ಸುದ್ದಿಗಳು

ಬಾಬರಿ ಮಸೀದಿ ಧ್ವಂಸ ಪ್ರಕರಣ: ಖುಲಾಸೆಗೊಂಡವರ ವಿರುದ್ಧ ಅಲಾಹಾಬಾದ್ ಹೈಕೋರ್ಟ್‌ನಲ್ಲಿ‌ ಮೇಲ್ಮನವಿ

Bar & Bench

1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ಸೆಪ್ಟೆಂಬರ್‌ನಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಅಯೋಧ್ಯೆಯ ಇಬ್ಬರು ನಿವಾಸಿಗಳು ಅಲಹಾಬಾದ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪರವಾಗಿ ಹಾಜಿ ಮೆಹಬೂಬ್ ಮತ್ತು ಹಾಜಿ ಸಯ್ಯದ್ ಅಖ್ಲಾಕ್ ಅಹ್ಮದ್ ಅವರು ಹೈಕೋರ್ಟ್‌ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

"ಅಪರಾಧದಲ್ಲಿ ಆರೋಪಿಗಳು ಭಾಗಿಯಾಗಿಲ್ಲ ಮತ್ತು ದಾಖಲೆಯಲ್ಲಿರುವ ಸಾಕ್ಷ್ಯಗಳಿಂದ ಅವರ ಕೃತ್ಯ ಸಾಬೀತುಪಡಿಸಲು ಸಾಧ್ಯವಿಲ್ಲ" ಎಂದು ತೀರ್ಪು ನೀಡುವ ಮೂಲಕ ಸಿಬಿಐ ನ್ಯಾಯಾಲಯ ಕಾನೂನುಬಾಹಿರವಾಗಿ ಮತ್ತು ಗುರುತರವಾದ ಕ್ರಮದೋಷದಿಂದ ನಡೆದುಕೊಂಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

1992ರ ಡಿಸೆಂಬರ್‌ನಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಕೃತ್ಯ ರಾಜಕೀಯ ನಿರೂಪದ ಮೇಲೆ ದಶಕಗಳವರೆಗೆ ಪ್ರಾಬಲ್ಯ ಸಾಧಿಸಿತು. ಸುಪ್ರೀಂಕೋರ್ಟ್‌ನ ಭಾಷೆಯಲ್ಲಿ ಹೇಳುವುದಾದರೆ ಭಾರತದ ಸಂವಿಧಾನದ ಜಾತ್ಯತೀತೆ ಸಂರಚನೆಯನ್ನು ಅಲುಗಾಡಿಸಿತು.

ಘಟನೆ ನಡೆದು ಮೂರು ದಶಕಗಳ ನಂತರ ಮಸೀದಿ ಧ್ವಂಸಕ್ಕೆ ಕಾರಣವಾದ ಯಾವುದೇ ನಿರ್ಣಾಯಕ ಪುರಾವೆ ಒದಗಿಸಲು ಸಿಬಿಐ ವಿಫಲವಾಗಿದೆ ಎಂಬ ಕಾರಣಕ್ಕೆ ಧ್ವಂಸ ಕೃತ್ಯದ ಸಂಚು ರೂಪಿಸಿದ ಎಲ್ಲಾ ವ್ಯಕ್ತಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಖುಲಾಸೆಗೊಳಿಸಿದ್ದರು.

ಆದರೆ ಮೇಲ್ಮನವಿಯಲ್ಲಿ “ಮಸೀದಿಯನ್ನು ಕೆಡವಿದ ಪ್ರಕರಣದಲ್ಲಿ ಖುಲಾಸೆಗೊಂಡ ಎಲ್ಲ ವ್ಯಕ್ತಿಗಳ ಸಾಮಾನ್ಯ ಉದ್ದೇಶ ಏನೆಂಬುದು "ಹೆಚ್ಚಿನ ಸಂಖ್ಯೆಯ ಸಾಕ್ಷಿಗಳು ನೀಡಿದ ಸಾಕ್ಷ್ಯದಿಂದ ಸಾಬೀತಾಗಿದೆ" ಎಂದು ಹೇಳಲಾಗಿದೆ.

“ಈ ಸೆಕ್ಷನ್‌ನ ಮೂಲಾಂಶ ಸಾಮಾನ್ಯ ಉದ್ದೇಶ (ಕಾಮನ್‌ ಆಬ್ಜೆಕ್ಟ್‌) ಎಂದು ಉದ್ಧರಿಸಲು ಗೌರವಾನ್ವಿತ ಸಿಬಿಐ ನ್ಯಾಯಾಧೀಶರು ವಿಫಲವಾಗಿದ್ದಾರೆ. ಆಬ್ಜೆಕ್ಟ್‌ ಎಂದರೆ ಉದ್ದೇಶವಾಗಿದ್ದು ಕಾನೂನು ಬಾಹಿರವಾಗಿ ಗುಂಪುಗೂಡಿದ ಸದಸ್ಯರು ಅದನ್ನು ಹಂಚಿಕೊಂಡಾಗ ಅದು ಸಾಮಾನ್ಯವಾಗಿರುತ್ತದೆ. ಗುಂಪುಗೂಡಿದ ಎಲ್ಲಾ ಅಥವಾ ಕೆಲ ಸದಸ್ಯರು ಯಾವುದೇ ಹಂತದಲ್ಲಿ ಸಾಮಾನ್ಯ ಉದ್ದೇಶ ರೂಪಿಸಿರಬಹುದು. ಈ ಸೆಕ್ಷನ್‌ನ ವಿವರಣೆ ಅದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಮಾನ್ಯ ಉದ್ದೇಶವನ್ನು ಮಾನವನ ಮನಸ್ಸಿನಲ್ಲಿ ರೂಪಿಸಲಾಗಿರುತ್ತದೆಯೇ ವಿನಾ ಈ ಬಗ್ಗೆ ನೇರವಾಗಿ ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ” ಎಂದು ಮನವಿಯಲ್ಲಿ ಹೇಳಲಾಗಿದೆ.