ಹದಿಹರೆಯದ ಪ್ರೇಮದ ಬಗ್ಗೆ ಸರ್ಕಾರ ನಿಲುವು ತಿಳಿಯುವವರೆಗೆ ಒಮ್ಮತದ ಪೋಕ್ಸೊ ಪ್ರಕರಣ ರದ್ದತಿ ಇಲ್ಲ: ಬಾಂಬೆ ಹೈಕೋರ್ಟ್

17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ 27 ವರ್ಷದ ಯುವಕನ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Aurangabad Bench with POCSO Act
Aurangabad Bench with POCSO Act
Published on

ಅಪ್ರಾಪ್ತ ಬಾಲಕಿಯೊಂದಿಗೆ ಸಮ್ಮತಿಯ ಲೈಂಗಿಕ ಸಂಬಂಧಗಳು ಅಪರಾಧವಲ್ಲವೇ ಎಂಬ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವವರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ದಾಖಲಾದ ಅಂತಹ ಸಂಬಂಧ ಒಳಗೊಂಡ ಪ್ರಕರಣಗಳನ್ನು ರದ್ದುಗೊಳಿಸುವುದು ಸೂಕ್ತವಲ್ಲ ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್‌ ಪೀಠ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ ಆಕಾಶ್ ನಾನಾಸಾಹೇಬ್ ವಾಘ್ಮೋರೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ ]

17 ವರ್ಷದ ಬಾಲಕಿ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತ 27 ವರ್ಷದ ಯುವಕನ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ಪರಸ್ಪರ ಸಮ್ಮತಿಯ ಸಂಬಂಧದ ಪ್ರಕರಣ ಎಂದು ಆರೋಪಿ ಹೇಳಿಕೊಂಡಿದ್ದ.

Also Read
ಐಐಎಸ್‌ಸಿ ಸಹಾಯಕ ಪ್ರಾಧ್ಯಾಪಕರ ವಿರುದ್ಧದ ಪೋಕ್ಸೊ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

“25 ವರ್ಷ ವಯಸ್ಸಿನ ಯುವಕನೊಬ್ಬ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಕರೆದೊಯ್ದು ಆ ಬಳಿಕ ಅದನ್ನು ಹದಿಹರೆಯದ ಪ್ರೇಮ ಎಂದು ಸಮರ್ಥಿಸಿಕೊಳ್ಳುವುದು, ಕಾನೂನು ದೃಷ್ಟಿಕೋನದಿಂದ ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ನಿರ್ದಿಷ್ಟ ಕಾಯಿದೆಗಳನ್ನು ಕೆಲವು ಗುರಿಗಳು ಮತ್ತು ಉದ್ದೇಶಗಳೊಂದಿಗೆ ಕಾನೂನುಬದ್ಧಗೊಳಿಸಲಾಗಿರುತ್ತದೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಇಂತಹ ವಿಷಯಗಳನ್ನು ಸ್ಪಷ್ಟಪಡಿಸದ ಹೊರತು, ನಾವು ಈ ಬಗೆಯ ಪ್ರಕರಣಗಳನ್ನು ಪರಿಗಣಿಸಲಾಗದು (ಇಬ್ಬರೂ ಪಕ್ಷಕಾರರು ಹದಿಹರೆಯದವರಾಗಿದ್ದು, ಮುಗ್ಧರಾಗಿರುವ ಪ್ರಕರಣಗಳನ್ನು ನಾವು ಇಲ್ಲಿ ಹೊರಗಿರುಸುತ್ತಿದ್ದೇವೆ)" ಎಂದು ನ್ಯಾಯಾಲಯ ಹೇಳಿದೆ.

'ಹದಿಹರೆಯದವರ ಗೌಪ್ಯತೆಯ ಹಕ್ಕು ಪ್ರಕರಣದಲ್ಲಿ ಪೋಕ್ಸೋ ಕಾಯಿದೆಯಡಿಯಲ್ಲಿ ಸಮ್ಮತಿಯ ಹದಿಹರೆಯದ ಸಂಬಂಧಗಳನ್ನು ಅಪರಾಧೀಕರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೇ 23 ರಂದು, ಹದಿಹರೆಯದವರ ನಡುವಿನ ಒಮ್ಮತದ ಪ್ರಣಯ ಸಂಬಂಧಗಳನ್ನು ಅಪರಾಧ ಮುಕ್ತಗೊಳಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿತ್ತು. ಅಮಿಕಸ್ ಕ್ಯೂರಿ ಮಾಡಿದ ಶಿಫಾರಸುಗಳನ್ನು ಪರಿಶೀಲಿಸಲು ಮತ್ತು ಅವರ ವರದಿಯ ಆಧಾರದ ಮೇಲೆ ರಾಷ್ಟ್ರೀಯ ಲೈಂಗಿಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಅದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

Also Read
ಆಸ್ತಿ ವಿವಾದ: ಸಹೋದರರ ವಿರುದ್ಧ ಸಹೋದರಿ ದಾಖಲಿಸಿದ್ದ ಪೋಕ್ಸೊ ದೂರು ರದ್ದುಪಡಿಸಿದ ಹೈಕೋರ್ಟ್‌

ಕೇಂದ್ರ ಸರ್ಕಾರ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್‌ ವಿನಾಯಿತಿಗಳನ್ನು ನೀಡುವ ಮೊದಲು ತಾನು ಸರ್ಕಾರದ ಸ್ಪಷ್ಟೀಕರಣದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದೆ.

ಪ್ರಸ್ತುತ ದಾವೆಗೆ ಸಂಬಂಧಿಸಿದಂತೆ ಇಬ್ಬರ ನಡುವಿನ ವಯಸ್ಸಿನ ಅಂತರ ಗಮನಿಸಿದ ಅದು ಪ್ರಕರಣ ರದ್ದುಗೊಳಿಸಲು ನಿರಾಕರಿಸಿತು.

Kannada Bar & Bench
kannada.barandbench.com