ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಹೈಕೋರ್ಟ್
ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಹೈಕೋರ್ಟ್ 
ಸುದ್ದಿಗಳು

ಕೌಶಲ್ಯಾಭಿವೃದ್ಧಿ ಹಗರಣ: ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶ ಹೈಕೋರ್ಟ್ ಜಾಮೀನು

Bar & Bench

ಕೌಶಲ್ಯಾಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ ಸೋಮವಾರ ಜಾಮೀನು ನೀಡಿರುವುದು ವರದಿಯಾಗಿದೆ.

ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ ಅಕ್ಟೋಬರ್ 31 ರಂದು ನಾಯ್ಡು ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತ್ತು.

"ಮಾನವೀಯ ನೆಲೆಯಲ್ಲಿ ಮತ್ತು ಅರ್ಜಿದಾರರ ಆರೋಗ್ಯ ಸ್ಥಿತಿ ಪರಿಗಣಿಸಿ, ಈ ನ್ಯಾಯಾಲಯ ಅರ್ಜಿದಾರರಿಗೆ ಆರೋಗ್ಯದ ಆಧಾರದ ಮೇಲೆ ತಾತ್ಕಾಲಿಕ ಜಾಮೀನು ನೀಡಲು ಒಲವು ತೋರಿದೆ. ಪ್ರಕರಣದ 37ನೇ ಆರೋಪಿಯ (ನಾಯ್ಡು), ಬಲಗಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅನುವು ಮಾಡಿಕೊಡಲಾಗುತ್ತಿದೆ" ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಕೌಶಲ್ಯಾಭಿವೃದ್ಧಿ ಯೋಜನೆಗಾಗಿ ಮೀಸಲಿಟ್ಟ ಸರ್ಕಾರಿ ಹಣವನ್ನು ನಕಲಿ ಬಿಲ್‌ ಸೃಷ್ಟಿಸಿ ವಿವಿಧ ಬೇನಾಮಿ ಕಂಪೆನಿಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದ ಹಗರಣ ಇದಾಗಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದ ನಾಯ್ಡು ಅವರನ್ನು ಸೆಪ್ಟೆಂಬರ್ 10 ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಪ್ರಕರಣದ ರದ್ದುಗೊಳಿಸಲು ಕೋರಿ ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೆಪ್ಟೆಂಬರ್ 22ರಂದು ನ್ಯಾಯಾಲಯ ವಜಾಗೊಳಿಸಿತ್ತು.

ನಾಯ್ಡು ಅವರ ವಿರುದ್ಧ ಆರೋಪಿಸಲಾದ ಕೃತ್ಯಗಳು ಅವರು ಮುಖ್ಯಮಂತ್ರಿಯಾಗಿ ಸದ್ಭಾವನೆಯಿಂದ ಹಾಗೂ ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಭಾಗವಾಗಿ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂಬುದಾಗಿ ನ್ಯಾಯಮೂರ್ತಿ ಕೆ ಶ್ರೀನಿವಾಸರೆಡ್ಡಿ ಆದೇಶದಲ್ಲಿ ದಾಖಲಿಸಿದ್ದರು.

ಆದ್ದರಿಂದ, ಆರೋಪಗಳ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು.