Rona Wilson,
Rona Wilson,  
ಸುದ್ದಿಗಳು

[ಭೀಮಾ ಕೋರೆಗಾಂವ್] ಫೊರೆನ್ಸಿಕ್ ವರದಿ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಕೋರಿದ ರೋನಾ ವಿಲ್ಸನ್

Bar & Bench

ತಮ್ಮ ಕಂಪ್ಯೂಟರ್‌ನಲ್ಲಿ ಮಾಲ್‌ವೇರ್‌ ಬಳಸಿ ದಾಖಲೆಗಳನ್ನು ಹುದುಗಿಸಿಡಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನೇಮಕ ಮಾಡಲು ನಿರ್ದೇಶಿಸುವಂತೆ ಕೋರಿ 2018ರ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ರೋನಾ ವಿಲ್ಸನ್‌ ಮಹತ್ವದ ಬೆಳವಣಿಗೆಯೊಂದರಲ್ಲಿ, ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ದುರುದ್ದೇಶಪೂರಿತ ಕಾನೂನು ಕ್ರಮ, ಮಾನಹಾನಿ ಮತ್ತು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪರಿಹಾರ ಬೇಕೆಂದು ಕೋರಿರುವ ವಿಲ್ಸನ್ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆಯೂ ಮನವಿ ಮಾಡಿದ್ದಾರೆ. ಜೊತೆಗೆ ತಮ್ಮನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಕೂಡ ಪ್ರಾರ್ಥಿಸಿದ್ದಾರೆ. ಪುಣೆ ಪೊಲೀಸರು ವಿಲ್ಸನ್‌ ಅವರಿಂದ ಕಂಪ್ಯೂಟರ್‌ ವಶಪಡಿಸಿಕೊಳ್ಳುವ ಮೊದಲು, ಎರಡು ವರ್ಷಗಳ ಅವಧಿಯಲ್ಲಿ ಮಾಲ್ವೇರ್‌ ದಾಳಿ ನಡೆಸಿ ವಿಲ್ಸನ್‌ ಅವರ ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ಹುದುಗಿಸಿಡಲಾಗಿತ್ತು ಎಂದು ಅಮೆರಿಕ ಮೂಲದ ವಿಧಿವಿಜ್ಞಾನ ಸಲಹಾ ಸಂಸ್ಥೆ ʼಆರ್ಸೆನಲ್ ಕನ್ಸಲ್ಟಿಂಗ್ʼ ವರದಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ.

ವಿಲ್ಸನ್‌ ಹಾಗೂ ಸಹ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲು ಪ್ರಾಸಿಕ್ಯೂಷನ್‌ ಅವಲಂಬಿಸಿರುವ ದಾಖಲೆಗಳನ್ನು ವಿಲ್ಸನ್‌ ಅವರ ಎಲೆಕ್ಟ್ರಾನಿಕ್‌ ಸಾಧನದಲ್ಲಿ ಹುದುಗಿಸಿಡಲಾಗಿತ್ತು ಎಂಬ ವಾದಕ್ಕೆ ಅಮೆರಿಕದ ಫೊರೆನ್ಸಿಕ್‌ ಸಂಸ್ಥೆ ನೀಡಿರುವ ವರದಿ ಆಧಾರವಾಗಿದೆ.

