Seraj Ali, Lucknow Bench Linkedin
ಸುದ್ದಿಗಳು

ಮಸೀದಿ ಧ್ವಂಸ ವರದಿ ಮಾಡಿದ್ದ ಬಿಬಿಸಿ ಪತ್ರಕರ್ತನಿಗೆ ಪಾಸ್‌ಪೋರ್ಟ್‌ ಎನ್ಒಸಿ ನಿರಾಕರಣೆ: ಅಲಾಹಾಬಾದ್ ಹೈಕೋರ್ಟ್ ಅಭಯ

ಮೊಹಮ್ಮದ್ ಸಿರಾಜ್ ಅಲಿ ಅವರು 'ದ ವೈರ್ʼ ಸುದ್ದಿ ಜಾಲತಾಣದಲ್ಲಿ ಪತ್ರಕರ್ತರಾಗಿದ್ದಾಗ ವರದಿ ಪ್ರಕಟಗೊಂಡಿತ್ತು.

Bar & Bench

ಬಾರಾಬಂಕಿಯಲ್ಲಿ ಮಸೀದಿ ಧ್ವಂಸ ಪ್ರಕರಣದ ವರದಿ ಮಾಡಿದ್ದಕ್ಕಾಗಿ ಎಫ್‌ಐಆರ್ ದಾಖಲಾದ ಪರಿಣಾಮ ಪಾಸ್‌ಪೋರ್ಟ್‌ ಇನ್ನಿತರ ಪ್ರಯಾಣ ನಿರ್ಬಂಧಗಳಿಗೆ ತುತ್ತಾಗಿದ್ದ ಬಿಬಿಸಿ ಪತ್ರಕರ್ತ ಮೊಹಮ್ಮದ್ ಸಿರಾಜ್ ಅಲಿ ಅವರ ನೆರವಿಗೆ ಅಲಾಹಾಬಾದ್‌ ಹೈಕೋರ್ಟ್‌ ಧಾವಿಸಿದೆ.

ತನಗೆ ಪಾಸ್‌ಪೋರ್ಟ್ ನೀಡಲು ಅಥವಾ ನವೀಕರಿಸಲು ಅಗತ್ಯವಾದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಕೋರಿಕೆಯನ್ನು ತಿರಸ್ಕರಿಸಿ ಮೇ 5, 2025 ಮತ್ತು ಆಗಸ್ಟ್ 21, 2023ರಂದು ಬಾರಾಬಂಕಿ ನ್ಯಾಯಾಲಯಗಳು ಎರಡು ಆದೇಶ ನೀಡಿದ್ದವು. ಇದನ್ನು ಪ್ರಶ್ನಿಸಿ ಸಿರಾಜ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮೊಹಮ್ಮದ್ ಅಯಾಜ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪಿನಂತೆ ವಾಸ್ತವಾಂಶಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಅಬ್ದುಲ್ ಮೊಯಿನ್, ಅಕ್ಟೋಬರ್ 10, 2019 ಮತ್ತು ಆಗಸ್ಟ್ 25, 1993ರ ಅನ್ವಯವಾಗುವ ಕಚೇರಿ ಜ್ಞಾಪಕ ಪತ್ರಗಳನ್ನು ಉಲ್ಲೇಖಿಸದೆ ಪಾಸ್‌ಪೋರ್ಟ್ ವಿತರಣೆಗೆ ಎನ್‌ಒಸಿ ಕೋರಿ ಸಿರಾಜ್ ಅವರು ಮಾಡಿದ್ದ ವಿನಂತಿಯನ್ನು ತಿರಸ್ಕರಿಸುವುದು ವಿಚಾರಣಾ ನ್ಯಾಯಾಲಯಗಳು ತಮ್ಮ ವಿವೇಚನೆ ಬಳಸದೆ ಇರುವುದನ್ನು ಹೇಳುತ್ತದೆ ಎಂದು ಅಭಿಪ್ರಾಯಪಟ್ಟರು.  

