
ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಅವರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಧಾರವಾಡ ಜಿಲ್ಲಾ ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ. ಈಗಾಗಲೇ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಈಚೆಗೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ 18 ಆರೋಪಿಗಳ ಪೈಕಿ 17 ಮಂದಿಗೆ ಜಾಮೀನು ದೊರೆತಿತ್ತು. ಒಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಇದರೊಂದಿಗೆ ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಇಬ್ಬರು ಖ್ಯಾತನಾಮರ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಬಿಡುಗಡೆ ಕಂಡಂತಾಗಿದೆ.
ಮಹಾರಾಷ್ಟ್ರದ ಒಂದನೇ ಆರೋಪಿ ಅಮೋಲ್ ಕಾಳೆ, ಧಾರವಾಡದ ಎರಡನೇ ಆರೋಪಿ ಗಣೇಶ್ ಮಿಸ್ಕಿನ್ ಮತ್ತು ಮಹಾರಾಷ್ಟ್ರದ ಐದನೇ ಆರೋಪಿ ಶರದ್ ಕಾಲಸ್ಕರ್‌ಗೆ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪೂರ್ಣಿಮಾ ಎನ್. ಪೈ ಅವರು ಜಾಮೀನು ಮಂಜೂರು ಮಾಡಿದ್ದಾರೆ.
“ಮೂರನೇ ಆರೋಪಿ ಪ್ರವೀಣ್, ನಾಲ್ಕನೇ ಆರೋಪಿ ವಾಸುದೇವ್ ಸೂರ್ಯವಂಶಿ, ಆರನೇ ಆರೋಪಿ ಅಮಿತ್ ಬಡ್ಡಿಗೆ ಹೈಕೋರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿಚಾರಣೆಯು ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಮತ್ತು ಅರ್ಜಿದಾರರು ಜಾಮೀನು ಪಡೆಯಲು ಸೂಕ್ತ ಕಾರಣಗಳನ್ನು ನೀಡಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಕಾಳೆ, ಮಿಸ್ಕಿನ್ ಮತ್ತು ಶರದ್ ಅವರು ತಲಾ 2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ನೀಡಬೇಕು, ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣೆಯಿಂದ ವಿನಾಯಿತಿ ದೊರೆಯದ ಹೊರತು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಬೇಕು. ಆರೋಪಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಕ್ಷಿಗಳನ್ನು ತಿರುಚಬಾರದು ಅಥವಾ ಪ್ರಭಾವಿಸಬಾರದು. ಇಂಥದ್ದೇ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಬಾರದು. ಆರೋಪಿಗಳು ತಮ್ಮ ನಿವಾಸ, ನೋಂದಾಯಿತ ಮೊಬೈಲ್ ಸಂಖ್ಯೆ, ಇಮೇಲ್ ಮತ್ತು ಅದಕ್ಕೆ ಪೂರಕವಾದ ದಾಖಲೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರ ಆರೋಪಿಗಳ ವಿಳಾಸ ಮತ್ತು ಭದ್ರತಾ ಖಾತರಿಯ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ಕಳುಹಿಸಬೇಕು. ಇದನ್ನು ಪರಿಶೀಲಿಸಿ ಅವರು ವರದಿ ಸಲ್ಲಿಸಿದ ಬಳಿಕ ಭದ್ರತೆಯನ್ನು ಒಪ್ಪಿಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
“ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದಲ್ಲಿ ಶರದ್ ದೋಷಿಯಾಗಿದ್ದಾನೆ. ಕಾಳೆ ಮತ್ತು ಮಿಸ್ಕಿನ್ ಅವರು ಗೋವಿಂದ ಪಾನ್ಸರೆ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಅಲ್ಲದೇ, ಈ ಮೂವರೂ ಆರೋಪಿಗಳು ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಮುಂಬೈ ಎಟಿಎಸ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ ಅಡಿ ಅಪರಾಧ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಅವರು ಆರೋಪಿಗಳಾಗಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದು” ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಇನ್ನು, ಅರ್ಜಿದಾರರ ಪರ ವಕೀಲರು “ಇದುವರೆಗೆ ಪ್ರಾಸಿಕ್ಯೂಷನ್ ಕೇವಲ 22 ಸಾಕ್ಷಿಗಳ ವಿಚಾರಣೆ ನಡೆಸಿದೆ. ಇನ್ನೂ ಸರಿಸುಮಾರು 110 ಸಾಕ್ಷಿಗಳ ವಿಚಾರಣೆ ನಡೆಸಬೇಕಿದೆ. ಪ್ರಕರಣದ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ಇವರಿಗೂ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.
ಮೊದಲನೇ ಆರೋಪಿಯಾಗಿರುವ ಅಮೋಲ್ ಕಾಳೆ ಇಡೀ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್, ಐದನೇ ಆರೋಪಿಯು ಕೊಲೆ ಆರೋಪಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದನು. ಎರಡನೇ ಆರೋಪಿ ಗಣೇಶ್ ಮಿಸ್ಕಿನ್ ಗುಂಡು ಹಾರಿಸಿದ್ದಾನೆ. ಈತನಿಗೆ ಕದ್ದ ಬೈಕ್ ಕೊಟ್ಟಿದ್ದ ಆರೋಪ ಕಾಳೆ ಮೇಲಿದೆ.
ಕಲಬುರ್ಗಿ, ಗೌರಿ ಲಂಕೇಶ್ ಮತ್ತು ಗೋವಿಂದ ಪಾನ್ಸರೆ ಕೊಲೆ ಬಳಸಿರುವ ಪಿಸ್ತೂಲ್ ಅನ್ನು ಐದನೇ ಆರೋಪಿ ಶರದ್ ಕಾಲಸ್ಕರ್ ಪಿಸ್ತೂಲ್ ಬ್ಯಾರೆಲ್ ಮತ್ತು ಸ್ಲೈಡ್ ಅನ್ನು ಬೇರ್ಪಡಿಸಿದ್ದು, ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಬರುವ ನದಿಗೆ ಎಸೆದಿದ್ದಾನೆ ಎಂದು ಎಸ್‌ಐಟಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಧಾರವಾಡದ ಕಲ್ಯಾಣನಗರದಲ್ಲಿ 30.08.2015ರಂದು ಬೆಳಗ್ಗೆ ಬೈಕಿನಲ್ಲಿ ಶರದ್ ಕಾಲಸ್ಕರ್ ಜೊತೆ ಬಂದಿದ್ದ ಗಣೇಶ್ ಮಿಸ್ಕಿನ್ ಕಲಬುರ್ಗಿ ಅವರಿಗೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಕಲಬುರ್ಗಿ ಅವರ ಪುತ್ರಿ ರೂಪದರ್ಶಿ ಅವರು ನೀಡಿದ ದೂರಿನ ಮೇರೆಗೆ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120(B), 109, 449, 302, 201 ಮತ್ತು 35 ಜೊತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25(1) (A), 25(1)(B), 27(1) ಅಡಿ ಅಪರಾಧಕ್ಕಾಗಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.