ಸುದ್ದಿಗಳು

ಹೈಬ್ರಿಡ್‌ ಮಾದರಿ ವಿಸ್ತರಿಸಿದರೆ ರಾಜ್ಯವು ದೇಶದಲ್ಲಿಯೇ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆ ಹೊಂದಲಿದೆ: ನ್ಯಾ. ಓಕಾ

ರಾಜ್ಯದಿಂದ ಸುಪ್ರೀಂಗೆ ತಂದೆ ಮಗನ ರೂಪದಲ್ಲಿ ನ್ಯಾ.ಎಸ್‌ ಕೆ ಹೆಗ್ಡೆ ಮತ್ತು ನ್ಯಾ. ಸಂತೋಷ್‌ ಹೆಗ್ಡೆ ಹೋಗಿದ್ದರು. ತಂದೆ-ಮಗಳ ರೂಪದಲ್ಲಿ ನ್ಯಾ. ವೆಂಕಟರಾಮಯ್ಯ ಮತ್ತು ನಾನು ಹೋಗಿದ್ದೇವೆ ಎಂದು ವೈಶಿಷ್ಟ್ಯತೆ ನೆನೆದ ನ್ಯಾ. ನಾಗರತ್ನ.

Siddesh M S

“ಒಂದೊಮ್ಮೆ ಕೋವಿಡ್‌ ಮೂರನೇ ಅಲೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮುನ್ನೋಟ ಕೈಪಿಡಿ (ವಿಷನ್‌ ಸ್ಟೇಟ್‌ಮೆಂಟ್‌) ಸಿದ್ಧಪಡಿಸಬೇಕು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಳವಡಿಸಿಕೊಂಡಿರುವ ಹೈಬ್ರಿಡ್‌ ಮಾದರಿಯನ್ನು ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ವಿಸ್ತರಿಸಬೇಕು. ಇದನ್ನು ಸಾಧ್ಯವಾಗಿಸಿದರೆ ಇಡೀ ದೇಶದಲ್ಲಿ ಕರ್ನಾಟಕದ ನ್ಯಾಯಾಂಗವು ಅತ್ಯುತ್ತಮ ಸೇವೆಗಳನ್ನು ಹೊಂದಿದ ವ್ಯವಸ್ಥೆ ಎನಿಸಿಕೊಳ್ಳಲಿದೆ” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹೇಳಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿರುವ ಕರ್ನಾಟಕ ಹೈಕೋರ್ಟ್‌ನ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಬಿ ವಿ ನಾಗರತ್ನ ಅವರಿಗೆ ಬೆಂಗಳೂರು ವಕೀಲರ ಸಂಘವು ಶನಿವಾರ ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

“ಹೈಕೋರ್ಟ್‌ನಲ್ಲಿ ಆರಂಭಿಸಲಾಗಿರುವ ಇ-ಕೇಂದ್ರಗಳನ್ನು ಸಣ್ಣಪುಟ್ಟ ಕೆಲಸಗಳಿಗೆ ಸೀಮಿತಗೊಳಿಸದೇ ಅತ್ಯುತ್ತಮ ಸೌಲಭ್ಯ ಹಾಗೂ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸಿ ವಕೀಲರು ಅಲ್ಲಿಂದಲೇ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಇದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಿಗೂ ವಿಸ್ತರಣೆಯಾಗಬೇಕು. ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಾಕ್ಷ್ಯ ನುಡಿಯುವ ವ್ಯವಸ್ಥೆ ಬಲಪಡಿಸಬೇಕು” ಎಂದು ಹೇಳಿದರು.

“ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಮೂರು ದಿನಗಳಷ್ಟೇ ಕೆಲಸ ಮಾಡಿದ್ದೇನೆ. ಆದರೆ, ಇಲ್ಲಿನ ವಿಡಿಯೊ ಕಾನ್ಫರೆನ್ಸ್‌ಗೂ ಅಲ್ಲಿನ ವಿಡಿಯೊ ಕಾನ್ಫರೆನ್ಸ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಇದೇ ಉತ್ತಮ ಎಂದು ನನಗನ್ನಿಸಿದೆ” ಎಂದೂ ನ್ಯಾ. ಓಕಾ ಈ ವೇಳೆ ಅಭಿಪ್ರಾಯಪಟ್ಟರು.