ಅಂತೆಯೇ ವಿಚಾರಣಾ ನ್ಯಾಯಾಲಯಗಳ ಆದೇಶಗಳನ್ನು ರದ್ದುಗೊಳಿಸಿದ ಹೈಕೋರ್ಟ್‌ ಪಾಸ್‌ಪೋರ್ಟ್‌ ನವೀಕರಣ ಅಥವಾ ಹೊಸ ಪಾಸ್‌ಪಾರ್ಟ್‌ ಪಡೆಯುವಿಕೆ ಕೋರಿ ಸಿರಾಜ್‌ ಅವರು ಸಲ್ಲಿಸಲಿರುವ ಅರ್ಜಿಯನ್ನು ಒಂದು ತಿಂಗಳ ಒಳಗೆ ನಿರ್ಧರಿಸಬೇಕು ಎಂದು ಹೇಳಿತು.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಸಿರಾಜ್‌ ಅವರು ದ ವೈರ್‌ ಸುದ್ದಿ ಜಾಲತಾಣದ ಪತ್ರಕರ್ತರಾಗಿದ್ದಾಗ ಬಾರಾಬಂಕಿಯಲ್ಲಿ ಮಸೀದಿ ಧ್ವಂಸ ಪ್ರಕರಣದ ವರದಿ ಪ್ರಕಟಿಸಿದ್ದರು. ಸಹೋದ್ಯೋಗಿ ಮುಕುಲ್ ಸಿಂಗ್ ಚೌಹಾಣ್ ವರದಿಯ ಸಹಲೇಖಕರಾಗಿದ್ದರು. ನಂತರ ಸಿರಾಜ್‌ ಸೇರಿ ಹಲವು ವ್ಯಕ್ತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಾಗಿತ್ತು.

ಸೆಪ್ಟೆಂಬರ್ 2021ರಲ್ಲಿ,  ದ ವೈರ್‌ಗೆ ರಾಜೀನಾಮೆ ನೀಡಿದ್ದ ಸಿರಾಜ್‌ ಬಿಬಿಸಿ ಇಂಡಿಯಾದಲ್ಲಿ ಟಿವಿ ಪತ್ರಕರ್ತರಾಗಿ ಸೇರ್ಪಡೆಗೊಂಡಿದ್ದರು. ಈ ಮಧ್ಯೆ ಸಿರಾಜ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ನಂತರ ವಿಚಾರಣಾ ನ್ಯಾಯಾಲಯ ಪ್ರಕರಣ ಕೈಗೆತ್ತಿಕೊಂಡಿತ್ತು.

ಪ್ರಕರಣ ಬಾಕಿ ಇರುವುದನ್ನು ಬಹಿರಂಗಪಡಿಸಿದ್ದ ಸಿರಾಜ್‌ ತನ್ನ ಪಾಸ್‌ಪೋರ್ಟ್‌ ಅವಧಿ ಮುಗಿಯಲಿರುವುದರಿಂದ ನವೀಕರಣ ಕೋರಿದ್ದರು. ಆದರೆ ವಿಚಾರಣಾ ನ್ಯಾಯಾಲಯ ಎನ್‌ಒಸಿ ಅಥವಾ ನ್ಯಾಯಾಂಗ ಆದೇಶ ನೀಡದೆ ತಾನೇನೂ ಮಾಡುವಂತಿಲ್ಲ ಎಂದು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ತಿಳಿಸಿತು. ಇತ್ತ ವಿಚಾರಣಾ ನ್ಯಾಯಾಲಯ ಎನ್‌ಒಸಿ ನೀಡಲು ನಿರಾಕರಿಸಿದ್ದರಿಂದ ಸಿರಾಜ್‌ ಹೈಕೋರ್ಟ್‌ ಕದ ತಟ್ಟಿದ್ದರು.