ತೊಂಬತ್ತರ ದಶಕದಲ್ಲಿ ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಲ ಸಹೋದರಿಯರಾದ ರೇಣುಕಾ ಶಿಂಧೆ ಮತ್ತು ಸೀಮಾ ಗವಿತ್ ಅವರು ಸಲ್ಲಿಸಿದದ್ದ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಬಾಂಬೆ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.
ಸಂವಿಧಾನದ 226ನೇ ವಿಧಿಯಡಿ ವಕೀಲರಾದ ಅನಿಕೇತ್ ವಗಲ್ ಮೂಲಕ ಸಲ್ಲಿಸಿದ ಮನವಿಯಲ್ಲಿ, ಮರಣದಂಡನೆ ಜಾರಿಗೊಳಿಸಲು ಸುಮಾರು 8 ವರ್ಷಗಳಷ್ಟು ವಿಳಂಬ ಮಾಡಿರುವುದರಿಂದ ತಮ್ಮ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕೆಂದು ಅವರು ಕೋರಿದ್ದರು.
ಗಲ್ಲಿಗೇರಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆಯರು:
ಮಕ್ಕಳನ್ನು ಅಪಹರಿಸಿ ಕಳ್ಳತನ,ದರೋಡೆಗೆ ಬಳಸಿ ಅವರಿಂದ ಉಪಯೋಗವಿಲ್ಲ ಎಂದಾದಾಗ ಅವರನ್ನು ಕೊಲೆ ಮಾಡುತ್ತಿದ್ದ ಆರೋಪ ಈ ಸೋದರಿಯರ ಮೇಲಿದೆ. ಕೃತ್ಯದಲ್ಲಿ ಸೋದರಿಯರ ತಾಯಿ ಅಂಜನಾಬಾಯಿ ಕೂಡ ಆರೋಪಿಯಾಗಿದ್ದು ವಿಚಾರಣಾ ಅವಧಿಯಲ್ಲಿಯೇ ಆಕೆ ಸಾವನ್ನಪ್ಪಿದ್ದಳು. ಅಂಜನಾಬಾಯಿ ಪತಿ ಕಿರಣ್ ಶಿಂಧೆ ಮಾಫಿ ಸಾಕ್ಷಿಯಾಗಿ ಪರಿವರ್ತನೆಗೊಂಡಿದ್ದರಿಂದ ಆತನನ್ನು ಖುಲಾಸೆಗೊಳಿಸಲಾಗಿತ್ತು.
1990ರಿಂದ 1996ರವರೆಗೆ ಆರು ವರ್ಷಗಳ ಕಾಲ ಒಂದರಿಂದ ಹದಿಮೂರು ವರ್ಷದ ಮಕ್ಕಳನ್ನು ಈ ಗುಂಪು ಅಪಹರಿಸುತ್ತಿತ್ತು. ಅವರನ್ನು ದರೋಡೆಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಸಾಮಾನ್ಯವಾಗಿ ತಲೆಯನ್ನು ಗೋಡೆಗೋ ಮತ್ತಾವುದೋ ವಸ್ತುವಿಗೋ ಗುದ್ದಿ ಮಕ್ಕಳನ್ನು ಕೊಲೆಗೈಯ್ಯಲಾಗುತ್ತಿತ್ತು. ಮನೆಯಲ್ಲಿ ಅಗಾಧ ಪ್ರಮಾಣದಲ್ಲಿ ಮಕ್ಕಳ ಬಟ್ಟೆ ಹಾಗೂ ಆಟದ ಗೊಂಬೆಗಳು ಪತ್ತೆಯಾಗಿದ್ದರಿಂದ ಹೆಚ್ಚಿನ ತನಿಖೆ ನಡೆಸಲಾಗಿತ್ತು. ಮೊದಲಿಗೆ ಯಾರೂ ತಪ್ಪೊಪ್ಪಿಕೊಂಡಿರಲಿಲ್ಲ. ಆದರೆ ವಿಚಾರಣೆಯ ಒಂದು ದಿನ ಸೀಮಾ ದುಷ್ಕೃತ್ಯದ ಕುರಿತು ಬಾಯ್ತೆರೆದಳು. ಅವರು ಕೃತ್ಯ ಎಸಗುತ್ತಿದ್ದ ರೀತಿ ಮಹಾರಾಷ್ಟ್ರವನ್ನು ಮಾತ್ರವಲ್ಲದೇ ದೇಶವನ್ನೇ ಆಘಾತಕ್ಕೆ ದೂಡಿತ್ತು.
ಹದಿಮೂರು ಮಕ್ಕಳ ಅಪಹರಣ, ಆರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಸೋದರಿಯರಿಗೆ ಕೊಲ್ಲಾಪುರದ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತು. 2004ರಲ್ಲಿ ಬಾಂಬೆ ಹೈಕೋರ್ಟ್, 2006ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿದ್ದವು.
ಅಪರಾಧಿಗಳು 2008ರಲ್ಲಿ ರಾಜ್ಯಪಾಲರನ್ನು ಸಂಪರ್ಕಿಸಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. 2012-13ರಲ್ಲಿ ಅದು ತಿರಸ್ಕೃತಗೊಂಡಿತ್ತು. ರಾಷ್ಟ್ರಪತಿಗಳು ಕೂಡ 2014ರಲ್ಲಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು. ಒಂದು ವೇಳೆ ನ್ಯಾಯಾಲಯ ಮರಣ ದಂಡನೆಯನ್ನು ಜೀವಾವಧಿಯಾಗಿ ಪರಿವರ್ತಿಸದಿದ್ದರೆ ಈ ಇಬ್ಬರು ಸೋದರಿಯರು ಸ್ವತಂತ್ರ ಭಾರತದಲ್ಲಿ ಗಲ್ಲಿಗೇರಲಿರುವ ಮೊದಲ ಮಹಿಳೆಯರು ಎನಿಸಿಕೊಳ್ಳಲಿದ್ದಾರೆ. ಆದರೆ 2017ರಿಂದಲೂ ಇವರು ಕ್ಷಮಾದಾನ ಪಡೆಯಲು ಯತ್ನಿಸುತ್ತಿದ್ದಾರೆ.
ಕಾರ್ಯಾಂಗದತ್ತ ಬೆರಳು:
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ದೃಢಪಡಿಸಿದ ಸಮಯದಿಂದ 13 ವರ್ಷಗಳಿಗೂ ಹೆಚ್ಚು ಕಾಲ ಸಾವಿನ ಭಯದಲ್ಲಿ ಬದುಕುತ್ತಿದ್ದೇವೆ ಎಂದು ಸಹೋದರಿಯರು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಸ್ತುತ ಮನವಿಯಲ್ಲಿ ತಿಳಿಸಿದ್ದಾರೆ. ಕ್ಷಮಾದಾನ ಅರ್ಜಿ ತೀರ್ಮಾನಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದಕ್ಕೆ ರಾಜ್ಯಪಾಲರು, ರಾಜ್ಯ ಸರ್ಕಾರ, ಕೇಂದ್ರ ಗೃಹ ಸಚಿವಾಲಯ ಮತ್ತು ಭಾರತದ ರಾಷ್ಟ್ರಪತಿಗಳು ಸೇರಿದಂತೆ ಕಾರ್ಯಾಂಗ ಕಾರಣ ಎಂದು ಅವರು ವಾದಿಸಿದ್ದಾರೆ. ಡಿಸೆಂಬರ್ 15, 2021ಕ್ಕೆ ಬಂಧನವಾಗಿ 25 ವರ್ಷ ಕಳೆಯುತ್ತದೆ. ಆದ್ದರಿಂದ ಸಂವಿಧಾನದ 21ನೇ ವಿಧಿಯಡಿ ತಮ್ಮ ಮೂಲಭೂತ ಹಕ್ಕು ರಕ್ಷಿಸಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಸಂದೇಶ್ ಪಾಟೀಲ್ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸರ್ಕಾರದಿಂದ ಸ್ವೀಕರಿಸಿದ ಕೂಡಲೇ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ. ರಾಷ್ಟ್ರಪತಿಗಳು 10 ತಿಂಗಳೊಳಗೆ ಅರ್ಜಿ ಇತ್ಯರ್ಥಪಡಿಸಿದ್ದು ಯಾವುದೇ ವಿಳಂಬವಾಗಿಲ್ಲ ಎಂದರು.
ಮತ್ತೊಂದೆಡೆ, ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಪೈ “ನ್ಯಾಯಾಲಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವುದಾದರೆ ಸುಧಾರಣೆಗೆ ಯಾವುದೇ ಅವಕಾಶವಿಲ್ಲ ಆಜೀವ ಪರ್ಯಂತ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
ಶಿಕ್ಷೆ ಕಡಿಮೆಗೊಳಿಸುವ ಕುರಿತು ರಾಜ್ಯ ಸರ್ಕಾರದ ನಿಲುವೇನು ಎಂಬ ನ್ಯಾಯಾಲಯದ ಪ್ರಶ್ನೆಗೆ ಪೈ ಉತ್ತರಿಸುತ್ತಾ ಸರ್ಕಾರ ಮರಣದಂಡನೆ ಬೆಂಬಲಿಸಲಿದ್ದು ನ್ಯಾಯಾಲಯ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದರೆ ಆಗ ಶಿಕ್ಷೆ ಕಡಿತ ಕುರಿತು ಪರಿಗಣಿಸುವುದಾಗಿ ತಿಳಿಸಿದರು.