life imprisonment 
ಸುದ್ದಿಗಳು

ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸೆಷನ್ಸ್ ನ್ಯಾಯಾಲಯ

ಕ್ಷಮಾದಾನಕ್ಕೆ ಅರ್ಹತೆ ಪಡೆಯುವ ಮುನ್ನ ಆರೋಪಿ ಕನಿಷ್ಠ 30 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಮಹಿಳಾ ನ್ಯಾಯಾಲಯದ ನ್ಯಾಯಾಧೀಶೆ ಎಂ ರಾಜಲಕ್ಷ್ಮಿ ಅವರು ಆದೇಶಿಸಿದರು.

Bar & Bench

ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ 19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಆರೋಪಿ ಜ್ಞಾನಶೇಖರನ್‌ಗೆ ಚೆನ್ನೈನ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹90,000 ದಂಡ ವಿಧಿಸಿದೆ.

ಕ್ಷಮಾದಾನಕ್ಕೆ ಅರ್ಹತೆ ಪಡೆಯುವ ಮುನ್ನ ಆರೋಪಿ ಕನಿಷ್ಠ 30 ವರ್ಷ ಜೈಲು ಶಿಕ್ಷೆ ಅನುಭವಿಸಿರಬೇಕು ಎಂದು ಮಹಿಳಾ ನ್ಯಾಯಾಲಯದ ನ್ಯಾಯಾಧೀಶೆ ಎಂ ರಾಜಲಕ್ಷ್ಮಿ ಅವರು ಆದೇಶಿಸಿರುವುದು ವರದಿಯಾಗಿದೆ.

ಡಿಸೆಂಬರ್ 23ರಲ್ಲಿ ಚೆನ್ನೈ ಪೊಲೀಸರು ಜ್ಞಾನಶೇಖರನ್‌ನನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆಗಾಗಿ ಮೂವರು ಐಪಿಎಸ್‌ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿತ್ತು.

ಎಸ್‌ಐಟಿಯಲ್ಲಿ ಐಪಿಎಸ್ ಅಧಿಕಾರಿಗಳಾದ ಡಾ. ಭೂಕ್ಯಾ ಸ್ನೇಹ ಪ್ರಿಯಾ, ಆಯ್ಮನ್‌ ಜಮಾಲ್ ಹಾಗೂ ಎಸ್. ಬೃಂದಾ ಇದ್ದರು. ತನಿಖೆಯಲ್ಲಿನ ವಿವಿಧ ಲೋಪಗಳನ್ನು, ಅದರಲ್ಲಿಯೂ ಎಫ್‌ಐಆರ್ ಸೋರಿಕೆಯಿಂದಾಗಿ ಸಂತ್ರಸ್ತೆಯ ಗುರುತು ಬಹಿರಂಗಗೊಂಡಿದ್ದನ್ನು ಗಮನಿಸಿದ ನಂತರ ನ್ಯಾಯಾಲಯ ಎಸ್‌ಐಟಿ ರಚನೆಯ ಆದೇಶ ನೀಡಿತ್ತು.

ಪೊಲೀಸರು ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಆಕೆಗೆ  ₹25 ಲಕ್ಷ ಮಧ್ಯಂತರ ಪರಿಹಾರ ನೀಡುವಂತೆಯೂ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ವಿಶೇಷವೆಂದರೆ, ಎಫ್‌ಐಆರ್‌ ಸೋರಿಕೆಯಾದ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ ತಡೆ ಹಿಡಿದಿತ್ತು.