ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಿಂದ ತಮ್ಮನ್ನು ವಿಮುಕ್ತಗೊಳಿಸುವಂತೆ ಕೋರಿ ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದಿಂದ ವಿಮುಕ್ತಿ ಬಯಸಿ ತೇಲ್ತುಂಬ್ಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ವಿಶೇಷ ನ್ಯಾಯಾಲಯ ಮೇ 2024ರಲ್ಲಿ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿರುವ ಅರ್ಜಿ ಗುರುವಾರ ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಎಂ ಎಸ್ ಮೋದಕ್ ಅವರಿದ್ದ ಪೀಠದೆದುರು ವಿಚಾರಣೆಗೆ ಬಂದಾಗ ನ್ಯಾ. ಕೊತ್ವಾಲ್ ಅವರು ಪ್ರಕರಣ ಆಲಿಸುವುದರಿಂದ ಹಿಂದೆ ಸರಿದರು.
ತಾನು ಏಕಸದಸ್ಯ ಪೀಠದಲ್ಲಿದ್ದಾಗ ಸಾಕಷ್ಟು ಜಾಮೀನು ಅರ್ಜಿಗಳನ್ನು (ಭೀಮಾ ಕೋರೆಗಾಂವ್ ಪ್ರಕರಣಗಳಿಗೆ ಸಂಬಂಧಿಸಿದಂತೆ) ವಿಚಾರಣೆ ನಡೆಸಿರುವುದಾಗಿಯೂ ಈ ಪ್ರಕರಣವನ್ನು ಬೇರೆ ಪೀಠ ವಿಚಾರಣೆ ನಡೆಸುವುದು ಒಳಿತು ಎಂದು ನ್ಯಾಯಾಂಗ ಔಚಿತ್ಯ ಹೇಳುತ್ತದೆ ಎಂಬುದಾಗಿ ಅವರು ನುಡಿದರು.
2018ರ ಜನವರಿ 1ರ ಗಲಭೆಗೆ ಕಾರಣವಾದ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದ ತೇಲ್ತುಂಬ್ಡೆ ಅವರು ಎಲ್ಗಾರ್ ಪರಿಷತ್ ಕಾರ್ಯಕ್ರಮದ ಸಂಚಾಲಕರಲ್ಲಿ ಒಬ್ಬರು ಎಂಬುದು ಎನ್‌ಐಎ ಆರೋಪ. ಪ್ರಕರಣಕ್ಕೆ ಸಂಬಂಧಿಸಿದಂತೆ ತೇಲ್ತುಂಬ್ಡೆ ಅವರಿಗೆ ಜಾಮೀನು ದೊರೆತಿದೆ.
ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಎಂ (ಮಾವೋವಾದಿ) ಸಂಘಟನೆಯ ಸದಸ್ಯರಾಗಿದ್ದಾರೆ ಎಂದಿದ್ದ ವಿಶೇಷ ನ್ಯಾಯಾಲಯ ಜುಲೈ 2021 ರಲ್ಲಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಆದರೆ ಬಾಂಬೆ ಹೈಕೋರ್ಟ್ ನವೆಂಬರ್ 2022ರಲ್ಲಿ ಅವರಿಗೆ ಜಾಮೀನು ನೀಡಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು .