ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಹಾಗೂ ʼಕಬೀರ್ ಕಲಾ ಮಂಚ್ʼ ಸಂಘಟನೆಯ ಕಲಾವಿದರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದ ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯದ ಫೆಬ್ರವರಿ 2022ರ ಆದೇಶದ ವಿರುದ್ಧ ಗೋರ್ಖೆ ಮತ್ತು ಗೈಚೋರ್ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್ ಸಿ ಚಂದಕ್ ಅವರಿದ್ದ ಪೀಠ ಪುರಸ್ಕರಿಸಿತು.
ಇದರೊಂದಿಗೆ, ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಈ ಇಬ್ಬರೂ ಬಂಧನದಿಂದ ಬಿಡುಗಡೆಯಾಗಲಿದ್ದಾರೆ.
ಗೋರ್ಖೆ ಮತ್ತು ಗೈಚೋರ್ ತಲಾ ₹1 ಲಕ್ಷ ಮೊತ್ತದ ಜಾಮೀನು ಬಾಂಡ್ ಹಾಗೂ ಶ್ಯೂರಿಟಿ ಸಲ್ಲಿಸಬೇಕಿದ್ದು, ಪ್ರತೀ ತಿಂಗಳ ಮೊದಲ ಸೋಮವಾರ ಎನ್‌ಐಎ ಮುಂಬೈ ಕಚೇರಿಗೆ ಹಾಜರಾಗಬೇಕಾಗಿದೆ. ಆದೇಶದ ವಿವರವಾದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.
ಎನ್ಐಎ 2020ರಲ್ಲಿ ಬಂಧಿಸಿದ್ದ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹನಿ ಬಾಬು ಹಾಗೂ ಕಬೀರ್ ಕಲಾ ಮಂಚ್ ಸದಸ್ಯರಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗತಾಪ್ ಅವರಿಗೆ ಮುಂಬೈನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ 2022ರ ಫೆಬ್ರವರಿಯಲ್ಲಿ, ಜಾಮೀನು ನಿರಾಕರಿಸಿತ್ತು.
ಎಲ್ಗಾರ್ ಪರಿಷತ್ ಕಾರ್ಯಕ್ರಮದಲ್ಲಿ ಆರೋಪಿಗಳ ಪಾತ್ರ ಹಾಗೂ ನಿಷೇಧಿತ ಸಂಘಟನೆಗಳ ಜೊತೆಗಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ಎನ್‌ಐಎ ಮಂಡಿಸಿದ್ದ ವಾದವನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿತ್ತು. ಪ್ರಕರಣದಲ್ಲಿ ಕಠಿಣ ಯುಎಪಿಎ ವಿಧಿಗಳು ಅನ್ವಯವಾಗುತ್ತವೆ ಎಂದು ಹೇಳಿದ್ದ ಅದು ಯುಎಪಿಎ ಪ್ರಕರಣಗಳಲ್ಲಿ ಜಾಮೀನಿಗೆ ಇರುವ ಕಾನೂನು ನಿರ್ಬಂಧ ಮೀರಲು ಯಾವುದೇ ಆಧಾರ ಇಲ್ಲ ಎಂದು ನ್ಯಾಅಭಿಪ್ರಾಯಪಟ್ಟಿತ್ತು.
ಆದರೆ, ಸಾಗರ್ ಗೋರ್ಖೆ ಅವರು ಕಾನೂನು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ, ಅವರ ಹಿಂದಿನ ಜಾಮೀನು ಷರತ್ತುಗಳ ಪಾಲನೆಯನ್ನು ಗಮನಿಸಿ, ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ನವೆಂಬರ್ 20ರಿಂದ ಡಿಸೆಂಬರ್ 16, 2025ರವರೆಗೆ ತಾತ್ಕಾಲಿಕವಾಗಿ ಅವರನ್ನು ಬಿಡುಗಡೆಗೊಳಿಸಲು ಅನುಮತಿ ನೀಡಲಾಗಿತ್ತು. ಈ ಅವಧಿಯಲ್ಲಿ ಅವರಿರುವ ಸ್ಥಳದ ಮೇಲೆ ನಿಗಾ ಇಡಲು ಸದಾ ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆಯನ್ನು ಚಾಲ್ತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು.
ನಂತರ ಗೋರ್ಖೆ ಮತ್ತು ಗೈಚೋರ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಬಾಂಬೆ ಹೈಕೋರ್ಟ್ ಅವರ ಮೇಲ್ಮನವಿಗಳನ್ನು ಪುರಸ್ಕರಿಸಿತು. ಹನಿ ಬಾಬು ಕೂಡ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜಾಮೀನು ಪಡೆದಿದ್ದರು.
ಎಲ್ಗಾರ್ ಪರಿಷತ್–ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿತ್ತು. ಇವರಲ್ಲಿ 2018ರಲ್ಲಿ ಪುಣೆ ಪೊಲೀಸರು ಮೊದಲಿಗೆ 9 ಮಂದಿಯನ್ನು ಬಂಧಿಸಿದ್ದು, ನಂತರ ತನಿಖೆಯನ್ನು ವಹಿಸಿಕೊಂಡ ಎನ್‌ಐಎ ಇನ್ನೂ 7 ಮಂದಿಯನ್ನು ವಶಕ್ಕೆ ಪಡೆದಿತ್ತು.
ಈ 16 ಆರೋಪಿಗಳಲ್ಲಿ ಯೇಸು ಸಂಘದ ಧರ್ಮಗುರು ಹಾಗೂ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ 2021ರಲ್ಲಿ ಬಂಧನದಲ್ಲಿರುವಾಗಲೇ ನಿಧನರಾಗಿದ್ದರು. ಉಳಿದ 15 ಆರೋಪಿಗಳಲ್ಲಿ ಬಹುತೇಕರು ಸುಪ್ರೀಂ ಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಅಥವಾ ತಾತ್ಕಾಲಿಕ ಜಾಮೀನು ಪಡೆದುಕೊಂಡಿದ್ದಾರೆ.
ಬಾಂಬೆ ಹೈಕೋರ್ಟ್ ಇಂದು ಆದೇಶ ನೀಡಿದ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಲ್ಲಿ ವಕೀಲ ಸುರೇಂದ್ರ ಗಾಡ್ಲಿಂಗ್ ಅವರು ಮಾತ್ರವೇ ಜೈಲಿನಲ್ಲಿ ಉಳಿದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಆರೋಪ ನಿಗದಿಯಾಗಿಲ್ಲ. ಮತ್ತು ಆರೋಪಿ ಸಲ್ಲಿಸಿರುವ ಖುಲಾಸೆ ಅರ್ಜಿಗಳ ವಿಚಾರಣೆ ನಡೆಯುತ್ತಿರುವುದರಿಂದ ವಿಚಾರಣಾ ಪ್ರಕ್ರಿಯೆಯೂ ಆರಂಭವಾಗಿಲ್ಲ.