Air India  Image for representative purposes only
ಸುದ್ದಿಗಳು

ಏರ್ ಇಂಡಿಯಾ ಅಪಘಾತ: ಮೃತ ಪೈಲಟ್‌ ತಂದೆಯಿಂದ ನ್ಯಾಯಾಂಗ ತನಿಖೆಗೆ ಕೋರಿಕೆ, ಕೇಂದ್ರಕ್ಕೆ ಸುಪ್ರೀಂ ನೋಟಿಸ್

ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾರನ್ನೂ ಹೊಣೆ ಮಾಡುತ್ತಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.

Bar & Bench

ಕಳೆದ ಜೂನ್‌ನಲ್ಲಿ 260 ಪ್ರಯಾಣಿಕರು ಹಾಗೂ ನೆಲದ ಮೇಲಿದ್ದ 19 ಮಂದಿಯನ್ನು ಬಲಿ ಪಡೆದಿದ್ದ ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್‌ವಾಲ್‌ ಅವರ ತಂದೆ ಸಲ್ಲಿಸಿದ್ದ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಘಟನೆಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ವಿಮಾನ ಚಲಾಯಿಸುತ್ತಿದ್ದ ಏರ್ ಇಂಡಿಯಾ ಪೈಲಟ್-ಇನ್-ಕಮಾಂಡ್‌ ಸುಮೀತ್ ಸಭರವಾಲ್ ಅವರ ತಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾರನ್ನೂ ಹೊಣೆ ಮಾಡುತ್ತಿಲ್ಲ.ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸುವ ಯಾವುದೇ ಹಸ್ತಕ್ಷೇಪವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಡೆಸುತ್ತಿರುವ ತನಿಖೆಗೆ ಪ್ರತಿಕೂಲವಾಗಿ ಪರಿಣಮಿಸಬಹುದು ಎಂದು ಅವರು ವಾದಿಸಿದರು.

ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ ಲೈನರ್ ವಿಮಾನ ಅಪಘಾತದ ಬಗ್ಗೆ ನ್ಯಾಯಯುತ, ಪಾರದರ್ಶಕ ಮತ್ತು ತಾಂತ್ರಿಕವಾಗಿ ಉತ್ತಮ ರೀತಿಯ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ಮತ್ತು ವಾಯುಯಾನ ವಲಯದ ಸ್ವತಂತ್ರ ತಜ್ಞರ ಸಮಿತಿ ರಚಿಸುವಂತೆ ಸುಮೀತ್ ಅವರ ತಂದೆ ಕೋರಿದ್ದರು.  

ಘಟನೆಗೆ ಪೈಲಟ್‌ಗಳ ಲೋಪವೇ ಕಾರಣ ಎಂದು ಈಗ ನಡೆಯುತ್ತಿರುವ ತನಿಖೆ ಮತ್ತು ಜೂನ್ 15ರಂದು ಸಲ್ಲಿಸಲಾದ ಪ್ರಾಥಮಿಕ ವರದಿ ಹೇಳುತ್ತಿದ್ದು ತನಿಖೆಯಲ್ಲಿ ಗಂಭೀರ ದೋಷಗಳಿವೆ ಎಂದು ಸಭರ್‌ವಾಲ್‌ ಮತ್ತು ಭಾರತೀಯ ಪೈಲಟ್‌ಗಳ ಒಕ್ಕೂಟ ಜಂಟಿಯಾಗಿ ಸಲ್ಲಿಸಿದ ಅರ್ಜಿ ಹೇಳಿತ್ತು.

ಎಎಐಬಿಯ ತನಿಖೆ, ಜವಾಬ್ದಾರಿಯನ್ನು ಹಂಚಿಕೆ ಮಾಡುವುದಕ್ಕಾಗಿ ಅಲ್ಲ ಬದಲಿಗೆ ಕಾರಣ ಪತ್ತೆಹಚ್ಚಿ ಭವಿಷ್ಯದಲ್ಲಿ ಸುರಕ್ಷತಾ ಶಿಫಾರಸು ಮಾಡುವುದಕ್ಕಾಗಿ ಇದೆ ಎಂದು ನ್ಯಾ. ಬಾಗ್ಚಿ ವಿಚಾರಣೆ ವೇಳೆ ತಿಳಿಸಿದರು. ಕೇಂದ್ರ ಸರ್ಕಾರ ನಡೆಸುವ ಪೂರಕ ತನಿಖೆ ಮಾತ್ರ ಹೊಣೆಗಾರಿಕೆಯನ್ನು ನಿರ್ಧರಿಸುವ ವಿಚಾರದಲ್ಲಿ ತೊಡಗಬಹುದು.” ಎಂದು ಅವರು ನುಡಿದರು.

ಸಬರ್‌ವಾಲ್‌ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ , ನ್ಯಾಯಯುತ ತನಿಖೆಗೆ ಅಗತ್ಯವಾದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದರು.

ಸರ್ಕಾರೇತರ ಸಂಸ್ಥೆ ಪರ ವಾದ  ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌ ಹಲವು ಮಂದಿ ಸಾವನ್ನಪ್ಪಿರುವ ಇಂತಹ ಗಂಭೀರ ವಿಮಾನ ದುರಂತಗಳ ಬಗ್ಗೆ ಕೇವಲ ಎಎಐಬಿ ತನಿಖೆಯಷ್ಟೇ ಸಾಲದ ನ್ಯಾಯಾಂಗ ತನಿಖೆಯೂ ಅಗತ್ಯ ಎಂದರು. ಇದೇ ವೇಳೆ ದುರಂತದ ಬಗ್ಗೆ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಪ್ರತಿಯೊಬ್ಬರೂ ಸಾರ್ವಜನಿಕ ವಿಚಾರಗಳಲ್ಲಿ ಅರ್ಜಿ ಹಾಕಬೇಕೆಂದೇನೂ ಇಲ್ಲ ಎಂದು ಅದು ಹೇಳಿತು.