Karnataka HC and 2021

 
ಸುದ್ದಿಗಳು

[ಹಿನ್ನೋಟ] ಕರ್ನಾಟಕ ಹೈಕೋರ್ಟ್‌ 2021ರಲ್ಲಿ ಹೊರಡಿಸಿದ ಮಹತ್ವದ ತೀರ್ಪು, ಆದೇಶಗಳು

ಸಾಕಷ್ಟು ವಿಪ್ಲವಗಳಿಗೆ ಕಾರಣವಾದ 2021ರಲ್ಲಿ ಕರ್ನಾಟಕ ಹೈಕೋರ್ಟ್‌ ದೃಷ್ಟಿಯಿಂದ ಸಾಕಷ್ಟು ಮಹತ್ವದ ಮತ್ತು ಆಶಾದಾಯಕ ಬೆಳವಣಿಗೆಗಳು ನಡೆದಿವೆ. ಸುಪ್ರೀಂ ಕೋರ್ಟ್‌ ನ್ಯಾ. ಮೋಹನ್‌ ಶಾಂತನಗೌಡರ್‌ ಅಗಲಿಕೆಯು ಕಹಿ ನೆನಪಾಗಿ ದಾಖಲಾಗಿದೆ.

Siddesh M S

ಕೋವಿಡ್‌ ನಡುವೆಯೂ ವರ್ಚುವಲ್‌ ವಿಚಾರಣೆಯ ಮೂಲಕ ನ್ಯಾಯದಾನ ಪ್ರಕ್ರಿಯೆಗೆ ಯಾವುದೇ ತಡೆಯಾಗದಂತೆ ಎಚ್ಚರವಹಿಸಿದ ಹೈಕೋರ್ಟ್‌ಗಳ ಸಾಲಿನಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಮಹತ್ವದ ಸ್ಥಾನವಿದೆ. ವರ್ಚುವಲ್‌ ವಿಚಾರಣೆಯ ಮೂಲಕ ಅತಿಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ ಕೀರ್ತಿಗೆ ಮದ್ರಾಸ್‌ ಹೈಕೋರ್ಟ್‌ ನಂತರದ ಸ್ಥಾನಕ್ಕೆ ಪಾತ್ರವಾಗಿರುವುದು ಕರ್ನಾಟಕ ಹೈಕೋರ್ಟ್‌ ಹೆಚ್ಚುಗಾರಿಕೆ.

ಈ ಹಿಂದೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯುವ ಮೂಲಕ ಒಂದೇ ಬಾರಿಗೆ ಇಬ್ಬರು ನ್ಯಾಯಮೂರ್ತಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟ ಹಿರಿಮೆಗೂ ಕರ್ನಾಟಕ ಹೈಕೋರ್ಟ್‌ ಭಾಜನವಾಗಿದೆ. 2027ರಲ್ಲಿ ನ್ಯಾ. ಬಿ ವಿ ನಾಗರತ್ನ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಇತಿಹಾಸ ಬರೆಯುವ ಸಾಧ್ಯತೆಗೆ 2021 ಮುನ್ನುಡಿ ಬರೆದಿದೆ.

ಕರ್ನಾಟಕ ಹೈಕೋರ್ಟ್‌ ಪ್ರಸಕ್ತ ವರ್ಷ ನ್ಯಾ. ಓಕಾ ಮತ್ತು ಹಾಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ರೂಪದಲ್ಲಿ ಇಬ್ಬರು ಸಿಜೆಗಳು ಹಾಗೂ ನ್ಯಾ. ಸತೀಶ್‌ ಚಂದ್ರ ಶರ್ಮಾ ಅವರ ರೂಪದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯವರನ್ನು ಕಂಡಿದೆ.

