದ ಈ ಆದೇಶ ಪ್ರಶ್ನಿಸಿ ಎ ಪಿ ರಂಗನಾಥ್‌ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು 2021ರ ಸೆಪ್ಟೆಂಬರ್‌ 20ರ ಆದೇಶದಲ್ಲಿ 2021ರ ಡಿಸೆಂಬರ್‌ 22ರ ಒಳಗೆ ಎಎಬಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು. ಇದಕ್ಕಾಗಿ ಹಿರಿಯ ವಕೀಲರನ್ನು ಒಳಗೊಂಡ ಎಚ್‌ಪಿಸಿಯನ್ನು ಪೀಠವು ನೇಮಕ ಮಾಡಿತ್ತು. ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವು ಎತ್ತಿ ಹಿಡಿದಿತ್ತು.

ಅಂತೆಯೇ, 2021ರ ಡಿಸೆಂಬರ್‌ 19ರಂದು ಎಎಬಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ, ಜಿ ಟಿ ರವಿ ಅವರು ಪ್ರಧಾನ ಕಾರ್ಯದರ್ಶಿ ಮತ್ತು ಎಚ್‌ ಟಿ ಹರೀಶ್‌ ಅವರು ಖಜಾಂಚಿ ಸ್ಥಾನಕ್ಕೆ ಹಾಗೂ ಕರ್ನಾಟಕ ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಿಂದ ಒಟ್ಟಾರೆಯಾಗಿ 29 ಮಂದಿ ಸದಸ್ಯರು ಚುನಾಯಿತರಾಗಿದ್ದರು.