ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ- 2012ರ ಅಡಿಯಲ್ಲಿ ಸಮ್ಮತಿಯ ವಯಸ್ಸನ್ನು 18 ರಿಂದ 16 ಕ್ಕೆ ಇಳಿಸಬೇಕೆಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸುಪ್ರೀಂ ಕೋರ್ಟ್‌ಗೆ ಬಲವಾದ ಮನವಿ ಮಾಡಿದರು. ಆದರೆ ಇದೇ ವೇಳೆ ಮನವಿಯನ್ನು ಕೇಂದ್ರ ಸರ್ಕಾರ ವಿರೋಧಿಸಿತು.
ಪೋಕ್ಸೊ ಕಾಯಿದೆ ಹದಿಹರೆಯದವರ ನಡುವಿನ ಒಮ್ಮತದ ಸಂಬಂಧಗಳನ್ನು ಅಪರಾಧೀಕರಿಸಲಿದ್ದು ಲೈಂಗಿಕ ಜವಾಬ್ದಾರಿಯನ್ನು ದುರ್ಬಲಗೊಳಿಸುತ್ತದೆ ಎಂದು ಜೈಸಿಂಗ್ ವಾದಿಸಿದರೆ, ವಯೋಮಿತಿ ಕಡಿಮೆ ಮಾಡುವುದರಿಂದ ಮಕ್ಕಳ ರಕ್ಷಣೆ ದುರ್ಬಲಗೊಳ್ಳುತ್ತದೆ ಎಂಬುದಾಗಿ ಕೇಂದ್ರ ಎಚ್ಚರಿಸಿತು.
ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವ ಸುಧಾರಣೆ ಕುರಿತಾದ ನಿಪುಣ್ ಸಕ್ಸೇನಾ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಇಂದಿರಾ ಅವರು ಯುವಜನರ ವಿರುದ್ಧ ಪೋಕ್ಸೊ ಸೆಕ್ಷನ್ ದುರುಪಯೋಗ ತಡೆಗಟ್ಟಲು ಲೈಂಗಿಕತೆಗೆ ಸಮ್ಮತಿಯ ವಯಸ್ಸನ್ನು 18 ರಿಂದ 16ಕ್ಕೆ ಇಳಿಸಬೇಕು ಎಂದು ಕೋರಿದರು.
ಕಾಯಿದೆ ಈಗಿರುವಂತೆಯೇ ಮುಂದುವರೆದರೆ ಕಾನೂನು ಹದಿಹರೆಯದವರ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಬಂಧದ ಪ್ರಕರಣಗಳಲ್ಲಿ ಅಸಮಪ್ರಮಾಣದ ಶಿಕ್ಷೆಗೆ ಕಾರಣವಾಗುತ್ತದೆ ಎಂದು ಅವರು ಲಿಖಿತ ವಾದ ಮಂಡಿಸಿದ್ದಾರೆ.
ಹದಿಹರೆಯದವರ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧಗಳು, ಅದರಲ್ಲಿಯೂ ಇಬ್ಬರೂ 16 ರಿಂದ 18 ವರ್ಷದೊಳಗಿನವರಾಗಿದ್ದರೆ, ಪೋಕ್ಸೊ ಕಾಯಿದೆಯ ಸಂಪೂರ್ಣ ಕಠಿಣ ಸೆಕ್ಷನ್‌ಗಳನ್ನು ಅನ್ವಯಿಸಬೇಕೆ ಎಂಬ ಬಗ್ಗೆ ಹೈಕೋರ್ಟ್‌ಗಳು ನೀಡಿರುವ ವ್ಯತಿರಿಕ್ತ ತೀರ್ಪುಗಳನ್ನು ಪ್ರಶ್ನಿಸಿದ ಪ್ರಕರಣ ಇದಾಗಿದೆ.