Karnataka HC Chief Justice Ritu Raj Awasthi, Former CJ A S Oka, Former Acting CJ Satish Chandra Sharma

ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿಗಳಾಗಿದ್ದ ನ್ಯಾ. ಸತೀಶ್‌ ಚಂದ್ರ ಶರ್ಮಾ ಅವರು ತೆಲಂಗಾಣ ಹೈಕೋರ್ಟ್‌ಗೆ ಮತ್ತು ಕನ್ನಡಿಗರೇ ಆದ ನ್ಯಾ. ಅರವಿಂದ್‌ ಕುಮಾರ್‌ ಅವರು ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ಮೂಲಕ ಮತ್ತೊಂದು ಮೈಲಿಗಲ್ಲನ್ನೂ ಕರ್ನಾಟಕ ಹೈಕೋರ್ಟ್‌ ಸಾಧಿಸಿದೆ. ಇದೆಲ್ಲದರ ಮಧ್ಯೆ, ಕರ್ನಾಟಕದವರೇ ಆದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಮೋಹನ್‌ ಶಾಂತನಗೌಡರ್‌ ಅವರು ಅಕಾಲಿಕವಾಗಿ ನಿಧನ ಹೊಂದಿದ ವಿಷಾದದ ಘಟನೆಯೂ ನಡೆಯಿತು.

ಇನ್ನು ದೇಶದ ಪ್ರತಿಷ್ಠಿತ ವಕೀಲರ ಸಂಘಗಳ ಪೈಕಿ ಒಂದಾದ ಬೆಂಗಳೂರು ವಕೀಲರ ಸಂಘಕ್ಕೆ ಚುನಾವಣೆ ನಡೆದು ನೂತನ ಪದಾಧಿಕಾರಿಗಳು ಈ ವರ್ಷಾಂತ್ಯದಲ್ಲಿ ಅಧಿಕಾರ ಹಿಡಿದಿದ್ದಾರೆ. ಸಾಕಷ್ಟು ವಿಪ್ಲವಗಳಿಗೆ ಕಾರಣವಾದ 2021ರಲ್ಲಿ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ಹಲವು ಮಹತ್ವದ ತೀರ್ಪು, ಆದೇಶಗಳ ಸಂಕ್ಷಿಪ್ತ ರೂಪವನ್ನು ಇಲ್ಲಿ ನೀಡಲಾಗಿದೆ.

ಬಾಬಾಬುಡನ್ ಗಿರಿ ವಿವಾದ: ಮುಜಾವರ್ ನೇಮಕ ರದ್ದು

ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ ಮಾಡಿ 2018ರ ಮಾರ್ಚ್‌ 19ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಅವರ ಪೀಠ ರದ್ದುಪಡಿಸಿತು.

ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಅವರನ್ನು ನೇಮಕ ಮಾಡಿ 2018ರ ಮಾರ್ಚ್‌ 19ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ 2018ರ ಏಪ್ರಿಲ್‌ನಲ್ಲಿ ಹೈಕೋರ್ಟ್‌ಗೆ ತಕರಾರು ಮನವಿ ಸಲ್ಲಿಸಿತ್ತು.

ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ

ರಾಜ್ಯ ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದು, ದೇಶದಲ್ಲೇ ಈ ಕ್ರಮ ಕೈಗೊಂಡ ಮೊದಲ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಿದೆ.

ರಾಜ್ಯ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು) 1977ಕ್ಕೆ ತಿದ್ದುಪಡಿ ಮಾಡುವ ಮೂಲಕ ಮೀಸಲಾತಿಗೆ ಅನುವು ಮಾಡಿಕೊಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ತಿಳಿಸಿತ್ತು.

“ರಾಜ್ಯ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು) 1977ಕ್ಕೆ ತಿದ್ದುಪಡಿ ಮಾಡಿ ರಾಜ್ಯ ನಾಗರಿಕ ಸೇವೆಗಳ ನೇಮಕಾತಿ ತಿದ್ದುಪಡಿ (ನಿಯಮಗಳು) 2021 ತಂದಿರುವುದನ್ನು ನಾವು ಗಮನಿಸಿದ್ದು, ಇದರಲ್ಲಿ ನಿಯಮ 9ಕ್ಕೆ ಉಪ ನಿಯಮ 1 (ಡಿ) ಸೇರ್ಪಡೆಗೊಳಿಸಲಾಗಿದೆ. ಈ ಉಪನಿಯಮ 1ಡಿ ತೃತೀಯ ಲಿಂಗಿಗಳಿಗೆ ಶೇ. 1ರಷ್ಟು ಸಮತಲ ಮೀಸಲಾತಿ ಕಲ್ಪಿಸುತ್ತದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ.

