ಅಮೆಜಾನ್ ಜೊತೆಗೆ ಫ್ಯೂಚರ್ ಗ್ರೂಪ್ 2019ರಲ್ಲಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಪುರ ಮಧ್ಯಸ್ಥಿಕೆ ನ್ಯಾಯಮಂಡಳಿಯ ವಿಚಾರಣೆಗೆ ದೆಹಲಿ ಹೈಕೋರ್ಟ್ ಬುಧವಾರ ತಡೆ ನೀಡಿದ್ದು ಇದರಿಂದ ಕಿಶೋರ್ ಬಿಯಾನಿ ಮತ್ತವರ ಫ್ಯೂಚರ್ ಗ್ರೂಪ್ ಸದ್ಯಕ್ಕೆ ನಿರಾಳವಾದಂತಾಗಿದೆ.
ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಏಕಸದಸ್ಯ ಪೀಠವು ನಿನ್ನೆ ಫ್ಯೂಚರ್ ಗ್ರೂಪ್‌ನ ಎರಡು ಅಂಗಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು. ಏಕಸದಸ್ಯ ಪೀಠದ ಈ ಆದೇಶವನ್ನು ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠವು ತಡೆ ಹಿಡಿದಿದೆ.
ಪ್ರಕರಣದ ಸಂದರ್ಭ ಮತ್ತು ಸನ್ನಿವೇಶ ಹಾಗೂ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಹೊರಡಿಸಿದ ಆದೇಶ ಗಮನಿಸಿದರೆ, ಫ್ಯೂಚರ್ ಗ್ರೂಪ್ ಪರವಾಗಿ ಮೇಲ್ನೋಟಕ್ಕೆ ಪ್ರಕರಣವಿದ್ದು, ಪ್ರಕ್ರಿಯೆಗಳನ್ನು ತಡೆಯದೇ ಹೋದರೆ ಅವರಿಗೆ ತುಂಬಲಾರದ ನಷ್ಟ ಉಂಟಾಗಲಿದೆ ಎಂದು ವಿಭಾಗೀಯ ಪೀಠ ಹೇಳಿದೆ. ಅಮೆಜಾನ್‌ಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಫೆ. 1 ಕ್ಕೆ ನಿಗದಿಯಾಗಿರುವ ಮುಂದಿನ ವಿಚಾರಣೆಯವರೆಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳ ಮೇಲಿನ ತಡೆ ಮತ್ತು ಏಕ-ನ್ಯಾಯಾಧೀಶರ ಆದೇಶದ ಮೇಲಿನ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದಿದೆ. ಮೇಲ್ಮನವಿಗಳು ನಿರ್ವಹಣೆಗೆ ಯೋಗ್ಯವೇ ಎಂಬುದೂ ಸೇರಿದಂತೆ ಪ್ರತಿವಾದಿಗಳು ಎತ್ತಿರುವ ವಾದಗಳ ಬಗ್ಗೆ ಅಂದು ವಿಚಾರಣೆ ನಡೆಸುವುದಾಗಿ ಪೀಠವು ಹೇಳಿದೆ.
ಎರಡೂ ಕಂಪನಿಗಳ ನಡುವಿನ 2019ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ಯೂಚರ್ ವಿರುದ್ಧ ಅಮೆಜಾನ್ ಸಲ್ಲಿಸಿದ್ದ ಅರ್ಜಿಯನ್ನು ಸಿಂಗಪುರದ ಮಧ್ಯಸ್ಥಿಕೆ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್‌ಗೆ ಫ್ಯೂಚರ್ ರೀಟೇಲ್‌ನ ಆಸ್ತಿ ಮಾರಾಟ ತಡೆಹಿಡಿಯುವ ಮಧ್ಯಂತರ ಆದೇಶವನ್ನು ನ್ಯಾಯಮಂಡಳಿ ನೀಡಿತ್ತು.
ಅಮೆಜಾನ್ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗ (CCI) ನೀಡಿದ ತೀರ್ಪಿನ ದೃಷ್ಟಿಯಿಂದ ನ್ಯಾಯಮಂಡಳಿಯಲ್ಲಿ ನಡೆಯಲಿರುವ ವಿಚಾರಣೆ ಕಾನೂನುಬಾಹಿರ ಎಂದು ವಾದಿಸಿ ಫ್ಯೂಚರ್ ರಿಟೇಲ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಸ್ಪರ್ಧಾತ್ಮಕ ಕಾಯಿದೆ- 2002ರ ಸೆಕ್ಷನ್ 6(2) ಅಡಿಯಲ್ಲಿ ಅಗತ್ಯವಿರುವಂತೆ, ಅಮೆಜಾನ್ ಭವಿಷ್ಯದಲ್ಲಿ ಶೇ 49ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಕೆಲವು ನಿರ್ಣಾಯಕ ವಿವರಗಳ ಬಗ್ಗೆ ತಿಳಿಸಲು ವಿಫಲವಾಗಿದೆ ಎಂದು ತಿಳಿಸಿ ಒಪ್ಪಂದದ ವಿಲೇವಾರಿಯನ್ನು ಸಿಸಿಐ ಅಮಾನತಿನಲ್ಲಿರಿಸಿತ್ತು. ಹಾಗಾಗಿ, ಅಮೆಜಾನ್‌ಗೆ ₹202 ಕೋಟಿ ದಂಡವನ್ನೂ ಅದು ವಿಧಿಸಿತ್ತು.
ಫ್ಯೂಚರ್ ಗ್ರೂಪ್‌ನ ವಾದವನ್ನು ಅಂತಿಮ ವಿಚಾರಣೆಗೆ ಮುನ್ನ ಪರಿಗಣಿಸಲು ಮಧ್ಯಸ್ಥಿಕೆ ನ್ಯಾಯಮಂಡಳಿ ನಿರಾಕರಿಸಿದ ಬಳಿಕ ಫ್ಯೂಚರ್ ಗ್ರೂಪ್ ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಮಂಡಳಿಯು ಫ್ಯೂಚರ್ ಗ್ರೂಪ್‌ಗೆ ಸಮಾನ ಅವಕಾಶವನ್ನು ನಿರಾಕರಿಸಿದೆ ಅಥವಾ ಅವರ ಕೋರಿಕೆಗಳಿಗೆ ಅನುಗುಣವಾಗಿಲ್ಲ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಏಕಸದಸ್ಯ ಪೀಠವು ಮನವಿಯನ್ನು ತಳ್ಳಿಹಾಕಿತ್ತು. ಆ ಬಳಿಕ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಇಂದು ವಾದ ಮಂಡಿಸಿದ ಅಮೆಜಾನ್ ಪರ ವಕೀಲರು, ಏಕ ಸದಸ್ಯ ಪೀಠದ ಆದೇಶ ಸಂವಿಧಾನದ 227ನೇ ವಿಧಿಯಡಿ ಬರಲಿದ್ದು ಅಲ್ಲಿ ಯಾವುದೇ ಆಂತರಿಕ ನ್ಯಾಯಾಲಯದ ಮೇಲ್ಮನವಿಗೆ ಅವಕಾಶ ಇರದೇ ಇರುವುದರಿಂದ ಮೇಲ್ಮನವಿಗಳನ್ನು ಆಲಿಸಬಾರದು ಎಂದರು. ಅಲ್ಲದೆ ಸಿಸಿಐನ ಆದೇಶವನ್ನು ಶೀಘ್ರದಲ್ಲೇ ಪ್ರಶ್ನಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.