ಮೂಲಸೌಲಭ್ಯಕ್ಕೆ ಆದ್ಯತೆ ಅಗತ್ಯ

“ಕರ್ನಾಟಕ ಸರ್ಕಾರವು ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 21 ಕೌಟುಂಬಿಕ ನ್ಯಾಯಾಲಯಗಳನ್ನು ತೆರೆಯಲು ಅನುಮತಿಸಿತ್ತು. ಆದರೆ, ಸ್ಥಳಾವಕಾಶದ ಕೊರತೆಯಿಂದ ನಮಗೆ ಏಳು ಕೌಟುಂಬಿಕ ನ್ಯಾಯಾಲಯಗಳನ್ನು ಮಾತ್ರ ತೆರೆಯಲು ಸಾಧ್ಯವಾಗಿದೆ. ದೆಹಲಿ ಮತ್ತು ಪುಣೆಯ “ಸಾಕೇತ್‌” ಕೌಟುಂಬಿಕ ನ್ಯಾಯಾಲಯದ ಮಾದರಿಯಲ್ಲಿ ಸರ್ವ ಸೌಲಭ್ಯವನ್ನು ಹೊಂದಿರುವ ವ್ಯವಸ್ಥೆಯನ್ನು ರೂಪಿಸಬೇಕು. ಕರ್ನಾಟಕ ಆಡಳಿತ ನ್ಯಾಯಾಧಿಕರಣ ಸೇರಿದಂತೆ ಹಲವು ನ್ಯಾಯಾಧಿಕರಣಗಳಲ್ಲಿ ಮೂಲಸೌಲಭ್ಯದ ಕೊರತೆ ಇದೆ. ಇದೆಲ್ಲವನ್ನೂ ಪರಿಹರಿಸುವ ಕೆಲಸವಾಗಬೇಕು. ಕಾನೂನು ಮಂತ್ರಿಯಾಗಿದ್ದಾಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಒಡನಾಡಿದ್ದೇನೆ. ಬೊಮ್ಮಾಯಿ ನಮ್ಮ ಜೊತೆ ಇದ್ದು, ಬದಲಾವಣೆ ತರುವ ಆಸಕ್ತಿ ಅವರಲ್ಲಿದೆ. ಇದೆಲ್ಲವನ್ನೂ ಸಾಧ್ಯವಾಗಿಸಿದರೆ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ದೇಶದಲ್ಲೇ ಅತ್ಯುತ್ತಮ ಎನಿಸಲಿದೆ” ಎಂದರು.