ಆರ್ಸೆನಲ್ ವರದಿಯ ಪ್ರಕಾರ, ದಾಳಿಕೋರ ನೆಟ್‌ವೈರ್ ಎಂಬ ಮಾಲ್‌ವೇರ್ ಅಳವಡಿಸಿ ದಾಳಿ ಮಾಡಿದ್ದು, ಅದರ ಮೂಲಕ ಮೊದಲು ಕಂಪ್ಯೂಟರ್‌ ಮೇಲೆ ನಿಗಾ ಇರಿಸಲಾಗಿದೆ. ನಂತರ ದಾಖಲೆಗಳನ್ನು ಹುದುಗಿಸಿಡಲಾಗಿದೆ. ಡಾ. ವರವರ ರಾವ್ ಅವರ ಇಮೇಲ್ ಖಾತೆ ಬಳಸಿ ಯಾರೋ ಒಬ್ಬರು ಅನುಮಾನಾಸ್ಪದ ಇಮೇಲ್‌ ಕಳುಹಿಸಿದ ನಂತರ ಈ ಕೃತ್ಯ ಎಸಗಲಾಗಿದೆ. 82 ವರ್ಷದ ರಾವ್ ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದಾರೆ. ವರದಿಯ ಪ್ರಕಾರ ವಿಲ್ಸನ್‌ ಅವರು ನಿರ್ದಿಷ್ಟ ದಾಖಲೆ ಒಳಗೊಂಡಿದ್ದ ಇಮೇಲ್‌ ತೆರೆದ ನಂತರ ಅವರ ಕಂಪ್ಯೂಟರ್‌ನಲ್ಲಿ ಟ್ರೋಜನ್ (ಡಿಜಿಟಲ್‌ ಮಾಲ್‌ವೇರ್‌) ನುಸುಳಿದೆ. ಅಂತಹ ಐದು ಟ್ರೋಜನ್‌ ಮಾದರಿಗಳು ವಿಲ್ಸನ್‌ ಕಂಪ್ಯೂಟರಿನಲ್ಲಿ ಪತ್ತೆಯಾಗಿರುವುದಾಗಿ ಆರ್ಸೆನಲ್‌ ತಿಳಿಸಿದೆ.

ಅಲ್ಲದೆ ವಿಲ್ಸನ್‌ ಕಂಪ್ಯೂಟರ್‌ನಲ್ಲಿ ಮೈಕ್ರೊಸಾಫ್ಟ್‌ ವರ್ಡ್‌ನ 2007ನೇ ಆವೃತ್ತಿ ಮಾತ್ರ ಇದ್ದು 2010 ಅಥವಾ 2013 ಆವೃತ್ತಿ ಅಳವಡಿಸಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರ್ಸೆನಿಕ್‌ ಹೇಳಿದೆ. ತನ್ನಿಂದ ಕಂಪ್ಯೂಟರ್‌ ವಶಪಡಿಸಿಕೊಳ್ಳುವ ಮೊದಲು 22 ತಿಂಗಳ ಅವಧಿಯಲ್ಲಿ ಮಾಲ್‌ವೇರ್‌ ಮೂಲಕ ದಾಖಲೆಗಳನ್ನು ಹುದುಗಿಸಿಡಲಾಗಿದೆ. ಅಂತಹ ಸಾಕ್ಷ್ಯಗಳನ್ನು ಹುದುಗಿಸಿಡುವುದು ಮತ್ತು ರೂಪಿಸುವುದು ಸುಳ್ಳು ವಿಚಾರಣೆಗೆ ಸಮನಾಗಿರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಭೀಮಾ ಕೋರೆಗಾಂವ್‌ನಲ್ಲಿ ಎಲ್ಗಾರ್ ಪರಿಷತ್ ಸಭೆ ಏರ್ಪಡಿಸಿದ ಸಂದರ್ಭದಲ್ಲಿ ನೈಜ ಅಪರಾಧಿಗಳನ್ನು ಮುಚ್ಚಿಟ್ಟು ಪ್ರಸ್ತುತ ಆರೋಪಿಗಳನ್ನು ಗುರಿಯಾಗಿಸಿ ಕಾನೂನುಕ್ರಮ ಜರುಗಿಸಿರುವ ಹಿಂದೆ ದುರುದ್ದೇಶವಿದೆ ಎಂದು ಕೂಡ ವಿಲ್ಸನ್‌ ಅವರ ಅರ್ಜಿ ತಿಳಿಸುತ್ತದೆ. ಸಂಭಾಜಿ ಬಿಡೆ ಮತ್ತು ಮಿಲಿಂದ್‌ ಏಕ್ಬೋಟೆ ಅವರ ವಿರುದ್ಧ ಮೊದಲು ಎಫ್‌ಐಆರ್‌ ದಾಖಲಿಸಲಾಗಿತ್ತು. ಆದರೆ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿಲ್ಲ‌ ಮತ್ತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.