ವಿಚಾರಣೆ ಇಲ್ಲದೆ ಆರೋಪಿಗಳನ್ನು ಸೆರೆಯಲ್ಲಿಡಲು ಇ ಡಿಗೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ

ಸೆಂಥಿಲ್ ಬಾಲಾಜಿ ಅವರಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Supreme Court, PMLA
Supreme Court, PMLA
Published on

ವಿಚಾರಣೆ ಇಲ್ಲದೆ ಆರೋಪಿಗಳನ್ನು ದೀರ್ಘಾವಧಿ ಕಾಲ ವಿಚಾರಣಾಧೀನ ಕೈದಿಗಳಾಗಿ ಸೆರೆಯಲ್ಲಿಡಲು ಅನುವು ಮಾಡಿಕೊಡುವ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್‌ 45 ರೀತಿಯ ನಿಯಮಾವಳಿಗಳನ್ನು ಬಳಸಲು ಜಾರಿ ನಿರ್ದೇಶನಾಲಯಕ್ಕೆ ಸಾಂವಿಧಾನಿಕ ನ್ಯಾಯಾಲಯಗಳು ಅನುಮತಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ

ಪಿಎಂಎಲ್‌ಎಯ ಸೆಕ್ಷನ್ 45 ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಲು ಅವಳಿ ಷರತ್ತು ವಿಧಿಸುತ್ತದೆ.

Also Read
ಇ ಡಿ ಪ್ರಕರಣದಲ್ಲಿ ದೊರೆತಿದ್ದ ಜಾಮೀನು ವಿಫಲಗೊಳಿಸಲೆಂದು ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತು: ನ್ಯಾ. ಭುಯಾನ್

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಬಂಧನಕ್ಕೊಳಗಾಗಿದ್ದ ಡಿಎಂಕೆ ನಾಯಕ ಮತ್ತು ತಮಿಳುನಾಡು ಮಾಜಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಜಾಮೀನು ನೀಡಿದ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ಸ್ಪಷ್ಟಪಡಿಸಿತು.

ಸಾಂವಿಧಾನಿಕ ನ್ಯಾಯಾಲಯಗಳು ಅಂತಹ ಪ್ರಕರಣಗಳಲ್ಲಿ ತಮ್ಮ ಅಧಿಕಾರ ಚಲಾಯಿಸದಿದ್ದರೆ ಭಾರತದ ಸಂವಿಧಾನದ 21ನೇ ವಿಧಿಯಡಿಯ ವಿಚಾರಣಾಧೀನ ಕೈದಿಗಳ ಹಕ್ಕುಗಳನ್ನು ಸೋಲಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

"ಸಾಂವಿಧಾನಿಕ ನ್ಯಾಯಾಲಯಗಳು ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣಗಳನ್ನು ವ್ಯವಹರಿಸುವಾಗ ಗಮನವಿಟ್ಟುಕೊಳ್ಳಬೇಕಾದ ಅಂಶವೆಂದರೆ, ಕೆಲವೊಂದು ಅಸಾಧಾರಣ ಪ್ರಕರಣಗಳನ್ನು ಹೊರತುಪಡಿಸಿ, ಪಿಎಂಎಲ್‌ಎ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ಏಳು ವರ್ಷಗಳಾಗಿರುತ್ತದೆ. ಅನುಸೂಚಿತ ಅಪರಾಧಗಳು ಮತ್ತು ಪಿಎಂಎಲ್‌ಎ ಅಪರಾಧಗಳ ವಿಚಾರಣೆಯು ಸಮಂಜಸವಾದ ಸಮಯದೊಳಗೆ ಮುಕ್ತಾಯವಾಗುವ ಸಾಧ್ಯತೆಯು ಇಲ್ಲದೆ ಹೋದಾಗ ಸಾಂವಿಧಾನಿಕ ನ್ಯಾಯಾಲಯಗಳು ಸೆಕ್ಷನ್ 45 (1) (ii) ನಂತಹ ನಿಬಂಧನೆಗಳನ್ನು ದೀರ್ಘಕಾಲದವರೆಗೆ ಆರೋಪಿಯ ಸೆರೆವಾಸವನ್ನು ಮುಂದುವರಿಸಲು ಇ ಡಿ ಕೈಯಲ್ಲಿ ಸಾಧನವಾಗಿಸಲು ಅನುಮತಿಸಲಾಗದು," ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.

"ಪ್ರಕರಣಗಳ ತ್ವರಿತ ವಿಲೇವಾರಿ ಅಗತ್ಯವನ್ನು ಈ ನಿಯಮಗಳಿಗೂ (ಸೆಕ್ಷನ್ 45 (1) (ii)) ಅನ್ವಯಿಸಿಯೇ ಓದಬೇಕು. ವಿಚಾರಣೆಯ ಮುಕ್ತಾಯದಲ್ಲಿ ಉಂಟಾಗುವ ಅತಿಯಾದ ವಿಳಂಬ ಮತ್ತು ಜಾಮೀನು ಮಂಜೂರಾತಿಗೆ ವಿಧಿಸಲಾಗುವ ಹೆಚ್ಚಿನ ಕಟ್ಟಳೆಗಳು ಇವೆರಡು ಒಟ್ಟಾಗಿ ಹೋಗಲು ಸಾಧ್ಯವಿಲ್ಲ. ಜಾಮೀನು ನೀಡುವುದು ನಿಯಮವಾಗಿದ್ದು, ಅನಿವಾರ್ಯವಾದರೆ ಮಾತ್ರ ಬಂಧನದಲ್ಲಿರಿಸಬೇಕು ಎನ್ನುವುದು ನಮ್ಮ ಅಪರಾಧ ನ್ಯಾಯಶಾಸ್ತ್ರದ ಸ್ಥಾಪಿತ ತತ್ವವಾಗಿದೆ" ಎಂದು ನ್ಯಾಯಾಲಯ ವಿವರಿಸಿತು.

Also Read
'ಜಾಮೀನು ಆದೇಶವನ್ನು ಒಂದು ವರ್ಷ ಕಾಲ ಹೇಗೆ ತಡೆಯಲು ಸಾಧ್ಯ?' ಇ ಡಿ ಪ್ರಕರಣದಲ್ಲಿ ಸುಪ್ರೀಂ ಗರಂ

ಒಟ್ಟು 15 ತಿಂಗಳಷ್ಟು ದೀರ್ಘ ಕಾಲ ಬಾಲಾಜಿ ಅವರನ್ನು ಸೆರೆಯಲ್ಲಿಟ್ಟ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಮೂರು ಇಲ್ಲವೇ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವರ್ಷ ಹಿಡಿಯುವುದರಿಂದ  ಅವರ ಬಂಧನ  ಅವರಿಗೆ ಇರುವ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಆರೋಪಿಯಿಂದಾಗಿ ವಿಚಾರಣೆಯಲ್ಲಿನ ವಿಳಂಬವಾಗಿದ್ದರೆ ಸಾಂವಿಧಾನಿಕ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಚಲಾಯಿಸಲು ನಿರಾಕರಿಸಬಹುದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

Kannada Bar & Bench
kannada.barandbench.com