Justice MS Ramesh and Justice N Senthilkumar  
ಸುದ್ದಿಗಳು

ತಮಿಳುನಾಡು ಮಾರುಕಟ್ಟೆ ನಿಗಮ ಪ್ರಕರಣ: ಇ ಡಿ ನಡೆ ಟೀಕಿಸಿದ್ದ ಮದ್ರಾಸ್ ಹೈಕೋರ್ಟ್ ಪೀಠ ವಿಚಾರಣೆಯಿಂದ ಹಿಂದಕ್ಕೆ

ಸುದೀರ್ಘ ಕಾಲ ಮಾರುಕಟ್ಟೆ ನಿಗಮದ ನೌಕರರನ್ನು ಇ ಡಿ ಅಧಿಕಾರಿಗಳು ತಡೆದಿದ್ದರು ಎಂಬ ಆರೋಪದ ಬಗ್ಗೆ ನ್ಯಾಯಾಲಯ ಕೆಲ ದಿನಗಳ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಆದರೆ ಆರೋಪವನ್ನು ಇ ಡಿ ನಿರಾಕರಿಸಿತ್ತು.

Bar & Bench

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್‌ಎಂಎಸಿ) ಆವರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ್ದ ದಾಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ಎನ್ ಸೆಂಥಿಲ್‌ಕುಮಾರ್ ಅವರನ್ನೊಳಗೊಂಡ ಪೀಠ ಮಂಗಳವಾರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದೆ.

ಬೆಳಿಗ್ಗೆ ಪಟ್ಟಿ ಮಾಡಲಾದ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನ ಪೀಠ ಈ ನಿರ್ಧಾರ ತಿಳಿಸಿತು.     

"ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇವೆ. ನಾವು ಅದನ್ನು ವಿಚಾರಣೆಗೆ ತೆಗೆದುಕೊಳ್ಳುತ್ತಿಲ್ಲ. ನಮಗೆ ಕೆಲ ಕಾರಣಗಳಿವೆ. ನಾವು ವಿಚಾರಣೆ ನಡೆಸುವುದು ಸಾಧ್ಯವಿಲ್ಲ ಎನಿಸಿದೆ. ಬೇರೊಂದು ಪೀಠ ಇದನ್ನು ಕೈಗೆತ್ತಿಕೊಳ್ಳಲಿ" ಎಂದು ಪೀಠ ವಿವರಿಸಿತು.

ಮಾರ್ಚ್ 20 ರಂದು ನಡೆದ ಪ್ರಕರಣದ ವಿಚಾರಣೆ ವೇಳೆ, ಸರ್ಕಾರಿ ಸ್ವಾಮ್ಯದ ಮದ್ಯ ವಿತರಣಾ ನಿಗಮವಾದ ತಾಸ್ಮಾಕ್‌ ಕಚೇರಿಯಲ್ಲಿ ಇ ಡಿ ಅಧಿಕಾರಿಗಳು ದಾಳಿ ನಡೆಸಿದ ರೀತಿಗೆ ಪೀಠ ಅಸಮ್ಮತಿ ವ್ಯಕ್ತಪಡಿಸಿತ್ತು. ನಿಗಮದ ಉದ್ಯೋಗಿಗಳನ್ನು ಇ ಡಿ ಅಧಿಕಾರಿಗಳು ತಪಾಸಣೆ ಮಾಡಿದರು. ಆದರೆ ತಪಾಸಣೆ ಮತ್ತು ದಾಳಿಗೆ ಕಾರಣ ಏನೆಂಬುದನ್ನು ಅವರು ನಿಗಮದ ಅಧಿಕಾರಿಗಳಿಗೆ ತಿಳಿಸಲಿಲ್ಲ ಎಂದು ಅದು ನಿರ್ದಿಷ್ಟವಾಗಿ ಆಕ್ಷೇಪಿಸಿತ್ತು.

"ಇದು ಆತಂಕಕಾರಿ ಪರಿಸ್ಥಿತಿಯಲ್ಲವೇ? ನೀವು ನಿರ್ದಿಷ್ಟ ಮಾಹಿತಿ  ನೀಡಿದರೆ ಅರ್ಥವಾಗುತ್ತದೆ. ಆದರೆ ಇಡೀ ಕಚೇರಿಯನ್ನು ಗಂಟೆಗಟ್ಟಲೆ ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೇ? ನೀವು ನಂಬಲು ಕಾರಣವಿದ್ದರೆ, ಅದನ್ನು ಉದ್ಯೋಗಿಗಳಿಗೆ ತಿಳಿಸಬೇಕಲ್ಲವೇ? ತಮಗೆ (ದಾಳಿಯ ಕಾರಣ) ತಿಳಿದಿಲ್ಲ ಎಂಬುದು ಅವರ ದೂರು" ಎಂದು ಪೀಠ ಅಸಮಾಧಾನ ವ್ಯಕ್ತಡಿಸಿತ್ತು.

ರಾಜ್ಯ ಸರ್ಕಾರ ಮತ್ತು ತಾಸ್ಮಾಕ್‌ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ನ್ಯಾಯಾಲಯ ಇ ಡಿಗೆ ಸೂಚಿಸಿತ್ತು. ಸದ್ಯಕ್ಕೆ ತಾಸ್ಮಾಕ್‌ ಅಧಿಕಾರಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ಇಡಿಗೆ ಮೌಖಿಕವಾಗಿ ಹೇಳಿತ್ತು. ಆದರೆ, ಇಂದು, ಪ್ರಕರಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಪೀಠ ವಕೀಲರಿಗೆ ತಿಳಿಸಿತು.