X Corp and Delhi High Court 
ಸುದ್ದಿಗಳು

ʼಹಿಂದುತ್ವ ವಾಚ್ʼ ಖಾತೆ ನಿರ್ಬಂಧಿಸಿದ ಕೇಂದ್ರದ ಆದೇಶ ನ್ಯಾಯಸಮ್ಮತವಲ್ಲ: ದೆಹಲಿ ಹೈಕೋರ್ಟ್‌ಗೆ ಎಕ್ಸ್ ವಿವರಣೆ

ʼಹಿಂದುತ್ವ ವಾಚ್ʼ ಖಾತೆ ವಿರುದ್ಧ ಭಾರತ ಸರ್ಕಾರ ಹೊರಡಿಸಿರುವ ನಿರ್ಬಂಧಕ ಆದೇಶ ಆಧಾರರಹಿತ ಮತ್ತು ಅಸಮಂಜಸವಾದುದು ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಹೇಳಿದೆ.

Bar & Bench

ದ್ವೇಷ-ಅಪರಾಧಗಳನ್ನು ತಿಳಿಸುವ ಎಕ್ಸ್‌ ಖಾತೆ ಹಿಂದುತ್ವ ವಾಚ್‌ಗೆ (@HindutvaWatchIn)  ನಿರ್ಬಂಧ ವಿಧಿಸುವ ಭಾರತ ಸರ್ಕಾರದ ನಿರ್ಧಾರ ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವಾಗಿದೆ ಎಂದು ಸಾಮಾಜಿಕ ಮಾಧ್ಯಮ ಕಂಪೆನಿ ಎಕ್ಸ್‌  ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ [ ರಕೀಬ್ ಹಮೀದ್  ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ತನ್ನ ʼಹಿಂದುತ್ವ ವಾಚ್‌ʼ ಖಾತೆಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕಾಶ್ಮೀರಿ ಪತ್ರಕರ್ತ ರಕೀಬ್ ಹಮೀದ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎಕ್ಸ್  ಈ ಪ್ರತಿಕ್ರಿಯೆ ಸಲ್ಲಿಸಿದೆ.

ಖಾತೆ ನಿರ್ಬಂಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ತಾನು ಆಕ್ಷೇಪ ವ್ಯಕ್ತಪಡಿಸಿದರೂ ಸರ್ಕಾರ ಅದನ್ನು ನಿರ್ಬಂಧಿಸಿತು. ನ್ಯಾಯಾಲಯ ಆದೇಶಿಸಿದರೆ ತಾನು ಖಾತೆಯನ್ನು ಮರುಸ್ಥಾಪಿಸಲು ಸಿದ್ಧ ಎಂದು ಅದು ಹೇಳಿದೆ.

ಇದೇ ವೇಳೆ ತಾನು ಕೇವಲ ಮಧ್ಯಸ್ಥ ವೇದಿಕೆಯಾಗಿದ್ದು ಸಂವಿಧಾನದ 12ನೇ ವಿಧಿಯ ಅಡಿಯಲ್ಲಿ ಪ್ರಭುತ್ವದ ಭಾಗವಾಗಿರದೇ ಇರುವುದರಿಂದ ಹಮೀದ್‌ ತನ್ನ ವಿರುದ್ಧ ಸಲ್ಲಿಸಿರುವ ರಿಟ್‌ ಅರ್ಜಿ ನಿರ್ವಹಣಾರ್ಹವಲ್ಲ ಎಂದು ಅದು ಪ್ರತಿಪಾದಿಸಿದೆ.

ಹಿಂಸಾಚಾರ ಪ್ರಚೋದಿಸುವ ಮತ್ತು ಕಾನೂನಿಗೆ ಅಡ್ಡಿಪಡಿಸುವ ಸಾಮರ್ಥ್ಯ ಇರುವ ವಿವಿಧ ಖಾತೆಗಳನ್ನು ಪಟ್ಟಿ ಮಾಡಿ ಜನವರಿ 2024ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನಗೆ ನೋಟಿಸ್‌ ನೀಡಿತ್ತು. ಅದರಲ್ಲಿ @HindutvaWatchIn ಸೇರಿತ್ತು ಎಂದು ಎಕ್ಸ್‌ ತಿಳಿಸಿದೆ.

ಆದರೆ ಐಟಿ ಕಾಯಿದೆ-  2000ರ ಸೆಕ್ಷನ್‌ 69 ಎ ವ್ಯಾಪ್ತಿಗೆ ಹಿಂದುತ್ವ ವಾಚ್ ಇನ್ ಬರುವುದಿಲ್ಲ ಎಂದಿದ್ದ ಎಕ್ಸ್‌, ಆಧಾರರಹಿತವಾಗಿ ಸಚಿವಾಲಯ ಖಾತೆಯ ಪೋಸ್ಟ್‌ಗಳನ್ನು ಪ್ರಚೋದನಕಾರಿ ಎಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

ಸಚಿವಾಲಯ ಹೇಳಿದ ಪೋಸ್ಟ್‌ಗಳು ಭಾರತದಲ್ಲಿ ಸುದ್ದಿ ಪ್ರಸಾರಕ್ಕೆ ಅರ್ಹವಾಗಿವೆ. ಜೊತೆಗೆ ಇದೇ ರೀತಿಯ ವಿಷಯ ಉಳ್ಳ ಬೇರೆ ಖಾತೆಗಳಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ಬಂಧ ವಿಧಿಸಿಲ್ಲ. ಇದು ಖಾತೆ ಬಳಕೆದಾರರ ನಡುವೆ ಅಸಮಾನತೆಗೆ ಎಡೆ ಮಾಡಿಕೊಡುತ್ತದೆ. ಹೀಗೆ ನಿರ್ಬಂಧ ವಿಧಿಸುವುದು ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಉಲ್ಲಂಘಿಸುತ್ತದೆ  ಎಂದು ಅದು ಗಮನಸೆಳೆದಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 3, 2024ರಂದು ನಡೆಯಲಿದೆ.