Dr. AM Singhvi and Supreme Court
Dr. AM Singhvi and Supreme Court

ಅರಾವಳಿ ಪ್ರಕರಣದಂತೆ ಆಗದಿರಲಿ ಬೀದಿನಾಯಿ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಸಿಂಘ್ವಿ ಎಚ್ಚರಿಕೆ

ಅರಾವಳಿ ಗಣಿಗಾರಿಕೆ ಕುರಿತ ಈಚಿನ ತೀರ್ಪನ್ನು ಉಲ್ಲೇಖಿಸಿದ ಸಿಂಘ್ವಿ ಅವರು ತಜ್ಞರ ಸಲಹೆ ಇಲ್ಲದೆ ನಡೆಯುವ ನ್ಯಾಯಾಂಗ ಹಸ್ತಕ್ಷೇಪ ಸರಿಪಡಿಸಲಾಗದ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆಯಿತ್ತರು.
Published on

ಬೀದಿ ನಾಯಿ ಹಾವಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕ್ಷೇತ್ರದಲ್ಲಿನ ತಜ್ಞರ ಅಭಿಪ್ರಾಯಪಡೆಯಬೇಕು. ಈ ಪ್ರಕರಣವೂ ಅರಾವಳಿ ಪ್ರಕರಣದಂತೆ ಅಂತ್ಯ ಕಾಣಬಾರದು ಎಂದು ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಅವರು ಶುಕ್ರವಾರ ಮನವಿ ಮಾಡಿದರು.

ವೈಜ್ಞಾನಿಕ ಪರಿಣತಿಯ ಮಾರ್ಗದರ್ಶನವಿಲ್ಲದೆ ಸದುದ್ದೇಶದಿಂದ ಮಾಡಿದ ನ್ಯಾಯಾಂಗ ಹಸ್ತಕ್ಷೇಪವೂ ಮರಳಿಸಲಾಗದ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು. ಇತ್ತೀಚೆಗೆ ಅರಾವಳಿ ಗಿರಿಸಾಲುಗಳ ಕುರಿತ ತೀರ್ಪಿನಲ್ಲಿ ಕ್ಷೇತ್ರ ತಜ್ಞರ ಅಭಿಪ್ರಾಯ ಪಡೆಯದೆ ಇದ್ದುದರಿಂದ ಅದು ಮರುಪರಿಶೀಲನೆಗೆ ಒಳಗಾಗಬೇಕಾಯಿತು ಎಂದರು.

Also Read
ನಾಯಿಗಳು ಭೀತಿಗೊಂಡವರ ಮೇಲೆ ಎರಗುತ್ತವೆ: ಸುಪ್ರೀಂ ಕೋರ್ಟ್

‘ಆಲ್ ಕ್ರೇಚರ್ಸ್ ಗ್ರೇಟ್ ಅಂಡ್ ಸ್ಮಾಲ್ʼ ಎಂಬ ಪ್ರಾಣಿ ದಯಾ ಸಂಘದ ಪರ ಹಾಜರಾದ ಅವರು ಪ್ರಕರಣದಲ್ಲಿ ಸಹಾಯ ಮಾಡಲು ನ್ಯಾಯಾಲಯ ನೇಮಿಸಿರುವ ಅಮಿಕಸ್‌ ಕ್ಯೂರಿ ಇದ್ದರೂ ಅವರು ತಜ್ಞರಲ್ಲ. ನ್ಯಾಯಾಲಯ ಕ್ಷೇತ್ರ ತಜ್ಞರಿಂದಲೇ ಅಭಿಪ್ರಾಯಪಡೆಯಬೇಕಾಗುತ್ತದೆ ಎಂದರು.

ತಜ್ಞರ ಸಲಹೆ ಇಲ್ಲದೆ ನಡೆಯುವ ನ್ಯಾಯಾಂಗ ಹಸ್ತಕ್ಷೇಪ ಸರಿಪಡಿಸಲಾಗದ ಪರಿಣಾಮಗಳಿಗೆ ಕಾರಣವಾಗಬಹುದು. ಬೀದಿ ನಾಯಿಗಳ ಕುರಿತಂತೆ ಈಗಾಗಲೇ ಸಮಗ್ರ ಕಾನೂನು ಜಾರಿಯಲ್ಲಿದೆ. ಶಾಸನಾತ್ಮಕ ಮಟ್ಟದ ವಿಚಾರಗಳಲ್ಲಿ ಮಾತ್ರ ನ್ಯಾಯಾಲಯ ಹಸ್ತಕ್ಷೇಪ ಮಾಡಬೇಕು ಎಂದು ಅವರು ವಿನಂತಿಸಿದರು.

ಕ್ಷೇತ್ರ ತಜ್ಞರ ಕೊರತೆಯಿಂದಾಗಿಯೇ ಅರಾವಳಿ ಪರ್ವತ ಸಾಲುಗಳ ಕುರಿತ ತೀರ್ಪನ್ನು ಮರುಪರಿಶೀಲಿಸಬೇಕಾಯಿತು. ಇಂತಹ ತಪ್ಪು ಈ ಪ್ರಕರಣದಲ್ಲಿಯೂ ಮರುಕಳಿಸಬಾರದು ಎಂದು ಅವರು ಹೇಳಿದರು. ತಾತ್ಕಾಲಿಕ ಆದೇಶಗಳು ಅನೇಕ ಬಾರಿ ಅಂತಿಮ ತೀರ್ಪಿನ ಸ್ವರೂಪ ಪಡೆದುಕೊಳ್ಳುತ್ತವೆ ಅವುಗಳಲ್ಲಿ ಬದಲಾವಣೆ ಮಾಡುವುದು ಕಷ್ಟ. ವೆಚ್ಚ, ಮೂಲಸೌಕರ್ಯ ನಿರ್ಮಾಣ ಮತ್ತು ಭೌತಿಕ ಸ್ಥಳಾಂತರಕ್ಕೆ ಸಂಬಂಧಿಸಿದ ತಾತ್ಕಾಲಿಕ ಆದೇಶಗಳಿಂದಾಗಿ ಅವುಗಳನ್ನು ಪ್ರಾಯೋಗಿಕವಾಗಿ ಮತ್ತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ನುಡಿದರು.

Also Read
ಅರಾವಳಿ ಕುರಿತ ತನ್ನದೇ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ಹಿರಿಯ ವಕೀಲ ರಾಜಶೇಖರ್‌ ರಾವ್‌ ವಾದ ಮಂಡಿಸಿ ನ್ಯಾಯಾಲಯ ನೀಡಿದ್ದ ಹಿಂದಿನ ತಾತ್ಕಾಲಿಕ ನಿರ್ದೇಶನಗಳು ಪ್ರಮಾಣಾನುಗುಣವಾಗಿ ಇವೆಯೇ ಎಂದು ಪ್ರಶ್ನಿಸಿದರು.

ಬೀದಿ ನಾಯಿಗಳ ವಿಚಾರವಾಗಿ ಪ್ರಾಣಿ ಜನನ ನಿಯಂತ್ರಣ ನಿಯಮಾವಳಿ ಜಾರಿಗೆ ತರುವಲ್ಲಿ ರಾಜ್ಯಗಳು ವಿಫಲವಾಗಿವೆ ಎಂದು ಹಿರಿಯ ನ್ಯಾಯವಾದಿ ಶಾದನ್‌ ಫರಾಸತ್‌ ಬೆರಳು ಮಾಡಿದರು.

ಇದೇ ವೇಳೆ ಸಮಸ್ಯೆಗೆ ಸಾಂಸ್ಥಿಕ ಪರಿಹಾರ ಅಗತ್ಯ ಎಂದು ಹಿರಿಯ ವಕೀಲೆ ಮಾಧವಿ ದಿವಾನ್‌ ತಿಳಿಸಿದರು. ದತ್ತಾಂಶ ಮೇಲ್ವಿಚಾರಣೆಗಾಗಿ ಡ್ಯಾಶ್‌ ಬೋರ್ಡ್‌ ಹಾಗೂ ಸಂಚಾರಿ ಸಂತಾನಹರಣ ಕೇಂದ್ರಗಳ ಸ್ಥಾಪನೆಯಾಗಬೇಕು ಎಂದು ಸಲಹೆ ನೀಡಿದರು.

ವೈಜ್ಞಾನಿಕ ವಿಧಾನಗಳ ಮೂಲಕ ದಾಳಿಕೋರ ಶ್ವಾನಗಳನ್ನು ಗುರುತಿಸುವ ಅಗತ್ಯವಿದೆ ಎಂದು  ಹಿರಿಯ ವಕೀಲ ಪ್ರಜ್ಞಾನ ಪ್ರದೀಪ್ ಶರ್ಮಾ ಅಭಿಪ್ರಾಯಪಟ್ಟರು.

ಹಿರಿಯ ವಕೀಲೆ ಝಲ್ ಅಂಧ್ಯರುಜಿನ ಅವರು ವಾದ ಮಂಡಿಸಿ ಬೀದಿ ನಾಯಿಗಳನ್ನು ತೆರವುಗೊಳಿಸುವುದಕ್ಕಿಂತಲೂ ಸಂತಾನಹರಣ ಚಿಕಿತ್ಸೆಯೇ ದೀರ್ಘಕಾಲೀನ ಮತ್ತು ಸ್ಥಿರ ಪರಿಹಾರ ಎಂದರು.

ಆದರೆ, ಪೀಠ ಅಂತರರಾಷ್ಟ್ರೀಯ ಹೋಲಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿತು. ಭಾರತೀಯ ಪರಿಸ್ಥಿತಿಯ ಪ್ರಮಾಣ ಮತ್ತು ಸಂಕೀರ್ಣತೆಯತ್ತ ಅದು ಬೆರಳು ಮಾಡಿತು. ಜನವರಿ 13ರಂದು ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com