ಮಲ್ಯ, ನೀರವ್ ಮೋದಿ ಕುರಿತ 'ದಿ ಡರ್ಟಿ ಡಜನ್' ಪುಸ್ತಕದ ಮೇಲಿನ ತಡೆಯಾಜ್ಞೆ ತೆರವುಗೊಳಿಸಿದ ಕೊಲ್ಕತ್ತಾ ನ್ಯಾಯಾಲಯ

ಪುಸ್ತಕದಲ್ಲಿ ತನ್ನ ಹಾಗೂ ತನ್ನ ನಿರ್ದೇಶಕರ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪ ಮಾಡಲಾಗಿದೆ ಎಂದು ದೂರಿ ಎಲೆಕ್ಟ್ರೋಸ್ಟೀಲ್ ಕ್ಯಾಸ್ಟಿಂಗ್ ಲಿಮಿಟೆಡ್ ಮೊಕದ್ದಮೆ ಹೂಡಿತ್ತು.
The Dirty Dozen and Journalist N Sundaresha Subramanianx.com
The Dirty Dozen and Journalist N Sundaresha Subramanianx.com
Published on

ಪತ್ರಕರ್ತ ಎನ್ ಸುಂದರೇಶ ಸುಬ್ರಮಣಿಯನ್ ಅವರು ಬರೆದಿರುವ ʼದಿ ಡರ್ಟಿ ಡಜನ್‌ʼ ಕೃತಿ ಪ್ರಕಟಿಸಿದ್ದ ಪ್ರಕಾಶನ ಸಂಸ್ಥೆ ಪ್ಯಾನ್ ಮ್ಯಾಕ್‌ಮಿಲನ್ ಇಂಡಿಯಾ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಮಧ್ಯಂತರ ನಿರ್ಬಂಧಕಾಜ್ಞೆಯನ್ನು ಈಚೆಗೆ ಕೊಲ್ಕತ್ತಾ ನ್ಯಾಯಾಲಯ ರದ್ದುಗೊಳಿಸಿದೆ [ಎಲೆಕ್ಟ್ರೋಸ್ಟೀಲ್ ಕ್ಯಾಸ್ಟಿಂಗ್ಸ್ ಲಿಮಿಟೆಡ್ ಮತ್ತು ಪ್ಯಾನ್ ಮ್ಯಾಕ್‌ಮಿಲನ್ ಪಬ್ಲಿಷಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಜತಿನ್ ಮೆಹ್ತಾ ಅವರ ಆರ್ಥಿಕ ದುಸ್ಸಾಹಸಗಳು ಸೇರಿದಂತೆ ಹನ್ನೆರಡು ಬೃಹತ್‌ ಕಾರ್ಪೊರೇಟ್ ಸುಸ್ತಿದಾರರ ಕತೆಗಳನ್ನು ಆಧರಿಸಿ 2024ರಲ್ಲಿ ಈ ಕೃತಿಯನ್ನು ಪ್ರಕಟಿಸಲಾಗಿತ್ತು.

Also Read
ಸಲ್ಮಾನ್ ರಶ್ದಿ ಅವರ ಕೃತಿ ʼದ ಸಟಾನಿಕ್ ವರ್ಸಸ್ʼ ಆಮದು ನಿಷೇಧ ತೆರವುಗೊಳಿಸಿದ ದೆಹಲಿ ಹೈಕೋರ್ಟ್

ಪುಸ್ತಕವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದು ವಾಸ್ತವ ಸಂಗತಿಗಳನ್ನು ಆಧರಿಸಿದೆ ಎಂಬ ಪ್ರತಿವಾದಿಯ ವಾದ ಮೇಲ್ನೋಟಕ್ಕೆ ಸಮರ್ಥಿಸಿಕೊಳ್ಳುವಂಥದ್ದಾಗಿದೆ ಎಂಬುದಾಗಿ ತಿಳಿಸಿದ ಸಿವಿಲ್ ನ್ಯಾಯಾಧೀಶೆ ಮೌಮಿತಾ ರೇ ಅವರು ಮಧ್ಯಂತರ ನಿರ್ಬಂಧಕಾಜ್ಞೆ ರದ್ದುಗೊಳಿಸಿದರು.