ಹುಡುಗಿ ತಾನು ಸಮ್ಮತಿಯಿಂದಲೇ ಲೈಂಗಿಕತೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರೂ 18 ವರ್ಷದೊಳಗಿನವರ ಸಮ್ಮತಿಗೆ ಶಾಸನಾತ್ಮಕ ನಿರ್ಬಂಧ ಇರುವುದರಿಂದಾಗಿ ಹುಡುಗನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗುತ್ತಿರುವ ಬಗ್ಗೆ ಪ್ರಕರಣ ಆತಂಕ ವ್ಯಕ್ತಪಡಿಸಿತ್ತು.
ಐಪಿಸಿಯಡಿ ಸಮ್ಮತಿಯ ವಯಸ್ಸು 16 ವರ್ಷ ಎಂದೇ ಇತ್ತು. ಆದರೆ ಪೋಕ್ಸೊ ಜಾರಿಗೆ ಬಂದನಂತರ ವಯೋಮಿತಿಯನ್ನು18ಕ್ಕೆ ಏರಿಕೆಮಾಡಿ ಅದಕ್ಕಿಂತ ಕಡಿಮೆ ವಯೋಮಿತಿಯವರಿಗೆ ಸಂಪೂರ್ಣ ನಿರ್ಬಂಧ ಹೇರಿತು ಎಂದು ಇಂದಿರಾ ದೂರಿದರು.
ಈ ಬದಲಾವಣೆ ಯಾವುದೇ ಪ್ರಾಯೋಗಿಕ ಅಧ್ಯಯನ ಅಥವಾ ವೈಜ್ಞಾನಿಕ ತಾರ್ಕಿಕತೆಯಿಂದ ಬೆಂಬಲಿತವಾಗಿಲ್ಲ ಬದಲಿಗೆ ಹದಿಹರೆಯದವರನ್ನು ರಕ್ಷಿಸುವ ಅತಿ ಪುರುಷ ಪ್ರಧಾನತೆಯ ಬಯಕೆಯಿಂದ ಜಾರಿಯಲ್ಲಿದೆ ಎಂದರು.
ಲೈಂಗಿಕ ಒಪ್ಪಿಗೆಯ ವಯಸ್ಸನ್ನು 16 ರಿಂದ 18 ಕ್ಕೆ ಇಳಿಸುವುದರಿಂದ ಪೋಕ್ಸೊ ಕಾಯಿದೆಯುನ್ನು 'ನೈಜ ವಾಸ್ತವ' ಮತ್ತು ವಿಕಸನಗೊಳ್ಳುತ್ತಿರುವ ಹದಿಹರೆಯದ ನಡವಳಿಕೆಯೊಂದಿಗೆ ಸಮನ್ವಯಗೊಳಿಸಲಿದೆ ಎಂದು ಹೇಳಿದರು.
16ರಿಂದ 18 ವರ್ಷ ವಯಸ್ಸಿನವರು ಲೈಂಗಿಕ ಸಂಬಂಧ ವಿಚಾರಗಳಲ್ಲಿ ಗೌಪ್ಯತೆ, ಘನತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ವಾಯತ್ತತೆಗೆ ಅರ್ಹರು ಎಂಬುದಾಗಿ ಅವರು ವಾದಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ಸಮಿತಿ ವರದಿ ಮತ್ತು ಕ್ರಿಮಿನಲ್ ಕಾನೂನುಗಳ ಸುಧಾರಣೆಗಳ ಸಮಿತಿ ಸೇರಿದಂತೆ ವಿವಿಧ ವರದಿಗಳು ಹಾಗೂ ಹಲವಾರು ತಜ್ಞ ಸಂಸ್ಥೆಗಳು ಈಗಾಗಲೇ ಲೈಂಗಿಕ ಸಮ್ಮತಿಯ ವಯಸ್ಸನ್ನು 16 ಕ್ಕೆ ಇಳಿಸುವಂತೆ ಶಿಫಾರಸು ಮಾಡಿವೆ ಎಂದು ಕೂಡ ಅವರು ಹೇಳಿದರು.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಉಳಿದ ಸೆಕ್ಷನ್‌ಗಳು ಜಾರಿಯಲ್ಲಿ ಇರುವುದರಿಂದ ಸಮ್ಮತಿ ವಯಸ್ಸನ್ನು ಕಡಿಮೆ ಮಾಡುವುದರಿಂದ ಶೋಷಣೆಯನ್ನು ನಿರಪರಾಧೀಕರಿಸುವುದಿಲ್ಲ ಎಂದರು.
