Allahabad High Court, Lucknow Bench 
ಸುದ್ದಿಗಳು

ನಿರಾಶ್ರಿತರನ್ನು ಪತ್ತೆಹಚ್ಚಲು ರಾಜ್ಯವ್ಯಾಪಿ ಕಾರ್ಯೋನ್ಮುಖರಾಗುವಂತೆ ಅಲಾಹಾಬಾದ್ ಹೈಕೋರ್ಟ್ ಆದೇಶ

ನಿರಾಶ್ರಿತರು ಸೇರಿದಂತೆ ಜನರು ಘನತೆಯಿಂದ ಜೀವನ ನಡೆಸಲು ಸಂವಿಧಾನದ 21ನೇ ವಿಧಿ ಅವಕಾಶ ನೀಡಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರಾಶ್ರಿತರನ್ನು ಪತ್ತೆಹಚ್ಚಲು ರಾಜ್ಯವ್ಯಾಪಿ ಕಾರ್ಯೋನ್ಮುಖರಾಗುವಂತೆ ಮತ್ತು ಅಂತಹವರಿಗೆ ಆಶ್ರಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಪರಿಹಾರ ಒದಗಿಸುವಂತೆ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ಜ್ಯೋತಿ ರಜಪೂತ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ] .

ವಿಕಲಾಂಗರಲ್ಲದ ಆದರೆ ನಿರಾಶ್ರಿತರಾಗಿರುವ ವ್ಯಕ್ತಿಗಳು, ಮಾನಸಿಕ ಅಸ್ವಸ್ಥರು, ಬುದ್ಧಿಮಾಂದ್ಯರು ಹಾಗೂ ವಿಕಲಚೇತನರು ಹೀಗೆ ನಾಲ್ಕು ಬಗೆಯ ನಿರಾಶ್ರಿತರನ್ನು ಗುರುತಿಸುವಂತೆ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ನ್ಯಾಯಮೂರ್ತಿ ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.

" ಮುಖ್ಯ ವೈದ್ಯಾಧಿಕಾರಿಯು ಸ್ಥಳೀಯ ಪೋಲೀಸರ ಸಹಕಾರದೊಂದಿಗೆ ತನ್ನ ಜಿಲ್ಲೆಯ ಪುರಸಭಾ ವ್ಯಾಪ್ತಿಯಲ್ಲಿ ಮೇಲೆ ಹೇಳಿದ ನಾಲ್ಕು ವರ್ಗದ ನಿರಾಶ್ರಿತ ವ್ಯಕ್ತಿಗಳನ್ನು ಗುರುತಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಪೋಲೀಸರುಸಾಕಷ್ಟು ಸಹಕಾರ ನೀಡುವಂತೆ ಪೊಲೀಸ್ ಅಧೀಕ್ಷಕರು/ಪೊಲೀಸ್ ಆಯುಕ್ತರು ನೋಡಿಕೊಳ್ಳಬೇಕು. ವ್ಯಕ್ತಿಗಳನ್ನು ಗುರುತಿಸಿದ ನಂತರ, ಸಂಬಂಧಿತ ಕಾನೂನುಗಳು ಅಥವಾ ಯೋಜನೆಗಳ ಅಡಿಯಲ್ಲಿ ಆರೋಗ್ಯ ಅಥವಾ ಆಶ್ರಯ ವಿಚಾರವಾಗಿ ಪರಿಹಾರ ಕಲ್ಪಿಸಬೇಕು” ಎಂದು ನ್ಯಾಯಾಲಯ ನುಡಿದಿದೆ.

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಇಡೀ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿ ಇತರ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸಬೇಕು ಎಂದು ಅದು ಹೇಳಿದೆ. ಅಂತಹ ವ್ಯಕ್ತಿಗಳಿಗೆ ಸಂಬಂಧಿಸಿದ ವಿವರಗಳು ಮತ್ತು ಅವರಿಗೆ ಒದಗಿಸಲಾದ ಸಹಾಯವನ್ನು ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆ ರವಾನಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಅಂತಹ ವ್ಯಕ್ತಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

"ಈ ನಿಟ್ಟಿನಲ್ಲಿ ವರದಿ ಸಿದ್ಧಪಡಿಸಿ ಮುಂದಿನ (ವಿಚಾರಣಾ) ದಿನದಂದು ಉ. ಪ್ರದೇಶದ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರ್ದೇಶಕರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು ಪೀಠ ನಿರ್ದೇಶನ ನೀಡಿದೆ.

ನಗರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ರೀತಿಯ ಪ್ರಕರಣಗಳು ಇರುವುದರಿಂದ ಪ್ರತ್ಯೇಕ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯ ಲಖನೌನ ಅಧಿಕಾರಿಗಳಿಗೆ ಆದೇಶಿಸಿದೆ. 

ನಿರಾಶ್ರಿತರು ಸೇರಿದಂತೆ ಜನರು ಘನತೆಯಿಂದ ಜೀವನ ನಡೆಸಲು ಸಂವಿಧಾನದ 21ನೇ ವಿಧಿ ಅವಕಾಶ ನೀಡಿದೆ ಎಂದು ನ್ಯಾಯಾಲಯ ಹೇಳಿದೆ. 

ವಿಕಲಚೇತನರ ಹಕ್ಕುಗಳ ಕಾಯಿದೆ , ಮಾನಸಿಕ ಆರೋಗ್ಯ ಕಾಯಿದೆ ಮತ್ತು ನಗರ ನಿರಾಶ್ರಿತರಿಗೆ ಕೇಂದ್ರ ಸರ್ಕಾರದ ಆಶ್ರಯ ಯೋಜನೆ ಪ್ರಕಾರ ಪುನರ್ವಸತಿ ಕೋರಿ ವಕೀಲ ಜ್ಯೋತಿ ರಾಜ್‌ಪೂತ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗೆ (ಪಿಐಎಲ್) ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.