BCCI and Byju's logos 
ಸುದ್ದಿಗಳು

ಬೈಜೂಸ್ ಜೊತೆಗಿನ ವಿವಾದ: ರಾಜಿಗೆ ಮುಂದಾಗಿರುವುದಾಗಿ ಎನ್‌ಸಿಎಲ್ಎಟಿಗೆ ಬಿಸಿಸಿಐ ಮಾಹಿತಿ

ಆದರೆ ಬೈಜೂಸ್ ಮಾಡುತ್ತಿರುವ ಮರುಪಾವತಿ ಕಳಂಕಿತವಾಗಿದ್ದು ಕದ್ದ ಹಣದಿಂದ ಈ ಪರಿಹಾರ ನೀಡಲಾಗುತ್ತಿದೆ ಎಂದಿರುವ ಅಮೆರಿಕ ಮೂಲದ ಹಣಕಾಸು ಸಾಲದಾತ ಪರಿಹಾರಕ್ಕೆ ವಿರೋಧ ವ್ಯಕ್ತಪಡಿಸಿದೆ.

Bar & Bench

ಪ್ರಾಯೋಜಕತ್ವ ಒಪ್ಪಂದದಂತೆ 158 ಕೋಟಿ ರೂಪಾಯಿ ಮರುಪಾವತಿ ಕುರಿತು ಬೈಜೂಸ್‌ ಜೊತೆ ರಾಜಿ ಒಪ್ಪಂದಕ್ಕೆ ಮುಂದಾಗಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ (ಎನ್‌ಸಿಎಲ್ಎಟಿ) ತಿಳಿಸಿದೆ.

ಬೈಜು ಸಂಸ್ಥಾಪಕ ಬೈಜು ರವೀಂದ್ರನ್ ಅವರ ಸಹೋದರ ರಿಜು ರವೀಂದ್ರನ್ ಅವರು ನಿನ್ನೆ ₹ 50 ಕೋಟಿ ಪಾವತಿಸಿದ್ದಾರೆ ಎಂದು ಬಿಸಿಸಿಐ ನ್ಯಾಯಮಂಡಳಿಯ ಚೆನ್ನೈ ಪೀಠಕ್ಕೆ ಇಂದು ತಿಳಿಸಿದೆ.

ಶುಕ್ರವಾರದೊಳಗೆ ಇನ್ನೂ ₹ 25 ಕೋಟಿ ಪಾವತಿಸಲಾಗುವುದು ಮತ್ತು ಉಳಿದ ₹ 83 ಕೋಟಿಯನ್ನು ಆಗಸ್ಟ್ 9 ರೊಳಗೆ ಪಾವತಿಸಲಾಗುವುದು ಎಂದು ಬೈಜೂಸ್‌ ಸಮಜಾಯಿಷಿ ನೀಡಿದೆ.

ಆದರೆ ಬೈಜೂಸ್ ಮಾಡುತ್ತಿರುವ ಮರುಪಾವತಿ ಕಳಂಕಿತವಾಗಿದ್ದು ಕದ್ದ ಹಣದಿಂದ ಈ ಪರಿಹಾರ ನೀಡಲಾಗುತ್ತಿದೆ ಎಂದಿರುವ ಅಮೆರಿಕ ಮೂಲದ ಹಣಕಾಸು ಸಾಲದಾತ ಕಂಪೆನಿ ಪರಿಹಾರಕ್ಕೆ  ವಿರೋಧ ವ್ಯಕ್ತಪಡಿಸಿದೆ.

ಸಾಲಗಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಅಮೆರಿಕ ನ್ಯಾಯಾಲಯದ ಅವಲೋಕನದ ಪ್ರಕಾರ ಬೈಜು ಮತ್ತು ರಿಜು ಇಬ್ಬರೂ ₹ 500 ಕೋಟಿಗೂ ಹೆಚ್ಚು ಹಣವನ್ನು ವಂಚಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದರು.

ಅಲ್ಲದೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಬೈಜು ರವೀಂದ್ರನ್‌ ಅವರು ದುಬೈಗೆ ಪರಾರಿಯಾಗಿದ್ದಾರೆ. ಈಗ ಅವರು 158 ಕೋಟಿ ರೂಪಾಯಿ ನೀಡಲು ಹೊರಟಿದ್ದಾರೆ. ಈ ಹಣ ಎಲ್ಲಿಂದ ಬರುತ್ತಿದೆ? ಅದನ್ನು ಅಧಿಕೃತ ಬ್ಯಾಂಕ್‌ ಖಾತೆಯಿಂದ ಪಡೆಯಲಾಗಿದೆಯೇ? ಬೈಜೂ ನ್ಯಾಯಾಲಯದಿಂದ ತಲೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರು.

 ಇದೇ ವೇಳೆ ಬಿಸಿಸಿಐ ಪರ ವಾದಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಕ್ರಿಕೆಟ್‌ ನಿಯಂತ್ರಣ ಪ್ರಾಧಿಕಾರ ಅಕ್ರಮ ಹಣವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದರು.  ಬಿಸಿಸಿಐ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕದ್ದ ಹಣದಿಂದ ಪರಿಹಾರ ನೀಡಲಾಗುತ್ತಿದೆ ಎಂಬ ಸಾಲಗಾರರ ಕಳವಳ ಕಪೋಲ ಕಲ್ಪಿತ ಎಂದು ಹೇಳಿದರು.

ಸಾಲಗಾರರಿಗೆ ಪಾವತಿಸಬೇಕಾದ ಹಣವನ್ನು ಕಾರ್ಯಾಚರಣೆಯ ಸಾಲಗಾರರಿಗೆ (ಬಿಸಿಸಿಐ ರೀತಿಯ ಸಾಲಗಾರರು) ಪಾವತಿಸಲು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸುವ ಅಫಿಡವಿಟ್  ಸಲ್ಲಿಸುವಂತೆ ಮೇಲ್ಮನವಿ ನ್ಯಾಯಮಂಡಳಿಯು ಬೈಜೂಸ್‌ಗೆ ಸೂಚಿಸಿದೆ.