16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹದಿಹರೆಯದವರಿಗೆ ಅಧಿಕಾರದ ಅಸಮತೋಲನ, ಬಲಾತ್ಕಾರ ಅಥವಾ ವಂಚನೆಯಂತಹ ಅಂಶಗಳನ್ನು ಹೊರತುಪಡಿಸಿ ಸಮ್ಮತಿಯ ವಯೋಮಿತಿ ಸಡಿಲಗೊಳಿಸುವುದರಿಂದ ಮಕ್ಕಳನ್ನು ಶೋಷಣೆಯಿಂದ ರಕ್ಷಿಸುವುದು ಮತ್ತು ಒಮ್ಮತದ ಸಂಬಂಧಗಳಿಗೆ ಶಿಕ್ಷೆ ವಿಧಿಸದೆ ಇರುವುದರ ನಡುವೆ ಸಮತೋಲನ ಸಾಧಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಜೈಸಿಂಗ್ ಅವರ ವಾದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಂತಹ ಕ್ರಮ ಹದಿಹರೆಯದ ಹುಡುಗಿಯರ ವಿರುದ್ಧ ಅದರಲ್ಲಿಯೂ ವಯಸ್ಕ ವ್ಯಕ್ತಿಗಳಿಂದ ದೌರ್ಜನ್ಯ ಮತ್ತು ಶೋಷಣೆಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.
18 ವರ್ಷದೊಳಗಿನವರು ಸುಲಭದ ತುತ್ತಾಗಿದ್ದು ಅವರಿಗೆ ವಿಶೇಷ ರಕ್ಷಣೆಯ ಅಗತ್ಯವಿದೆ ಎಂಬ ತಿಳುವಳಿಕೆ ಆಧರಿಸಿ ಪೋಕ್ಸೊ ಕಾಯಿದೆಯ ಪ್ರಸ್ತುತ ಚೌಕಟ್ಟು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿತು. ಈ ಶಾಸಕಾಂಗ ಉದ್ದೇಶವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ದತ್ತಾಂಶಗಳನ್ನು ಗಮನಿಸಿದರೆ ಪೋಕ್ಸೊ ಕಾಯಿದೆಯಡಿಯಲ್ಲಿ ದಾಖಲಾಗುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವಯಸ್ಕರಿಂದ ನಡೆಯುವ ಹಲ್ಲೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದ್ದು ಹದಿಹರೆಯದವರಿಗೆ ಬಲವಾದ ರಕ್ಷಣೆ ಒದಗಿಸುವುದಕ್ಕಾಗಿ 18ರ ವಯೋಮಿತಿ ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಸಂಬಂಧವು ಸಮ್ಮತಿಯಿಂದ ಕೂಡಿದ್ದು ಶೋಷಣೆಯಿಂದಲ್ಲ ಎನ್ನುವುದು ಕಂಡುಬಂದಲ್ಲಿ ನ್ಯಾಯಾಲಯಗಳು ಶಿಕ್ಷೆ ವಿಧಿಸುವಾಗ ಉದಾರ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಅವಕಾಶ ಇರುವಂತಹ ಅಂರ್ತಸುರಕ್ಷತಾ ಕ್ರಮಗಳು ಈಗಾಗಲೇ ಕಾಯಿದೆಯಲ್ಲಿವೆ ಆದ್ದರಿಂದ, ಒಪ್ಪಿಗೆಯ ವಯಸ್ಸಿನ ವಿಚಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಅನಗತ್ಯ ಎಂದು ಅವರು ಹೇಳಿದರು.
ಎರಡೂ ಕಡೆಯವರು ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ್ದು ನ್ಯಾಯಾಲಯ ಆಗಸ್ಟ್ 20ರಂದು ಪ್ರಕರಣದ ವಿಚಾರಣೆ ಮುಂದುವರೆಸಲಿದೆ.