ಸುದ್ದಿಗಳು

ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳ್ಳುವ ಅವಧಿ ಬಗ್ಗೆ ಮಾಹಿತಿ ಪಡೆಯುವಂತೆ ಸೂಚಿಸಿದ ಸುಪ್ರೀಂ

Bar & Bench

ಲಖಿಂಪುರ್‌ ಖೇರಿ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಲು ಇನ್ನು ಎಷ್ಟು ಸಮಯ ಬೇಕಾಗುತ್ತದೆ ಎಂದು ಲಖಿಂಪುರ್ ಖೇರಿಯಲ್ಲಿರುವ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಿಂದ ಮಾಹಿತಿ ಪಡೆಯುವಂತೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ರಿಜಿಸ್ಟ್ರಾರ್‌ಗೆ ಸೂಚಿಸಿದೆ.

ರೈತರು ಸೇರಿದಂತೆ 8 ಜನರ ಹತ್ಯೆಗೆ ಕಾರಣವಾಗಿದ್ದ 2021ರ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಆಶಿಶ್ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

"ಇತರೆ ಬಾಕಿ ಇರುವ ಅಥವಾ ಆದ್ಯತೆಯ ಪ್ರಕರಣಗಳ ವಿಚಾರಣೆಗೆ ತೊಡಕಾಗದಂತೆ ಈ ಪ್ರಕರಣದ ವಿಚಾರಣೆ ಎಷ್ಟು ಸಮಯ  ತೆಗೆದುಕೊಳ್ಳುತ್ತದೆ ಎಂದು ಲಖಿಂಪುರ್ ಖೇರಿಯ ಪ್ರಥಮ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಿಂದ ಮಾಹಿತಿ ಪಡೆಯುವಂತೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಲಾಗಿದೆ. ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಯದೇ ಇರುವುದರಿಂದ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಅಂದಾಜು ವೇಳಾಪಟ್ಟಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಸುಮಿತ್‌ ಜೈಸ್ವಾಲ್‌ ಎಂಬುವವರು ದೂರು ಸಲ್ಲಿಸಿದ್ದು ಈ ಸಂಬಂಧ ನಡೆಯುತ್ತಿರುವ ತನಿಖೆ, ವಿಚಾರಣೆಯ ಪ್ರಗತಿ ಬಗ್ಗೆ ವಿವರ ನೀಡುವ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಮಿಶ್ರಾಗೆ ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ಘಟನೆಯಲ್ಲಿ ಮರಣ ಹೊಂದಿದ್ದವರ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಿತ್ರ ಎಂದರೆ ಜಾಮೀನು ಆದೇಶ ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಯಾವುದೇ ಮೇಲ್ಮನವಿ ಸಲ್ಲಿಸಿರಲಿಲ್ಲ. ಕಳೆದ ಏಪ್ರಿಲ್‌ನಲ್ಲಿ ಮಿಶ್ರಾಗೆ ನೀಡಿದ್ದ ಜಾಮೀನನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ಹೊಸದಾಗಿ ಪರಿಗಣಿಸುವಂತೆ ಪ್ರಕರಣವನ್ನು ಹೈಕೋರ್ಟ್‌ಗೆ ಹಿಂತಿರುಗಿಸಿತ್ತು. ಜುಲೈ 26ರಂದು ಅಲಹಾಬಾದ್‌ ಹೈಕೋರ್ಟ್‌ ಮಿಶ್ರಾಗೆ ಜಾಮೀನು ನಿರಾಕರಿಸಿತು. ಇದನ್ನು ಪ್ರಶ್ನಿಸಿ ಈಗಿನ ಅರ್ಜಿ ಸಲ್ಲಿಸಲಾಗಿದೆ.

ಇಂದಿನ ವಿಚಾರಣೆ ವೇಳೆ ಮಿಶ್ರಾ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ, ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬದ ಸದಸ್ಯರ ಪರವಾಗಿ ಹಿರಿಯ ನ್ಯಾಯವಾದಿ ದುಷ್ಯಂತ್‌ ದವೆ ವಾದ ಮಂಡಿಸಿದರು. ನ್ಯಾಯಾಲಯದ ಚಳಿಗಾಲದ ರಜೆ ಮುಗಿದ ಬಳಿಕ ಪ್ರಕರಣದ ವಿಚಾರಣೆ ಆರಂಭವಾಗಲಿದೆ.