ನ್ಯಾಯಾಂಗ ಕ್ಷೇತ್ರದಲ್ಲಿ ಔದ್ಯೋಗಿಕ ಅವಕಾಶ

“ಈಚೆಗೆ ಸಿವಿಲ್‌ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಯಿತು. ನಮ್ಮ ಗುರಿಯಲ್ಲಿ ಶೇ. 50ರಷ್ಟನ್ನು ಸಾಧಿಸಲಾಗಿಲ್ಲ. ಕರ್ನಾಟಕ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಕೀಲರ ಸಂಘದಲ್ಲಿ ಪ್ರತಿಭಾನ್ವಿತ ಯುವಕರು ಇದ್ದಾರೆ. ನ್ಯಾಯಾಂಗದಲ್ಲಿ ವೃತ್ತಿಗೆ ಸೇರುವಂತೆ ಅವರನ್ನು ಪ್ರೇರೇಪಿಸಬೇಕಿದೆ. ನ್ಯಾಯಾಂಗ ಕ್ಷೇತ್ರದಲ್ಲಿರುವ ಔದ್ಯೋಗಿಗ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಹೀಗಾದಾಗ ಮಾತ್ರ ಅತ್ಯುತ್ತಮ ನ್ಯಾಯಾಂಗವನ್ನು ರೂಪಿಸಲು ಸಾಧ್ಯ. ತಾಲ್ಲೂಕು, ಜಿಲ್ಲಾ ಮತ್ತು ನಗರ ಪ್ರದೇಶಗಳಲ್ಲಿರುವ ಕಾನೂನು ಕಾಲೇಜುಗಳಿಗೆ ಹಿರಿಯ ನ್ಯಾಯಮೂರ್ತಿಗಳು, ವಕೀಲರ ಪರಿಷತ್‌ ಮತ್ತು ಸಂಘದ ಸದಸ್ಯರು ಒಟ್ಟಾಗಿ ತೆರಳಿ ವಿದ್ಯಾರ್ಥಿಗಳಿಗೆ ನ್ಯಾಯಾಂಗದಲ್ಲಿ ವೃತ್ತಿ ಆಯ್ಕೆಗಳ ಬಗ್ಗೆ ತಿಳಿಸಬೇಕು. ಈ ಸಂಬಂಧ ನಾನು ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ “ಕರಿಯರ್‌ ಇನ್‌ ಜುಡಿಷಿಯರಿ” ಎಂಬ ಹೊತ್ತಿಗೆ ತರುವಂತೆ ಸಲಹೆ ಮಾಡಿದ್ದೆ. ಇದನ್ನು ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘ ಜಾರಿಗೆ ತಂದಿತ್ತು” ಎಂದು ನ್ಯಾ. ಓಕಾ ನೆನಪಿಸಿಕೊಂಡರು.

ಮುಂದುವರೆದು, ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಜೊತೆಗೆ ತಮ್ಮ ಬದುಕು ಬೆಸೆದುಕೊಂಡಿರುವುದನ್ನು ಅವರು ನೆನಪಿಸಿಕೊಂಡರು. ಏನಾದರೂ ಕಾರಣ ಹುಡುಕಿಕೊಂಡು ಬೆಂಗಳೂರಿಗೆ ಬರಬೇಕು ಎಂದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ತಮ್ಮ ಅವಧಿಯನ್ನು ಅತ್ಯಂತ ಸ್ಮರಣೀಯವಾಗಿ ಕಳೆದಿದ್ದಾಗಿ ಅವರು ಹೇಳಿದರು.

ಭಗವದ್ಗೀತೆ, ಕುರಾನ್‌, ಬೈಬಲ್‌ ಒಂದೇ ಎಂದ ನ್ಯಾ. ನಾಗರತ್ನ

ಸುಪ್ರೀಂ ಕೋರ್ಟ್‌ಗೆ ಕರ್ನಾಟಕದಿಂದ ಪದೋನ್ನತಿ ಪಡೆದ ಮೊದಲ ಮಹಿಳಾ ನ್ಯಾಯಮೂರ್ತಿ ಎಂಬ ಹಿರಿಮೆಗೆ ಪಾತ್ರವಾಗಿರುವ ನ್ಯಾ.ಬಿ ವಿ ನಾಗರತ್ನ ಅವರು ಸಮಾರಂಭದಲ್ಲಿ ಮಾತನಾಡುತ್ತಾ ತಮ್ಮನ್ನು ರೂಪಿಸಿದ ಘಟನೆಗಳನ್ನು ನೆನೆದರು. “ನನ್ನ ತಂದೆ ಮಾಜಿ ಸಿಜೆಐ ವೆಂಟಕರಾಮಯ್ಯ ಅವರು 1989ರ ಡಿಸೆಂಬರ್‌ 19ರಂದು ನ್ಯಾ. ಎಸ್‌ ಪಿ ಗುಪ್ತಾ ಅವರು ಪ್ರಕರಣವೊಂದರ ತೀರ್ಪಿನ ಅಂತ್ಯದಲ್ಲಿ ಬರ್ತೃಹರಿ ಶ್ಲೋಕವನ್ನು ಉಲ್ಲೇಖಿಸಿದ್ದನ್ನು ವಿವರಿಸಿದ್ದರು. ಅದು ಹೀಗಿದೆ. ಅವಮಾನ ಅಥವಾ ಹೊಗಳಿಕೆಯಿಂದ ರೂಪಿತವಾದ ವ್ಯಕ್ತಿಯಾಗಲಿ, ಲಕ್ಷ್ಮಿ ಇರಲಿ ಅಥವಾ ಹೋಗಲಿ, ಇಂದೇ ಅಥವಾ ಯುಗ ಬಿಟ್ಟು ಸಾವು ಬರಲಿ, ವಿವೇಚನೆಯುಳ್ಳ ವ್ಯಕ್ತಿಯು ಎಂದಿಗೂ ಸರಿಯಾದ ಮಾರ್ಗದಿಂದ ವಿಮುಖನಾಗುವುದಿಲ್ಲ ಎಂಬುದು ಅದರ ತಾತ್ಪರ್ಯವಾಗಿತ್ತು. ಅಂದಿನಿಂದಲೂ ನನ್ನ ಬದುಕಿನ ಭಗವದ್ಗೀತೆ, ಕುರಾನ್‌, ಬೈಬಲ್‌ ಇದೇ ಆಗಿದೆ. ಕಷ್ಟ ಸಾಧ್ಯವಾಗಿರುವ ಇದನ್ನು ಪಾಲಿಸಲು ಪ್ರಯತ್ನ ಪಡುತ್ತಿದ್ದೇನೆ” ಎಂದರು.

