Bombay High Court and Burger King 
ಸುದ್ದಿಗಳು

ಬರ್ಗರ್ ಕಿಂಗ್ ವಾಣಿಜ್ಯ ಚಿಹ್ನೆ: ಸ್ಥಳೀಯ ರೆಸ್ಟರಂಟ್ ಪರ ಆದೇಶಕ್ಕೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆ

ಅಮೆರಿಕದ ಬರ್ಗರ್ ಕಿಂಗ್ ಭಾರತದಲ್ಲಿ ತನ್ನ ವಾಣಿಜ್ಯ ಚಿಹ್ನೆ ನೋಂದಾಯಿಸುವ ಬಹಳ ಮೊದಲೇ ಅಂದರೆ 1992ರಿಂದ ಸ್ಥಳೀಯ ರೆಸ್ಟರಂಟ್ ಬರ್ಗರ್ ಕಿಂಗ್ ಹೆಸರು ಮತ್ತು ಬ್ರ್ಯಾಂಡ್‌ ಬಳಸುತ್ತಿದೆ ಎಂದು ಪುಣೆ ನ್ಯಾಯಾಲಯ ಈಚೆಗೆ ತೀರ್ಪು ನೀಡಿತ್ತು.

Bar & Bench

ತನ್ನ ಹೆಸರು ಬಳಸದಂತೆ ಅಮೆರಿಕದ ಫಾಸ್ಟ್‌ ಫುಡ್‌ ದೈತ್ಯ ಬರ್ಗರ್‌ ಕಿಂಗ್‌ ಕಾರ್ಪೊರೇಷನ್‌ ಸಲ್ಲಿಸಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಮೊಕದ್ದಮೆಯನ್ನು ವಜಾಗೊಳಿಸಿ ಸ್ಥಳೀಯ ರೆಸ್ಟರಂಟ್ ಪರ ಜುಲೈ 16ರಂದು ಪುಣೆ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆ ನೀಡಿದೆ [ಬರ್ಗರ್‌ ಕಿಂಗ್‌ ಕಾರ್ಪೊರೇಷನ್‌ ಮತ್ತು ಅನಾಹಿತಾ ಇರಾನಿ ಇನ್ನಿತರರ ನಡುವಣ ಪ್ರಕರಣ].

ಮುಂದಿನ ವಿಚಾರಣೆ ನಡೆಯಲಿರುವ ಸೆಪ್ಟೆಂಬರ್ 6ರವರೆಗೆ ಪುಣೆ ನ್ಯಾಯಾಲಯದ ಆದೇಶಕ್ಕೆ ತಡೆ ಇರುತ್ತದೆ ಎಂದು ನ್ಯಾಯಾಧೀಶರಾದ ಎ ಎಸ್ ಚಂದೂರ್‌ಕರ್‌ ಮತ್ತು ರಾಜೇಶ್ ಪಾಟೀಲ್ ಅವರಿದ್ದ ಪೀಠ ತಿಳಿಸಿತು.

ಇಂದಿನ ವಿಚಾರಣೆ ವೇಳೆ ಬರ್ಗರ್‌ ಕಿಂಗ್‌ ಪರ ವಕೀಲರು ಜನವರಿ 28, 2012 ರಿಂದ ಕಂಪನಿಯ ಪರವಾಗಿ ವಿಚಾರಣಾ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ಇದೆ ಎಂದು ಹೇಳಿದರು. ಆದರೆ ಪುಣೆ ರೆಸ್ಟರಂಟ್‌ ಪರ ವಕೀಲರು ಜುಲೈ 16ರಂದು ನೀಡಲಾದ ತೀರ್ಪಿಗೆ ಅನುಗುಣವಾಗಿ ಈಗಾಗಲೇ ಹೆಸರು ಮತ್ತು ವಾಣಿಜ್ಯ ಚಿಹ್ನೆ ಬಳಸುತ್ತಿರುವುದಾಗಿ ತಿಳಿಸಿದರು.

