ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ಲಾಏಷಿಯಾ ಸಮ್ಮೇಳನ
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ಲಾಏಷಿಯಾ ಸಮ್ಮೇಳನ 
ಸುದ್ದಿಗಳು

ಸಂಶೋಧನೆ, ಕರಡು ರಚನೆಗೆ ಎಐ ಬಳಸಿಕೊಳ್ಳಬಹುದೇ ವಿನಾ ಅದು ನ್ಯಾಯಾಧೀಶರ ಸ್ಥಾನ ತುಂಬದು: ನ್ಯಾ. ಕೌಲ್

Bar & Bench

ಸಂಶೋಧನೆ ಮತ್ತು ಕರಡು ರಚನೆಯಂತಹ ಕಾರ್ಯ ಉತ್ತಮಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿಕೊಳ್ಳಬಹುದು ಆದರೆ ಅವು ಮಾನುಷ ನ್ಯಾಯಾಧೀಶರ ಸ್ಥಾನ ತುಂಬುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.

ಏಷಿಯಾ ಮತ್ತು ಪೆಸಿಫಿಕ್‌ ಕಾನೂನು ಸಂಘದ ವತಿಯಿಂದ ಬೆಂಗಳೂರಿನಲ್ಲಿ ನ.24ರಿಂದ 27ರವರೆಗೆ ನಡೆಯುತ್ತಿರುವ 36ನೇ ಲಾಏಷಿಯಾ ಸಮಾವೇಶದ ಎರಡನೇ ದಿನವಾದ ಶನಿವಾರ ʼತಾಂತ್ರಿಕ ಬೆಳವಣಿಗೆಗಳು ಮತ್ತು ಕಾನೂನುʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ನ್ಯಾಯಾಧೀಶರ ನಿರಂತರ ಆಲೋಚನಾ ಪ್ರಕ್ರಿಯೆ ಮುಖ್ಯವಾದುದಾಗಿದ್ದು ಮಾನವ ಬುದ್ಧಿಮತ್ತೆಯ ಸ್ಥಾನವನ್ನು ತಂತ್ರಜ್ಞಾನ ಅಲಂಕರಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

"ವಕೀಲರು ಮತ್ತು ನ್ಯಾಯಾಧೀಶರಿಗೆ ಸಹಾಯ ಮಾಡಲು ಎಐ ಬಳಸುವುದು ಹೇಗೆ? (ಅದರಿಂದ) ಸಂಶೋಧನೆ, ಕರಡು ರಚನೆಯ ವೇಗ ಹೆಚ್ಚಾಗುತ್ತದೆ. ಆದರೆ ಒಂದು ಮಾತು ಅಥವಾ ಎಚ್ಚರಿಕೆ (ಎಂದಾದರೂ ತಿಳಿದುಕೊಳ್ಳಿ)- ನ್ಯಾಯಾಧೀಶರು ಮನಸ್ಸು ಮತ್ತು ಹೃದಯದಿಂದ ಕಾರ್ಯನಿರ್ವಹಿಸುತ್ತಾರೆ. ಎಐ ಆ ಅಂಶವನ್ನು ಹೊಂದಬಹುದು ಎಂದು ನನಗನ್ನಿಸುವುದಿಲ್ಲ. ಚಾಟ್ ಜಿಪಿಟಿ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಾನು ಸ್ವಲ್ಪ ಹಳೆಯ ಪರಂಪರೆಯವನು. ತೀರ್ಪು ಬರೆಯುವುದಕ್ಕೆ ಚಾಟ್‌ ಜಿಪಿಟಿಗೆ ಹೊರಗುತ್ತಿಗೆ ನೀಡುವುದು ನನಗೆ ಹಿತವೆನಿಸುತ್ತಿಲ್ಲ. ನ್ಯಾಯಾಧೀಶರ ನಿರಂತರ ಆಲೋಚನಾ ಪ್ರಕ್ರಿಯೆ ಮುಖ್ಯವಾದುದಾಗಿದ್ದು ಮಾನವ ಬುದ್ಧಿಮತ್ತೆಯ ಸ್ಥಾನವನ್ನು ತಂತ್ರಜ್ಞಾನ ಅಲಂಕರಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

"ಡಿಜಿಟಲ್ ಸಾಧನಗಳು ಉಪಯುಕ್ತ ಸೇವಕರು, ಆದರೆ ಅವನ್ನು ನಮ್ಮ ಒಡೆಯರನ್ನಾಗಿ ಮಾಡಿಕೊಳ್ಳಬೇಕಿಲ್ಲ" ಎಂದು ನ್ಯಾ. ಕೌಲ್‌ ಬುದ್ಧಿಮಾತು ಹೇಳಿದರು.

ನ್ಯಾಯಾಧೀಶರು ಸಮಾಜದೊಂದಿಗೆ ಸಂವಹನ ನಡೆಸುವ ಅಗತ್ಯವನ್ನು ನ್ಯಾಯಮೂರ್ತಿ ಕೌಲ್ ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಒಬ್ಬ ವ್ಯಕ್ತಿ ಸಮಾಜದಿಂದ ವಿಮುಖನಾದರೆ ಉತ್ತಮ ನ್ಯಾಯಾಧೀಶನಾಗುವುದಿಲ್ಲ ಎಂದು ಅವರು ಹೇಳಿದರು.

ತಂತ್ರಜ್ಞಾನವೂ ಸೇರಿದಂತೆ ಕಾನೂನು ಕ್ಷೇತ್ರದ ಕೆಲವೊಂದು ಸಂಗತಿಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ತಮಗೆ ಸಮಾಜದೊಂದಿಗಿನ ಸಂವಹನ ಸಹಕಾರಿಯಾಯಿತು ಎಂದು ಅವರು ಹೇಳಿದರು. ನ್ಯಾಯಾಧೀಶರ ಪಾತ್ರ ಸಮಾಜ ಅಥವಾ ತಂತ್ರಜ್ಞಾನದಿಂದ ಹೊರತಾದದ್ದಲ್ಲ ಎಂದು ಅವರು ನುಡಿದರು.

ನ್ಯಾಯಮೂರ್ತಿ ಕೌಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಶ್ರೀಲಂಕಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರ್ಜುನ ಒಬೆಸೆಕೆರೆ, ನೇಪಾಳ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಪ್ನಾ ಮಲ್ಲಾ ಮತ್ತು ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೈಮಾ ಜೈದರ್ ಮಾತನಾಡಿದರು.

ಸಮ್ಮೇಳನ ನಾಲ್ಕು ದಿನಗಳ ಕಾಲ ನಡೆಯುತ್ತಿದ್ದು, ನವೆಂಬರ್ 27, ಸೋಮವಾರ ಮುಕ್ತಾಯಗೊಳ್ಳಲಿದೆ.