ವರ್ಚುವಲ್ ಕಲಾಪದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ ತೀರ್ಪು

ಕೋವಿಡ್‌- 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅನಿವಾರ್ಯವಾದ (ವರ್ಚುವಲ್‌ ಹಿಯರಿಂಗ್) ಬಗ್ಗೆ ವಕೀಲ ಸಮುದಾಯ ಹಿಂದು-ಮುಂದು ನೋಡುತ್ತಿರುವಾಗಲೇ ಕರ್ನಾಟಕ ಹೈಕೋರ್ಟ್‌ ಹೊಸ ದಾಖಲೆ ಸೃಷ್ಟಿಸಿತ್ತು. ಆರು ಸಾಲ ನಿಧಿ ಯೋಜನೆಗಳನ್ನು ರದ್ದುಪಡಿಸಿರುವ ಮ್ಯೂಚುವಲ್‌ ಫಂಡ್‌ ಸಂಸ್ಥೆ ಫ್ರಾಂಕ್ಲಿನ್ ಟೆಂಪಲ್ಟನ್‌ನ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಲ್ಲಿ ಕೆಲವನ್ನು 25 ದಿನಗಳ ಕಾಲ ವೀಡಿಯೊ ಕಾನ್ಫರೆನ್ಸ್ ವಿಚಾರಣೆ ನಡೆಸಿ 333 ಪುಟಗಳ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತ್ತು.

ಭಾರತದ ಒಂಬತ್ತನೇ ಅತಿದೊಡ್ಡ ಹೂಡಿಕೆ ಸಂಸ್ಥೆಯಾದ ಫ್ರಾಂಕ್ಲಿನ್ ಟೆಂಪಲ್ಟನ್ ಕಳೆದ ಏಪ್ರಿಲ್‌ ತಿಂಗಳಲ್ಲಿ ಸುಮಾರು ರೂ 28,000 ಕೋಟಿ ಮೊತ್ತದ ಫ್ರಾಂಕ್ಲಿನ್‌ ಇಂಡಿಯಾದ ಆರು ಹೂಡಿಕೆ ಯೋಜನೆಗಳಾದ ಅಲ್ಪಾವಧಿ ನಿಧಿ, ಡೈನಾಮಿಕ್‌ ಸಂಚಯ ನಿಧಿ, ಕ್ರೆಡಿಟ್‌ ರಿಸ್ಕ್‌ ಫಂಡ್‌, ಅಲ್ಪಾವಧಿ ಆದಾಯ ಯೋಜನೆ, ಅತಿಚಿಕ್ಕ ಬಾಂಡ್‌ ನಿಧಿಯನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು. ಸಂಸ್ಥೆಯ ಈ ನಿರ್ಧಾರ ಸುಮಾರು ೩ ಲಕ್ಷ ಹೂಡಿಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಕೋವಿಡ್‌ -19 ಹಿನ್ನೆಲೆಯಲ್ಲಿ ನಗದು ಕೊರತೆ ಉಂಟಾಗಿರುವ ಕಾರಣ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿತ್ತು.

ದೆಹಲಿ, ಗುಜರಾತ್‌ ಹಾಗೂ ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು‌ ಸುಪ್ರೀಂಕೋರ್ಟ್‌ ಕಳೆದ ಜೂನ್‌ನಲ್ಲಿ ಕರ್ನಾಟಕ ಹೈಕೋರ್ಟಿಗೆ ವರ್ಗಾಯಿಸಿತ್ತು. ಸುಪ್ರೀಂಕೋರ್ಟ್‌ ಮೂರು ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸುವಂತೆ ಸೂಚಿಸಿದ್ದರಿಂದ ಪೀಠ ಶನಿವಾರ ಮತ್ತು ರಜಾದಿನಗಳಲ್ಲಿ ಕೂಡ ವಿಚಾರಣೆ ನಡೆಸಿತ್ತು. ಆಗಸ್ಟ್ 12 ರಿಂದ ಆರಂಭವಾದ ವಿಚಾರಣಾ ಪ್ರಕ್ರಿಯೆ ಸೆ 24 ರಂದು ಅಂತ್ಯಗೊಂಡಿತ್ತು.

