ವಕೀಲೆಯರ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ನಿಯಮಗಳು ಅವರನ್ನು ಮುಖ ಮರೆಮಾಚಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೇಳುವುದಿಲ್ಲ ಎಂಬುದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ತಿಳಿಸಿದೆ.
ಕೆಲ ವ್ಯಾಜ್ಯಗಳನ್ನು ಪ್ರತಿನಿಧಿಸುವ ವಕೀಲರೆಂದು ಹೇಳಿಕೊಂಡಿದ್ದ ಮಹಿಳಾ ವಕೀಲರು ಮುಖದ ಹೊದಿಕೆ ತೆಗೆಯಬೇಕೆಂಬ ನ್ಯಾಯಾಲಯದ ಸೂಚನೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು.
ನಿಯಮಗಳು ಮಹಿಳಾ ವಕೀಲರು ಮುಖ ಮುಚ್ಚಿಕೊಂಡು ಹಾಜರಾಗಲು ಅವಕಾಶ ನೀಡುತ್ತವೆಯೇ ಎಂಬ ಬಗ್ಗೆ ರಿಜಿಸ್ಟ್ರಾರ್ ಜನರಲ್ ವರದಿ ಪಡೆದು ಪರಿಶೀಲಿಸಿದ ನ್ಯಾಯಮೂರ್ತಿ ಮೋಕ್ಷಾ ಖಜುರಿಯಾ ಕಾಜ್ಮಿ ಅವರು ಬಿಸಿಐ ಸೂಚಿಸಿದ ನಿಯಮಗಳಲ್ಲಿ ಆ ಬಗ್ಗೆ ಉಲ್ಲೇಖವಿಲ್ಲ ಎಂದು ಡಿಸೆಂಬರ್ 13ರಂದು ತಿಳಿಸಿದ್ದಾರೆ.
ಮಹಿಳಾ ವಕೀಲರ ವಸ್ತ್ರ ಸಂಹಿತೆ ಕುರಿತು ಹೇಳುವ ಬಿಸಿಐ ನಿಯಮಾವಳಿ ಅಧ್ಯಾಯ IV (ಭಾಗ VI) ನ ಸೆಕ್ಷನ್ 49(1) (gg)ಯನ್ನು ಪ್ರಸ್ತಾಪಿಸಿದ ಪೀಠ “ಈ ನ್ಯಾಯಾಲಯಕ್ಕೆ ಹಾಜರಾಗುವಾಗ ಅಂತಹ ಉಡುಗೆ ಧರಿಸಲು ಅನುಮತಿ ಇದೆ ಎಂದು ನಿಯಮಗಳಲ್ಲಿ ಎಲ್ಲಿಯೂ ತಿಳಿಸಿಲ್ಲ” ಎಂದಿತು.
ಆದರೆ ವ್ಯಾಜ್ಯ ಪ್ರಕರಣದಲ್ಲಿ ಹಾಜರಾಗಿದ್ದ ಮಹಿಳಾ ವಕೀಲೆ ನ್ಯಾಯಾಲಯಕ್ಕೆ ಹಾಜರಾಗದೆ ಇರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರವನ್ನು ಹೆಚ್ಚು ವಿವರವಾಗಿ ಪರಿಶೀಲಿಸಲಿಲ್ಲ.
ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನವೆಂಬರ್ 27 ರಂದು ಸೈಯದ್ ಐನೈನ್ ಖಾದ್ರಿ ಹೆಸರಿನ ವಕೀಲೆ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಮುಖ ಮರೆಮಾಚಿ ನ್ಯಾಯಾಲಯಕ್ಕೆ ಹಾಜರಾದರು. ಆ ಸಮಯದಲ್ಲಿ, ಪ್ರಕರಣವು ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರ ಮುಂದೆ ಇತ್ತು. ಮುಖ ಮುಚ್ಚಿಕೊಂಡು ಹಾಜರಾಗುವುದು ತನ್ನ ಮೂಲಭೂತ ಹಕ್ಕು ಮತ್ತು ಮುಖಮುಚ್ಚಿರುವುದನ್ನು ತೆಗೆಯುವಂತೆ ನ್ಯಾಯಾಲಯವು ಒತ್ತಾಯಿಸುವಂತಿಲ್ಲ ಎಂದು ಆ ವಕೀಲೆ ಹೇಳಿದ್ದರು.
ಆದರೆ, ಆಕೆ ಯಾರೆಂದು ದೃಢೀಕರಿಸಲು ಸಾಧ್ಯವಾಗದ ಕಾರಣ, ಆ ದಿನ ಅರ್ಜಿದಾರರ ಪರ ವಕೀಲರಾಗಿ ಹಾಜರಾಗಲು ಆ ವ್ಯಕ್ತಿಗೆ ನ್ಯಾಯಾಲಯ ಅವಕಾಶ ನೀಡಿರಲಿಲ್ಲ. ಪ್ರಕರಣವನ್ನು ಮುಂದಕ್ಕೆ ಹಾಕಿದ್ದ ನ್ಯಾಯಾಲಯದ ಆದೇಶದಂತೆ ಬಿಸಿಐ ನಿಯಮಾವಳಿ ಕುರಿತು ರಿಜಿಸ್ಟ್ರಾರ್ ಜನರಲ್ ಡಿಸೆಂಬರ್ 5 ರಂದು ವರದಿ ಸಲ್ಲಿಸಿದ್ದರು.
ಆದರೆ, ತದನಂತರ ಮತ್ತೊಬ್ಬ ವಕೀಲರು ಅರ್ಜಿದಾರರನ್ನು ಪ್ರತಿನಿಧಿಸಲು ಮುಂದಾದರು. ಅವರ ವಾದವನ್ನು ಆಲಿಸಿದ ನ್ಯಾಯಾಲಯವು ಡಿಸೆಂಬರ್ 6 ರಂದು ತೀರ್ಪಿಗಾಗಿ ಪ್ರಕರಣವನ್ನು ಕಾಯ್ದಿರಿಸಿತು.
ಪರ್ಯಾಯ ಪರಿಹಾರವಿದೆ ಎನ್ನುವುದನ್ನು ನ್ಯಾಯಾಲಯ ಕಂಡುಕೊಂಡ ನಂತರ ಅಂತಿಮವಾಗಿ ಡಿಸೆಂಬರ್ 13 ರಂದು ಅರ್ಜಿ ವಜಾಗೊಳಿಸಿತು.