ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಹಬ್ಬಿರುವ ಅರಾವಳಿ ಗಿರಿಸಾಲಿನ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ವ್ಯಾಖ್ಯಾನದ ಹಿನ್ನೆಲೆಯಲ್ಲಿ ತಲೆದೋರಿರುವ ಸಮಸ್ಯೆಗಳು ಮತ್ತು ಅಲ್ಲಿ ಗಣಿಗಾರಿಕೆ ನಡೆಸುವುದರಿಂದ ಉಂಟಾಗುವ ಪರಿಸರ ಸಂಬಂಧಿ ಆತಂಕಗಳನ್ನು ಪರಿಶೀಲಿಸಲು ರಚಿಸಲಾದ ತಜ್ಞರ ಸಮಿತಿಯಲ್ಲಿ ಸೇರಿಸಬೇಕಾದ ವ್ಯಕ್ತಿಗಳ ಹೆಸರುಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಬುಧವಾರ ಅಮಿಕಸ್ ಕ್ಯೂರಿ ಮತ್ತು ವಿವಿಧ ವಕೀಲರ ಸಲಹೆ ಕೋರಿದೆ.
ತಜ್ಞರ ಸಮಿತಿ ನ್ಯಾಯಾಲಯದ ನೇರ ನಿಯಂತ್ರಣ ಮತ್ತು ಮೇಲ್ವಿಚಾರಣೆಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಿಜೆಐ ಸೂರ್ಯ ಕಾಂತ್ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರಿದ್ದ ಪೀಠ ಹೇಳಿದೆ.
ತಜ್ಞರ ಸಮಿತಿಯ ಭಾಗವಾಗಬಹುದಾದ ಖ್ಯಾತ ಪರಿಸರವಾದಿಗಳು, ಅರಣ್ಯ ತಜ್ಞರ ಹೆಸರುಗಳನ್ನು ವಿವರಿಸುವಂತೆ ನ್ಯಾಯಾಲಯವು ಅಮಿಕಸ್ ಕ್ಯೂರಿ ಕೆ ಪರಮೇಶ್ವರ್ , ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ ಮತ್ತು ಕೆ ಎಂ ನಟರಾಜ್ ಮತ್ತಿತರ ವಕೀಲರನ್ನು ಕೇಳಿದೆ.
ಅರಾವಳಿಗೆ ಸಂಬಂಧಿಸಿದಂತೆ ಸೀಮಿತ ವ್ಯಾಖ್ಯಾನವನ್ನುಯ 2025ರ ನವೆಂಬರ್ 20ರಂದು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಆ ಭಾಗದಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಲು ನಿರಾಕರಿಸಿತ್ತು. ಸ್ಥಳೀಯ ಭೂಮೇಲ್ಮೈನಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದ ಭೂಭಾಗವನ್ನು “ಅರಾವಳಿ ಬೆಟ್ಟ ಎಂದು ಪರಿಗಣಿಸುವಂತೆ ವ್ಯಾಖ್ಯಾನ ಹೇಳುತ್ತಿತ್ತು. ಇದರಿಂದ ಅರಾವಳಿಯ ಶೇ 90ಕ್ಕೂ ಹೆಚ್ಚು ಭಾಗದಲ್ಲಿ ಗಣಿಗಾರಿಕೆ ತಲೆ ಎತ್ತುವ ಆತಂಕ ಮನೆಮಾಡಿತ್ತು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಅಪರೂಪದ ಕ್ರಮವಾಗಿ ಡಿಸೆಂಬರ್ 29ರಂದು ತಾನೇ ನೀಡಿದ್ದ ಆದೇಶವನ್ನು ಹಿಂಪಡೆದಿತ್ತು.
ಪ್ರಕರಣದ ಇಂದಿನ ವಿಚಾರಣೆ ವೇಳೆ ರಾಜಸ್ಥಾನದ ರೈತರ ಪರವಾಗಿ ಹಾಜರಾದ ಹಿರಿಯ ವಕೀಲ ರಾಜು ರಾಮಚಂದ್ರನ್, ಕೆಲವು ಗಣಿಗಾರಿಕೆಗೆ ಪರವಾನಗಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಅವುಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಅರ್ಜಿದಾರ ಸಿಂಗ್ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಪರ್ವತ ಶ್ರೇಣಿಗಳಿಗೆ ಕಟ್ಟುನಿಟ್ಟಾದ ವ್ಯಾಖ್ಯಾನ ನೀಡುವುದು ವೈಜ್ಞಾನಿಕವಾಗಿ ಸರಿಯಲ್ಲ ಎಂದು ವಾದಿಸಿದರು.
ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾದ ಎಎಸ್‌ಜಿ ಕೆ ಎಂ ನಟರಾಜ್, ಅಕ್ರಮ ಗಣಿಗಾರಿಕೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ, ಡಿಸೆಂಬರ್ 29ರಂದು ನೀಡಲಾಗಿದ್ದ ಮಧ್ಯಂತರ ನಿರ್ದೇಶನಗಳು ಮುಂದುವರೆಯಲಿವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ನಂತರ ಪ್ರಕರಣ ಪರಿಶೀಲಿಸಲು ರಚಿಸಲಾಗುವ ಹೊಸ ತಜ್ಞರ ಸಮಿತಿಯಲ್ಲಿ ಸೇರಿಸಬೇಕಾದ ವ್ಯಕ್ತಿಗಳ ಹೆಸರುಗಳನ್ನು ಕೋರಿತು.