ಶಿರೂರು ಮಠಕ್ಕೆ ಬಾಲ ಸನ್ಯಾಸಿ ಪೀಠಾಧಿಪತಿಯಾಗಬಹುದು

ಉಡುಪಿಯ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ಮಾಡಿರುವುದನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ಅಪ್ರಾಪ್ತರು ಸ್ವಾಮಿಯಾಗಬಾರದು ಎಂಬುದಕ್ಕೆ ಕಾನೂನಿನ ತೊಡಕು ಇಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿತ್ತು.

ಶಿರೂರು ಮಠದ ಪೀಠಾಧಿಪತಿಯನ್ನಾಗಿ 16 ವರ್ಷದ ಅನಿರುದ್ಧ ಸರಳತ್ತಾಯ (ಈಗ ವೇದವರ್ಧನ ತೀರ್ಥ) ಅವರನ್ನು ನೇಮಕ ಮಾಡಿದ್ದರ ಸಿಂಧುತ್ವ ಪ್ರಶ್ನಿಸಿ ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿತ್ತು.

Justice Mohan Shantanagoudar

ಕೊಡವರಿಗೆ ಶಸ್ತ್ರಾಸ್ತ್ರ ಹೊಂದಲು ಪರವಾನಗಿಯಿಂದ ವಿನಾಯಿತಿ

ಶಸ್ತ್ರಾಸ್ತ್ರಗಳನ್ನು ಒಯ್ಯಲು ಹಾಗೂ ಹೊಂದಲು ಶಸ್ತ್ರಾಸ್ತ್ರ ಕಾಯಿದೆ, 1959ರ ಅಡಿ ಕೊಡವರಿಗೆ ನೀಡಲಾಗಿರುವ ವಿನಾಯಿತಿಯ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿಹಿಡಿದಿತ್ತು.

“ಕೊಡವ ಸಮುದಾಯವು, ಯೋಧ ಸಮುದಾಯವಾಗಿದ್ದು ವಿನಾಯಿತಿಯ ಸವಲತ್ತನ್ನು ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಅನುಭವಿಸುತ್ತಿದೆ. ಅದೇ ರೀತಿ ಜಮ್ಮಾ ಹಿಡವಳಿದಾರರು ಸಹ ಸ್ವಾತಂತ್ರ್ಯಪೂರ್ವದಿಂದಲೂ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. ಹತ್ತು ವರ್ಷಗಳ ಅವಧಿಗೆ ಈ ವಿನಾಯಿತಿಯನ್ನು ಸೂಕ್ತ ರೀತಿಯಲ್ಲಿ ನೀಡಲಾಗಿದೆ. ಅನಿಯಮಿತ ಕಾಲದವರೆಗೇನೂ ವಿನಾಯಿತಿಯನ್ನು ನೀಡಲಾಗಿಲ್ಲ. ನೀಡಲಾಗಿರುವ ವಿನಾಯಿತಿಯು ಸಹ ಕೆಲವೊಂದು ನಿಬಂಧನೆ, ಷರತ್ತುಗೊಳಪಟ್ಟಿದೆ. ಹೀಗಾಗಿ, ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ” ಎಂದು ವಿಭಾಗೀಯ ಪೀಠ ಹೇಳಿತ್ತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಒಪ್ಪಿಗೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಶ್ನಿಸಿ ವಿಮಾನ ನಿಲ್ದಾಣಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿತ್ತು. ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ನೀತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದಿದ್ದ ಕೇರಳ ಹೈಕೋರ್ಟ್‌ ನಿರ್ಧಾರವನ್ನು ಆಧರಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ಮನವಿಯನ್ನು ವಜಾ ಮಾಡಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಸ್ತು

ಕೋವಿಡ್‌ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಪರೀಕ್ಷೆ ನಡೆಸದಿದ್ದರೆ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದಾಗಿತ್ತು. ಇದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮನೋವೇದನೆಗೆ ಕಾರಣವಾಗಿತ್ತು. ಅಳೆದು ತೂಗಿ ಜುಲೈ 19 ಮತ್ತು 20ರಂದು 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರದ ನಿರ್ಧರಿಸಿತ್ತು. ಈ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ಎತ್ತಿ ಹಿಡಿದಿತ್ತು.