ಬ್ಲೂಮ್‌ಬರ್ಗ್ ಟೆಲಿವಿಷನ್ಸ್ ಪ್ರೊಡಕ್ಷನ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್‌ ಲಿಮಿಟೆಡ್ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನಂತೆ, ಪ್ರತಿವಾದಿಗಳು ಸಮರ್ಥನೆಯನ್ನು ಪ್ರತಿಪಾದಿಸಿದರೆ ಮಧ್ಯಂತರ ತಡೆಯಾಜ್ಞೆ ವಿಧಿಸುವಂತಿಲ್ಲ ಎಂಬುದು ಈಗಾಗಲೇ ಇತ್ಯರ್ಥಗೊಂಡ ಕಾನೂನಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕೃತಿಯಲ್ಲಿ ಸತ್ಯವನ್ನು ಪ್ರತಿಪಾದಿಸಲಾಗಿದ್ದು ಅದರ ಮಾಹಿತಿ ವಿಶ್ವಾಸಾರ್ಹ ಮೂಲಗಳನ್ನು ಆಧರಿಸಿದೆ. ಪುಸ್ತಕದ ಸಂಗತಿಗಳು 2015ರಿಂದಲೂ ಸಾರ್ವಜನಿಕವಾಗಿ ಗೊತ್ತಿರುವಂತಹವು. ಕೃತಿ ಈಗಾಗಲೇ ವ್ಯಾಪಕವಾಗಿ ಪ್ರಸಾರವಾಗಿರುವುದರಿಂದ ನಿರ್ಬಂಧಕಾಜ್ಞೆ ನಿಷ್ಪರಿಣಾಮಕಾರಿ ಎಂತಲೂ ನ್ಯಾಯಾಲಯ ನುಡಿದಿದೆ.

ಕೃತಿಯು ಮಾನಹಾನಿ ಉಂಟುಮಾಡಿದ್ದಕ್ಕಾಗಿ ಪುಸ್ತಕದ ಲೇಖಕರು ಮತ್ತು ಪ್ರಕಾಶಕರು ಕ್ಷಮೆ ಕೋರಬೇಕು ಮತ್ತು ₹50 ಕೋಟಿ ಪರಿಹಾರ ನೀಡಬೇಕು ಎಂದು ಎಲೆಕ್ಟ್ರೋಸ್ಟೀಲ್ ಕ್ಯಾಸ್ಟಿಂಗ್ ಲಿಮಿಟೆಡ್ (ಇಎಸ್ಎಲ್) ಕೋರಿತ್ತು.

Also Read
ಕೆಜಿಎಫ್‌ ಕೃತಿ ಸ್ವಾಮ್ಯ ಉಲ್ಲಂಘನೆ: ನ್ಯಾಯಾಂಗ ನಿಂದನೆ ಅರ್ಜಿ ದಾಖಲು; ರಾಹುಲ್‌ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಪುಸ್ತಕದ ಒಂದು ಅಧ್ಯಾಯದಲ್ಲಿ ತನ್ನ ಮತ್ತು ತನ್ನ ನಿರ್ದೇಶಕರಾದ ಉಮಾಂಗ್ ಮತ್ತು ಮಾಯಾಂಕ್ ಕೇಜ್ರಿವಾಲ್ ಅವರ ಕಾರ್ಯಚಟುವಟಿಕೆಗಳ ಕುರಿತು ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ಹೇಳಿಕೆ ಪ್ರಕಟಿಸಲಾಗಿದೆ ಎಂದು ಅದು ದೂರಿತ್ತು.

ಜುಲೈ 2024ರಲ್ಲಿ ಇಎಸ್‌ಎಲ್‌ ಪರವಾಗಿ ಮಧ್ಯಂತರ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ ಪುಸ್ತಕದ ಉಳಿದ ಪ್ರತಿಗಳ ಪ್ರಸರಣ ಮತ್ತು ಪ್ರಕಟಣೆಗೆ ನಿರ್ಬಂಧ ವಿಧಿಸಿತ್ತು. ಪ್ರಸ್ತುತ ಆದೇಶದಿಂದ ಈ ತಡೆಯಾಜ್ಞೆ ರದ್ದಾಗಿದೆ.

Kannada Bar & Bench
kannada.barandbench.com