“ಹಿರಿಯರು ಇಲ್ಲದಿದ್ದರೆ ಅದು ನ್ಯಾಯಾಲಯ ಎನಿಸುವುದಿಲ್ಲ. ಧರ್ಮವನ್ನು ಪ್ರತಿಪಾದಿಸದಿದ್ದರೆ ಅವರು ಹಿರಿಯರಾಗುವುದಿಲ್ಲ. ಧರ್ಮದಲ್ಲಿ ಸತ್ಯವಿಲ್ಲದಿದ್ದರೆ ಅದು ಧರ್ಮವಾಗುವುದಿಲ್ಲ. ಸತ್ಯದಲ್ಲಿ ಉತ್ಕೃಷ್ಕತೆ ಮಿಳಿತವಾಗದಿದ್ದರೆ ಅದು ಸತ್ಯವಲ್ಲ ಎಂಬ ನಾರದ ಸ್ಮೃತಿಯನ್ನು ಉಲ್ಲೇಖಿಸಿ ಇದು ನಮ್ಮ ಎಲ್ಲಾ ನ್ಯಾಯಾಧೀಶರ ಮೂಲತತ್ವವಾಗಬೇಕು” ಎಂದರು.

“ಕರ್ನಾಟಕದಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ತಂದೆ ಮಗನ ರೂಪದಲ್ಲಿ ನ್ಯಾ. ಎಸ್‌ ಕೆ ಹೆಗ್ಡೆ ಮತ್ತು ನ್ಯಾ. ಸಂತೋಷ್‌ ಹೆಗ್ಡೆ ಹೋಗಿದ್ದರು. ಅದೇ ರೀತಿ ತಂದೆ-ಮಗಳ ರೂಪದಲ್ಲಿ ನ್ಯಾ. ವೆಂಕಟರಾಮಯ್ಯ ಮತ್ತು ನ್ಯಾ. ಬಿ ವಿ ನಾಗರತ್ನ ಹೋಗಿದ್ದಾರೆ” ಎಂದು ಈ ವೇಳೆ ತಮ್ಮ ಪದೋನ್ನತಿಯಲ್ಲಿ ಅಡಗಿರುವ ವಿಶೇಷತೆಯ ಬಗ್ಗೆ ಬೆಳಕು ಚೆಲ್ಲಿದರು.


ಬೆಂಗಳೂರಿನಲ್ಲಿ ವೃತ್ತಿ ಬದುಕು ಆರಂಭಿಸಿದ್ದು, ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದು, ಈಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ವೃತ್ತಿ ಬದುಕಿನಲ್ಲಿ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ನ್ಯಾ, ನಾಗರತ್ನ ಅವರು ಕರ್ನಾಟಕದಲ್ಲಿ ಜನಿಸಿದ್ದು ನನ್ನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ʼನ್ಯಾಯದಾನದ ಹಬ್ಬʼ

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರು ಮಾತನಾಡಿ, “ನ್ಯಾ. ಎ ಎಸ್‌ ಓಕ್‌ ಅವರು ಅತ್ಯಂತ ದಕ್ಷ ಸಮರ್ಥ ನ್ಯಾಯಮೂರ್ತಿ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು 3,873 ಪ್ರಕರಣ ವಿಲೇವಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾ. ಓಕ್‌ ಪ್ರಮಾಣ ವಚನ ಸ್ವೀಕರಿಸಿದ ದಿನ ಮಹಾರಾಷ್ಟ್ರ ವಕೀಲರ ಪರಿಷತ್‌ ಸದಸ್ಯರು “ನ್ಯಾಯದಾನದ ಹಬ್ಬ” ಆಚರಣೆ ಮಾಡಿದ್ದಾರೆ. ಇದು ನ್ಯಾ. ಓಕ್‌ ಅವರ ಶಕ್ತಿಯಾಗಿದೆ. ಅಷ್ಟರ ಮಟ್ಟಿಗೆ ಅವರು ವಕೀಲರ ವೃಂದದಲ್ಲಿ ಆತ್ಮೀಯತೆ ಗಳಿಸಿದ್ದಾರೆ. ಅದೇ ರೀತಿ ನ್ಯಾ, ಬಿ ವಿ ನಾಗರತ್ನ ಅವರು ತಮ್ಮ ಹದಿಮೂರುವರೆ ವರ್ಷಗಳ ನ್ಯಾಯಮೂರ್ತಿ ವೃತ್ತಿಯಲ್ಲಿ 42,162 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಈ ನೆಲೆದಿಂದ ಅವರು ಮುಂದೊದು ದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ ಎಂಬುದು ಸಂತೋಷದ ವಿಷಯ” ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ನಾವು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ನಮ್ಮ ಎದುರು ಕೆಂಪು ಕಟ್ಟಡವಿದೆ (ಹೈಕೋರ್ಟ್‌). ನಾವು ಮಾಡುವುದು ಎಲ್ಲವೂ ಅಲ್ಲಿ ಕಾಣಿಸುತ್ತದೆ. ಆದರೆ, ನಮಗೆ ಕಟ್ಟಡ ಮಾತ್ರ ಕೆಂಪಾಗಿ ಕಾಣುತ್ತದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಅರಿವಿನಿಂದ ನಾನು ಕೆಲಸ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ. ಜಲಸಂಪನ್ಮೂಲ, ಗೃಹ ಇಲಾಖೆಯ ಸಚಿವನಾಗಿದ್ದಾಗ ನನಗೆ ಹಲವು ಕಡತಗಳು ಬರುತ್ತಿದ್ದವು. ಈ ಕಡತ ಕೆಂಪು ಕಟ್ಟಡಕ್ಕೆ ಹೋಗಲಿದೆ ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದೆ ಎಂದು ನೆನಪಿಸಿಕೊಂಡರು.

ಮುಖ್ಯಮಂತ್ರಿ ಬೊಮ್ಮಾಯಿ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಮಾಜಿ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ ಎನ್‌ ಪುಟ್ಟೇಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ನ್ಯಾ. ಓಕ್‌ ಮತ್ತು ನ್ಯಾ. ಬಿ ವಿ ನಾಗರತ್ನ ಅವರ ಬಗ್ಗೆ ವಿಸ್ತೃತವಾಗಿ ಮೆಚ್ಚುಗೆಯ ಮಾತುಗಳನ್ನು ಆಡಿದರು. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ, ಹಾಲಿ-ನಿವೃತ್ತ ನ್ಯಾಯಮೂರ್ತಿಗಳು, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್, ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿ ಭೂಷಣ್‌, ನ್ಯಾ. ಓಕಾ ಮತ್ತು ನ್ಯಾ. ಬಿ ವಿ ನಾಗರತ್ನ ಕುಟುಂಬ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.