A1
ಸುದ್ದಿಗಳು

ಪಂಜಾಬ್ ಮಾಜಿ ಸಿಎಂ ಬಿಯಾಂತ್ ಸಿಂಗ್ ಹತ್ಯೆ: ಏ. 30ರೊಳಗೆ ರಾಜೋನಾ ಕ್ಷಮಾದಾನ ಅರ್ಜಿ ನಿರ್ಧರಿಸುವಂತೆ ಸುಪ್ರೀಂ ಸೂಚನೆ

ಪ್ರಕರಣವನ್ನು ಕೇಂದ್ರ ಸರ್ಕಾರ, ಸಿಬಿಐ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಹತ್ಯೆ ಪ್ರಕರಣದ ಆರೋಪಿ ಬಲವಂತ್‌ ಸಿಂಗ್ ರಾಜೋನಾನ ಮರಣದಂಡನೆ ಶಿಕ್ಷೆ ಬದಲಾವಣೆ ಸಂಬಂಧ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಸಿಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ [ಬಲವಂತ್‌ ಸಿಂಗ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಜೊತೆಗೆ ತನ್ನ ಪರ ವಾದಿಸುತ್ತಿರುವ ವಕೀಲರಿಗೆ ಕೇಂದ್ರ ಸ್ಪಷ್ಟ ಸೂಚನೆಗಳನ್ನು ನೀಡದೇ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಸಿಬಿಐ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಸೂಚಿಸಿತು.

ಗುರುನಾನಕ್‌ ಅವರ 550ನೇ ಜನ್ಮದಿನದ ಅಂಗವಾಗಿ ಬಲವಂತ್‌ಗೆ ಕ್ಷಮಾದಾನ ನೀಡುವುದಕ್ಕೆ ಒಲವು ತೋರಿ ಸರ್ಕಾರ 2019ರಲ್ಲಿಯೇ ನಿರ್ಧಾರ ಕೈಗೊಂಡಿದ್ದರೂ ರಾಷ್ಟ್ರಪತಿಗಳ ಕ್ಷಮಾದಾನಕ್ಕಾಗಿ ಬಲವಂತ್‌ ಸಲ್ಲಿಸಿದ ಮನವಿ ಅತಂತ್ರ ಸ್ಥಿತಿ ಎದುರಿಸುತ್ತಿದೆ.

ಕ್ಷಮಾದಾನ ಕೋರಿ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದು ಅದು ಮೌನವಾಗಿ ಉಳಿದಿದೆ ಎಂದು ಬಲವಂತ್‌ ಸಿಂಗ್‌ ಜೈಲಿನಿಂದಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದ. ಈ ವಿಳಂಬ ʼವಿವರಿಸಲು ಸಾಧ್ಯವಿಲ್ಲದಂತದ್ದುʼ ಎಂದು ಆತ ಹೇಳಿದ್ದ. 2012ರಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಸಮ್ಮತಿ ಇಲ್ಲವೇ ಆಕ್ಷೇಪವನ್ನು ಎರಡು ವಾರದೊಳಗೆ ಸಲ್ಲಿಸಬೇಕು. ಅದಾದ ಇನ್ನೆರಡು ವಾರಗಳಲ್ಲಿ ಕೇಂದ್ರ ಸರ್ಕಾರದ ಸೂಕ್ತ ಪ್ರಾಧಿಕಾರ ಈ ಪ್ರಸ್ತಾವನೆ ಕುರಿತಂತೆ ಅರ್ಜಿ ನಿರ್ಧಾರ ಕೈಗೊಳ್ಳಬೇಕು. ಹೀಗೆ ಕೈಗೊಂಡ ಕ್ರಮಗಳ ವರದಿಯನ್ನು 2022ರ ಏಪ್ರಿಲ್ 30 ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು ಎಂದು ಅದು ಸ್ಪಷ್ಟಪಡಿಸಿದೆ.

ತಪ್ಪಿದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಸಂಬಂಧಪಟ್ಟ ಕಾರ್ಯದರ್ಶಿ ಸಿಬಿಐ ಪ್ರಾಸಿಕ್ಯೂಷನ್‌ ವಿಭಾಗದ ನಿರ್ದೇಶಕರು ದಾಖಲೆಗಳೊಂದಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿದೆ. ಮೇ 2, 2022 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.