ಆದೇಶವನ್ನು ಅವಲೋಕಿಸಿದ ಹೈಕೋರ್ಟ್‌ ತಡೆಯಾಜ್ಞೆ ಅರ್ಜಿಯ ವಿಚಾರಣೆ ನಡೆಯಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಮೆರಿಕದ ಬರ್ಗರ್‌ ಕಿಂಗ್‌ ಕಾರ್ಪೊರೇಷನ್ ಪರವಾಗಿ ವಕೀಲರಾದ ಅವೇಶ್ ಕೇಸರ್ ಮತ್ತು ಹಿರೇನ್ ಕಾಮೋದ್ ವಾದ ಮಂಡಿಸಿದರು. ಪುಣೆ ರೆಸ್ಟರಂಟ್‌ ಜಂಟಿ ಪರವಾಗಿ ವಕೀಲರಾದ ಅಭಿಜಿತ್ ಸರ್ವಾತೆ ಹಾಜರಿದ್ದರು.

ಕ್ಯಾಂಪ್ ಮತ್ತು ಕೋರೆಗಾಂವ್ ಪಾರ್ಕ್‌ನಲ್ಲಿರುವ ಪುಣೆಯ ಬರ್ಗರ್ ಕಿಂಗ್ ಜಾಯಿಂಟ್‌ಗಳ ಮಾಲೀಕರಾದ ಅನಾಹಿತಾ ಮತ್ತು ಶಪೂರ್ ಇರಾನಿ ವಿರುದ್ಧ ಜಾಗತಿಕವಾಗಿ ಸುಮಾರು 13,000 ಫಾಸ್ಟ್‌ಫುಡ್‌ ರೆಸ್ಟರಂಟ್‌ಗಳ ಜಾಲ ಹೊಂದಿರುವ ಬರ್ಗರ್ ಕಿಂಗ್ ಕಾರ್ಪೊರೇಷನ್ ಮೊಕದ್ದಮೆ ಹೂಡಿತ್ತು.

1954ರಲ್ಲಿ ಸ್ಥಾಪನೆಯಾದ ಅಮೆರಿಕದ ಕಾರ್ಪೊರೇಶನ್, 2014ರಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿತ್ತು. ತನ್ನದೇ ಹೆಸರಿನ ರೆಸ್ಟೋರೆಂಟ್ 2008ರಿಂದ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿ ಅದು ದಾವೆ ಹೂಡಿತ್ತು. ತನ್ನ ಬ್ರಾಂಡ್‌ಗೆ ಪುಣೆಯ ರೆಸ್ಟರಂಟ್‌ ಹೆಸರು ಹಾನಿ ಉಂಟುಮಾಡುತ್ತಿದೆ ಎಂದು ದೂರಿತ್ತು. ಸ್ಥಳೀಯ ರೆಸ್ಟರಂಟ್‌ ಆ ಹೆಸರು ಬಳಸುವುದು ವಾಣಿಜ್ಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಅದು ಕೋರಿತ್ತು.

ಪುಣೆ ರೆಸ್ಟೋರೆಂಟ್ ಪರವಾಗಿ ತೀರ್ಪು ನೀಡಿದ ನ್ಯಾಯಾಧೀಶ ಸುನಿಲ್ ವೇದಪಾಠಕ್, ಅಮೆರಿಕ ಕಾರ್ಪೊರೇಶನ್ ಭಾರತದಲ್ಲಿ ತನ್ನ ವಾಣಿಜ್ಯ ಚಿಹ್ನೆ ನೋಂದಾಯಿಸುವ ಮೊದಲೇ 1992ರಿಂದ ನಗರದ ಬರ್ಗರ್ ಕಿಂಗ್ ರೆಸ್ಟರಂಟ್ ತನ್ನ ಹೆಸರು ಮತ್ತು ಬ್ರಾಂಡ್ ಬಳಸುತ್ತಿದೆ ಎಂದಿದ್ದರು.