Justice Bela Trivedi and Supreme Court 
ಸುದ್ದಿಗಳು

ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನೋ ರಿಟ್‌ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಬೇಲಾ ತ್ರಿವೇದಿ

ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ತ್ರಿವೇದಿ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಬಳಿಕ ನ್ಯಾ. ಬೇಲಾ ವಿಚಾರಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದರು.

Bar & Bench

ಗುಜರಾತ್‌ ಕೋಮುಗಲಭೆ ವೇಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ತನ್ನ ಕುಟುಂಬದ ಸದಸ್ಯರನ್ನು ಕೊಂದ 11 ಅಪರಾಧಿಗಳ ಶಿಕ್ಷೆ ತಗ್ಗಿಸಿ, ಬಿಡುಗಡೆಗೊಳಿಸಿರುವ ಗುಜರಾತ್‌ ಸರ್ಕಾರದ ನಡೆ ಪ್ರಶ್ನಿಸಿ ಬಿಲ್ಕಿಸ್‌ ಬಾನೋ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮಂಗಳವಾರ ಹಿಂದೆ ಸರಿದಿದ್ದಾರೆ.

ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ತ್ರಿವೇದಿ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಬಳಿಕ ನ್ಯಾ. ಬೇಲಾ ವಿಚಾರಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದರು.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮುಗಲಭೆ ವೇಳೆ ದಹೋಡ್ ಜಿಲ್ಲೆಯ ಲಿಮ್‌ಖೆಡಾ ತಾಲ್ಲೂಕಿನಲ್ಲಿ ಬಾನೋ ಅವರ ಮೇಲೆ ಗಲಭೆಕೋರರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿತ್ತು. ಅಲ್ಲದೆ ಇದೇ ವೇಳೆ ಗಲಭೆಕೋರರ ಗುಂಪು ಹನ್ನೆರಡು ಜನರನ್ನು ಹತ್ಯೆಗೈದಿತ್ತು. ಇದರಲ್ಲಿ ಬಾನೋ ಅವರ ಮೂರು ವರ್ಷದ ಮಗಳು ಕೂಡ ಸೇರಿದ್ದಳು.

ಪ್ರಕರಣದ ಹಿನ್ನೆಲೆ:

ಬಾನೋ ಅವರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಪರಾಧಿ ರಾಧೇಶ್ಯಾಮ್ ಭಗವಾನ್‌ದಾಸ್‌ ಶಾ ಅಲಿಯಾಸ್‌ ಲಾಲಾ ವಕೀಲ್‌ ಎಂಬಾತ ತಮ್ಮನ್ನು ಅಪರಾಧ ಘಟಿಸಿದ ಜುಲೈ 9, 1992ರ ಸಂದರ್ಭದಲ್ಲಿ ಗುಜರಾತ್‌ ರಾಜ್ಯದಲ್ಲಿ ಇದ್ದ ನೀತಿಯಡಿ ಸನ್ನಡತೆಯ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಮಾಡುವಂತೆ ಗುಜರಾತ್‌ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಇದಕ್ಕೂ ಮೊದಲು ಅವರು ಶಿಕ್ಷೆ ತಗ್ಗಿಸಲು ಕೋರಿ ಗುಜರಾತ್‌ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿತ್ತು. ಮಹಾರಾಷ್ಟ್ರದಲ್ಲಿ ಪ್ರಕರಣದ ವಿಚಾರಣೆ ನಡೆದಿರುವುದರಿಂದ ಅವಧಿಪೂರ್ವ ಬಿಡುಗಡೆ ಮನವಿ ಸಹ ಮಹಾರಾಷ್ಟ್ರದಲ್ಲಿಯೇ ಸಲ್ಲಿಕೆಯಾಗಬೇಕು ಎಂದು ಗುಜರಾತ್‌ ಹೈಕೋರ್ಟ್‌ ಹೇಳಿ ಮನವಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣವನ್ನು ಅಲಿಸಿದ್ದ ಸುಪ್ರೀಂ ಕೋರ್ಟ್‌ ಮೇ 13 ರಂದು ತನ್ನ ಆದೇಶದಲ್ಲಿ ಅಪರಾಧ ನಡೆದ ರಾಜ್ಯದಲ್ಲಿ ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ನೀತಿಯಂತೆ ಅಪರಾಧಿಗಳ ಬಿಡುಗಡೆಯನ್ನು ಪರಿಗಣಿಸಬೇಕು ಎಂದು ಹೇಳಿತ್ತು.

ಇದರ ಅನುಸಾರ ಗುಜರಾತ್‌ ಸರ್ಕಾರ ಬಾನೋ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿಯನ್ನು ಬಿಡುಗಡೆ ಮಾಡಿತು. ಇದನ್ನು ಪ್ರಶ್ನಿಸಿ ಬಿಲ್ಕಿಸ್‌ ಬಾನೋ ಸುಪ್ರೀಂಕೋರ್ಟ್‌ನಲ್ಲಿ ಪ್ರಸಕ್ತ ಅರ್ಜಿ ಸಲ್ಲಿಸಿದ್ದಾರೆ.