Bar Council Of India 
ಸುದ್ದಿಗಳು

ದೆಹಲಿಯಲ್ಲಿ 107 ನಕಲಿ ವಕೀಲರಿಗೆ ಕೊಕ್ ನೀಡಿದ ಭಾರತೀಯ ವಕೀಲರ ಪರಿಷತ್ತು

ಬಿಸಿಐ ಪ್ರಮಾಣಪತ್ರ ಮತ್ತು ಅಭ್ಯಾಸದ ಸ್ಥಳ (ಪರಿಶೀಲನೆ) ನಿಯಮಾವಳಿ- 2015 ರ ನಿಯಮ 32ರ ಅಡಿಯಲ್ಲಿ ನಕಲಿ ವಕೀಲರು ಮತ್ತು ಕಾನೂನು ಪ್ರಾಕ್ಟೀಸ್ ಸ್ಥಳ ಕುರಿತ ಮಾನದಂಡ ಪಾಲಿಸದವರನ್ನು ತೆಗೆದುಹಾಕುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.

Bar & Bench

ಕಾನೂನು ಸಮುದಾಯದಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿಪರತೆ ಕಾಪಾಡಿಕೊಳ್ಳುವ ನಿರಂತರ ಯತ್ನದ ಭಾಗವಾಗಿ 2019 ಮತ್ತು ಅಕ್ಟೋಬರ್ 2024ರ ನಡುವಿನ ಅವಧಿಯಲ್ಲಿ, ಭಾರತೀಯ ವಕೀಲರ ಪರಿಷತ್ತು (ಬಿಸಿಐ) ದೆಹಲಿ ರಾಜ್ಯದಲ್ಲಿ ವಕೀಲರ ಪಟ್ಟಿಯಿಂದ 107 ನಕಲಿ ವಕೀಲರನ್ನು ತೆಗೆದುಹಾಕಿದೆ.

ಬಿಸಿಐ ಪ್ರಮಾಣಪತ್ರ ಮತ್ತು ಅಭ್ಯಾಸದ ಸ್ಥಳ (ಪರಿಶೀಲನೆ) ನಿಯಮಾವಳಿ- 2015ರ ನಿಯಮ 32ರ ಅಡಿಯಲ್ಲಿ ನಕಲಿ ವಕೀಲರು ಮತ್ತು ಕಾನೂನು ಪ್ರಾಕ್ಟೀಸ್‌ ಸ್ಥಳ ಕುರಿತ ಮಾನದಂಡ ಪಾಲಿಸದವರನ್ನು ತೆಗೆದುಹಾಕುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.

ಜೂನ್ 23, 2023 ರಂದು ನಿಯಮ 32ಕ್ಕೆ ತಿದ್ದುಪಡಿ ಮಾಡಲಾಗಿತ್ತು. ತಿದ್ದುಪಡಿಯು ಪರಿಶೀಲನೆಯ ಬಂಧವನ್ನು ಗಟ್ಟಿಗೊಳಿಸಿದ್ದು ಬಿಸಿಐ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವ್ಯವಸ್ಥಿತವಾಗಿ ಅನರ್ಹ/ನಕಲಿ ವಕೀಲರನ್ನು ಪತ್ತೆ ಹಚ್ಚಿ ನೋಂದಣಿಯಿಂದ ತೆಗೆದುಹಾಕಲು ಅವಕಾಶ ಮಾಡಿಕೊಟ್ಟಿತ್ತು.

ಜೂನ್ 23, 2023 ರ ಮೊದಲು ತೆಗೆದುಹಾಕಲಾದ ನೂರಾರು ವಕೀಲರಲ್ಲದೆ ಈಚೆಗೆ ಒಟ್ಟು 107 ನಕಲಿ ವಕೀಲರನ್ನು ತೆಗೆದುಹಾಕಲಾಗಿದ್ದು ತಿದ್ದುಪಡಿಯ ನಂತರ 50 ವಕೀಲರಿಗೆ ಕೊಕ್‌ ನೀಡಲಾಗಿದೆ.

ಪರಿಶೀಲನೆ ನಡೆಸುತ್ತಿರುವುದನ್ನು ಅರಿತಿರುವ ವಂಚನೆ ಎಸಗಿದ ಅಥವಾ ನಿಯಮ ಪಾಲಿಸದೆ ಇರುವ ಅನೇಕ ವಕೀಲರು ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ದಾಖಲಾತಿ ಪ್ರಮಾಣಪತ್ರಗಳನ್ನು ಮೊದಲೇ ತಂದೊಪ್ಪಿಸುತ್ತಿದ್ದು ಅವುಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸುವಂತೆ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳಿಗೆ ಬಿಸಿಐ ಸೂಚಿಸಿದೆ.

"ನಕಲಿ ವಕೀಲರು ತಮ್ಮ ಕೃತ್ಯಗಳಿಗೆ ಹೊಣೆಗಾರರಾಗದೆ ಹೊರನಡೆಯಲು ಅವಕಾಶ ನೀಡದಿರುವುದು ಅತ್ಯಗತ್ಯ, ಏಕೆಂದರೆ ಅವರ ವಂಚನೆ ಸಾರ್ವಜನಿಕರಿಗೆ ಹಾನಿ ಉಂಟುಮಾಡಿದ್ದು ನ್ಯಾಯ ವ್ಯವಸ್ಥೆಗೆ ಧಕ್ಕೆ ತಂದಿದೆ. ರಾಜ್ಯ ವಕೀಲರ ಪರಿಷತ್ತುಗಳು ಅನುಮತಿ ನೀಡುವ ಮೊದಲು ಅವರ ದಾಖಲಾತಿಯ ಸತ್ಯಾಸತ್ಯತೆ ಕಂಡುಕೊಳ್ಲಲು ಸಂಪೂರ್ಣ ತನಿಖೆ ಕೈಗೊಳ್ಳಬೇಕು. ಅವರ ದಾಖಲೆಗಳು ಅಂತಹ ವಕೀಲರು ತಕ್ಷಣವೇ ಕಾನೂನು ಅಭ್ಯಾಸ ಮಾಡುವುದನ್ನು ನಿರ್ಬಂಧಿಸಬಹುದಾದರೂ, ಸಲ್ಲಿಸಲಾದ ಎಲ್ಲಾ ದಾಖಲಾತಿಗಳನ್ನು ಸಂಪೂರ್ಣ ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರಕ್ಕೆ ಬರಬೇಕು”ಎಂದು ಅದು ಹೇಳಿದೆ.