ʼಹಲವು ಪೋಷಕರು ಒಂದೇ ಮಗುವನ್ನು ಹೊಂದಿದ್ದಾರೆ. ಆ ಮಗುವಿಗೆ ಏನಾದರೂ ಆದರೆ ಆ ಮಗುವಿನ ಜೀವವನ್ನು ಸರ್ಕಾರ ಮರಳಿ ನೀಡುವುದೇ? ಇದನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ರದ್ದುಗೊಳಿಸುವುದು ಅಗತ್ಯʼ ಎಂದು ಕೋರಿದ್ದ ಅರ್ಜಿದಾರರ ಮನವಿಯನ್ನು ನ್ಯಾಯಾಲಯ ವಜಾ ಮಾಡಿತ್ತು.

'ಕಾವೇರಿ ಕಾಲಿಂಗ್‌'ಗೆ ದೇಣಿಗೆ ಸಂಗ್ರಹಕ್ಕೆ ಒಪ್ಪಿಗೆ

ಅಧ್ಯಾತ್ಮ ಗುರು ಜಗ್ಗಿ ವಾಸುದೇವ್‌ ನೇತೃತ್ವದ ಇಶಾ ಫೌಂಡೇಶನ್‌ ಸಂಸ್ಥೆಯ ಮಹತ್ವಾಕಾಂಕ್ಷಿ ಕಾವೇರಿ ಕಾಲಿಂಗ್‌ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿತ್ತು.

“ಅರಣ್ಯ ನಾಶದಿಂದ ಸಂಭವಿಸುತ್ತಿರುವ ವಿಪತ್ತು ಹಾಗೂ ಅರಣ್ಯದ ಅಗತ್ಯತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಸ್ತೃತವಾಗಿ ಚರ್ಚಿಸಿದೆ. ಹೀಗಾಗಿ, ಮಾನವ ಕುಲ ಮತ್ತು ಭೂಮಿಯನ್ನು ರಕ್ಷಿಸಲು ಇರುವ ಏಕೈಕ ಅವಕಾಶ ಅರಣ್ಯೀಕರಣ. ಈ ನೆಲೆಯಲ್ಲಿ ಮೂರನೇ ಪ್ರತಿವಾದಿಯಾದ ಇಶಾ ಔಟ್‌ರೀಚ್‌ ಕೈಗೊಂಡಿರುವ ಅರಣ್ಯೀಕರಣದ ಕಾರ್ಯಕ್ರಮಕ್ಕೆ ನಾವು ಮೆಚ್ಚುಗೆಯನ್ನು ದಾಖಲಿಸಬೇಕಾಗುತ್ತದೆ. ಇದನ್ನು ಪ್ರಶ್ನಿಸಿರುವ ಅರ್ಜಿ ವಜಾಕ್ಕೆ ಅರ್ಹವಾಗಿದೆ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿತ್ತು.

ಅಮೆಜಾನ್‌, ಫ್ಲಿಪ್‌ಕಾರ್ಟ್‌ ವಿರುದ್ಧದ ಸಿಸಿಐ ತನಿಖೆಗೆ ಸಮ್ಮತಿ

ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ತಮ್ಮ ವಿರುದ್ಧ ನಡೆಸಲು ಉದ್ದೇಶಿಸಿದ್ದ ತನಿಖೆ ಪ್ರಶ್ನಿಸಿ ಇ- ಕಾಮರ್ಸ್‌ ದೈತ್ಯರಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಸ್ಪರ್ಧಾ ಕಾಯಿದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸಿಸಿಐ ಈ ಎರಡೂ ಕಂಪೆನಿಗಳ ವಿರುದ್ಧ ತನಿಖೆಗೆ ಮುಂದಾಗಿತ್ತು. ಎಲ್ಲಾ ಅರ್ಜಿಗಳನ್ನು ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ನೇತೃತ್ವದ ಪೀಠವು ವಜಾ ಮಾಡಿತ್ತು. ಈ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು.

Felicitation To Justices A S Oka and B V Nagaratna on their elevation to SC

ದೇಶದ ಆರ್ಥಿಕತೆಗೆ ಮಾರಕವಾಗುವ ಪ್ರಕರಣದಲ್ಲಿ ಮಧ್ಯಪ್ರವೇಶ ಅಸಾಧ್ಯ

“ದೇಶದ ಆರ್ಥಿಕತೆಗೆ ಮಾರಕವಾಗುವ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಲಾಗದು” ಎಂದು ಸ್ಪಷ್ಟಪಡಿಸಿದ್ದ ಕರ್ನಾಟಕ ಹೈಕೋರ್ಟ್‌, ಹೊನ್ನಾವರ ಬಂದರು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ವಿಲೇವಾರಿ ಮಾಡಿತ್ತು.

