Supreme Court, PMLA 
ಸುದ್ದಿಗಳು

ಪಿಎಂಎಲ್ಎ ಪ್ರಕರಣಗಳಲ್ಲಿಯೂ ಜಾಮೀನು ಆದ್ಯತಾ ತತ್ವ ಅನ್ವಯ: ಸುಪ್ರೀಂ ಕೋರ್ಟ್

ಪಿಎಂಎಲ್ಎ ಆರೋಪಿ ತನಿಖಾ ಕಚೇರಿಗೆ ನೀಡಿದ ತಪ್ಪೊಪ್ಪಿಗೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು. ಜೊತೆಗೆ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 25ರ ಅಡಿಯಲ್ಲಿ ಅಂತಹ ತಪ್ಪೊಪ್ಪಿಗೆಗಳಿಗೆ ನಿರ್ಬಂಧ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಜಾಮೀನಿಗೆ ಆದ್ಯತೆ ನೀಡಬೇಕು, ಅನಿವಾರ್ಯವಾದಲ್ಲಿ ಮಾತ್ರವೇ ಜೈಲಿನಲ್ಲಿರಿಸಬೇಕು ಎಂಬ ನೀತಿ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿಯ (ಪಿಎಂಎಲ್‌ಎ) ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಪಿಎಂಎಲ್‌ಎ ಕಾಯಿದೆಯಡಿ ಬಂಧಿತರಾಗಿದ್ದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಪ್ರೇಮ್‌ ಪ್ರಕಾಶ್‌ ಅವರಿಗೆ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪಿತ್ತಿದೆ.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸದಾ ಮಹತ್ವ ನೀಡಬೇಕು ಮತ್ತು ಕಾನೂನಿನಿಂದ ಸ್ಥಾಪಿತವಾದ ಕಾರ್ಯವಿಧಾನದ ಮೂಲಕ ಅದನ್ನು ಹತ್ತಿಕ್ಕುವುದು ನಗಣ್ಯವಾಗಬೇಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಪಿಎಂಎಲ್‌ಎ ಅಡಿ ಜಾಮೀನು ನೀಡಲು ಇರುವ ಕಠಿಣ ಷರತ್ತುಗಳು ಈ ನೀತಿಗೆ ಮಾರಕವಾಗಿವೆ ಎಂದು ನ್ಯಾಯಾಲಯ ತಿಳಿಸಿದೆ.

ಮನೀಷ್‌ ಸಿಸೋಡಿಯಾ ಪ್ರಕರಣದಲ್ಲಿ ನೀಡಲಾದ ತೀರ್ಪಿನ ಆಧಾರದ ಮೇಲೆ ಪಿಎಂಎಲ್‌ಎ ಪ್ರಕರಣದಲ್ಲಿ ಕೂಡ ಜಾಮೀನಿಗೇ ಆದ್ಯತೆ, ಅನಿವಾರ್ಯವಾದಲ್ಲಿ ಮಾತ್ರವೇ ಜೈಲಿನಲ್ಲಿರಿಸಬೇಕು ಎಂದು ಹೇಳುತ್ತಿದ್ದೇವೆ. ಅವಳಿ ಪರೀಕ್ಷೆ ಈ ತತ್ವವನ್ನು ಕಡೆಗಣಿಸುವಂತಿಲ್ಲ ಎಂಬುದಾಗಿ ನ್ಯಾಯಾಲಯ ವಿವರಿಸಿತು.

ಪಿಎಂಎಲ್ಎ ಆರೋಪಿ ತನಿಖಾ ಕಚೇರಿಗೆ ನೀಡಿದ ತಪ್ಪೊಪ್ಪಿಗೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು. ಜೊತೆಗೆ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 25ರ ಅಡಿಯಲ್ಲಿ ಅಂತಹ ತಪ್ಪೊಪ್ಪಿಗೆಗಳಿಗೆ ನಿರ್ಬಂಧ ಅನ್ವಯಿಸುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

 "ಮೇಲ್ಮನವಿದಾರನ ಹೇಳಿಕಗಳನ್ನು ದೋಷಾರೋಪಿತವಾಗಿದೆ ಎಂದು ಕಂಡುಬಂದರೆ ಸೆಕ್ಷನ್ 25ರಿಂದ ಅದನ್ನು ರದ್ದುಗೊಳಿಸಲಾಗುವುದು. ಅವರು ಮತ್ತೊಂದು ಇಸಿಐಆರ್‌ ಕಾರಣಕ್ಕೆ ಕಸ್ಟಡಿಯಲ್ಲಿದ್ದರು ಎಂಬ ಹೇಳಿಕೆಯನ್ನು ಮನ್ನಿಸುವುದು ವಿಡಂಬನೆಯಾಗುತ್ತದೆ. ಅಂತಹ ಹೇಳಿಕೆಗಳನ್ನು ಒಪ್ಪಿಕೊಳ್ಳುವುದು ಅತ್ಯಂತ ಅನ್ಯಾಯದ್ದು. ಇದು ನ್ಯಾಯದ ಎಲ್ಲಾ ನಿಯಮಗಳಿಗೆ ವಿರುದ್ಧವಾಗಿರುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 25 ಅನ್ವಯವಾಗಲಿದೆಯೇ ಎಂಬುದು ಆಯಾ ಪ್ರಕರಣವನ್ನು ಆಧರಿಸಿರುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಪ್ರಸ್ತುತ ಪ್ರಕರಣದಲ್ಲಿ, ವಿಚಾರಣೆ ವಿಳಂಬವಾಗಿದ್ದು ವಿಚಾರಣೆಗೆ ಸಾಕ್ಷಿಗಳ ಸುದೀರ್ಘ ಪಟ್ಟಿಯೇ ಇದೆ ಎಂದು ನ್ಯಾಯಾಲಯ ತಿಳಿಸಿತು. ಪ್ರಕರಣದಲ್ಲಿ ಮೇಲ್ಮನವಿದಾರ ಅಪರಾಧಗಳಲ್ಲಿ ಪ್ರಾಥಮಿಕ ತಪ್ಪಿತಸ್ಥನಲ್ಲ ಮತ್ತು ಸಾಕ್ಷ್ಯವನ್ನು ಹಾಳುಮಾಡುವ ಸಾಧ್ಯತೆಯಿಲ್ಲ. ಹಾಗಾಗಿ ಇದು ಜಾಮೀನಿಗೆ ಯೋಗ್ಯವಾದ ಪ್ರಕರಣ ಎಂದು ತಿಳಿಸಿದೆ. ಹಾಗಾಗಿ ಅದು ಪ್ರೇಮ್‌ ಪ್ರಕಾಶ್‌ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತು.