ವಿಮಾನಯಾನ ಪೈಲಟ್‌ಗಳು ಕೌಶಲ್ಯಪೂರ್ಣವೂ ಹಾಗೂ ತಾಂತ್ರಿಕವೂ ಆದ ಕೆಲಸವನ್ನು ನಿರ್ವಹಿಸುವುದರಿಂದ ಅವರು 1947ರ ಕೈಗಾರಿಕಾ ವ್ಯಾಜ್ಯ ಕಾಯಿದೆಯ ಸೆಕ್ಷನ್ 2(ಎಸ್) ಅಡಿ ಕಾರ್ಮಿಕ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತಾರೆ ಎಂದು ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಕಿಂಗ್ ಏರ್‌ವೇಸ್ ಮತ್ತು ಕ್ಯಾ. ಪ್ರೀತಮ್ ಸಿಂಗ್ ನಡುವಣ ಪ್ರಕರಣ].
ಮೂವರು ಪೈಲಟ್‌ಗಳಾದ ಕ್ಯಾಪ್ಟನ್ ಪ್ರೀತಮ್ ಸಿಂಗ್, ಮಂಜಿತ್ ಸಿಂಗ್ ಹಾಗೂ ಎನ್ ಡಿ ಕಥುರಿಯಾ ಅವರಿಗೆ ನೀಡಬೇಕಿದ್ದ ಬಾಕಿ ವೇತನ, ಹೆಚ್ಚುವರಿ ಹಾರಾಟದ ಗಂಟೆಗಳ ಪ್ರೋತ್ಸಾಹಧನ ಹಾಗೂ ಇತರೆ ಬಾಕಿ ಮೊತ್ತ ಪಾವತಿಸುವಂತೆ ನಿರ್ದೇಶನ ನೀಡಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಿಂಗ್ ಏರ್‌ವೇಸ್ ಏಕಸದಸ್ಯ ಪೀಠಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿತ್ತು. ಆದರೆ ಏಕಸದಸ್ಯ ಪೀಠ ಕಾರ್ಮಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು.
ಇದನ್ನು ಪ್ರಶ್ನಿಸಿ ಕಿಂಗ್ ಏರ್‌ವೇಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ ಡಿಸೆಂಬರ್ 11ರಂದು ಈ ತೀರ್ಪು ನೀಡಿತು.
ಅರ್ಜಿದಾರ ಪೈಲಟ್‌ಗಳು ಪೈಲಟ್ ಇನ್ ಕಮಾಂಡ್ ಅಥವಾ ಕ್ಯಾಪ್ಟನ್‌ಗಳಾಗಿದ್ದವರು. ವಿಮಾನ ಹಾರಾಟದ ವೇಳೆ ಸಿಬ್ಬಂದಿಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಹೀಗಾಗಿ ಅವರು ಕೈಗಾರಿಕಾ ವ್ಯಾಜ್ಯ ಕಾಯಿದೆಯಡಿ ಕಾರ್ಮಿಕರಲ್ಲ ಎಂಬುದು ಕಿಂಗ್ ಏರ್‌ವೇಸ್ ವಾದವಾಗಿತ್ತು.
ಆದರೆ ಪೈಲಟ್‌ಗಳು ಮೇಲ್ವಿಚಾರಣಾ ಹುದ್ದೆಯಲ್ಲಿದ್ದು ಹೆಚ್ಚಿನ ವೇತನ ಪಡೆಯುತ್ತಾರೆ ಎಂಬ ಕಿಂಗ್ ಏರ್‌ವೇಸ್ ವಾದ ತಿರಸ್ಕರಿಸಿದ ಅದು ಕೇವಲ ‘ಮೇಲ್ವಿಚಾರಣೆʼಎಂಬ ಪದ ಬಳಕೆಯಿಂದಲೇ ಕಾರ್ಮಿಕ ಸ್ಥಾನಮಾನವನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ.
ಪೈಲಟ್ ಕೇವಲ ಮೇಲ್ವಿಚಾರಣಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಾಬೀತಾಗದೆ ಹೋದರೆ ವೇತನದ ಮಟ್ಟ ಎಂಬುದು ಕೆಲಸಗಾರರ ಸ್ಥಾನಮಾನ ನಿರ್ಣಯಿಸುವುದಕ್ಕೆ ಅಪ್ರಸ್ತುತವಾಗುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ಹೀಗಾಗಿ ನ್ಯಾಯಾಲಯ ವಿಮಾನಯಾನ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಕಿಂಗ್ ಏರ್‌ವೇಸ್ ಪರವಾಗಿ ಹಿರಿಯ ವಕೀಲರಾದ ಅಮಿತ್ ರಾವಲ್ ಮತ್ತು ಪ್ರದೀಪ್ ಬಕ್ಷಿ ಮತ್ತು ವಕೀಲೆ ರಿಷಿಕಾ ಅವರು ವಾದ ಮಂಡಿಸಿದರು. ಪೈಲಟ್‌ಗಳನ್ನು ವಕೀಲ ಶೋಹಿತ್ ಚೌಧರಿ ಪ್ರತಿನಿಧಿಸಿದ್ದರು.