Yash Dayal Instagram
ಸುದ್ದಿಗಳು

ಲೈಂಗಿಕ ದೌರ್ಜನ್ಯ ಪ್ರಕರಣ: ಆರ್‌ಸಿಬಿ ವೇಗಿ ಯಶ್ ದಯಾಳ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ

ಮದುವೆಯ ಸುಳ್ಳು ಭರವಸೆ ನೀಡಿ ಆರ್‌ಸಿಬಿ ತಂಡದ ವೇಗಿ ಯಶ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದರು.

Bar & Bench

ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವೇಗಿ ಯಶ್‌ ದಯಾಳ್‌ ಜೊತೆ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ತಾವು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವುದಾಗಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಯಶ್‌ ಅವರನ್ನು ಬಂಧಿಸದಂತೆ ಅಲಾಹಾಬಾದ್‌ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ [ಯಶ್ ದಯಾಳ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಎಫ್‌ಐಆರ್‌ ಪರಿಶೀಲಿಸಿದಾಗ ದಯಾಳ್ ಮತ್ತು ದೂರುದಾರ ಮಹಿಳೆಯ ನಡುವೆ ಐದು ವರ್ಷದಿಂದ ಸಂಬಂಧ ಇರುವುದು ಸ್ಪಷ್ಟವಾಗಿದೆ. ಈ ಹಂತದಲ್ಲಿ ಅವರು ಮದುವೆಯ ಭರವಸೆ ನೀಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಕಷ್ಟಕರ ಎಂಬುದಾಗಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅನಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಹೀಗಾಗಿ ಯಶ್‌ ಅವರನ್ನು ಬಂಧಿಸದಂತೆ ತಾನು ನೀಡುತ್ತಿರುವ ತಡೆಯಾಜ್ಞೆ ಮುಂದಿನ ವಿಚಾರಣೆಯವರೆಗೆ ಅಥವಾ ಪೊಲೀಸರು ತನಗೆ ವರದಿ ಸಲ್ಲಿಸುವವರೆಗೆ ಜಾರಿಯಲ್ಲಿರುತ್ತದೆ ಎಂದು ಅದು ಹೇಳಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 (ಮದುವೆಯಾಗುವ ಸುಳ್ಳು ಭರವಸೆಯ ಮೇಲೆ ಲೈಂಗಿಕ ಸಂಭೋಗ) ಅಡಿಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಯಶ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಐದು ವರ್ಷ ತನ್ನೊಂದಿಗೆ ಸಂಬಂಧದಲ್ಲಿದ್ದ ಯಶ್‌ ಅವರು ಮದುವೆಯಾಗುವ ಸುಳ್ಳು ಭರವಸೆ ನೀಡಿ ಭಾವನಾತ್ಮಕ, ದೈಹಿಕ ಹಾಗೂ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದರು.

ಆದರೆ ಆರೋಪ ನಿರಾಕರಿಸಿದ ಯಶ್‌, ಮಹಿಳೆ ದೀರ್ಘಕಾಲ ಮೌನವಾಗಿದ್ದು ತಾನು ಭಾರತೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾದ ನಂತರವಷ್ಟೇ ಎಫ್‌ಐಆರ್‌ ದಾಖಲಿಸಿದ್ದಾರೆ. ಸುಲಿಗೆ ಮಾಡುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದಿದ್ದರು.  ಇಬ್ಬರ ನಡುವೆ ಸಂಬಂಧ ಬೆಳೆದಿದ್ದ ಹೊತ್ತಿನಲ್ಲಿ ಯಶ್‌ ಅವರು ಮಹಿಳೆಗೆ ಆರ್ಥಿಕ ನೆರವು ನೀಡಿದ್ದರು ಎಂದು ಯಶ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯ ಪೊಲೀಸರು ಮತ್ತು ದೂರುದಾರರಿಗೆ ನೋಟಿಸ್‌ ನೀಡಿತು. ಯಶ್‌ ಅವರನ್ನು ಬಂಧಿಸದಂತೆ ತಡೆಯಾಜ್ಞೆ ವಿಧಿಸಿತು.

ಹಿರಿಯ ವಕೀಲರಾದ ಗೋಪಾಲ್ ಸ್ವರೂಪ್ ಚತುರ್ವೇದಿ ಮತ್ತು ಬ್ರಿಜೇಶ್ ಸಹಾಯ್ ಜೊತೆಗೆ ವಕೀಲರಾದ ಗೌರವ್ ತ್ರಿಪಾಠಿ, ರಘುವಂಶ ಮಿಶ್ರಾ ಮತ್ತು ಭವ್ಯ ಸಹಾಯ್ ಅವರು ಯಶ್ ದಯಾಳ್ ಪರ ವಾದ ಮಂಡಿಸಿದರು. ಸರ್ಕಾರವನ್ನು ವಕೀಲ ರೂಪಕ್ ಚೌಬೆ ಪ್ರತಿನಿಧಿಸಿದ್ದರು.