rrವಿಚಾರವಾದಿ, ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಹಾಗೂ ಲೇಖಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಸಚಿನ್ ಅಂದುರೆ, ಗಣೇಶ್ ಮಿಸ್ಕಿನ್, ಅಮಿತ್ ದೆಗ್ವೇಕರ್, ಅಮಿತ್ ಬಡ್ಡಿ, ಭರತ್ ಕುರಾಣೆ ಮತ್ತು ವಾಸುದೇವ್ ಸೂರ್ಯವಂಶಿ ಅವರಿಗೆ ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರು ಜಾಮೀನು ನೀಡಿದರು.
ಆರೋಪಿಗಳ ದೀರ್ಘಾವಧಿಯ ಸೆರೆವಾಸ, 250ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಮಾಡಬೇಕಿರುವುದರಿಂದ ಹಾಗೂ ವಿಚಾರಣೆಯಲ್ಲಿ ಪ್ರಗತಿಯ ಕೊರತೆಯಿಂದಾಗಿ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
2015ರ ಫೆಬ್ರವರಿಯಲ್ಲಿ ಕೊಲ್ಲಾಪುರದ ಪನ್ಸಾರೆ ಅವರ ಮನೆಯ ಬಳಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ಅವರು ಐದು ದಿನಗಳ ಬಳಿಕ ಮೃತಪಟ್ಟಿದ್ದರು.
ಅವರ ಪುತ್ರಿ ಸ್ಮಿತಾ ಪನ್ಸಾರೆ ಅವರು ತನಿಖಾ ಸಂಸ್ಥೆಯು ನಿಧಾನಗತಿಯ ಪ್ರಗತಿ ಸಾಧಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪನ್ಸಾರೆ ಹಾಗೂ ವಿಚಾರವಾದಿ ನರೇಂದ್ರ ದಾಭೋಲ್ಕರ್, ಸಂಶೋಧಕ ಎಂ ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ಅವರು ದೂರಿದ್ದರು. ಈ ಎಲ್ಲಾ ಪ್ರಕರಣಗಳ ಹಿಂದೆ ಸಾಮಾನ್ಯ ಸೂತ್ರಧಾರ ಇದ್ದಾನೆ ಎಂದಿದ್ದರು.
ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ಪ್ರಕರಣದ ತನಿಖೆಯ ಕುರಿತಾದ ನ್ಯಾಯಾಂಗ ಮೇಲ್ವಿಚಾರಣೆಯನ್ನು ಸ್ಥಗಿತಗೊಳಿಸಿತ್ತು.
ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಹಿಂದೆ ಪನ್ಸಾರೆ ಹತ್ಯೆಯ ತನಿಖೆ ನಡೆಸಿತ್ತು. ಆಗಸ್ಟ್ 2022 ರಲ್ಲಿ, ಹೈಕೋರ್ಟ್ ಆದೇಶದ ಮೇರೆಗೆ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ವರ್ಗಾಯಿಸಲಾಗಿತ್ತು.
ಪನ್ಸಾರೆ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಸಮೀರ್ ಗಾಯಕ್‌ವಾಡ್‌ಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಕಳೆದ ವರ್ಷ ವಜಾಗೊಳಿಸಿತ್ತು.