“ಆಕ್ಷೇಪಿತ ಬಂದರಿನ ಬೇಡಿಕೆ ಮತ್ತು ಅಗತ್ಯವನ್ನು ಆಧರಿಸಿ ಸ್ಥಳವನ್ನು ನಿರ್ಧರಿಸಲಾಗಿರುತ್ತದೆ. ಅಗತ್ಯವನ್ನು ಆಧರಿಸಿ ಎಲ್ಲಿ ಬಂದರು ನಿರ್ಮಿಸಬೇಕು ಎಂಬುದನ್ನು ತಜ್ಞರು ನಿರ್ಧರಿಸುತ್ತಾರೆ. ಬಂದರಿನ ಅಭಿವೃದ್ಧಿಗೆ ಭೋಗ್ಯಕ್ಕೆ ನೀಡಲಾಗಿರುವ ಪ್ರದೇಶವು ಕಡಲಾಮೆಗಳು ಗೂಡು ಕಟ್ಟುವ ಸ್ಥಳ ಎಂದು ಅರ್ಜಿದಾರರು ಹೇಳಿದ್ದಾರೆ. ಎನ್‌ಸಿಎಸ್‌ಸಿಎಂ ಸರ್ವೆ ವರದಿಯ ಪ್ರಕಾರ ಕಡಲಾಮೆಯ ಗೂಡು, ಕಡಲಾಮೆ ಅಥವಾ ಸತ್ತ ಕಡಲಾಮೆ ಪತ್ತೆಯಾಗಲಿಲ್ಲ ಎಂದು ಹೇಳಲಾಗಿದೆ. ಅದಾಗ್ಯೂ, ಕಡಲಾಮೆಗಳು ಗೂಡುಕಟ್ಟುವುದು ಮತ್ತು ಕಣ್ಮರೆಯಾಗುತ್ತಿರುವ ಜೀವಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಖಾತರಿವಹಿಸುವುದು ಸಂಬಂಧಪಟ್ಟ ಇಲಾಖೆಗಳ ಕೆಲಸವಾಗಿದೆ” ಎಂದು ಪೀಠ ಹೇಳಿತ್ತು.

ಚಾಮರಾಜನಗರ ದುರಂತ: ಸತ್ಯಶೋಧನೆಗೆ ನ್ಯಾ. ಎ ಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ರಚನೆ

ಆಮ್ಲಜನಕದ ಕೊರತೆಯಿಂದ ಚಾಮರಾಜನಗರ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 24 ಕೋವಿಡ್‌ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಭವಿಸಿದಂತೆ ಸತ್ಯಶೋಧನೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯನ್ನು ಕರ್ನಾಟಕ ಹೈಕೋರ್ಟ್ ರಚಿಸಿತ್ತು. “ಸಮಿತಿಯ ಅಂತಿಮ ಉದ್ದೇಶವು ಸತ್ಯಶೋಧನಾ ತನಿಖೆ ಕೈಗೊಳ್ಳುವುದಾಗಿದೆ. ಚಾಮರಾಜನಗರದಲ್ಲಿ ಸಂಭವಿಸಿದಂತಹ ಘಟನೆಗಳು ಮರುಕಳಿಸದಿರಲು ಇದರಿಂದ ರಾಜ್ಯ ಸರ್ಕಾರಕ್ಕೆ ಉಪಯೋಗವಾಗಲಿದೆ,” ಎಂದು ಸಮಿತಿಯ ಉದ್ದೇಶವನ್ನು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು.

ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನ್ಯಾ. ಎ ಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿಗೆ ತಮ್ಮ ಸುಪರ್ದಿನಲ್ಲಿರುವ ಘಟನೆಗೆ ಸಂಭವಿಸಿದ ದಾಖಲೆಗಳನ್ನು ಲಭ್ಯವಾಗಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಅರವಿಂದ್‌ ಕುಮಾರ್‌ ಪೀಠವು ಹೇಳಿತ್ತು.