ಮಹಾಲಕ್ಷ್ಮಿ ಮತ್ತು ಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ್ದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರ ಪ್ರತ್ಯೇಕತೆಯ ಬಗೆಗಿನ ಚರ್ಚೆಗೆ ನಾಂದಿ ಹಾಡಿದೆ.
ಸಿಜೆಐ ಅವರ ಮನೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡ ಬಗ್ಗೆ ಮೋದಿಯವರು ಟ್ವೀಟ್ ಮಾಡಿದ್ದು ಈ ಭೇಟಿ ರಾಜಕೀಯ ಮತ್ತು ಕಾನೂನು ಕ್ಷೇತ್ರದಲ್ಲಿ ಕಳವಳಕ್ಕೆ ಎಡೆ ಮಾಡಿಕೊಟ್ಟಿದೆ ಕಾರ್ಯಾಂಗ ಮತ್ತು ನ್ಯಾಯಾಂಗದ ಈ ಬಗೆಯ ಒಡನಾಟ ಉಂಟುಮಾಡುವ ಪರಿಣಾಮಗಳನ್ನು ಎರಡೂ ಕ್ಷೇತ್ರಗಳು ಪ್ರಶ್ನಿಸಿವೆ.
ಘಟನೆ ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿತವಾಗಿದ್ದರೂ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸ್ಪಷ್ಟವಾಗಿ ಪ್ರತ್ಯೇಕತೆ ಕಾಯ್ದುಕೊಳ್ಳುವ ಪ್ರಾಮುಖ್ಯತೆಯನ್ನು ಕಾನೂನು ತಜ್ಞರು ಒತ್ತಿ ಹೇಳುತ್ತಲೇ ಬಂದಿದ್ದಾರೆ.
ಭಾರತೀಯ ನ್ಯಾಯಾಲಯಗಳಲ್ಲಿ ಸರ್ಕಾರ ಅತಿ ದೊಡ್ಡ ದಾವೆದಾರನಾಗಿರುವುದರಿಂದ, ಈ ಎರಡು ಅಂಗಗಳ ನಡುವಿನ ಯಾವುದೇ ಒಡನಾಟಗಳು ಸಾರ್ವಜನಿಕವಾಗಿ ನಿಕಟ ಪರಿಶೀಲನೆಗೆ ಒಳಪಡುತ್ತವೆ.
ನ್ಯಾಯಾಧೀಶರು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನಡವಳಿಕೆಗಳಿಗೆ ಸಂಬಂಧಿಸಿದಂತೆ 1997 ರಲ್ಲಿ ಸುಪ್ರೀಂ ಕೋರ್ಟ್ ಪೂರ್ಣ ಪೀಠ ಅಳವಡಿಸಿಕೊಂಡಿದ್ದ ನ್ಯಾಯಾಂಗ ಮೌಲ್ಯಗಳ ದಾಖಲೆ ಹೇಳುವಂತೆ ಉನ್ನತ ನ್ಯಾಯಾಂಗದ ಸದಸ್ಯರ ವರ್ತನೆ ಮತ್ತು ನಡೆ ನ್ಯಾಯಾಂಗದ ಅಖಂಡತೆ ಬಗ್ಗೆ ಜನರು ಇಟ್ಟಿರುವ ವಿಶ್ವಾಸವನ್ನು ಎತ್ತಿಹಿಡಿಯುವಂತಿರಬೇಕು. ಅಂತೆಯೇ ವೃತ್ತಿಪರವಾಗಿರಲಿ ಇಲ್ಲವೇ ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಯಾವುದೇ ಕಾರ್ಯ ಈ ನಂಬಿಕೆಗೆ ಕುಂದು ತರುವಂತಿದ್ದರೆ ಅಂತಹ ಗ್ರಹಿಕೆಯನ್ನು ತಪ್ಪಿಸಬೇಕು ಎಂದಿದೆ.
ನ್ಯಾಯಾಧೀಶರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಅಂತರ ಕಾಪಾಡಿಕೊಳ್ಳಬೇಕು ಎಂದು ಅದು ವಿವರಿಸುತ್ತದೆ.
ತಮ್ಮ ಕುಟುಂಬಸ್ಥರು, ನಿಕಟ ಸಂಬಂಧಿಗಳು ಹಾಗೂ ಸ್ನೇಹಿತರನ್ನು ಹೊರತುಪಡಿಸಿ ನ್ಯಾಯಾಧೀಶರು ಬೇರೆಯವರಿಂದ ಉಡುಗೊರೆ ಅಥವಾ ಆತಿಥ್ಯ ಸ್ವೀಕರಿಸುವಂತಿಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ.