ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯಿದೆ (ಎಫ್‌ಇಒ) ಪ್ರಶ್ನಿಸಿ ಬೆಂಗಳೂರು ಮೂಲದ ಜಾಗತಿಕ ಉದ್ಯಮಿ ವಿಜಯ್ ಮಲ್ಯ ತಾವು ಸಲ್ಲಿಸಿರುವ ಅರ್ಜಿಯ ವಿಚಾರಣೆಗೂ ಮುನ್ನ ಭಾರತಕ್ಕೆ ಯಾವಾಗ ಮರಳಲಿದ್ದಾರೆ ಎಂಬುದನ್ನು ಪ್ರಮಾಣಪತ್ರದ ಮೂಲಕ ವಿವರಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ [ವಿಜಯ್ ಮಲ್ಯ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ನ್ಯಾಯಾಲಯದ ವ್ಯಾಪ್ತಿಗೆ ಮಲ್ಯ ಬಾರದ ಹೊರತು ಎಫ್ಇಒ ಕಾಯಿದೆ ವಿರುದ್ಧ ಅವರು ಸಲ್ಲಿಸಿದ್ದ ಅರ್ಜಿ ಆಲಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾ. ಗೌತಮ್ ಅಂಖಡ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರು ಈ ನ್ಯಾಯಾಲಯದ ವ್ಯಾಪ್ತಿಗೆ ಬಾರದೆ ಇರುವ ಸ್ಥಿತಿಯಲ್ಲಿ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು, ವಿಚಾರಣೆ ನಡೆಸಬಾರದು ಎಂಬ ಕಾರಣಕ್ಕೆ ಈ ಆದೇಶ ನೀಡಲಾಗಿದೆ ಎಂದು ಪೀಠ ವಿವರಿಸಿತು.
ಮಲ್ಯಾ ಅವರನ್ನು ದೇಶಭ್ರಷ್ಟ ವ್ಯಕ್ತಿ ಎಂದು ಘೋಷಿಸಿದ್ದ ಆದೇಶ ಪ್ರಶ್ನಿಸಿ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ ಎಂಬುದನ್ನು ನ್ಯಾಯಮೂರ್ತಿಗಳು ಪರಿಗಣನೆಗೆ ತೆಗೆದುಕೊಂಡರು.
ಎರಡೂ ಅರ್ಜಿಗಳು ಒಂದೇ ಸಮಯದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದ ಪೀಠ, ಯಾವ ಅರ್ಜಿಯನ್ನು ಹಿಂಪಡೆಯಲು ಇಚ್ಛಿಸುತ್ತಾರೆಯೇ ಎಂಬುದನ್ನು ಮಲ್ಯ ಸ್ಪಷ್ಟಪಡಿಸಬೇಕು ಎಂದು ಸೂಚಿಸಿತು.
ಮಲ್ಯ ಪರವಾಗಿ ಹಾಜರಾದ ಹಿರಿಯ ವಕೀಲ ಅಮಿತ್ ದೇಸಾಯಿ, ಸಾಲವನ್ನು ಪರಿಣಾಮಕಾರಿಯಾಗಿ ತೀರಿಸಲಾಗಿದೆ ಎಂದು ವಾದಿಸಿದರು. ಮೂಲ ಸಾಲ ₹6,000 ಕೋಟಿ ಇದ್ದರೂ, ಬ್ಯಾಂಕ್‌ಗಳು ಮಲ್ಯಾ ಅವರ ₹14,000 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿವೆ ಎಂದು ಅವರು ತಿಳಿಸಿದರು.
ಪ್ರಕರಣಗಳನ್ನು ಮುಕ್ತಾಯಗೊಳಿಸಲು ಹಾಗೂ ಸಾಲದಿಂದ ಹೊರಬರಲು ಬಯಸುವುದಾಗಿ ಮಲ್ಯ ಪರ ವಕೀಲರು ಹೇಳಿದರು. ವಿದೇಶದಲ್ಲಿದ್ದರೂ ಮಲ್ಯಾಗೆ ಕಾನೂನು ಪ್ರತಿನಿಧಿಯನ್ನು ಪಡೆಯುವ ಹಕ್ಕು ಇದೆ ಎಂದರು.
ನ್ಯಾಯಾಲಯದ ವ್ಯಾಪ್ತಿಗೆ ಬಾರದ ಆರೋಪಿಯನ್ನು ಕ್ರಿಮಿನಲ್ ಪ್ರಕರಣವನ್ನು ತೆರವುಗೊಳಿಸಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ಜಾರಿ ನಿರ್ದೇಶನಾಲಯದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನ್ಯಾಯಾಲಯ ಪ್ರಕರಣವನ್ನು ಫೆಬ್ರವರಿ 12ಕ್ಕೆ ಮುಂದೂಡಿತು.