Cheque, Kerala High Court  
ಸುದ್ದಿಗಳು

ಫೋರ್ಜರಿ ಮಾಡಿದ ಚೆಕ್ ನಿರ್ಲಕ್ಷ್ಯದಿಂದ ನಗದೀಕರಿಸಿದರೆ ಅದಕ್ಕೆ ಬ್ಯಾಂಕ್ ಹೊಣೆ: ಕೇರಳ ಹೈಕೋರ್ಟ್

ಬ್ಯಾಂಕಿನ ಗ್ರಾಹಕರಿಗೆ ನಕಲಿ ಬಗ್ಗೆ ತಿಳಿದಿತ್ತು ಎಂದು ಸಾಬೀತಾದ ಪ್ರಕರಣಗಳಲ್ಲಿ ಮಾತ್ರ ಬ್ಯಾಂಕ್‌ಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಹಿ ಫೋರ್ಜರಿ ಮಾಡಿದ ಚೆಕ್ ನಿರ್ಲಕ್ಷ್ಯದಿಂದ ನಗದೀಕರಿಸಿದ ಬ್ಯಾಂಕ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಆರ್ ರಮೇಶ್ ಮತ್ತು ವಿಜಯ ಬ್ಯಾಂಕ್ ಇನ್ನಿತರರ ನಡುವಣ ಪ್ರಕರಣ ಹಾಗೂ ಸಂಬಂಧಿತ ಪ್ರಕರಣಗಳು].

ಬ್ಯಾಂಕಿನ ಗ್ರಾಹಕರಿಗೆ ನಕಲಿ ಬಗ್ಗೆ ತಿಳಿದಿತ್ತು ಎಂದು ಸಾಬೀತಾದ ಪ್ರಕರಣಗಳಲ್ಲಿ ಮಾತ್ರ ಬ್ಯಾಂಕ್‌ಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ಸತೀಶ್ ನಿನಾನ್ ಮತ್ತು ಪಿ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಆದ್ದರಿಂದ ಬ್ಯಾಂಕ್ ಆಫ್ ಬರೋಡಾ (ಹಿಂದಿನ ವಿಜಯ ಬ್ಯಾಂಕ್) ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಅಧಿಕೃತ ಸಹಿದಾರರ ಸಹಿ ಫೋರ್ಜರಿ ಮಾಡಿದ್ದ ಚೆಕ್‌ ನಗದೀಕರಿಸಿ ಬ್ಯಾಂಕ್‌ ನಿರ್ಲಕ್ಷ್ಯ ವಹಿಸಿದೆ ಎಂದು ಹೇಳಿತು.

ಇದು ಬ್ಯಾಂಕ್‌ನ ನಿರ್ಲಕ್ಷ್ಯದಿಂದ ಉಂಟಾಗಿದ್ದುಎನ್ನುವುದಕ್ಕಿಂತಲೂ ವಂಚನೆಯಿಂದ ಉದ್ಭವಿಸಿದ್ದು ಎಂದು ಪರಿಗಣಿಸುವ ಮೂಲಕ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಹೈಕೋರ್ಟ್‌ ನುಡಿಯಿತು.

ಬ್ಯಾಂಕಿನ ವಿರುದ್ಧ ಹಣ ವಸೂಲಿ ಮೊಕದ್ದಮೆ ಹೂಡಿದ್ದ ವಾದಿಗಳೇ ಪುರಾವೆ ಒದಗಿಸುವ ಹೊಣೆ ಹೊರಬೇಕು ಎಂದು ವಿಚಾರಣಾ ನ್ಯಾಯಾಲಯ ತಪ್ಪಾಗಿ ಸೂಚಿಸಿದೆ. ಇದು ವಂಚನೆಯ ಪ್ರಕರಣವಲ್ಲ ಬದಲಿಗೆ ಬ್ಯಾಂಕ್‌ನ ನಕಲಿ ಸಹಿಗಳನ್ನು ಪತ್ತೆ ಹಚ್ಚುವಲ್ಲಿ ಬ್ಯಾಂಕ್‌ ತೋರಿದ ನಿರ್ಲಕ್ಷ್ಯ ಎಂದು ಅದು ಹೇಳಿತು. 

ನಕಲಿ ಚೆಕ್‌ಗಳನ್ನು ಮೂರು ತಿಂಗಳ ಅಲ್ಪಾವಧಿಯಲ್ಲಿಯೇ ನಗದೀಕರಿಸಲಾಗಿದ್ದು ಇದು ವಾದಿಗಳ ಅರಿವಿಗೆ ಬಂದ ತಕ್ಷಣ ಅವರು ಸಮಸ್ಯೆಯನ್ನು ಬ್ಯಾಂಕ್‌ಗೆ ವರದಿ ಮಾಡಿ ಪರಿಹರಿಸುವಂತೆ ಕೋರಿದರು. ಚೆಕ್‌ಗಳನ್ನು ಬ್ಯಾಂಕ್ ನಗದೀಕರಿಸುವ ಮೊದಲೇ ವಾದಿಗಳಿಗೆ ನಕಲಿ ಬಗ್ಗೆ ತಿಳಿದಿತ್ತು ಎಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ, ಪಾವತಿ ಮಾಡುವ ಮೊದಲು ಸಹಿಗಳನ್ನು ಪರಿಶೀಲಿಸದ ಬ್ಯಾಂಕ್‌ ವಾದಿಗಳಿಗೆ ಪರಿಹಾರ ನೀಡಲು ಬಾಧ್ಯಸ್ಥನಾಗಿದೆ ಎಂದು ಅದು ತಿಳಿಸಿತು. ಅಂತೆಯೇ ಮೊಕದ್ದಮೆ ಹೂಡಿದ ದಿನಾಂಕದಿಂದ ಅನ್ವಯವಾಗುವಂತೆ ವಾರ್ಷಿಕ ಶೇ 6 ರಷ್ಟು ಬಡ್ಡಿಯೊಂದಿಗೆ ಕೋರಿದ ಮೊತ್ತವನ್ನು ಮರುಪಡೆಯಲು ವಾದಿಗಳಿಗೆ ಅದು ಅವಕಾಶ ಮಾಡಿಕೊಟ್ಟಿತು.

[ತೀರ್ಪಿನ ಪ್ರತಿ]

R_Ramesh_v__Vijaya_Bank___ors_and_connected_cases.pdf
Preview