ಬಿಹಾರದಲ್ಲಿ ಅಸ್ತಿತ್ವದಲ್ಲಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಎಲ್ಲಾ ಸೇತುವೆಗಳ ಸಮಗ್ರ ರಾಚನಿಕ ಪರಿಶೀಲನೆಯನ್ನು ಆಧುನಿಕ ರೀತಿಯಲ್ಲಿ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ [ಬ್ರಜೇಶ್ ಸಿಂಗ್ ಮತ್ತು ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕಳೆದ 15 ದಿನಗಳಲ್ಲಿ, ಬಿಹಾರ ರಾಜ್ಯದಲ್ಲಿ ಒಂಬತ್ತು ಸೇತುವೆಗಳು ಕುಸಿದಿವೆ. ಕಳೆದ ಎರಡು ವರ್ಷಗಳಲ್ಲಿ ಬಿಹಾರದಲ್ಲಿ ಹಲವು ನಿರ್ಮಾಣ ಹಂತದಲ್ಲಿರುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಸೇತುವೆಗಳು ಕುಸಿದಿದ್ದು, ಜೀವಹಾನಿ ಮತ್ತು ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿರುವುದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಬಿಹಾರದಲ್ಲಿ ಸೇತುವೆ ಸತತ ಕುಸಿತದಿಂದ ಯಾವುದೇ ಪಾಠ ಕಲಿಸಿಲ್ಲ ಮತ್ತು ಸೇತುವೆಗಳಂತಹ ನಿರ್ಣಾಯಕ ಮೂಲಸೌಕರ್ಯಗಳ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತಿದೆ. ಈ ಘಟನೆಗಳು ಕೇವಲ ಆಕಸ್ಮಿಕಗಳಲ್ಲ ಬದಲಿಗೆ ಮಾನವ ನಿರ್ಮಿತ ವಿಪತ್ತುಗಳು ಎಂದು ಮನವಿಯಲ್ಲಿ ದೂರಲಾಗಿದೆ.
ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ 73.06ರಷ್ಟು ಪ್ರವಾಹ ಪೀಡಿತ ಸ್ಥಳಗಳಿದ್ದು ಸೇತುವೆಗಳ ಪದೇ ಪದೇ ಕುಸಿತ ಬಹಳಷ್ಟು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಎಂದು ಅರ್ಜಿಯಲ್ಲಿ ಒತ್ತಿಹೇಳಲಾಗಿದೆ.
ಜನ ನಿತ್ಯದ ಕೆಲಸಗಳಲ್ಲಿ ಸಲೀಸಾಗಿ ತೊಡಗಲು ಅನುವಾಗುವಂತೆ ಸೂಕ್ತ ವಾಸಸ್ಥಳ, ಸುರಕ್ಷಿತ ಮತ್ತು ಯೋಗ್ಯವಾದ ಕಟ್ಟಡ, ಸ್ವಚ್ಛ ಮತ್ತು ಯೋಗ್ಯ ಪರಿಸರ, ಸಾಕಷ್ಟು ಬೆಳಕು, ಶುದ್ಧ ಗಾಳಿ ಮತ್ತು ನೀರು, ವಿದ್ಯುತ್, ನೈರ್ಮಲ್ಯ ಮತ್ತಿತರ ನಾಗರಿಕ ಸೌಲಭ್ಯಗಳನ್ನು ಪಡೆಯುವ ಆಶ್ರಯದ ಹಕ್ಕು ನಾಗರಿಕನಿಗೆ ಇದೆ ಎಂದು ಚಮೇಲಿ ಸಿಂಗ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗಾಗಿ ಸೇತುವೆಗಳ ಸಮಗ್ರ ಪರಿಶೀಲನೆ ಮಾಡುವ ಜೊತೆಗೆ ರಾಜ್ಯದ ಎಲ್ಲಾ ಸೇತುವೆಗಳ ನೈಜ-ಸಮಯದ ಮೇಲ್ವಿಚಾರಣೆಗಾಗಿ ಸೂಕ್ತ ನೀತಿ ರೂಪಿಸುವಂತೆ, ಜೊತೆಗೆ ರಾಜ್ಯದಲ್ಲಿನ ಸೇತುವೆಗಳ ಮೇಲ್ವಿಚಾರಣೆಗಾಗಿ ಪರಿಣಿತ ಸಂಸ್ಥೆಯನ್ನು ರಚಿಸುವಂತೆ ಬಿಹಾರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿದೆ.